Header Ads Widget

Responsive Advertisement

69ನೇ ಅಖಿಲ ಭಾರತ ಸಹಕಾರ ಸಪ್ತಾಹ; “ಸಹಕಾರ ಶಿಕ್ಷಣ, ವೃತ್ತಿಪರ ನಿರ್ವಹಣೆಯನ್ನು ಮುಖ್ಯ ವಾಹಿನಿಗೆ ತರಲು ಪುನರ್ ನಿರ್ಮಿಸುವ” ದಿನಾಚರಣೆ ಮತ್ತು ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ


69ನೇ ಅಖಿಲ ಭಾರತ ಸಹಕಾರ ಸಪ್ತಾಹ; “ಸಹಕಾರ ಶಿಕ್ಷಣ, ವೃತ್ತಿಪರ ನಿರ್ವಹಣೆಯನ್ನು ಮುಖ್ಯ ವಾಹಿನಿಗೆ ತರಲು ಪುನರ್ ನಿರ್ಮಿಸುವ” ದಿನಾಚರಣೆ ಮತ್ತು ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ

ಮಡಿಕೇರಿ: 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನ.16 ರಂದು ಮಡಿಕೇರಿಯಲ್ಲಿ “ಸಹಕಾರ ಶಿಕ್ಷಣ, ವೃತ್ತಿಪರ ನಿರ್ವಹಣೆಯನ್ನು ಮುಖ್ಯ ವಾಹಿನಿಗೆ ತರಲು ಪುನರ್ ನಿರ್ಮಿಸುವ” ದಿನಾಚರಣೆ ಮತ್ತು ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ರಾಜ್ಯ ಉಪಾಧ್ಯಕ್ಷ ಎನ್.ಎ.ರವಿ ಬಸಪ್ಪ ತಿಳಿಸಿದರು.

ಮಡಿಕೇರಿ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಗರದ ರಾಜ್‍ದರ್ಶನ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‍ನ ನಿರ್ದೇಶಕ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೆ.ಪಿ.ಗಣಪತಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ.ಮನು ರಾಮಚಂದ್ರ, ರಾಜ್ಯ ಸಹಕಾರ ತೋಟಗಾರಿಕಾ ನಿರ್ದೇಶಕ ಬಿ.ಎ.ರಮೇಶ್ ಚಂಗಪ್ಪ, ಕೊಡಗು ಜಿಲ್ಲಾ ಸಹಕಾರ ಕೇಂದ್ರದ ಉಪಾಧ್ಯಕ್ಷ ಕೆ.ಎಸ್.ಹರೀಶ್ ಪೂವಯ್ಯ ಸೇರಿದಂತೆ ಮತ್ತಿತರ ಗಣ್ಯರು, ಸಹಕಾರ ಯೂನಿಯನ್‍ನ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ ಎಂದರು.

ದಿನದ ಮಹತ್ವದ ಕುರಿತು ಮಡಿಕೇರಿ ಕೆ.ಐ.ಸಿ.ಎಂ ನ ನಿವೃತ್ತ ಪಾಂಶುಪಾಲರು ಎಂ.ಎಂ.ಶ್ಯಾಮಲಾ ಮತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಪ್ತಾಹದ ಅಂಗವಾಗಿ ಸಹಕಾರ ಕ್ಷೇತ್ರದ ವಿವಿಧ ವಲಯಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಬಲ್ಲಮಾವಟಿ ಗ್ರಾಮದ ಅಪ್ಪಚೆಟ್ಟೋಳಂಡ ಕೆ.ಮನು ಮುತ್ತಪ್ಪ ಅವರನ್ನು ಕೊಡಗು ಸಹಕಾರ ರತ್ನ ಪ್ರಶಸಿಗೆ ಆಯ್ಕೆ ಮಾಡಲಾಗಿದೆ.

ಶ್ರೇಷ್ಠ ಸಹಕಾರಿಗಳು ಪ್ರಶಸ್ತಿಗೆ ನಾಪೋಕ್ಲುವಿನ ಬೊಟ್ಟೋಳಂಡ ಡಿ.ಬಿದ್ದಯ್ಯ, ಮಾಯಮುಡಿ ಗ್ರಾಮದ ಕೊಂಗಂಡ ಎಂ.ಗಣಪತಿ, ಹಂಡ್ಲಿ ಗ್ರಾಮದ ಕೆ.ವಿ.ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದ್ದು, ಶ್ರೇಷ್ಠ ಮಹಿಳಾ ಸಹಕಾರಿಯಾಗಿ ಕುಶಾಲನಗರದ ಕಮಲಾ ಕರಿಯಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ಸಿ. ಮುನು ರಾಮಚಂದ್ರ ಮಾತನಾಡಿ, ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯ ತಲ್ತರೆ ಶೆಟ್ಟಳ್ಳಿಯಲ್ಲಿ ಕುರಾದ ಗೌಡ್ನಮನೆ ಪಿ.ದೊಡ್ಡಯ್ಯ ನೇತೃತ್ವದಲ್ಲಿ ಕೊಡಗು ಜಿಲ್ಲೆಯ ಪ್ರಥಮ ಸಹಕಾರ ಸಂಘ ಸ್ಥಾಪಿಸಲ್ಪಟ್ಟಿತು. ನಂತರ ಜಿಲ್ಲೆಯ ವಿವಿಧೆಡೆ ಸಹಕಾರ ಸಂಘಗಳು ಸ್ಥಾಪನೆಗೊಂಡವು. ಇದೀಗ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು,

ಪ್ರತಿವರ್ಷ ಸಹಕಾರ ಸಪ್ತಾಹದ ಅಂಗವಾಗಿ ಅರ್ಥಗರ್ಭಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಹಕಾರಿ ಕ್ಷೇತ್ರವನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಕೆ.ಎ.ಸಂಪತ್, ಎನ್.ಎಂ.ಉಮೇಶ್ ಉತ್ತಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು.