Header Ads Widget

Responsive Advertisement

"ದೇವಮಕ್ಕಡ ಬಾಣೆ ಕೋಲ್ ಮಂದ್"ನಲ್ಲಿ ಪಂಚಾಯತ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತಕ್ಕ ಮುಖ್ಯಸ್ಥರು ಹಾಗೂ ನಾಡಿನವರ ವಿರೋಧ


ಕುಂದಾ ಸಮೀಪದ ಬೊಟ್ಟಿಯತ್ ನಾಡ್ "ದೇವಮಕ್ಕಡ ಬಾಣೆ ಕೋಲ್ ಮಂದ್"ನಲ್ಲಿ ಪಂಚಾಯತ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತಕ್ಕ ಮುಖ್ಯಸ್ಥರು ಹಾಗೂ ನಾಡಿನವರ ವಿರೋಧ

ಅತಿಕ್ರಮ ಪ್ರವೇಶ ಮಾಡಿ ಕಾಮಗಾರಿ ಮುಂದಾದರೆ ಪೊಲೀಸ್ ದೂರು ನೀಡಲು ಸಭೆಯಲ್ಲಿ ತಿರ್ಮಾನ

ಇತಿಹಾಸ ಪ್ರಸಿದ್ಧದ ಪುತ್ತರಿ ಕೋಲ್ ಮಂದ್'ನಲ್ಲಿ ಸಾರ್ವಜನಿಕ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಮುಂದಾದ ಗ್ರಾಮ ಪಂಚಾಯಿತಿ ಸದಸ್ಯರ ವಿರುದ್ಧ ನಾಡಿನವರು ಗರಂ ಆದ ಘಟನೆ ಪೊನ್ನಂಪೇಟೆ ತಾಲೂಕು ಕುಂದಾ ಮುಗುಟಿಗೇರಿ ಗ್ರಾಮದಲ್ಲಿರುವ ಬೊಟ್ಟಿಯತ್ ನಾಡಿಗೆ ಸೇರಿದ "ದೇವಮಕ್ಕಡ ಬಾಣೆ ಕೋಲ್ ಮಂದ್'ನಲ್ಲಿ" ನಡೆದಿದೆ. 

ಈ ಕೋಲ್ ಮಂದ್'ಗೆ ಸೇರಿದ ಜಾಗದಲ್ಲಿ ಅರ್ವತೋಕ್ಲು ಗ್ರಾಮ ಪಂಚಾಯತ್ ಜಲಜೀವನ್ ಯೋಜನೆಯಡಿ ನೀರಿನ ಟ್ಯಾಂಕ್ ನಿರ್ಮಿಸಲು ಹೊರಟಿದ್ದು, ಈ ಯೋಜನೆಯಡಿ ಮುಗುಟಿಗೇರಿ ಗ್ರಾಮದ ಒಂದಷ್ಟು ಮನೆಗಳಿಗೆ ನೀರಿನ ಸೌಕರ್ಯ ನೀಡುವುದಾಗಿ ಹೇಳಿಕೊಂಡಿದೆ. ಆದರೆ ಯಾವುದೇ ಒಂದು ಪೂರ್ವ ತಯಾರಿ ಮಾಡಿಕೊಳ್ಳದೆ, ಈ ಕೋಲ್ ಮಂದ್'ನ ತಕ್ಕ ಮುಖ್ಯಸ್ಥರು ಹಾಗೂ ನಾಡಿನವರ ಅನುಮತಿ ಪಡೆಯದೆ ಸುರಕ್ಷಿತವಾಗಿ ಕಾಯ್ದಿರಿಸಲಾದ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿ ಬುದವಾರ "ದೇವಮಕ್ಕಡ ಬಾಣೆ ಕೋಲ್ ಮಂದ್"ನಲ್ಲಿ ಬೊಟ್ಟಿಯತ್ ನಾಡಿನ ಆರು ಊರುಗಳಿಗೆ ಸೇರಿದ ತಕ್ಕ ಮುಖ್ಯಸ್ಥರು ಹಾಗೂ ನಾಡಿನವರು ತುರ್ತು ಸಭೆ ನಡೆಸಿದ್ದರು. 

