Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಖಿಲ ಕೊಡವ ಸಮಾಜದ ಅಧ್ಯಕ್ಷ ಸ್ಥಾನದಿಂದ ಮಾತಂಡ ಮೊಣ್ಣಪ್ಪ ಸ್ವಯಂ ನಿವೃತ್ತಿ


ಅಖಿಲ ಕೊಡವ ಸಮಾಜದ ಅಧ್ಯಕ್ಷ ಸ್ಥಾನದಿಂದ ಮಾತಂಡ ಮೊಣ್ಣಪ್ಪ ಸ್ವಯಂ ನಿವೃತ್ತಿ

ಅಖಿಲ ಕೊಡವ ಸಮಾಜಕ್ಕೆ ಜಿಲ್ಲಾಡಳಿತ ಹಾಗೂ ಸರಕಾ ಹೆಚ್ಚಿನ ಪ್ರಾತಿನಿಧ್ಯ ನೀಡಲು ಸಭೆ ಒತ್ತಾಯ

ಸುಧೀರ್ಘ 49 ವರ್ಷಗಳ ಸೇವೆಯ ಬಳಿಕ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಸ್ವಯಂ ನಿವೃತ್ತಿ ಘೋಷಿಸಿದ್ದು, ಕೊಡವ ಜನಾಂಗದ ಹಿರಿಯಣ್ಣನಂತ್ತಿರುವ ಹಾಗೂ ಸ್ವಾತಂತ್ರ್ಯ ಪೂರ್ವದ ಸಂಸ್ಥೆಯೂ ಆಗಿರುವ ಅಖಿಲ ಕೊಡವ ಸಮಾಜಕ್ಕೆ ಮುಂದಿನ ಅಧ್ಯಕ್ಷರು ಯಾರು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.

ಶುಕ್ರವಾರ ವಿರಾಜಪೇಟೆಯ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವರು ನಿವೃತ್ತಿ ಘೋಷಿಸಿದ್ದು, ಕೆಲವು ಕ್ಷಣ ಭಾವುಕರಂತೆ ಕಂಡುಬಂದ ಮಾತಂಡ ಮೊಣ್ಣಪ್ಪ ಅವರು ಮಾತನಾಡುತ್ತಾ ನನ್ನ ಜನಾಂಗ ನನಗೆ ಒಂದು ದೊಡ್ಡ ಜವಬ್ದಾರಿಯನ್ನು 49 ವರ್ಷಗಳ ಹಿಂದೆ ನೀಡಿತ್ತು ಇದನ್ನು ದೇವರು ಮೆಚ್ಚುವ ರೀತಿ ಮಾಡಿದ್ದೇನೆ. ಬಹುಶಃ ನಾನು ಈ ಸಮಾಜದ ಅಧ್ಯಕ್ಷನಾಗಿ ಆಯ್ಕೆ ಆಗದೆ ಹೋಗದೆ ಇದ್ದಿದ್ದರೆ ಇವತ್ತು ನಾನೂ ಏನೂ ಆಗುತ್ತಿರಲಿಲ ಜನ ಸಾಮಾನ್ಯರಲ್ಲಿ ನಾನೂ ಕೂಡ ಒಬ್ಬನಾಗಿರುತ್ತಿದ್ದೆ ಎಂದ ಅವರು ಒಂದು ಕ್ಷಣ ಭಾವುಕರಾಗಿ ನಾನು ಇವತ್ತು ಈ ಸಮಾಜಕ್ಕೆ ಏನೇ ನೀಡಿದ್ದರು ಅದಕ್ಕೆ ಕಾರಣ ನಮ್ಮ ಹಿರಿಯರು 1942ರಲ್ಲಿ ದೂರದೃಷ್ಟಿಯಿಂದ ಕಟ್ಟಿದ ಅಖಿಲ ಕೊಡವ ಸಮಾಜ ಹಾಗೂ ನನ್ನ ಜನಾಂಗ ಬಾಂಧವರು ಎಂದರು.

