ಕಳತ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮ
ಲೈನ್‍ಮನೆಗಳಲ್ಲಿ ವಾಸಿಸುವ ಪರಿಶಿಷ್ಟರಿಗೆ ನಿವೇಶನ ಒದಗಿಸಲು ಅಗತ್ಯ ಕ್ರಮ: ಬಿ.ಸಿ.ಸತೀಶ
ಮಡಿಕೇರಿ ಸೆ.17: ಲೈನ್‍ಮನೆಗಳಲ್ಲಿ ವಾಸಿಸುವ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವೇಶನ ರಹಿತ ಕುಟುಂಬಗಳಿಗೆ ಕೂಡಲೇ ನಿವೇಶನ ಕಲ್ಪಿಸಿ ಕೊಡಬೇಕೆಂಬ ಕೂಗು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕೇಳಿಬಂತು.
ಕಳತ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕಿನ ಎಲ್ಲಾ ಅಧಿಕಾರಿಗಳ ಸಹಯೋಗದೊಂದಿಗೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ’ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕಾರ್ಯಕ್ರಮವು ನಡೆಯಿತು.
ಜನರ ಅಹವಾಲು ಹಾಗೂ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲೆಯಲ್ಲಿ 359 ಎಕರೆ ಸರ್ಕಾರಿ ಜಾಗವನ್ನು ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದ ಕಾಯ್ದಿರಿಸಲಾಗಿದೆ. ಗ್ರಾ.ಪಂ.ನಿವೇಶನ ರಹಿತರ ಪಟ್ಟಿಗೆ ಈಗಾಗಲೇ ಸೇರಿರುವ ಕುಟುಂಬಗಳಿಗೆ ಮೊದಲ ಆದ್ಯತೆ ಮೇರೆಗೆ ನಿವೇಶನ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ನಿವೇಶನಕ್ಕಾಗಿ ಕಾಯ್ದಿರಿಸಿದ ಭೂಮಿಯನ್ನು ಗ್ರಾ.ಪಂ.ಗಳಿಗೆ ನೀಡಲಾಗುವುದು. ಗ್ರಾ.ಪಂ. ಅವರು ಒದಗಿಸಿದ ಭೂಮಿಯನ್ನು ನಿವೇಶನ ರಹಿತರಿಗೆ ಒದಗಿಸುವ ಕೆಲಸ ಗ್ರಾ.ಪಂ.ಮಟ್ಟದಲ್ಲೇ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ರೈತರು ವನ್ಯ ಜೀವಿಗಳ ಹಾವಳಿಯಿಂದ ಹಲವಾರು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಅಹವಾಲುಗಳು ಸಲ್ಲಿಕೆ ಆಗುತ್ತಲೇ ಇವೆ. ಬೆಳೆ ಹಾನಿ ಪರಿಹಾರ ವಿತರಿಸಲಾಗುವುದು ಎಂದರು.
ಈ ಭಾಗದಲ್ಲಿ ವಿದ್ಯುತ್ ಉಪ ಕೇಂದ್ರದ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿದೆ. ಇದರಿಂದ ಈ ಭಾಗದ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.
ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕರಾದ ಗೀತಾ ಅವರು ಗ್ರಾಮದ ರಸ್ತೆಯು ಕಿರಿದಾಗಿದ್ದು ಬಸ್ ವ್ಯವಸ್ಥೆ ಕಲ್ಪಿಸುವುದು ಕಷ್ಟಕರವಾಗಿದೆ. ಆ ನಿಟ್ಟಿನಲ್ಲಿ ಮಿನಿ ಬಸ್ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ವನ್ಯಜೀವಿ ಮತ್ತು ಮಾನವ ಸಂಘರ್ಷಗಳು ಈ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತಿದ್ದು ಇದರಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಕಷ್ಟಕರವಾಗಿದೆ. ಜೊತೆಗೆ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆನಾಶವಾಗಿದ್ದು ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.
ಸೋಲಾರ್ ಅಳವಡಿಸಲು ಶೇ 100 ರಷ್ಟು ಸಬ್ಸಿಡಿ ನೀಡಬೇಕು. ಕಾಡಾನೆ ಹಾವಳಿಯಿಂದ ಶಾಶ್ವತ ಪರಿಹಾರ ಒದಗಿಸಿಕೊಡಬೇಕು ಹಾಗೂ ರೈತರ ಸಾಲ ಸಂಪೂರ್ಣ ಮನ್ನಾ ಮಾಡಿ ಕೊಡಬೇಕು ಎಂಬುದು ರೈತರ ಕೋರಿಕೆಯಾಗಿತ್ತು.