ಈ ಸಭೆಯಲ್ಲಿ ಆರು ಗ್ರಾಮಗಳಿಗೆ ಸೇರಿದ ತಕ್ಕ ಮುಖ್ಯಸ್ಥರು ಹಾಗೂ ನಾಡಿನವರು ಉಪಸ್ಥಿತರಿದ್ದು, ತಮ್ಮ ಗಮನಕ್ಕೆ ಬಾರದೆ ನಾಡ್ ಮಂದ್ ಜಾಗದಲ್ಲಿ ಅತಿಕ್ರಮ ಕಾಮಗಾರಿ ಕೈಗೊಂಡಿರುವ ಬಗ್ಗೆ ಖಂಡಿಸಿ, ಸರ್ವಾನುಮತದಿಂದ ಈ ಕಾಮಗಾರಿಯನ್ನು  ಕೋಲ್ ಮಂದ್ ಜಾಗದೊಳಗೆ ನಡೆಸಲು ಅವಕಾಶ ನೀಡದಂತೆ ಹಾಗೂ ಇದನ್ನೂ ಮೀರಿ ಅಕ್ರಮ ಪ್ರವೇಶ ಮಾಡಿದ್ದರೆ ಕಾನೂನು ಹೋರಾಟ ಮಾಡಲು ಹಾಗೂ ಪೊಲೀಸ್ ಪುಕಾರು ನೀಡಲು ಸಭೆ ತಕ್ಕ ಮುಖ್ಯಸ್ಥರಿಗೆ ಸಂಪೂರ್ಣ ಅಧಿಕಾರ ನೀಡಿತು. 

ಇದಕ್ಕೂ ಮೊದಲು ಈ ಭಾಗದ ಇಬ್ಬರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ತಕ್ಕ ಮುಖ್ಯಸ್ಥರ ನಡುವೆ ಒಂದಷ್ಟು ವಾದ ವಿವಾದ ನಡೆಯಿತು. ಇದು ಸರಕಾರದ ಜಾಗ ಇಲ್ಲಿಯೇ ನಾವು ನೀರಿನ ಟ್ಯಾಂಕ್ ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದು ಸದಸ್ಯರು ಪಟ್ಟು ಹಿಡಿದರೆ. ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ತಕ್ಕ ಮುಖ್ಯಸ್ಥರು ತಿರುಗೇಟು ನೀಡಿದ್ದರು. 

ಈ ಸಂದರ್ಭದಲ್ಲಿ ಮಾತಿನ ಚಕಾಮಕಿ ನಡೆದು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸದಸ್ಯರ ಜೊತೆಯಲ್ಲಿ ಈ ಕಾಮಗಾರಿಯ ಫಲಾನುಭವಿಗಳು ಒಂದಷ್ಟು ಮಂದಿ ಸೇರಿಕೊಂಡರೆ. ಉಳಿದ ಐದು ಗ್ರಾಮಗಳ ಅಂದರೆ ಬಹುತೇಕ ನಾಡಿನವರು ತಕ್ಕಮುಖ್ಯಸ್ಥರ ಪರವಾಗಿ ನಿಂತು ಕೊಂಡರು. ಬಳಿಕ ಮಾತನಾಡಿದ ಬೊಟ್ಟಿಯತ್ ನಾಡ್ ತಕ್ಕರಾದ ಅಡ್ಡಂಡ ಸಿ ಕುಶಾಲಪ್ಪ ಅನಾದಿಕಾಲದಿಂದಲೂ ಈ ಜಾಗವನ್ನು ಸಂರಕ್ಷಿಸಿಕೊಂಡು ಬರಲಾಗಿದೆ. ಇದರ ಬಹಳಷ್ಟು ಜಾಗ ಒತ್ತುವರಿಯಾಗಿದೆ, ಇದೀಗ ಉಳಿದಷ್ಟು ಜಾಗಕ್ಕೆ ಬೇಲಿ ಹಾಕಿ ನಮ್ಮ ಮುಂದಿನ ಪೀಳಿಗೆಗೆ ಈ ಕೋಲ್ ಮಂದ್ ಸಂರಕ್ಷಿಸಲಾಗಿದೆ. ಕಳೆದ ವರ್ಷ ಬೇಲಿ ಹಾಕುವ ಸಮಯದಲ್ಲಿ ಈ ಮಂದ್ ಒಳಗೆ ಏಳೆಂಟು ಚೀಲ ಮದ್ಯದ ಬಾಟಲಿಗಳು ಹಾಗೂ ಇನ್ನಿತರ ಬೇಡದ ಪದಾರ್ಥಗಳ ಸಿಕ್ಕಿವೆ, ಆ ಸಮಯದಲ್ಲಿ ಈ ಪಂಚಾಯತ್ ಸದಸ್ಯರು ಎಲ್ಲಿಗೆ ಹೋಗಿದ್ದರು ಯಾವುದೇ ಕಾರಣಕ್ಕೂ ಈ ಮಂದ್ ಒಳಗೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಕಿಡಿಕಾರಿದ್ದರು. 