ಮುಂದುವರಿದು ಮಾತನಾಡಿದ ಅವರು ತಕ್ಕಾಮೆಯ ನೆರಳಿನಲ್ಲಿ ಹಿರಿಯರು ಕಟ್ಟಿಬೆಳೆಸಿದ ಈ ಸಮಾಜವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ನಮ್ಮ ಹಿರಿಯರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಈ ಸಂಸ್ಥೆಯನ್ನು ಹುಟ್ಟುಹಾಕಬೇಕಾದರೆ ಅವರ ಅದ್ಭುತ ಚಿಂತನೆ ಹಾಗೂ ದೂರದೃಷ್ಟಿಗೆ ನಾವು ತಲೆಬಾಗಿ ಇದನ್ನು ಮುಂದಿನ ಪೀಳಿಗೆ ಉಳಿಸಿ ಬೆಳಸಿಕೊಂಡು ಹೋಗಬೇಕಿದೆ ಎಂದರು. ಸಭೆಯ ಮೊದಲಿಗೆ ಮಹಾಸಭೆಯಲ್ಲಿ ಉಪಸ್ಥಿತರಿದ್ದ ನಾಲ್ಕು ದೇಶ ತಕ್ಕ ಕುಟುಂಬದವರಾದ ಪರದಂಡ, ಬೊಳ್ಳೇರ, ಪಾಂಡೀರ ಹಾಗೂ ಪರುವಂಡ ಕುಟುಂಬದಲ್ಲಿ ತಲಾ ಒಬ್ಬೊಬ್ಬರನ್ನು ಕರೆದು ವೇದಿಕೆಯಲ್ಲಿ ಆಸನ ನೀಡಿ ಗೌರವ ನೀಡಲಾಯಿತು. ಕಳೆದ ಹಲವಾರು ವರ್ಷಗಳಿಂದ ಮಹಾಸಭೆಯಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದು ವಿಶೇಷವಾಗಿತ್ತು. ಜಿಲ್ಲೆಯ ವಿವಿಧ ಕೊಡವ ಸಮಾಜಗಳು, ವಿವಿಧ ನಾಡಿನ ತಕ್ಕ ಮುಖ್ಯಸ್ಥರು ಸೇರಿದಂತೆ ಬಹುತೇಕ ಕೊಡವ ಕುಟುಂಬದ ಪ್ರತಿನಿಧಿಗಳು ಭಾಗವಹಿಸಿ ಗಮನ ಸೆಳೆದದ್ದು ಅಲ್ಲದೆ ಮಹಾಸಭೆಯಲ್ಲಿ ಹಲವಾರು ವಿಷಯಗಳು ಚರ್ಚೆಗೆ ಬಂದು ಹತ್ತು ಹಲವು ನಿರ್ಣಯಗಳನ್ನು ಮಹಾಸಭೆಯಲ್ಲಿ ಸರ್ವಾನುಮತದಿಂದ ಒಪ್ಪಲಾಯಿತು.