ತೋಟದಲ್ಲಿ ಮಳೆ ಇನ್ನಿತರ ಕಾರಣಗಳಿಂದ ಹಾನಿಯಾದ ಮರಗಳನ್ನು ಸ್ವ ಬಳಕೆಗಾಗಿ ಉಪಯೋಗಿಸಲು ನಿಯಮ ಸಡಿಲಿಕೆ ಮಾಡಿ ಅನುವು ಮಾಡಿಕೊಡುವಂತೆ ಕೇಳಿಕೊಂಡರು. ಹೊಸೂರು ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ವಸತಿ ರಹಿತರಿಗೆ ಗ್ರಾಮದಲ್ಲಿರುವ ಸರ್ಕಾರಿ ಜಾಗದಲ್ಲಿ ವಸತಿ ಕಲ್ಪಿಸಿಕೊಂಡುಬೇಕು. ಕೃಷಿ ಭೂಮಿಯನ್ನು ಕಂದಾಯಕ್ಕೆ ನಿಗದಿ ಪಡಿಸಬೇಕು ಎಂದು ಮನವಿ ಮಾಡಿದರು.
ವಿದ್ಯುತ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಡಬೇಕು. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. ನಿವೇಶನ ಇದ್ದರು ಕೂಡ ಹಕ್ಕು ಪತ್ರ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಅವರು ಗಮನಕ್ಕೆ ತಂದರು.
ಗ್ರಾಮದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಹೆಚ್ಚಾಗಿ ನಡೆಯುತ್ತಿದ್ದು. ಅಕ್ರಮ ಮದ್ಯ ಮಾರಾಟವನ್ನು ನಿಯಂತ್ರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದರು. ಭೂ ದಾಖಲೆಗಳಲ್ಲಿ ಪಟ್ಟೆದಾರರ ಹೆಸರು ಸೇರಿಸುವುದು ಹಾಗೂ ಪೌತಿ ಖಾತೆ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಹಂಚಿಕೊಂಡರು.
ಬಿಪಿಎಲ್ ಕಾರ್ಡ್ ಹೊಂದಿದ್ದರು ಕೂಡ ಕೆಲವರಿಗೆ ಇನ್ನೂ ಕೂಡ ಪಡಿತರ ಸಿಗುತ್ತಿಲ್ಲ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಅವರಿಗೆ ಬೇಕಾದ ಮೂಲ ದಾಖಲೆಗಳನ್ನು ಒದಗಿಸಿ ಕೊಡಬೇಕೆಂದು ಅಧಿಕಾರಿಗಳ ಗಮನಕ್ಕೆ ತಂದರು. ಇವೆಲ್ಲಾ ಕಳತ್ಮಾಡುವಿನಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದಲ್ಲಿ ಕೇಳಿ ಬಂದ ಸಮಸ್ಯೆಗಳು.
ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಹಾಗೂ ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್ ಅವರು ಭೂ ದಾಖಲೆಗಳು ಹಾಗೂ ಕಂದಾಯ ನಿಗದಿಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಅಬಕಾರಿ ಇಲಾಖೆ ಅಧಿಕಾರಿ ಜಗದೀಶ್ ಅವರು ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ಕಂಡುಬಂದಲ್ಲಿ ಕೂಡಲೇ ಮೊ.ಸಂ.9448879969 ಸಂಪರ್ಕಿಸಬಹುದು. ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಅವರು ತಿಳಿಸಿದರು.
ಹೀಗೆ ಜನರ ಸಮಸ್ಯೆಗಳನ್ನು ಆಲಿಸಿದ ವಿವಿಧ ಇಲಾಖೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಕಾರ್ಯಕ್ರಮಕ್ಕೆ ಮೊದಲು ಜಿಲ್ಲಾಧಿಕಾರಿ ಅವರು ಗಿಡ ನೆಡುವುದರೊಂದಿಗೆ ಕಾರ್ಯಕ್ರಮ ಆರಂಭಿಸಿದರು.
ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡುವ ಪೆÇೀಷಣ್ ಅಭಿಯಾನ, ಉಚಿತ ಅಬಾ ಕಾರ್ಡ್ ನೊಂದಣಿ, ಪಶು ವೈದ್ಯಕೀಯ ಸೇವೆ, ಕೊರೊನ ವೈರಸ್ ಬಗ್ಗೆ ಜಾಗೃತಿ ಮೂಡಿಸುವಂತಹ ಮಳಿಗೆಗಳನ್ನು ತೆರೆದಿದ್ದದು ವಿಶೇಷವಾಗಿತ್ತು. ಈ ಮಳಿಗೆಗಳನ್ನೆಲ್ಲ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ್ ಅವರು ವೀಕ್ಷಿಸಿದರು.
ಕಳತ್ಮಾಡು ಗ್ರಾ.ಪಂ. ಅಧ್ಯಕ್ಷರಾದ ಶಾಂತಿ ಸೋಮಯ್ಯ, ಉಪಾಧ್ಯಕ್ಷರಾದ ಪೂಣಚ್ಚ, ತಹಶೀಲ್ದಾರ್ ಅರ್ಚನಾ ಭಟ್, ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network