ಸ್ಥಳದಲ್ಲಿ ಉಪಸ್ಥಿತರಿದ್ದ ಕುಂದಾ ಮುಗುಟಿಗೇರಿ ತಕ್ಕಮುಖ್ಯಸ್ಥ ಕುಟುಂಬದ ಪರವಾಗಿ ಮಾತನಾಡಿದ ಕೊಡಂದೇರ ಬಾಂಡ್ ಗಣಪತಿ ಸದರಿ ಕೋಲ್ ಮಂದ್ ಕುಂದಾ ಮುಗುಟಿಗೇರಿ ಗ್ರಾಮದ139 ಸರ್ವೆ ನಂಬರ್'ನಲ್ಲಿ 2.57 ಎಕರೆ ಜಾಗವಿದ್ದು ಆರ್.ಟಿ.ಸಿಯ ಕೆಳಗೆ "ದೇವಮಕ್ಕಡ ಬಾಣೆ ಕೋಲು ಮಂದ್" ಎಂಬುದಾಗಿ ಹಾಗೂ ಮೇಲಿನ ಕಲಂನಲ್ಲಿ ಸರಕಾರದ್ದು ಎಂದು ನಮೂದಾಗಿದೆ. ಇಲ್ಲಿ 2.57 ಎಕರೆ ಜಾಗವಿರಬೇಕಾಗಿದ್ದು, ಬಹುತೇಕ ಒತ್ತುವರಿಯಾಗಿದೆ. ಈ ಒತ್ತುವರಿ ಆಗಿರುವ ಜಾಗದಲ್ಲಿ ಬೇಕಾದರೆ ನೀವು ಟ್ಯಾಂಕ್ ನಿರ್ಮಾಣ ಮಾಡಿ ಅದು ಬಿಟ್ಟು ಮಂದ್'ಗಾಗಿ ಕಾಯ್ದಿರಿಸಿದ ಜಾಗದಲ್ಲಿ ಅತಿಕ್ರಮ ಕಾಮಗಾರಿ ಮಾಡುವುದು ಸರಿಯಲ್ಲ. ನಾನೂ ಕೂಡ ರಾಜಕೀಯದಲ್ಲಿದ್ದೇನೆ ಪಂಚಾಯತಿಯಲ್ಲಿ ಕೆಲಸ ಮಾಡಿದವನು, ಇದೀಗ ಸಹಕಾರಿ ಸಂಘದಲ್ಲಿ ಕೂಡ ದುಡಿಯುತ್ತಿರುತ್ತೇನೆ ಹಾಗಂತ ನಾವು ಊರು ನಾಡಿನ ಧಾರ್ಮಿಕ ಭಾವನೆಗೆ ಒತ್ತು ನೀಡಬೇಕಿದೆ, ನಮ್ಮ ಮುಂದಿನ ಪೀಳಿಗೆಗೆ ಇಂತಹ ಸ್ಥಳಗಳನ್ನು ರಕ್ಷಿಸಬೇಕಿದೆ. ಕೊಡಗು ಜಿಲ್ಲೆಯಲ್ಲಿರುವ ಬಹುತೇಕ ಊರು ನಾಡಿನ ಮಂದ್ ಮಾನಿ ಸೇರಿದಂತೆ ದೇವಸ್ಥಾನ ಜಾಗಗಳು ಇದೇ ರೀತಿ ಸರಕಾರದ್ದು ಎಂದೇ ನಮೂದಿಸಲಾಗಿದ್ದು ಆರ್.ಟಿ.ಸಿಯ ಮತ್ತೊಂದು ಭಾಗದಲ್ಲಿ ಆಯಾಯ ಊರು ನಾಡಿಗೆ ಸೇರಿದ ಮಂದ್ ಮಾನಿ, ದೇವಸ್ಥಾನ ಅಥವಾ ದೇವರಕಾಡಗಳ ಹೆಸರನ್ನು ನಮೂದಿಸಲಾಗುತ್ತದೆ. ಹಾಗಂದ ಮಾತ್ರಕ್ಕೆ ಇದು ಸರಕಾರದ ಸಂಪೂರ್ಣ ಆಸ್ತಿ ಇದನ್ನು ಯಾರಿಗೆ ಬೇಕಾದರೂ ಹೇಗೆ ಬೇಕಾದರೂ ನೀಡಬಹುದು ಎಂದು ಅಲ್ಲ. ಇದನ್ನು ರಕ್ಷಣೆ ಮಾಡಿದವರು ನಮ್ಮ ಪೂರ್ವಿಕರು, ಹಾಗೇ ಮುಂದಿನ ತಲೆಮಾರಿಗು ಇದನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮ ಕರ್ತವ್ಯ. ಇವತ್ತು ನೀರಿನ ಟ್ಯಾಂಕ್ ನಿರ್ಮಿಸಲು ಕೇಳಿದವರು ನಾಳೆ ಇನ್ನೊಂದು ಕಾಮಗಾರಿ ಮಾಡಲು ಹೊರಡುತ್ತಾರೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ಕೋಲ್ ಮಂದ್ ಇಲ್ಲದಾಗುತ್ತದೆ ಎಂದು ಕಿಡಿಕಾರಿದ್ದರು. 

