Header Ads Widget

Responsive Advertisement

ಎಂ.ಪಿ.ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಸಾಪ ಕಾರ್ಯಕಾರಿ ಸಮಿತಿ ಸಭೆ


ಎಂ.ಪಿ.ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಸಾಪ ಕಾರ್ಯಕಾರಿ ಸಮಿತಿ ಸಭೆ

ಮಡಿಕೇರಿ ನ.08: ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯು ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.  

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿ ಇರುವ ಕಸಾಪ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಸಭೆಯ ಆರಂಭದಲ್ಲಿ ಕಳೆದ ಕಾರ್ಯಕಾರಿ ಸಮಿತಿ ಸಭೆಯ ವರದಿಯನ್ನು ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಅವರು ಓದಿದರು. 

ಬಳಿಕ ಮಾತನಾಡಿದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಈಗಾಗಲೇ ಕೈಗೊಳ್ಳಲಾಗಿರುವ ದತ್ತಿನಿಧಿ ಕಾರ್ಯಕ್ರಮಗಳ ಸಂಬಂಧ ತಕ್ಷಣವೇ ತಾಲ್ಲೂಕು ಘಟಕದ ಅಧ್ಯಕ್ಷರು ವರದಿ ನೀಡುವಂತೆ ತಿಳಿಸಿದರು.

ಈಗಾಗಲೇ ತಾಲ್ಲೂಕು ಕಸಾಪ ಘಟಕ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳ ಸಂಬಂಧ ಕೂಡಲೇ ಛಾಯಾಚಿತ್ರ ಸಹಿತ ವರದಿ ಸಲ್ಲಿಸುವಂತೆ ತಾಲ್ಲೂಕು ಘಟಕದ ಅಧ್ಯಕ್ಷರಿಗೆ ಸಲಹೆ ಮಾಡಿದರು. 

ತಾಲ್ಲೂಕು ಘಟಕ ವ್ಯಾಪ್ತಿಯಲ್ಲಿ ಈಗಾಗಲೇ ನಡೆದಿರುವ ಕಾರ್ಯಕ್ರಮಗಳ ಬಗ್ಗೆ ಕಾಲಮಿತಿಯೊಳಗೆ ಮಾಹಿತಿ ಸಲ್ಲಿಸಿದಾಗ ಕಸಾಪ ರಾಜ್ಯ ಘಟಕಕ್ಕೆ ಮಾಹಿತಿ ಸಲ್ಲಿಸಲು ಸಾಧ್ಯ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕೋರಿದರು. 

ಡಿಸೆಂಬರ್ ತಿಂಗಳಲ್ಲಿ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಯಿತು. ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಸೈನಿಕರು ಮತ್ತು ಶಿಕ್ಷಕರ ಸಮ್ಮೇಳನವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಎಂ.ಪಿ.ಕೇಶವಕಾಮತ್ ಅವರು ತಿಳಿಸಿದರು. 

ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ ಕಸಾಪ ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಘಟಕ ವತಿಯಿಂದ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಸಲಹೆ ಮಾಡಿದರು. 

ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಸಂಬಂಧ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷರಾದ ನವೀನ್ ಅಂಬೆಕಲ್(ಮಡಿಕೇರಿ), ಎಸ್.ಡಿ.ವಿಜೇತ್(ಸೋಮವಾರಪೇಟೆ), ಕೆ.ಎಸ್.ಮೂರ್ತಿ (ಕುಶಾಲನಗರ) ಅವರು ಮಾಹಿತಿ ನೀಡಿದರು. 

ಹಾಗೆಯೇ ತಾಲ್ಲೂಕು ಹಾಗೂ ಹೋಬಳಿ ಘಟಕ ವತಿಯಿಂದ ಕಸಾಪ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮ ವರದಿಯನ್ನು ನೀಡಲಾಗುವುದು ಎಂದು ತಿಳಿಸಿದರು. ಕೋಶಾಧಿಕಾರಿ ಜೋಯಪ್ಪ, ಪ್ಯಾನ್ಸಿ ಮುತ್ತಣ್ಣ, ವೆಂಕಟನಾಯಕ್, ಪ್ರೇಮಕುಮಾರ್, ರಮ್ಯ ಇತರರು ಇದ್ದರು.