ಕೊಡಗು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ವಿತರಕರ ದಿನಾಚರಣೆ
ಮಡಿಕೇರಿ: ನಾವು ನಮ್ಮ ದಿನಚರಿಯನ್ನು ಪ್ರಾರಂಭಿಸುವ ಸಮಯದಲ್ಲಿ ಪತ್ರಿಕಾ ವಿತರಕರು ಪತ್ರಿಕೆಯನ್ನು ಮನೆ ಮನೆಗಳಿಗೆ ತಲುಪಿಸುತ್ತಾರೆ. ಪತ್ರಿಕಾ ವಿತರಕರ ಒಳಿತಿಗಾಗಿ ಮುಂದಿನ ದಿನಗಳಲ್ಲಿ ಪತ್ರಿಕಾ ವಿತರಕರರಿಗೆ ಉತ್ತಮ ಯೋಜನೆಗಳನ್ನು ತಲುಪಿಸಲು ಶ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಭರವಸೆ ನೀಡಿದ್ದಾರೆ.
ಕೊಡಗು ಪತ್ರಕರ್ತರ ಸಂಘ(ರಿ), ಕೊಡಗು ಜಿಲ್ಲಾ ಪತ್ರಿಕಾ ವಿತರಕರ ಹಾಗೂ ಏಜೆಂಟರ ಸಂಘ ಕೊಡಗು ಪತ್ರಿಕಾ ಭವನ ಟ್ರಸ್ಟ್ (ರಿ) ಆಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಿಕಾ ವಿತರಕ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪತ್ರಿಕಾ ವಿತರಕರರಿಗೆ ಎಲ್ಲಾ ರೀತಿಯ ಸಹಕಾರ ಮಾಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಇ- ಪೇಪರ್ ಓದುವುದಕ್ಕಿಂತ ಮುದ್ರಿತ ಪ್ರಕಟಿತ ಪತ್ರಿಕೆ ಓದುವ ಮಜವೇ ಮನಸ್ಸಿಗೆ ತೃಪ್ತಿ ನೀಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಪತ್ರಿಕಾ ವಿತರಕರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ನಗರಸಭೆಯ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ವಿಶೇಷ ಸಭೆಯನ್ನು ನಡೆಸಿ ಸಮಸ್ಯೆಗಳನ್ನು ಇತ್ಯರ್ಥ ಮಾಡಲಾಗುವುದು ಎಂದರು. ಈಗಿನ ಡಿಜಿಟಲ್ ಯುಗದಲ್ಲಿ ವಾಟ್ಸಪ್ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ದೃಶ್ಯಮಾಧ್ಯಮಗಳಲ್ಲಿ ಸುದ್ದಿ ತಕ್ಷಣ ಲಭಿಸುತ್ತಿದ್ದರು. ಪ್ರತಿನಿತ್ಯ ಬೆಳಿಗ್ಗೆ ಪತ್ರಿಕೆಯನ್ನು ಓದುವ ಹವ್ಯಾಸವನ್ನು ನಾನು ಇಂದಿಗೂ ರೂಡಿಸಿಕೊಂಡಿದ್ದೇನೆ. ಅದರಲ್ಲೂ ಸ್ಥಳೀಯ ಪತ್ರಿಕೆಯನ್ನು ಓದಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ತಿಳಿದು ನನ್ನ ದಿನಚರಿಯನ್ನು ಪ್ರಾರಂಭಿಸುತ್ತೇನೆ ಎಂದು ತಿಳಿಸಿದರು.
ಪತ್ರಿಕೆಯನ್ನು ಪ್ರತಿನಿತ್ಯ ಓದಲು ಸಾಧ್ಯವಾಗದಿದ್ದರೆ ಆಗುವ ಅನುಭವವನ್ನು ಕೇವಲ ಪತ್ರಿಕೆ ಓದುವ ಹವ್ಯಾಸಿಗಳಿಗೆ ಮಾತ್ರ ತಿಳಿಯುತ್ತದೆ. ಪತ್ರಿಕಾ ವಿತರಕರ ದಿನಚರಿಯು ಬೆಳಿಗ್ಗೆ 4ರಿಂದ 5 ಗಂಟೆಗೆ ಪ್ರಾರಂಭವಾಗಿ 8 ಗಂಟೆ ಒಳಗೆ ಮುಗಿಯುತ್ತದೆ. ಇಂತಹ ವಿಭಿನ್ನ ಕಾರ್ಯಕ್ರಮಕ್ಕೆ ಶ್ಲಾಘನೆಯನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ವ್ಯಕ್ತಪಡಿಸಿದರು.
ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಈಗಿನ ತಂತ್ರಜ್ಞಾನದಲ್ಲಿ ದೃಶ್ಯಮಾಧ್ಯಮದಲ್ಲಿ ಶೀಘ್ರವಾಗಿ ಸುದ್ದಿ ಜನರಿಗೆ ತಲುಪುತದೆಯಾದರೂ ಆ ಸುದ್ದಿಯನ್ನು ವಿಶ್ಲೇಷಣೆ ಮಾಡಿ ಅವಲೋಕಿಸಿ ತಿಳಿಯಬೇಕೆಂದರೆ ವೃತ್ತ ಪತ್ರಿಕೆಗಳನ್ನು ಓದಬೇಕು ಎಂದು ತಿಳಿಸಿದರು.
ಒಂದು ಪತ್ರಿಕಾ ಮಾಧ್ಯಮ ಸಂಸ್ಥೆ ಉತ್ತಮವಾಗಿ ನಡೆಯಬೇಕೆಂದರೆ ಆ ಪತ್ರಿಕಾ ಮಾಧ್ಯಮ ಸಂಸ್ಥೆಯ ಕಚೇರಿ ಸಿಬ್ಬಂದಿ ವರ್ಗ, ಕಂಪ್ಯೂಟರ್ ಆಪರೇಟರ್ , ಸಂಪಾದಕರ ಬಳಗ ಪತ್ರಿಕೆಯನ್ನು ಪ್ರಿಂಟಿಂಗ್ ಮಾಡುವವರು ಅದೇ ರೀತಿ ಪತ್ರಿಕೆಯನ್ನು ಬಂಡಲ್ ಮಾಡುವವರು ಪತ್ರಿಕೆಯನ್ನು ವಿತರಣೆ ಮಾಡುವವರ ಶ್ರಮ ಅಷ್ಟೇ ಮುಖ್ಯವಾಗಿದೆ. ಅದರಲ್ಲೂ ಪತ್ರಿಕಾ ವಿತರಕರು ತುಂಬಾ ಮುಖ್ಯ ಪಾತ್ರ ವಹಿಸುತ್ತಾರೆ ಎಂದರು.
ಪತ್ರಿಕೆಯ ತಯಾರಾದ ನಂತರ ಅದು ಓದುಗರಿಗೆ ತಲುಪಿಸದೆ ಹೋದರೆ ಅಲ್ಲಿವರೆಗೆ ಮಾಡಿದಂತಹ ಪ್ರಯತ್ನ ನಿಷ್ಪ್ರಯೋಜಕವಾಗುತ್ತದೆ. ಆದ್ದರಿಂದ ಪತ್ರಿಕಾ ವಿತರಕರು ತುಂಬಾ ಮುಖ್ಯ ಪಾತ್ರ ವಹಿಸುತ್ತಾರೆ. ಅಲ್ಲದೆ ಮಡಿಕೇರಿ ಅಂತಹ ಬೆಟ್ಟ ಗುಡ್ಡದ ಪ್ರದೇಶದಲ್ಲಿ ತುಂಬಾ ಹೆಚ್ಚು ಶ್ರಮಪಟ್ಟು ಮಳೆ ಚಳಿ ಇದ್ದರು ತಮ್ಮ ಕಾರ್ಯವನ್ನು ಒಂದು ತಪಸ್ಸಿನಂತೆ ಪತ್ರಿಕಾ ವಿತರಕರು ಮಾಡುತ್ತಾ ಬಂದಿದ್ದಾರೆ. ಅಲ್ಲದೆ ಪತ್ರಿಕಾ ವಿತರಣೆ ಮಾಡುವಾಗ ಒಂದು ಮನೆ ಕೂಡ ಬಿಟ್ಟು ಹೋಗದಂತೆ ತುಂಬಾ ನಿಗಾವಹಿಸುತ್ತಾರೆ ಎಂದರು.
ಸಾಮಾನ್ಯವಾಗಿ ಹಿರಿಯರಿಗೆ ಪತ್ರಿಕೆ ಓದುವುದು ಒಂದು ಅಭ್ಯಾಸವಾಗಿಯೇ ಮಾರ್ಪಾಡಾಗಿದೆ. ಅದಲ್ಲದೆ ಅವರು ಪತ್ರಿಕಾ ವಿತರಕರನ್ನು ಒಂದು ಗೌರವಯುತ ಸ್ಥಾನದಲ್ಲಿ ನೋಡುತ್ತಾರೆ. ಕೊರೋನಾ ಪರಿಸ್ಥಿತಿಯಲ್ಲಿ ಪತ್ರಿಕಾ ವಿತರಣೆಗೆ ಹೋದ ಸಂದರ್ಭದಲ್ಲಿ ಪತ್ರಿಕಾ ವಿತರಕರಿಗೆ ಪೊಲೀಸರಿಂದ ಲಾಠಿ ಏಟು ಸಿಕ್ಕ ಸಂದರ್ಭದಲ್ಲಿ ಪತ್ರಕರ್ತರು ಅವರಿಗೆ ಬೆಂಗಾವಲಾಗಿ ನಿಂತ ಅನುಭವವಿದೆ. ಅಲ್ಲದೆ 144 ಸೆಕ್ಷನ್ ಇರುವ ಸಂರ್ಭದಲ್ಲಿ ಕೂಡಾ ವಿತರಕರಿಗೆ ತುಂಬಾ ಸವಾಲುಗಳು ಎದುರಾದಗಲೂ ಪತ್ರಕರ್ತರು ಜೊತೆಗೆ ನಿಂತಿದ್ದಾರೆ ಎಂದು ಜಿ. ರಾಜೇಂದ್ರ ತಿಳಿಸಿದ್ದಾರೆ.