ಸ್ಥಳದಲ್ಲಿ ಉಪಸ್ಥಿತರಿದ್ದ ಊರಿನವರಾದ ಸಣ್ಣುವಂಡ ಸುದೀಶ್ ಮಂದ್ ಜಾಗದ ಸಮೀಪ ಇರುವ ನನ್ನ ಖಾಸಗಿ ಜಾಗದ ಒಂದು ಮೂಲೆಯಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಜಾಗ ಅವಕಾಶ ಕೊಡುತ್ತೇನೆ ಎಂದಾಗ ಇದಕ್ಕೆ ತೃಪ್ತರಾಗದ ಸದಸ್ಯರು ಇಲ್ಲ ಇದೇ ಜಾಗದಲ್ಲಿ ನಾವು ಮಾಡಿಯೇ ಮಾಡುತ್ತೇವೆ ಎಂದು ಸಭೆಯಿಂದ ಹೊರನಡೆದ ಘಟನೆ ಕೂಡ ನಡೆಯಿತು. 

ಸಭೆಯಲ್ಲಿ ಬಹಳಷ್ಟು ಚರ್ಚೆಗಳು ನಡೆದು ಈ ಕೂಡಲೇ ಕಾಮಗಾರಿಯನ್ನು ಕೋಲ್ ಮಂದ್ ಜಾಗದೊಳಗೆ ಮಾಡದಂತೆ ತಡೆಹಿಡಿಯಲು ಹಾಗೂ ಇದನ್ನು ಮೀರಿ ನಡೆಸಿದ್ದರೆ ಅಂತಹವರ ಮೇಲೆ ಪೊಲೀಸ್ ಪುಕಾರು ನೀಡಲು ಸಭೆ ತೀರ್ಮಾನ ಕೈಗೊಳ್ಳಲಾಯಿತು. 

ಇದರ ಜೊತೆಗೆ ಇಂದಿನ ಸಭೆಯ ಮಾಹಿತಿಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಇವರುಗಳಿಗೆ ಹಾಗೂ ಕೇಂದ್ರ ಜಲಜೀವನ್ ಮಿಷನ್ ಯೋಜನೆಯ ಸಂಬಂಧಪಟ್ಟವರಿಗೆ ಪತ್ರ ಬರೆಯಲು ಸರ್ವಾನುಮತದಿಂದ ಒಪ್ಪಲಾಯಿತು ಹಾಗೂ ಮುಂದಿನ ದಿನಗಳಲ್ಲಿ ಬರಲಿರುವ ಪುತ್ತರಿ ಕೋಲ್ ಮಂದ್'ನ್ನು ವಿಜೃಂಭಣೆಯಿಂದ ನಡೆಸಲು ತಿರ್ಮಾನಿಸಲಾಯಿತು. 