ಸರಕಾರ, ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು ಕೊಡವ ಜನಾಂಗದ ಕುರಿತು ಅಥವಾ ವಿಶೇಷವಾಗಿ ತಲಕಾವೇರಿಯ ತುಲಾಸಂಕ್ರಮಣದ ಕುರಿತು ಯಾವುದೇ ನಿರ್ಣಯ ಕೈಗೊಳ್ಳಬೇಕಾದರೆ ಮೊದಲು ಅಖಿಲ ಕೊಡವ ಸಮಾಜದ ಗಣನೆಗೆ ತಂದು ಸಮಾಜದ ಪ್ರಮುಖರನ್ನು ಕರೆದು ಸಭೆ ನಡೆಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಇತರ ಜನಾಗಕ್ಕೆ ಮಠಗಳು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆಯೋ ಹಾಗೇ ಕೊಡವ ಜನಾಂಗಕ್ಕೆ ಅಖಿಲ ಕೊಡವ ಸಮಾಜ ಜನಾಂಗದ ಮಾತೃ ಸಂಸ್ಥೆಯಾಗಿದೆ. ಕೊಡವರ ಮನೆಯಲ್ಲಿ ಜನಿಸಿದ ಪ್ರತಿ ಮಗು ಕೂಡ ಅಖಿಲ ಕೊಡವ ಸಮಾಜದ ಸದಸ್ಯನಾಗುತ್ತಾನೆ, ಹೀಗಿರುವಾಗ ಅಖಿಲ ಕೊಡವ ಸಮಾಜದ ಕಡೆಗಣನೆ ಸರಿಯಲ್ಲಾ ಎಂಬ ಮಾತು ಸಭೆಯಲ್ಲಿ ಕೇಳಿಬಂದು ಇದಕ್ಕೆ ಸಭೆ ಸರ್ವಾನುಮತದಿಂದ ಒಪ್ಪಲಾಯಿತು. ತಲಕಾವೇರಿ ಭಾಗಮಂಡಲದಲ್ಲಿ ಕೊಡವರನ್ನು ಕಡೆಗಣನೆ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಖಂಡನೆಯ ಮಾತು ಕೇಳಿ ಬಂತು, ಪ್ರಪಂಚದಲ್ಲಿರುವ ಏಕೈಕ ಜನಾಂಗವಾಗಿರುವ ಕೊಡವ ಜನಾಂಗಕ್ಕೆ ಮಾತ್ರ ಕಾವೇರಿ ಮಾತೆ ಕುಲದೇವಿಯಾಗಿದ್ದು, ಇತರ ಯಾವುದೇ ಜನಾಂಗಕ್ಕೂ ಕೂಡ ಕಾವೇರಿ ಮಾತೆ ಕುಲದೇವಿಯಾಗಿರುವುದಿಲ್ಲ. ಹಾಗಿರುವಾಗ ತಲಕಾವೇರಿ ಭಾಗಮಂಡಲದಲ್ಲಿ ಕೊಡವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕಿದೆ, ಕೊಡವ ಜನಾಂಗಕ್ಕೆ ಇಲ್ಲಿನ ವ್ಯವಸ್ಥಾಪನಾ ಸಮಿತಿಯಲ್ಲಿ ಖಾಯಂ ಅಧ್ಯಕ್ಷ ಸ್ಥಾನ ನೀಡಬೇಕುಎಂದು ಒತ್ತಾಯಿಸಿದ ಸಭೆ ಕೊಡವ ಜನಾಂಗದ ಹಿರಿಯಣ್ಣನಂತಿರು ಅಖಿಲ ಕೊಡವ ಸಮಾಜಕ್ಕೆ ಸೀಮಿತವಾಗಿ ಮೂರು ಖಾಯಂ ಸದಸ್ಯ ಸ್ಥಾನವನ್ನು ಕಾಯ್ದಿರಿಸಬೇಕಿದೆ ಎಂದು ಸಭೆ ನಿರ್ಣಯವನ್ನು ಕೈಗೊಂಡಿತು. ಇದರೊಂದಿಗೆ ಕೊಡವ ಜನಾಂಗದಲ್ಲಿ ಹಿರಿಯ ಸಾಹಿತಿಗಳು ಹಾಗೂ ಕೊಡವ ಜಾನಪದ ತಜ್ಞರು ಆಗಿರುವ ಬಾಚರಣಿಯಂಡ ಅಪ್ಪಣ್ಣ ಅವರಿಗೆ ಮಂಗಳೂರು ವಿಶ್ವ ವಿದ್ಯಾಲಯದಿಂದ ನೀಡಲಾಗುವ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಬೇಕು ಎಂಬ ಕೊಡವ ಮಕ್ಕಡ ಕೂಟದ ಒತ್ತಾಯವಿದೆ ಎಂದು ಯೂತ್ ವಿಂಗ್ ಗಮನಕ್ಕೆ ತರುತಿದ್ದಂತೆ ಇದಕ್ಕೆ ದ್ವನಿಗೂಡಿಸಿದ ಮುಲ್ಲೇಂಗಡ ಮದೋಶ್ ಪೂವಯ್ಯ ಸಭೆ ಇದನ್ನು ನಿರ್ಣಯ ಮಾಡಬೇಕು ಎಂದಾಗ ಸಂಪೂರ್ಣ ಸಭೆ ಒಪ್ಪಿಗೆ ನೀಡಿ ನಿರ್ಣಯ ಕೈಗೊಳ್ಳಲಾಯಿತು. ಈ ದೇಶ ಕಂಡಿರುವ ಅದ್ಬುತ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ ಹಾಗೂ ಜನರಲ್ ಕೊಡಂದೇರ ತಿಮ್ಮಯ್ಯ ಅವರಿಗೆ ಸರಕಾರ ಭಾರತ ರತ್ನ ಪ್ರಶಸ್ತಿ ನೀಡಲು ಮೀನಾಮೇಷ ಎಣಿಸುತ್ತಿದ್ದು ಇದನ್ನು ಖಂಡಿಸಿ ನಿರ್ಣಯ ಕೈಗೊಳ್ಳುವುದರ ಜೊತೆಗೆ ಇವರಿಬ್ಬರಿಗೆ ಭಾರತ ರತ್ನ ಪದವಿ ನೀಡುವಂತೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲೆಯ ಪ್ರಮುಖ ಹಬ್ಬಗಳಾದ ಕಾವೇರಿ ತುಲಾಸಂಕ್ರಮಣ ಹಾಗೂ ಪುತ್ತರಿ ಹಬ್ಬಕ್ಕೆ ತಲಾ ಎರಡೆರಡು ದಿವಸ ಸರಕಾರ ರಜೆ ನೀಡುವಂತೆ ಹಾಗೂ ಇದರಲ್ಲಿ ಒಂದೊಂದು ದಿವಸ ಸಾರ್ವತ್ರಿಕ ರಜೆಯನ್ನು ನೀಡಬೇಕು ಎಂದು ಸಭೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು. ಹಾಗೇ ಕಾವೇರಿ ಈ ದೇಶದ ಮೂರು ರಾಜ್ಯಗಳ ನದಿನೀರಿನ ವಿಷಯವಾಗಿದ್ದು ಒಂದು ದಿವಸ ಕೇಂದ್ರ ಸರಕಾರವೇ ಸಾರ್ವತ್ರಿಕ ರಜೆಯನ್ನು ನೀಡಬೇಕು ಎಂದು ಸಭೆ ಒತ್ತಾಯಿಸಿತು. ಸಭೆಯಲ್ಲಿ ಬಹಳಷ್ಟು ವಿಷಯಗಳು ಚರ್ಚೆಗೆ ಬಂದು ಬಹುತೇಕ ವಿಷಯಗಳು ನಿರ್ಣಯಗಳಾಗಿ ಕೈಗೊಳ್ಳಲಾಯಿತು. ಸಭೆಯಲ್ಲಿ ಮಂದ್ ಮಾನಿ ಕೊಡವರ ಸ್ಮಶಾನಗಳ ಬಗ್ಗೆ ಇದರಲ್ಲಿ ಸರಕಾರ ಅಥವಾ ಪಂಚಾಯತ್  ಪ್ರವೇಶದ ಮಾತು ಕೇಳಿ ಬಂದು ಕೊಡವರ ಮಂದ್ ಮಾನಿ ಸೇರಿದಂತೆ ಕೊಡವರ ಸ್ಮಶಾನಗಳು ಕೊಡವರಿಗಾಗಿ ಕಾಯ್ದಿರಿಸಬೇಕು ಎಂದು ಒತ್ತಾಯಿಸಲಾಯಿತು.

