ಕೊಡವರ ಕುಲದೇವಿ ಹಾಗೂ ಕೊಡಗಿನ ಆರಾಧ್ಯ ದೇವತೆ ಮಾತೆ ಕಾವೇರಿಯ ಪವಿತ್ರ ತೀರ್ಥೋದ್ಬವ ಸಮಯ ಸಮೀಪಿಸುತ್ತಿದ್ದು ಕಳೆದೆರಡು ವರ್ಷಗಳಿಂದ ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮೀತಿ ರಚನೆಯಾಗದೆ ಹಾಗೇ ಉಳಿದುಕೊಂಡಿದೆ. ಈ ಸ್ಥಾನಗಳಿಗೆ ಕಳೆದ ಕೆಲ ತಿಂಗಳ ಹಿಂದೆ ನೇಮಕಾತಿಯ ಪ್ರಯತ್ನ ತೆರೆಮರೆಯಲ್ಲಿ ನಡೆಯಿತ್ತಾದರೂ, ನಂತರ ರಾಜಕೀಯ ಹಗ್ಗಜಗ್ಗಾಟದಿಂದ ತಟಸ್ಥವಾಯಿತು. ಹಾಗೆ ಈ ವಿಷಯ ಕೋರ್ಟ್ ಕದ ತಟ್ಟಿದೆ ಕೂಡ. ಸರಕಾರ ಈ ಕೂಡಲೇ ಆರ್ಹ ವ್ಯಕ್ತಿಗಳನ್ನು ನೇಮಕ ಮಾಡಿ ಸುಗಮ ಕಾವೇರಿ ತೀರ್ಥೋದ್ಬವಕ್ಕೆ ಅವಕಾಶ ಮಾಡಿಕೊಡಿ, ಇಲ್ಲವೆಂದರೆ ಕೂಡಲೇ ನೈಜ ಕಾವೇರಿ ಭಕ್ತರ ಒಂದು ತಾತ್ಕಾಲಿಕ ಸಮೀತಿ ರಚನೆ ಮಾಡಿ ಸುಗಮ ಕಾವೇರಿ ತುಲಾ ಸಂಕ್ರಮಣಕ್ಕೆ ಅವಕಾಶ ಮಾಡಿಕೊಡಬೇಕಿದೆ ಎಂದು ಎಂದು ಅಖಿಲ ಕೊಡವ ಸಮಾಜ ಒತ್ತಾಯಿಸಿದೆ.
ಮಂಗಳವಾರ ವಿರಾಜಪೇಟೆಯಲ್ಲಿರುವ ಅಖಿಲ ಕೊಡವ ಸಮಾಜದ ಕೇಂದ್ರ ಕಛೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸಮಾಜದ ಅಧ್ಯಕ್ಷರಾದ ಮಾತಂಡ ಮೊಣ್ಣಪ್ಪ ಈ ವಿಷಯವನ್ನು ಸಭೆಯ ಗಮನಕ್ಕೆ ತಂದರು, ಇದಕ್ಕೆ ದ್ವನಿಗೂಡಿಸಿದ ಸಭೆ ಕೂಡಲೆ ಸರಕಾರ ಎಲ್ಲಾ ಕಾನೂನು ತೊಡಕನ್ನು ನಿವಾರಿಸಿ ತಲಕಾವೇರಿ ಭಾಗಮಂಡಲಕ್ಕೆ ವ್ಯವಸ್ಥಾಪನಾ ಸಮೀತಿಯನ್ನು ರಚಿಸಬೇಕು, ಇಲ್ಲವೆಂದರೆ ಮುಂದಿನ ಅಕ್ಟೋಬರ್ ತಿಂಗಳಲ್ಲಿ ನಡೆಯುವ ತುಲಾ ಸಂಕ್ರಮಕ್ಕಾದರು ತಾತ್ಕಾಲಿಕ ಸಮೀತಿಯನ್ನು ರಚಿಸಬೇಕು ಎಂದು ಸಭೆ ಒತ್ತಾಯಿಸಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರಕಾರ ಗಮನ ಹರಿಸಬೇಕಿದೆ ಈ ಹಿಂದಿನಂತೆ ಕ್ಷೇತ್ರದಲ್ಲಿ ತುಲಾ ಸಂಕ್ರಮಣದಿಂದ ಪತ್ತಾಲೋದಿಯವರೆಗೆ ಅನ್ನದಾನ ನಡೆಯಬೇಕು ಹಾಗೂ ಸ್ಥಳೀಯ ಭಕ್ತರಿಗೆ ತೀರ್ಥ ಕುಂಡಿಕೆಯ ಎದುರು ಇರುವ ಕೊಳದಲ್ಲಿ ಯಾವುದೇ ನಿರ್ಬಂಧ ಹಾಕದೆ ತೀರ್ಥಸ್ಥಾನಕ್ಕೆ ಅವಕಾಶ ಮಾಡಿಕೊಡಬೇಕಿದೆ ಎಂದು ಸಭೆ ಒತ್ತಾಯಿಸಿತು.
