Header Ads Widget

ಸರ್ಚ್ ಕೂರ್ಗ್ ಮೀಡಿಯ

ಓದುವ ಬೆಳಕು ಅಭಿಯಾನದಡಿಯಲ್ಲಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ ಕಾರ್ಯಕ್ರಮ


ಓದುವ ಬೆಳಕು ಅಭಿಯಾನದಡಿಯಲ್ಲಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ ಕಾರ್ಯಕ್ರಮ

ಗ್ರಾಮೀಣ ಮಕ್ಕಳ ಪ್ರತಿಭೆಗೆ ಗ್ರಾಮ ಚದುರಂಗ ಆಟ ಸಹಕಾರಿ: ಭಂವರ್ ಸಿಂಗ್ ಮೀನಾ 

ಮಡಿಕೇರಿ ಆ.30: ಗ್ರಾಮೀಣ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ ಸಾಕಷ್ಟು ಸಹಕಾರಿಯಾಗಿದೆ ಎಂದು ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಓದುವ ಬೆಳಕು ಅಭಿಯಾನದಡಿಯಲ್ಲಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ ಕಾರ್ಯಕ್ರಮದ ಭಾಗವಾಗಿ ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಚದುರಂಗ ಆಟ ಸ್ಪರ್ಧೆಗೆ ಚಾಲನೆ ನಿಡಿ ಅವರು ಮಾತನಾಡಿದರು.

       ಈ ಹಿಂದೆ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡರೆ, ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕ್ರೀಡೆಯೂ ಸಹ ಒಂದು ಅಧ್ಯಯನ ವಿಷಯವಾಗಿದೆ. ಮಕ್ಕಳ ಸಮಗ್ರ ಅಭಿವೃದ್ಧಿಗೆ ಕ್ರೀಡೆ ಅತೀ ಅವಶ್ಯಕ ಎಂದು ಅವರು ತಿಳಿಸಿದರು. 

       ಗ್ರಾಮೀಣ ಭಾಗದ ಮಕ್ಕಳ ಅಧ್ಯಯನಕ್ಕೆ ಕೆಲವು ಮನೆಗಳಲ್ಲಿ ಸೂಕ್ತ ವ್ಯವಸ್ಥೆ ಇರುವುದಿಲ್ಲ. ಇಂತಹ ಸಮಸ್ಯೆಗಳನ್ನು ಮನಗಂಡು ಸರ್ಕಾರ ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿನ ಗ್ರಂಥಾಲಯಗಳನ್ನು ಉನ್ನತ್ತೀಕರಿಸಿ ಸಂಪೂರ್ಣ ಡಿಜಿಟಲೀಕರಣಗೊಳಿಸಿದೆ. ಕೊಡಗು ಜಿಲ್ಲೆಯಲ್ಲಿಯೂ ಸಹ ಕಳೆದ 2 ವರ್ಷಗಳಲ್ಲಿ ಅತ್ಯುತ್ತಮ ಸಾಧನ-ಸಲಕರಣೆಗಳ ಜೊತೆಗೆ 104 ಗ್ರಾ.ಪಂ.ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಿ, ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ಓದುವ ಬೆಳಕು ಅಭಿಯಾನದ ಅಡಿಯಲ್ಲಿ ಗ್ರಾ.ಪಂ.ವ್ಯಾಪ್ತಿಯ ಮಕ್ಕಳನ್ನು ಉಚಿತವಾಗಿ ನೋಂದಣಿ ಮಾಡಲಾಗಿದೆ ಎಂದು ತಿಳಿಸಿದರು.

       ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಭೇಟಿ ನೀಡಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾ.ಪಂ.ಗಳಲ್ಲಿಯೂ ಮಕ್ಕಳಿಗಾಗಿ ಚದುರಂಗ, ಕೇರಂ ಮತ್ತು ಗ್ರಾಮೀಣ ಆಟಿಕೆಗಳ ವ್ಯವಸ್ಥೆ ಮಾಡಲಾಗಿದೆ. ಇದರ ಭಾಗವಾಗಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನವೂ ಕೂಡ ಯಶಸ್ವಿಯಾಗಿದ್ದು, ರಾಜ್ಯದಲ್ಲಿಯೇ ಕೊಡಗು ಜಿಲ್ಲಾ ಪಂಚಾಯತ್ ಮೊಟ್ಟ ಮೊದಲ ಜಿಲ್ಲೆಯಾಗಿ ಜಿಲ್ಲಾ ಮಟ್ಟದ ಚದುರಂಗ ಆಟವನ್ನು ಹಮ್ಮಿಕೊಂಡಿದೆ ಎಂದರು.