ಸಭೆಯಲ್ಲಿ ಆರು ನಾಡಿನ ತಕ್ಕಮುಖ್ಯಸ್ಥರು ಹಾಗೂ ನಾಡಿನ ಪರವಾಗಿ ತೀತಮಾಡ ಎಂ ಉತ್ತಪ್ಪ, ಅಚ್ಚಿಯಂಡ ಬೋಸು, ಕೊಡಂದೇರ ಎಂ ಸುಬ್ಬಯ್ಯ, ಮನೆಯಪಂಡ ಅನಿಲ್, ಚಮ್ಮಟೀರ ಸುಗುಣ ಮುತ್ತಣ್ಣ, ಕಾಡ್ಯಮಾಡ ಪೂಣಚ, ಸಣ್ಣುವಂಡ  ಪೂಣಚ್ಚ, ಚಮ್ಮಟೀರ ಪ್ರವೀಣ್ ಉತ್ತಪ್ಪ,  ತೀತಮಾಡ ಎಸ್ ಗಣಪತಿ, ಕಾಡ್ಯಮಾಡ ನವೀನ್, ಕೊಡಂದೇರ ಪವನ್, ಮೂಕಳೇರ ಬಿ ರಮೇಶ್, ಗುಮ್ಮಟೀರ ದರ್ಶನ್ ನಂಜಪ್ಪ, ಗುಮ್ಮಟೀರ ಚೆಂಗಪ್ಪ, ಗುಮ್ಮಟೀರ ಕೌಶಿಕ್, ಕೆ.ಟಿ ಕರುಂಬಯ್ಯ, ಡಿ.ಬಿ ಪೂಣಚ್ಚ, ಎಂ.ಪಿ ವಿನು, ಎಸ್.ವಿ ರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಈ ಕೋಲು ಮಂದ್ ಕುಂದಾ ಮುಗುಟಿಗೇರಿ ಗ್ರಾಮದಲ್ಲಿದ್ದರೂ ಸುತ್ತಮುತ್ತಲಿನ ಆರು ಗ್ರಾಮಗಳಿಗೆ ಸೇರಿದ್ದಾಗಿದೆ. ಪುರಾತನ ಕಾಲದಿಂದಲೂ ತಕ್ಕಾಮೆ ಎಂಬ ಪರಿಕಲ್ಪನೆಯಡಿಯಲ್ಲಿ ಇಲ್ಲಿ ಹಬ್ಬಗಳನ್ನು ನಡೆಸಲಾಗುತ್ತದೆ. ಹುದೂರು ಗ್ರಾಮದ ತಕ್ಕಮುಖ್ಯಸ್ಥರಾಗಿ ಅಡ್ಡಂಡ ಕುಟುಂಬ, ಹಳ್ಳಿಗಟ್ಟು ಒಂದು ಭಾಗದ ತಕ್ಕರಾಗಿ ಚಮ್ಮಟೀರ ಕುಟುಂಬ ಹಾಗೂ ಮತ್ತೊಂದು ಭಾಗದ ತಕ್ಕರಾಗಿ ಅಚ್ಚಿಯಂಡ ಕುಟುಂಬ, ಈಚೂರು ಗ್ರಾಮದ ತಕ್ಕರಾಗಿ ತೀತಮಾಡ ಕುಟುಂಬ, ಕುಂದಾ ಗ್ರಾಮದ ತಕ್ಕರಾಗಿ ಕೊಡಂದೇರ ಕುಟುಂಬ, ಅರ್ವತೋಕ್ಲು ಭಾಗದ ತಕ್ಕರಾಗಿ ಕಾಡ್ಯಮಾಡ ಕುಟುಂಬ ಹಾಗೂ ಸ್ಥಳೀಯ ಮುಗುಟಿಗೇರಿ ಗ್ರಾಮದ ತಕ್ಕರಾಗಿ ಮನೆಯಪಂಡ ಕುಟುಂಬ ಇಲ್ಲಿ ತಕ್ಕಾಮೆಯನ್ನು ಹೊಂದಿದೆ.