ಕೊರೋನ ನೆಪ ಹೇಳಿ ಕಳೆದ ಮೂರು ವರ್ಷಗಳಿಂದ ಕಾವೇರಿ ಭಕ್ತರನ್ನು ಕತ್ತಲೆಯಲ್ಲಿಟ್ಟಿದ್ದು ಸಾಕು, ಇನ್ನು ಮುಂದೆ ಈ ರೀತಿ ನೈಜ ಭಕ್ತರನ್ನು ಕತ್ತಲೆಯಲ್ಲಿ ಇಡಲು ಪ್ರಯತ್ನಿಸಿದ್ದರೆ ನೋಡಿಕೊಂಡು ಇರಲು ಸಾದ್ಯವಿಲ್ಲ. ಕೂಡಲೆ ತುಲಾಸಂಕ್ರಮಣಕ್ಕೆ ದಾರಿಯುದ್ದಕ್ಕೂ ಬೆಳಕಿನ ವ್ಯವಸ್ಥೆ ಸೇರಿದಂತೆ ಸುಗಮ ವಾಹನ ಸಂಚಾರಕ್ಕೆ ರಸ್ತೆ ಸರಿ ಪಡಿಸುವ ಕೆಲಸ ಮಾಡಬೇಕಿದೆ, ಹಾಗೆ ಇನ್ನು ಮುಂದೆ ನಿರಂತರವಾಗಿ ಭಾಗಮಂಡಲದಲ್ಲಿ ಪಿಂಡ ಪ್ರಧಾನ ಮಾಡಿದವರಿಂದ ಹಿಡಿದು ನೈಜ ಕಾವೇರಿ ಭಕ್ತರು ಹಳೆಯ ಪದ್ದತಿಯಂತೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನದ ಬಳಿಕ ತಲಕಾವೇರಿಯ ತೀರ್ಥಕುಂಡಿಕೆಯ ಸಮೀಪದ ಕೊಳದಲ್ಲಿ ತೀರ್ಥ ಸ್ನಾನ ಮಾಡಿ ಮೇಲಿನ ಪರಿವಾರ ದೇವರುಗಳ ಹತ್ತಿರ ಹೋಗಲು ಅವಕಾಶ ಮಾಡಿಕೊಡಬೇಕಿದೆ ಎಂದು ಸಭೆ ಒತ್ತಾಯಿಸಿತು. ಇತ್ತೀಚಿನ ದಿನಗಳಲ್ಲಿ ಕುಂಡಿಕೆಯ ಸಮೀಪದ ತೀರ್ಥ ಸ್ನಾನಕ್ಕೆ ಮೊದಲೆ ಮೇಲೆ ಹೋಗಿ ಕೆಳಗೆ ಬನ್ನಿ ಎಂದು ಅಲ್ಲಿನ ಭದ್ರತಾ ಸಿಬ್ಬಂದಿಗಳು ಸ್ಥಳೀಯ ಭಕ್ತರೊಂದಿಗೆ ವಾಗ್ವಾದಕ್ಕೆ ಇಳಿದಿರುವ ಬಗ್ಗೆ ಹಲವಾರು ದೂರುಗಳು ಕೇಳಿ ಬಂದಿದೆ, ಹೊರಗಿನ ಭಕ್ತರು ಬೇಕಾದರೆ ಮೇಲೆ ಹೋಗಿ ಬರಲಿ ಆದರೆ ಸ್ಥಳೀಯ ಭಕ್ತರನ್ನು ತಡೆದು ಈ ರೀತಿ ಕಿರಿಕಿರಿ ಮಾಡುವುದು ಸರಿಯಲ್ಲ. ಸ್ಥಳೀಯ ಭಕ್ತರ ಭಾವನೆಯನ್ನು ಕೆರಳಿಸುವ ಕೆಲಸವಾದರೆ ಅಖಿಲ ಕೊಡವ ಸಮಾಜ ಮದ್ಯ ಪ್ರವೇಶ ಮಾಡಬೇಕಾಗುತ್ತದೆ ಎಂದು ಸಭೆ ಎಚ್ಚರಿಸಿದೆ. ತುಲಾಸಂಕ್ರಮಣದಂದು ಗೊಂದಲ ಸೃಷ್ಟಿಸುವ ಬದಲು ಹಬ್ಬಕ್ಕೆ ಹದಿನೈದು ದಿನಗಳ ಮುಂಚೆಯೇ ಎಲ್ಲಾವನ್ನು ಸರಿಪಡಿಸಿಕೊಂಡು