ಪ್ರಾಸ್ತಾವಿಕ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರರಾದ ಟಿ.ಪಿ. ರಮೇಶ್ ಪತ್ರಿಕಾ ವಿತರಣಾ ದಿನಾಚರಣೆ ಕೊಡಗಿನ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದಿದೆ. ಇನ್ನು ಮುಂದೆ ಕೊಡಗು ಪತ್ರಕರ್ತರ ಸಂಘವು ಪತ್ರಿಕಾ ವಿತರಕರ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು. ಪತ್ರಿಕಾ ವಿತರಕರಿಗೆ ಪತ್ರಿಕೆಯನ್ನು ವಿತರಣೆ ಮಾಡಲು ಸೂಕ್ತವಾದ ವ್ಯವಸ್ಥೆಯನ್ನು ನಗರದಲ್ಲಿ ಮಾಡಿಕೊಡಬೇಕಾಗಿ ಅವರು ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದರು.
ಸಮಾಜ ಸೇವಕರಾದ ನಾಪಂಡ ಎಂ. ಮುತ್ತಪ್ಪ ಮಾತನಾಡಿ ಪತ್ರಿಕಾ ವಿತರಕರ ದಿನಾಚರಣೆ ನಾನು ಮೊದಲ ಬಾರಿಗೆ ಕೇಳುತ್ತಿರುವುದು. ಇದು ಒಂದು ಒಳ್ಳೆಯ ಪ್ರಯತ್ನವಾಗಿದ್ದು, ಕೊಡಗಿನಲ್ಲಿ ಪತ್ರಿಕೆ ವಿತರಣೆ ಮಾಡುವುದು ತುಂಬಾ ಸಾಹಸದ ಕೆಲಸ. ಅದರಲ್ಲೂ ದಕ್ಷಿಣ ಕೊಡಗಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳ ಉಪಟಳ ಆನೆ, ಹುಲಿ ಹಾವಳಿಗಳ ನಡುವೆಯು ಪತ್ರಿಕಾ ವಿತರಣೆ ಮಾಡುವುದು ಸಾಹಸವೇ ಸರೀ ಎಂದರು.
ಪತ್ರಿಕಾ ವಿತರಕರದ್ದು ಅಸಂಘಟಿತ ಕ್ಷೇತ್ರವಾಗಿದ್ದು, ಅವರಿಗೆ ಪ್ರಸ್ತುತ ಸರ್ಕಾರದಿಂದ ಭವಿಷ್ಯ ನಿಧಿ ಅಂತಹ ಹಲವಾರು ಯೋಜನೆಗಳು ಇದ್ದು, ಅದನೆಲ್ಲಾ ವಿತರಕರು ಸದುಪಯೋಗ ಮಾಡಿಕೊಳ್ಳಬೇಕಾಗಿ ನಾಪಂಡ ಎಂ. ಮುತ್ತಪ್ಪ ಈ ಸಂದರ್ಭದಲ್ಲಿ ಕೇಳಿಕೊಂಡರು.
ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಂಕರ್ ಕುದುರೆ ಮೋತಿ ಮಾತನಾಡಿ ಪತ್ರಕರ್ತರ ಸಂಘ ಪತ್ರಿಕಾ ವಿತರಕರ ಜೊತೆ ಇದ್ದಾಗ ಮಾತ್ರ ವಿತರಕರು ಬೆಳಕಿಗೆ ಬರಲು ಸಾಧ್ಯ. ಪತ್ರಿಕಾ ವಿತರಕರ ದಿನಾಚರಣೆ ಜೊತೆಗೆ ಪತ್ರಿಕಾ ವಿತರಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು ಒಳ್ಳೆಯ ಪ್ರಯತ್ನ. ಇನ್ನೂ ಮುಂದೆ ಕೂಡ ಹಲವಾರು ಕಾರ್ಯಕ್ರಮಗಳ ಮೂಲಕ ಪತ್ರಿಕಾ ವಿತರಕರಿಗೆ ಉತ್ತಮ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸಬೇಕೆಂದು ಮನವಿ ಮಾಡಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಮಾತನಾಡಿ ಸಾಮಾನ್ಯವಾಗಿ ತಮ್ಮ ಮನೆಗೆ ಬರುವ ಪತ್ರಿಕಾ ವಿತರಕರು ಯಾರೆಂದು ಕೂಡಾ ತಿಳಿಯುವುದಿಲ್ಲ. ಕಾರಣ ಏನೆಂದರೆ ಮನೆಯ ಮಂದಿ ಬೆಳಗ್ಗೆ ಎದ್ದೇಳುವ ಮೊದಲೇ ಮನೆ ಬಾಗಿಲಿಗೆ ಪತ್ರಿಕೆಯನ್ನು ತಲುಪಿಸಿರುತ್ತಾರೆ. ಪತ್ರಿಕೋಧ್ಯಮ ಇಲ್ಲಿಯವರೆಗೆ ಬೆಳೆಯಲು ಪತ್ರಿಕಾ ವಿತರಕರ ಶ್ರಮ ಹೆಚ್ಚಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸುಮಾರು 50ಕ್ಕೂ ಅಧಿಕ ಪತ್ರಿಕಾ ವಿತರಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಭಾಷಣ ಮಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳೀಧರ್ ಮಾತನಾಡಿ ಕೊಡಗು ಜಿಲ್ಲೆಯ ಇತಿಹಾಸದಲ್ಲೇ ಮೊದಲಿಗೆ ಪತ್ರಿಕಾ ವಿತರಕರ ದಿನಾಚರಣೆ ನಮ್ಮ ಸಂಘದ ಆಶ್ರಯದಲ್ಲಿ ಆಯೋಜನೆ ಮಾಡಿದ್ದೇವೆ. ಇದಕ್ಕೆ ಪತ್ರಿಕಾ ವಿತರಕರಿಂದಲೂ ಕೂಡ ಉತ್ತಮವಾದ ಸ್ಪಂದನೆ ದೊರೆತಿದೆ ಎಂದರು.
ಪತ್ರಿಕಾ ಕ್ಷೇತ್ರಕ್ಕೆ ತಾವು ಪಾದಾರ್ಪಣೆ ಮಾಡುವ ಸಂದರ್ಭವನ್ನು ಸ್ಮರಿಸಿದ ಅವರು ಅಂದಿನ ಸಮಯದಲ್ಲಿ ನಾನೂ ಕೂಡ ಪತ್ರಿಕಾ ವಿತರಕನಾಗಿ ಕೆಲಸ ನಿರ್ವಹಿಸಿದ್ದೇನೆ. ಆದರಿಂದ ಪತ್ರಿಕಾ ವಿತರಕರ ಕಷ್ಟ ಸವಾಲುಗಳ ಅನುಭವ ನನಗೆ ಇದೆ. ಪತ್ರಿಕಾ ವಿತರಕರ ದಿನಾಚರಣೆ ಜೊತೆಗೆ ಪತ್ರಿಕಾ ವಿತರಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು ಕೇವಲ ಸನ್ಮಾನಕ್ಕೆ ಮಾತ್ರ ಸೀಮಿತವಾಗದೆ ಮುಂದಿನ ದಿನಗಳಲ್ಲಿ ಪತ್ರಿಕಾ ವಿತರಕರ ಅಭಿವೃಧ್ಧಿಗೆ ಕೊಡಗು ಪತ್ರಕರ್ತರ ಸಂಘ ಶ್ರಮಿಸುತ್ತದೆ ಹಾಗೂ ಇದ್ದಕ್ಕೆ ಪತ್ರಿಕಾ ವಿತರಕರೆಲ್ಲರ ಬೆಂಬಲವೂ ಅಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪತ್ರಿಕಾ ವಿತರಕರ ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಟಿ.ಜೆ. ಸತೀಶ್ ಇದ್ದರು.
ಕುಡೆಕಲ್ ಸಂತೋಷ್ ಕಾರ್ಯಕ್ರಮ ನಿರೂಪಣೆ ಮಾಡಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಸ್ವಾಗತಿಸಿ, ಸುರೇಶ್ ಬಿಳಿಗೇರಿ ವಂದಿಸಿದರು. ಪುಟಾಣಿಗಳಾದ ನಿಧಿ ಹಾಗೂ ವಿದ್ಯಾ ಅವರ ಪ್ರಾರ್ಥನೆ ನಿರ್ವಹಿಸಿದರು. ನಂತರ ಕಾರ್ಯಕ್ರಮದಲ್ಲಿ ನರೆದಿದ್ದವರು ಸಹ ಭೋಜನ ಸ್ವಿಕರಿಸಿ ಸ್ವಸ್ಥಾನಕ್ಕೆ ತೆರಳಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network