Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಡಿಕೇರಿ ನಾಡ ಹಬ್ಬ ದಸರಾ ಜನೋತ್ಸವ-2022ಕ್ಕೆ ಚಾಲನೆ


ಮಡಿಕೇರಿ ನಾಡ ಹಬ್ಬ ದಸರಾ ಜನೋತ್ಸವ-2022ಕ್ಕೆ ಚಾಲನೆ

ಮಡಿಕೇರಿ ಸೆ.05: ನಗರದ ಪೇಟೆ ಶ್ರೀರಾಮ ಮಂದಿರದಲ್ಲಿ ನಾಡ ಹಬ್ಬ ದಸರಾ ಜನೋತ್ಸವ 2022 ಕಾರ್ಯಕ್ರಮಕ್ಕೆ ಸುಸೂತ್ರವಾಗಿ ಸೋಮವಾರ ಚಾಲನೆ ದೊರೆಯಿತು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ದಸರಾ ಸಮಿತಿ ಅಧ್ಯಕ್ಷರು ಹಾಗೂ ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ದಶಮಂಟಪ ಸಮಿತಿ ಅಧ್ಯಕ್ಷರು ಹಾಗೂ ಗಣ್ಯರು ಪೇಟೆ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸುವ ಮೂಲಕ ನಾಡ ಹಬ್ಬ ದಸರಾಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಮಡಿಕೇರಿ ದಸರಾವನ್ನು ಈ ಬಾರಿ ಬಹಳ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನಡೆಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕೆರೆಕಟ್ಟೆಗಳು ಹಳ್ಳ ಕೊಳ್ಳಲು ತುಂಬಿ ಹರಿಯುತ್ತಿದೆ. ಕೊರೊನಾ ಭೀತಿ ಸ್ವಲ್ಪ ಕಡಿಮೆಯಾಗಿದೆ. ಕಳೆದ ಎರಡು ವರ್ಷದಿಂದ ಕಳೆಗುಂದಿದ ದಸರಾ ಸಂಭ್ರಮವನ್ನು ಈ ಬಾರಿ ಸೇರಿಸಿಕೊಂಡು ಬಹಳ ವಿಜೃಂಭಣೆಯಿಂದ ಮಾಡಲಾಗುತ್ತದೆ ಎಂದರು.

ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಕೆ.ಎಸ್.ರಮೇಶ್ ಅವರು ಮಾತನಾಡಿ ಮಡಿಕೇರಿ ಜನೋತ್ಸವ 2022 ಕಳೆದೆರಡು ವರ್ಷಗಳಿಂದ ಕೊರೊನಾ ಮತ್ತು ಮಳೆಯಿಂದಾಗಿ ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಲಿಲ್ಲ, ಆ ದಿಸೆಯಲ್ಲಿ ಈ ಬಾರಿಯ ದಸರವನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ ಎಂದರು.

ಶಾಸಕರ ಪರಿಶ್ರಮದಿಂದ ಈ ಬಾರಿಯ ದಸರಕ್ಕೆ ಸರ್ಕಾರದಿಂದ ರೂ. 1 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಸಂಪ್ರದಾಯದಂತೆ ಪೇಟೆ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ದೇವೆ. ಮುಂದಿನ ಸಭೆಯಲ್ಲಿ ಪೂರ್ವ ತಯಾರಿಗಳ ಬಗ್ಗೆ ಚರ್ಚಿಸಲಾಗುವುದು ಎಂದರು.

ಉಪಾಧ್ಯಕ್ಷೆ ಸವಿತಾ ರಾಕೇಶ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಶ್ವೇತಾ ಪ್ರಶಾಂತ್, ದಶಮಂಟಪ ಸಮಿತಿ ಅಧ್ಯಕ್ಷ ಮನು ಮಂಜುನಾಥ್, ನಗರಸಭೆ ಸದಸ್ಯರು, ದಸರಾ ಸಮಿತಿ ಪ್ರಮುಖರು ಭಾಗಿಯಾಗಿದ್ದರು.