       ಚದುರಂಗ ಆಟ ಆಡೋಣ ಅಭಿಯಾನವು ಮೂರು ವಿಭಾಗಗಳಲ್ಲಿ ನಡೆದಿದ್ದು, ಜೂನಿಯರ್, ಸಬ್-ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಾಗಿ ವಿಂಗಡಿಸಲಾಗಿದೆ. ಗ್ರಾ.ಪಂ., ತಾ.ಪಂ.ಹಂತಗಳಲ್ಲಿ ವಿಜೇತರಾದ ಸ್ಫರ್ಧಿಗಳು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ್ದಾರೆ. 5 ತಾಲ್ಲೂಕುಗಳಿಂದ 59 ಸ್ಪರ್ಧಿಗಳು ಭಾಗಿಯಾಗಿರುವುದು ಸಂತಸದ ವಿಷಯ. ಕೊಡಗು ಹಾಕಿ ಮಾತ್ರವಲ್ಲದೇ ಚದುರಂಗ ಆಟಕ್ಕೂ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆಯಲಿ ಎಂಬ ಆಶಯದೊಂದಿಗೆ ಸ್ಪರ್ಧೆ ನಡೆಸಲಾಗಿದೆ ಎಂದು ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ತಿಳಿಸಿದರು.

       ಗಮನ ಸೆಳೆದ ವಿಶೇಷ ಚೇತನ ಸ್ಪರ್ಧಿ: ಕೊಡಗು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿಶೇಷ ಚೇತನ ವಿದ್ಯಾರ್ಥಿ ಭಾಗವಹಿಸಿ ಗಮನಸೆಳೆದರು. ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಪೆÇ್ಲಮೊ ವಿದ್ಯಾರ್ಥಿ  ಆದರ್ಶ್ ಜೇಕಬ್ ಗೊನ್ಸಾಲ್ ವೆಸ್ ಅವರು ದೃಷ್ಟಿ ದೋಷ ಹೊಂದಿದ್ದರೂ ಸಹ ಅದನ್ನು ಮೀರಿ ಚೆಸ್ ಆಟದಲ್ಲಿ ತೊಡಗಿಸಿಕೊಂಡು ಎರಡು ಹಂತಗಳಲ್ಲಿ ಗೆಲುವು ಸಾಧಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಎಲ್ಲರ ಗಮನಸೆಳೆದರು. 

       ಕೊಡಗು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆದ ಚದುರಂಗ ಆಟ ಆಡೋಣ ಅಭಿಯಾನದಡಿಯಲ್ಲಿ 4 ಸಾವಿರ ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

      ಜಿ.ಪಂ.ಮುಖ್ಯ ಯೋಜನಾಧಿಕಾರಿ ರಾಜ್ ಗೋಪಾಲ್, ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವೇದಮೂರ್ತಿ, ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ಮಡಿಕೇರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶೇಖರ್, ಡಿಜಿಟಲ್ ಲೈಬ್ರರಿ ನೋಡಲ್ ಅಧಿಕಾರಿಗಳಾದ ಅಬ್ದುಲ್ಲಾ, ಸುಮೇಶ್, ಪುಟ್ಟರಾಜು ಇತರರು ಇದ್ದರು.

      ಜಿಲ್ಲಾ ಮಟ್ಟದ ಚದುರಂಗ ಸ್ಫರ್ಧೆ ವಿಜೇತರ ವಿವರ: ಸಬ್ ಜೂನಿಯರ್ ವಿಭಾಗ ಪ್ರಥಮ ಸ್ಥಾನ ಉನ್ನತ್ ಸಾರಥ್ಯ, ದ್ವಿತೀಯ ಸ್ಥಾನ ಗಣೇಶ್ ಎಂ.ಕೆ., ತೃತೀಯ ಸ್ಥಾನ ಸಮರ್ಥ್ ಪಿ.ಎಸ್., ನಾಲ್ಕನೇ ಸ್ಥಾನ ಪ್ರಥಮ್ ಮುತ್ತಣ್ಣ, ಐದನೇ ಸ್ಥಾನ ಸುಜನ್ ರಮೇಶ್. 

      ಜೂನಿಯರ್ ವಿಭಾಗ ಪ್ರಥಮ ಸ್ಥಾನ ರಜತ್ ಗುರುರಾಜ್, ದ್ವಿತೀಯ ಸ್ಥಾನ ಮಾನಸ ನಾರಾಯಣ್, ತೃತೀಯ ಸ್ಥಾನ : ತನುಶ್ರೀ ಪಿ, ನಾಲ್ಕನೇ ಸ್ಥಾನ ಮಾನ್ಯ ಕಾವೇರಮ್ಮ, ಐದನೇ ಸ್ಥಾನ ಹಿತೇಶ್ ಭೀಮಯ್ಯ ಎ.ಸೀನಿಯರ್ ವಿಭಾಗ  ಪ್ರಥಮ ಸ್ಥಾನ ದರ್ಶನ್ ಎಂ.ಎಸ್., ದ್ವಿತೀಯ ಸ್ಥಾನ ಸುಮೇಶ್ ಎಂ.ಆರ್., ತೃತೀಯ ಸ್ಥಾನ  ಅಕ್ಷಿ ಕೆ.ಡಿ., ನಾಲ್ಕನೇ ಸ್ಥಾನ ಪ್ರಮೋದ್ ಬಿ.ಎಸ್., ಐದನೇ ಸ್ಥಾನ ಮುಸ್ತಾಕ್ ಟಿ.ಎಂ.