ಭಕ್ತರಿಗೆ ಮಾಹಿತಿಯನ್ನು ನೀಡಬೇಕಿದೆ, ಕಾವೇರಿ ತುಲಾಸಂಕ್ರಮಣ ಎನ್ನುವುದು ಸ್ಥಳೀಯ ಭಕ್ತರ ಧಾರ್ಮಿಕ ಭಾವನೆಯ ಸಂಕೇತವಾಗಿದ್ದು, ತೀರ್ಥೋದ್ಬವ ಎನ್ನುವುದು ತಾಯಿ ಮಕ್ಕಳ ಮಿಲನದ ದಿನವಾಗಿದೆ ಹೊರತು ಇದು ಜಾತ್ರೆಯಲ್ಲ, ಇದಕ್ಕೆ ಇದರದೇಯಾದ ಹಲವಾರು ಕಟ್ಟುಪಾಡುಗಳಿವೆ ಇಲ್ಲಿ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಇದು ಸ್ಥಳೀಯ ಭಕ್ತರ ಹಬ್ಬವೇ ಹೊರತು ಸರಕಾರದ, ರಾಜಕಾರಣಿಗಳ ಅಥವಾ ಅಧಿಕಾರಿಗಳ ಜಾತ್ರೆಯಾಗಬಾರದು ಎಂದು ಸಭೆ ಒತ್ತಾಯಿಸಿತು.
ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಕಾರ್ಯದರ್ಶಿ ಅಮ್ಮುಣಿಚಂಡ ರಾಜ ನಂಜಪ್ಪ, ಖಜಾಂಚಿ ಮಂಡೇಪಂಡ ಸುಗುಣ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚಿರಣಿಯಂಡ ರಾಣು ಅಪ್ಪಣ್ಣ, ಹಿರಿಯ ಜನಪದ ತಜ್ಞರಾದ ಬಾಚರಣಿಯಂಡ ಅಪ್ಪಣ್ಣ, ನಾಪೋಕ್ಲು ಕೊಡವ ಸಮಾಜ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ವಿರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ಕುಂಬೇರ ಮನು ಕುಮಾರ್, ಯೂಕೋ ಸಂಚಾಲಕ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ, ವಿರಾಜಪೇಟೆಯ ಅಪ್ಪಚ್ಚಕವಿ ಪ್ರತಿಮೆ ಸ್ಥಾಪನೆಯ ಸಂಚಾಲಕ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಸೇರಿದಂತೆ ವಿವಿಧ ಕೊಡವ ಸಮಾಜ ಅಧ್ಯಕ್ಷರುಗಳು ಹಾಗೂ ವಿವಿಧ ಕೊಡವ ಸಂಘಟನೆಗಳ ಪ್ರಮುಖರು ಸೇರಿದಂತೆ ಅಖಿಲ ಕೊಡವ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network