Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಪ್ಪಚಟ್ಟೋಳಂಡ ಕೊಡವ ಹಾಕಿ ಉತ್ಸವ: 2023ರ ಫೆ.20 ರಿಂದ ಮಾ.6ರವರೆಗೆ ನಾಪೋಕ್ಲುವಿನಲ್ಲಿ 350 ತಂಡಗಳು, 1.50 ಕೋಟಿ ವೆಚ್ಚ


ಅಪ್ಪಚಟ್ಟೋಳಂಡ ಕೊಡವ ಹಾಕಿ ಉತ್ಸವ: 2023ರ ಫೆ.20 ರಿಂದ ಮಾ.6ರವರೆಗೆ ನಾಪೋಕ್ಲುವಿನಲ್ಲಿ  350 ತಂಡಗಳು, 1.50 ಕೋಟಿ ವೆಚ್ಚ

ಕೊಡವ ಕುಟುಂಬಗಳ ನಡುವಣ ಪ್ರತಿಷ್ಠಿತ ಕೌಟುಂಬಿಕ ಕೊಡವ ಹಾಕಿ ಉತ್ಸವ ನಾಪೆಕ್ಲುವಿನಲ್ಲಿ ‘ಅಪ್ಪಚಟ್ಟೋಳಂಡ’ ಕುಟುಂಬದ ಪ್ರಾಯೋಜಕತ್ವದಲ್ಲಿ ಮುಂದಿನ 2023ರ ಫೆ.20 ರಿಂದ ಮಾ.6ರವರೆಗೆ ನಾಪೋಕ್ಲುವಿನಲ್ಲಿ ನಡೆಯಲಿದೆ.

ಮಡಿಕೇರಿ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಪ್ಪಚಟ್ಟೋಳಂಡ ಕುಟುಂಬದ ಕೌಟುಂಬಿಕ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಕ್ರೀಡಾ ಉತ್ಸವದ ಕುರಿತು ಮಾಹಿತಿ ನೀಡಿ, ಕೊರೊನಾ ಮತ್ತು ಪ್ರಾಕೃತಿಕ ವಿಕೋಪಗಳ ಹಿನ್ನೆಲೆ ಸತತ 22 ವರ್ಷಗಳ ಕಾಲ ನಡೆದುಕೊಂಡು ಬಂದು, 2018ರಲ್ಲಿ ಸ್ಥಗಿತಗೊಂಡಿದ್ದ ಹಾಕಿ ಉತ್ಸವ ಸುಮಾರು 5 ವರ್ಷಗಳ ಬಳಿಕ ಕೊಡವ ಹಾಕಿ ಅಕಾಡೆಮಿ ವತಿಯಿಂದ ಆಯೋಜಿತವಾಗುತ್ತಿದ್ದು, ಅಪ್ಪಚಟ್ಟೋಳಂಡ ಕುಟುಂಬ ಈ ಬಾರಿ ಪಂದ್ಯಾವಳಿ ಆಯೋಜನೆಯ ಜವಾಬ್ದಾರಿಯನ್ನು ಹೊತ್ತು ಅದ್ಧೂರಿಯಿಂದ ನಡೆಸಲಿದೆಯೆಂದು ತಿಳಿಸಿದರು.

ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ನಾಪೋಕ್ಲುವಿನ ಪಬ್ಲಿಕ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ಸೇರಿದಂತೆ ಒಟ್ಟು ಮೂರು ಮೈದಾನಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಕೊಡವ ಹಾಕಿ ಅಕಾಡೆಮಿಯು ಹಾಕಿ ಉತ್ಸವದ ಧ್ವಜವನ್ನು ಅಪ್ಪಚಟ್ಟೋಳಂಡ ಕುಟುಂಬಸ್ಥರಿಗೆ ಈಗಾಗಲೆ ಹಸ್ತಾಂತರಿಸಿದ್ದು, ವ್ಯವಸ್ಥಿತ ಪಂದ್ಯಾವಳಿ ಆಯೋಜನೆಗೆ ಅಗತ್ಯ ಸಿದ್ಧತಾ ಕಾರ್ಯಗಳನ್ನು ನಡೆಸುತ್ತಿರುವುದಾಗಿ ಮಾಹಿತಿ ನೀಡಿದರು.

2018ರಲ್ಲಿ ನಡೆದ ಕುಲ್ಲೇಟಿರ ಕಪ್ ಹಾಕಿ ಪಂದ್ಯಾವಳಿಯಲ್ಲಿ 330 ಕೊಡವ ಕುಟುಂಬಗಳು ಪಾಲ್ಗೊಂಡಿದ್ದು, ಈ ಬಾರಿ 350 ಕೊಡವ ಕುಟುಂಬಗಳ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶ ತಮ್ಮದು. ಕೊಡವ ಕೌಟುಂಬಿಕ ಹಾಕಿ ಉತ್ಸವ ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ಸ್ಥಾನವನ್ನು ಪಡೆದಿದ್ದು, ಅಪ್ಪಚಟ್ಟೋಳಂಡ ಕೌಟುಂಬಿಕ ಹಾಕಿ ಉತ್ಸವದಲ್ಲಿ ಅತೀ ಹೆಚ್ಚು ತಂಡಗಳ ಪಾಲ್ಗೊಳ್ಳುವಿಕೆಯ ಮೂಲಕ ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳ್ಳಬೇಕೆನ್ನವ ಆಶಯ ತಮ್ಮದೆಂದು ತಿಳಿಸಿದರು.

ನಾಪೋಕ್ಲು ಕೊಡವ ಸಮಾಜದಲ್ಲಿ ಮುಂದಿನ ಅಕ್ಟೋಬರ್ 2 ರಂದು ಪಂದ್ಯಾವಳಿಯ ಮಾಹಿತಿಗಳನ್ನು ಒಳಗೊಂಡ ‘ವೆಬ್ ಸೈಟ್’ ಮತ್ತು ‘ಲೋಗೋ’ವನ್ನು ವಿಶೇಷ ಆಹ್ವಾನಿತರ ಮೂಲಕ ಉದ್ಘಾಟಿಸಲಾಗುತ್ತದೆ. ಅಲ್ಲದೆ ಪತ್ರಕರ್ತ ಬಾಚರಣಿಯಂಡ ಅನು ಕಾರ್ಯಪ್ಪ ಕೊಡವ ಹಾಕಿ ಉತ್ಸವದ ಕುರಿತು ರಚಿಸಿರುವ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು ಎಂದರು.

ಕೊಡವ ಹಾಕಿ ಉತ್ಸವವನ್ನು ಸುಮಾರು 1.50 ಕೋಟಿ ವೆಚ್ಚದಲ್ಲಿ 15 ದಿನಗಳ ಕಾಲ ಆಯೋಜಿಸಲು ನಿರ್ಧರಿಸಲಾಗಿದೆ. ಸರ್ಕಾರಕ್ಕೆ 1 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಕನಿಷ್ಟ 50 ಲಕ್ಷ ಅನುದಾನವಾದರು ದೊರಕುವ ವಿಶ್ವಾಸ ಇರುವುದಾಗಿ ಹೇಳಿದರು.

4ನೇ ಪಂದ್ಯಾವಳಿ- ನಾಪೋಕ್ಲುವಿನಲ್ಲಿ ಈ ಹಿಂದೆ ಕಲಿಯಂಡ, ಬಿದ್ದಾಟಂಡ, ಕುಲ್ಲೇಟಿರ ಕುಟುಂಬಗಳಿಂದ ಕೌಟುಂಬಿಕ ಹಾಕಿ ಉತ್ಸವ ನಡೆದಿತ್ತು. ಇದೀಗ ನಾಲ್ಕನೇ ಬಾರಿ ಅಪ್ಪಚಟ್ಟೋಳಂಡ ಕೌಟುಂಬಿಕ ಹಾಕಿ ಉತ್ಸವ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು.

ಸುದ್ದಿಗೋಷ್ಠಿಯಲ್ಲಿ ಅಪ್ಪಚಟ್ಟೋಳಂಡ ಕಟುಂಬದ ಪಟ್ಟೆದಾರರಾದ ಮಿಟ್ಟು ಈರಪ್ಪ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಶ್ಯಾಂ ಕಾಳಯ್ಯ, ರವಿ ಮೊಣ್ಣಪ್ಪ, ಪೂ ದೇವಯ್ಯ ಹಾಗೂ ನವೀನ್ ಅಪ್ಪಯ್ಯ ಉಪಸ್ಥಿತರಿದ್ದರು.