Header Ads Widget

Responsive Advertisement

ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ


ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ

ಸಮಸ್ಯೆಗಳು ಎದುರಾಗದಂತೆ ಮುನ್ನೆಚ್ಚರ ವಹಿಸಿ ರಿವರ್ ರ್ಯಾಪ್ಟಿಂಗ್ ನಿರ್ವಹಿಸಿ: ಡಾ.ಬಿ.ಸಿ.ಸತೀಶ

ಮಡಿಕೇರಿ ಸೆ.01: ಜಿಲ್ಲೆಯಲ್ಲಿ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ದುಬಾರೆಗೆ ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಅಗತ್ಯ ಮೂಲ ಸೌಲಭ್ಯವನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಟಿಕೇಟ್ ಕೌಂಟರ್, ಶೌಚಾಲಯ, ಬಟ್ಟೆ ಬದಲಿಸುವ ಕೊಠಡಿ, ಹೀಗೆ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಿದ್ದು, ಆ ನಿಟ್ಟಿನಲ್ಲಿ ಸಂಬಂಧಪಟ್ಟವರು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. 

ರಿವರ್ ರ್ಯಾಪ್ಟಿಂಗ್ ಬೋಟ್‍ಗಳು ಸುಸ್ಥಿತಿಯಲ್ಲಿರಬೇಕು. ರಿವರ್ ರ್ಯಾಪ್ಟಿಂಗ್ ಸಂದರ್ಭದಲ್ಲಿ ರಕ್ಷಣಾ ಕವಚ ಕಡ್ಡಾಯವಾಗಿ ಬಳಸಬೇಕು. ನುರಿತ ತಜ್ಞರು ರಿವರ್ ರ್ಯಾಪ್ಟಿಂಗ್ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.  

       ಈಗಾಗಲೇ ದುಬಾರೆಯಲ್ಲಿ 65 ಬೋಟ್‍ಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ 8 ಬೋಟ್‍ಗಳು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ 1 ಹೆಚ್ಚುವರಿ ಬೋಟ್‍ಗಳ ಕಾರ್ಯನಿರ್ವಹಣೆಗೆ ಸಭೆಯಲ್ಲಿ ಅನುಮತಿ ನೀಡಲಾಯಿತು. 

       ಹಾಗೆಯೇ ಬರಪೊಳೆಯಲ್ಲಿ ಈಗಾಗಲೇ 3 ಬೋಟ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 3 ಬೋಟ್‍ಗಳ ಕಾರ್ಯನಿರ್ವಹಣೆಗೆ ಸಭೆಯಲ್ಲಿ ಅನುಮತಿ ನೀಡಲಾಯಿತು. ಹಾಗೆಯೇ ಕುಮಾರಧಾರದಲ್ಲಿ ರ್ಯಾಪ್ಟಿಂಗ್ ನಡೆಸಲು ಎರಡು ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದು, 4 ಬೋಟ್‍ಗಳ ಕಾರ್ಯನಿರ್ವಹಣೆಗೆ ಸಭೆಯಲ್ಲಿ ಅನುಮೋದನೆ ನಿಡಲಾಯಿತು. 

       ರಿವರ್ ರ್ಯಾಪ್ಟಿಂಗ್ ಸಮಿತಿ ಸದಸ್ಯರು ರತೀಶ್, ಪಿ.ಸಿ.ವಸಂತ, ಸಿ.ಎಸ್.ರತನ್, ಪೂವಯ್ಯ, ಪೊನ್ನಪ್ಪ ಅವರು ರ್ಯಾಪ್ಟಿಂಗ್‍ನ್ನು ಹಳೆಯ ದರದಲ್ಲಿಯೇ ನಡೆಸಲಾಗುತ್ತಿದ್ದು, ದರ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು. 

      ಅದರಂತೆ ದುಬಾರೆಯಲ್ಲಿ ಈಗಾಗಲೇ ಪ್ರತಿಯೊಬ್ಬರಿಗೆ 600 ರೂ. ಶುಲ್ಕ ಸಂಗ್ರಹಿಸುತ್ತಿದ್ದು, 200 ರೂ. ಹೆಚ್ಚಿಸುವುದು, ಹಾಗೆಯೇ ಬರೆಪೊಳೆಯಲ್ಲಿ 1200 ರೂ. ಮತ್ತು ಕುಮಾರಧಾರದಲ್ಲಿ ತಲಾ ಒಬ್ಬರಿಗೆ 250 ಶುಲ್ಕ ಸಂಗ್ರಹಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. 

        ಬೋಟ್‍ಗಳು ಸುಸ್ಥಿಯಲ್ಲಿರಬೇಕು. ಪ್ರವಾಸಿಗರಿಗೆ ಕಿರಿಕಿರಿ ಉಂಟಾಗದಂತೆ ನಡೆದುಕೊಳ್ಳಬೇಕು. ವಾಹನ ನಿಲುಗಡೆಗೆ ಮತ್ತಷ್ಟು ಸ್ಥಳಾವಕಾಶ ಕಲ್ಪಿಸುವುದು, ರ್ಯಾಪ್ಟ್ ನಡೆಸುವವರ ಪ್ರಮಾಣಪತ್ರ ಇರಬೇಕು ಎಂದು ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದರು. 

        ಸಮಿತಿ ಸದಸ್ಯರು ಸ್ಥಳಕ್ಕೆ ತೆರಳಿ ರ್ಯಾಂಡಂ ಆಗಿ ಪರಿಶೀಲಿಸಿ ಬೋಟ್‍ಗಳ ಸುಸ್ಥಿತಿ ಮತ್ತಿತರ ಸಂಬಂಧ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದರು.  

        ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಯತೀಶ್ ಉಳ್ಳಾಲ್ ಅವರು ರಿವರ್ ರ್ಯಾಪ್ಟಿಂಗ್ ಮತ್ತು ನಿರ್ವಹಣೆ ಸಂಬಂಧ ಹಲವು ಮಾಹಿತಿ ನೀಡಿದರು. 

        ದುಬಾರೆಯಲ್ಲಿ ಈಗಾಗಲೇ 35 ಮಂದಿ ಬೋಟ್ ಕಾರ್ಯನಿರ್ವಹಣೆ ಮಾಡುತ್ತಿದ್ದು, 74 ಬೋಟ್‍ಗಳ ಕಾರ್ಯನಿರ್ವಹಣೆಗೆ ಅವಕಾಶ ಮಾಡಲಾಗಿದೆ. 15 ದಿನದೊಳಗೆ ಬೋಟ್‍ಗಳಿಗೆ ಕ್ರಮಸಂಖ್ಯೆ ಅಂಟಿಸಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

        ವಾಹನ ನಿಲುಗಡೆ ಹಾಗೂ ದುಬಾರೆ ಆನೆ ಶಿಬಿರಕ್ಕೆ ಬರುವ ಆದಾಯದಲ್ಲಿ ಸ್ವಲ್ಪವನ್ನಾದರೂ ಮೂಲ ಸೌಕರ್ಯ ಅಭಿವೃದ್ಧಿ ವಿನಿಮಯ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. 

ಸಮಿತಿ ಸದಸ್ಯರಾದ ಪಿ.ಚಂದನ್, ಲೋಕೋಪಯೋಗಿ ಇಲಾಖೆಯ ಎಇಇ ಹರ್ಷ, ಜಿ.ಪಂ.ಮುಖ್ಯ ಯೋಜನಾಧಿಕಾರಿ ಜಗದೀಶ್, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಲಹೆಗಾರಾದ ಮಂಜುನಾಥ್, ಸಮಿತಿ ಸದಸ್ಯರಾದ ರತೀಶ್, ಚಂಗಪ್ಪ, ವಸಂತ್, ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ನಂಜರಾಯಪಟ್ಟಣ ಗ್ರಾ.ಪಂ.ಪಿಡಿಒ ಕಲ್ಪನಾ, ಬೆಟ್ಟದಳ್ಳಿ ಗ್ರಾ.ಪಂ.ಪಿಡಿಒ ಕೆ.ರವಿ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರಾದ ಜತೀನ್ ಬೋಪಣ್ಣ ಹಲವು ಮಾಹಿತಿ ನೀಡಿದರು.