ಸಿಎನ್‍ಸಿ ಯಿಂದ ನ.26 ರಂದು ಕೊಡವ ನ್ಯಾಷನಲ್ ಡೇ
ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 32ನೇ ವರ್ಷದ ``ಕೊಡವ ನ್ಯಾಷನಲ್ ಡೇ” “ಭಾರತದ ಸಂವಿಧಾನ”ದ ದಿನವಾದ ನ.26 ರಂದು ನಡೆಯಲಿದ್ದು, ವಿಶ್ವ ವಿಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರ ಕಾನೂನು ಮಾಜಿ ಮಂತ್ರಿ ಡಾ.ಸುಬ್ರಮಣ್ಯನ್ ಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್ ನಲ್ಲಿ ಬೆಳಗ್ಗೆ 10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿರಾಟ್ ಹಿಂದೂಸ್ತಾನ್ ಸಂಗಮ್ (ವಿಹೆಚ್‍ಎಸ್) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಕೂಡ ಉಪಸ್ಥಿತರಿರುವರು ಎಂದರು.
ಕೊಡವ ಭೌಗೋಳಿಕ ರಾಜಕೀಯ ಸ್ವಾಯತ್ತತೆ, ಅನ್ವೇಷಣೆ, ಕೊಡವ ಜನಾಂಗದ ಆಂತರಿಕ ರಾಜಕೀಯ ಸ್ವಯಂ ನಿರ್ಧಾರದ ಹಕ್ಕು ಮತ್ತು ಜಾಗತಿಕ ರಾಜಕಾರಣ ಎಂಬ ವಿಷಯದ ಕುರಿತು ಅತಿಥಿಗಳು ಮಾತನಾಡಲಿದ್ದಾರೆ.
ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶದಲ್ಲಿ ಕೊಡವ ಮೂಲ ವಂಶಸ್ಥ ಬುಡಕಟ್ಟು ಸಮುದಾಯಕ್ಕೆ ಎಸ್‍ಟಿ ಪಟ್ಟಿಯಲ್ಲಿ ಮಾನ್ಯತೆ ನೀಡಬೇಕು, ಕೊಡವರ ಧಾರ್ಮಿಕ ಸಂಸ್ಕಾರ ಕೋವಿಗೆ ಸಂವಿಧಾನದ 25, 26 ನೇ ವಿಧಿಯಲ್ಲಿ ವಿಶೇಷ ಭದ್ರತೆ ಒದಗಿಸಬೇಕು, ಕೊಡವ ತಕ್ ಗೆ 8 ನೇ ಶೆಡ್ಯೂಲ್ ಸ್ಥಾನಮಾನ ನೀಡಬೇಕು, ಅರಮನೆ ಪಿತೂರಿ ಮತ್ತು ದೇವಟ್ ಪರಂಬುವಿನ ನರಮೇಧದಲ್ಲಿ ಜೀವ ಕಳೆದುಕೊಂಡ ಕೊಡವರ ಸ್ಮರಣೆಗಾಗಿ ಸ್ಮಾರಕ ನಿರ್ಮಾಣ ಮಾಡಬೇಕು, ಕೊಡವರ ಭೂಮಿ, ಸಂಸ್ಕೃತಿ , ಜನಪದ, ಪರಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಈಶಾನ್ಯ ರಾಜ್ಯದ ಮಾದರಿ 371 (ಕೆ) ವಿಧಿಯಂತೆ ರಾಜ್ಯಾಂಗದ ವಿಶೇಷ ಖಾತ್ರಿಗೆ ಸಂಬಂಧಿಸಿದ ಪ್ರಮುಖ ನಿರ್ಣಯ ಸೇರಿದಂತೆ ಕೊಡವರ ಹಿತಾಸಕ್ತಿ ಕಾಪಾಡುವ ಮಹತ್ವದ ಹಕ್ಕೊತ್ತಾಯ ಮಂಡಿಸಿ ಅಂಗೀಕರಿಸಲಾಗುವುದು ಎಂದರು.
ಇದೇ ಸಂದರ್ಭ ಕೊಡವ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಸರ್ವ ಕೊಡವ ಬಂಧುಗಳು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network