ಸಭೆಯ ಮೊದಲಿಗೆ ಅಖಿಲ ಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ ಕಳೆದ ಸಾಲಿನ ಮಹಾಸಭೆಯ ವರದಿಯನ್ನು ಓದಿದನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು. ಬಳಿಕ ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವರದಿಯನ್ನು ಅಧ್ಯ ಬಾಚರಣಿಯಂಡ ರಾಣು ಅಪ್ಪಣ್ಣ ಅನುಪಸ್ಥಿತಿಯಲ್ಲಿ ಪೊಮ್ಮಕ್ಕಡ ಪರಿಷತ್ ಉಪಾಧ್ಯಕ್ಷೆ ಮಂಡೇಪಂಡ ಗೀತಾ ಮಂದಣ್ಣ ಓದಿ ಕಳೆದೆರಡು ವರ್ಷಗಳಿಂದ ಈ ದೇಶವನ್ನು ವ್ಯಾಪಿಸಿರುವ ಕೊರೋನ ಮಹಾಮಾರಿಯಿಂದ ಹೆಚ್ಚಿನ ಕಾರ್ಯಕ್ರಮ ಮಾಡಲು ಸಾದ್ಯವಾಗಿಲ್ಲ, ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಕ್ರಮ ಮಾಡುವ ಭರವಸೆ ವ್ಯಕ್ತಪಡಿಸಿದ್ದರು. 

ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಸಂಸ್ಥೆಯ ಬಗ್ಗೆ ಸಭೆಗೆ ಮಾಹಿತಿ ನೀಡುತ್ತಾ, ಕಳೆದ ಎರಡು ವರ್ಷಗಳ ಹಿಂದೆ ಸ್ಥಾಪನೆಯಾದ ಯೂತ್ ವಿಂಗ್ ಹಲವಾರು ಯೋಜನೆಗಳನ್ನು ರೂಪಿಸಿದ್ದು ಕೊರೋನ ಮಹಾಮಾರಿಯಿಂದ ಹಿನ್ನಡೆಯಾಗಿದೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕೊಡವ ಜನಾಂಗದ ಯುವಜನ ಮೇಳದಂತಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಯುವಜನಾಂಗವನ್ನು ಸಂಘಟಿಸಲಾಗುತ್ತದೆ ಎಂದರು. ಕಳೆದ ಮೂರು ವರ್ಷಗಳಿಂದ ಭಾಗಮಂಡಲದಿಂದ ತಲಕಾವೇರಿಗೆ ನಡೆದುಕೊಂಡು ಹೋಗುತ್ತಿರುವ "ಕಾವೇರಿ ನಡ್ಪು" ಕಾರ್ಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡವ ಯುವಕ ಯುವತಿಯರು ಪಾಲ್ಗೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು ಮುಂದಿನ ದಿನಗಳಲ್ಲಿ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಊರೂರುಗಳಲ್ಲಿ ಯುವಕ ಯುವತಿಯರನ್ನು ಸಂಘಟಿಸಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನಾಂಗವನ್ನು ಕರೆದುಕೊಂಡು ಹೋಗುವುದಾಗಿ ಸಭೆಗೆ ಮಾಹಿತಿ ನೀಡಿದ್ದರು. ಯೂತ್ ವಿಂಗ್ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು ರಾಜಕೀಯವಾಗಿ ಜನಾಂಗವನ್ನು ಮೂಲೆ ಗುಂಪು ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಯಾವುದೇ ಪಕ್ಷವಿರಲಿ ಕೊಡಗಿನಲ್ಲಿ ಕೊಡವ ಜನಾಂಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು, ಕೊಡವರಿಗೆ ಕೊಡಗು ಹೊರುತುಪಡಿಸಿದ್ದರೆ ಬೇರೆ ಎಲ್ಲಿಯೂ ರಾಜಕೀಯ ಅಥವಾ ಇನ್ನಿತರ ಸ್ಥಾನಮಾನಗಳನ್ನು ಕೇಳಲು ಸಾದ್ಯವಿಲ್ಲ. ಹಾಗೆ ಕೊಡಗು ಬಿಟ್ಟರೆ ಕೊಡವರಿಗೆ ಬೇರೆ ಪ್ರದೇಶಗಳು ಇಲ್ಲ ಹೀಗಿರುವಾಗ ಕೊಡವರಿಗೆ ಒಳ್ಳೆಯ ಸ್ಥಾನಮಾನಗಳನ್ನು ನೀಡುವ ರಾಜಕೀಯ ಪಕ್ಷಕ್ಕೆ ಅದರಲ್ಲೂ ಈ ಬಾರಿ ಎಂ ಎಲ್ ಎ ಚುನಾವಣೆ ಸಮಿಪಿಸುತ್ತಿದ್ದು ಕೊಡವರಿಗೆ ಸೀಟು ನೀಡುವ ರಾಜಕೀಯ ಪಕ್ಷಕ್ಕೆ ಯುವ ಜನಾಂಗದ ಸಂಪೂರ್ಣ ಬೆಂಬವನ್ನು ನೀಡುವುದಾಗಿ ಹಾಗೂ ಒಂದು ಸಮಯ ಎಲ್ಲಾ ಪಕ್ಷಗಳು ಇದನ್ನು ಮನಗಂಡು ಎಲ್ಲಾ ಪಕ್ಷದಲ್ಲೂ ಕೊಡವರಿಗೆ ಪ್ರಾತಿನಿಧ್ಯ ನೀಡಿದ್ದರೆ ಚುನಾವಣೆ ವಿಷಯದಲ್ಲಿ ತಟಸ್ಥ ಆಗುವುದಾಗಿ ತಿಳಿಸಿದ್ದರು. ಇಲ್ಲವೆಂದರೆ ನಮಗೂ ರಾಜಕೀಯ ಮಾಡಲು ಗೊತ್ತಿದೆ ಎಂದು ವಿವಿಧ ರಾಜಕೀಯ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದರು. ಫಿ.ಮಾ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರಿಗೆ ಭಾರತ ರತ್ನ ಪ್ರಶಸ್ತಿಗೆ ಒತ್ತಾಯ ಸೇರಿದಂತೆ, ಕೊಡಗಿನ ಎರಡು ಪ್ರಮುಖ ಹಬ್ಬಗಳಿಗೆ ಸರಕಾರಿ ರಜೆ ನೀಡುವ ಕುರಿತು, ಕೊಡಗಿನ ಪ್ರಮುಖ ದೇವಾಲಯಗಳನ್ನು ಪ್ರವಾಸೋದ್ಯಮ ಪಟ್ಟಿಯಿಂದ ಹೊರಗಿಟ್ಟು ತೀರ್ಥಕ್ಷೇತ್ರ ಎಂದು ಪರಿಗಣಿಸುವ ಬಗ್ಗೆ, ತಲಕಾವೇರಿ ಭಾಗಮಂಡಲದಲ್ಲಿ ಕೊಡವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಬಗ್ಗೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಅಖಿಲ ಕೊಡವ ಸಮಾಜ ಗಮನ ಸೆಳೆಯಿತು ಮಾತ್ರವಲ್ಲ ವರದಿಯಲ್ಲಿ ನೀಡಲಾದ ಬಹುತೇಕ ವಿಷಯಗಳು ಅಖಿಲ ಕೊಡವ ಸಮಾಜ ಮಹಾಸಭೆಯಲ್ಲಿ ನಿರ್ಣಯಗಳಾಗಿ ಕೈಗೊಂಡಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕೊಡವ ಸಮಾಜ ಅಧ್ಯಕ್ಷರುಗಳು ಹಾಗೂ ಪ್ರಮುಕರು, ಊರು ನಾಡಿನ ತಕ್ಕ ಮುಖ್ಯಸ್ಥರುಗಳು ಮಾತನಾಡಿ ಗಮನ ಸೆಳೆದ್ದರೆ. ವೇದಿಕೆಯಲ್ಲಿ ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟೀರ ಮಾದಯ್ಯ ಸುಬ್ರಮಣಿ, ಸಹ ಕಾರ್ಯದರ್ಶಿ ನಂದೆಟೀರ ರಾಜ ಮಾದಪ್ಪ, ಖಜಾಂಚಿ ಮಂಡೇಪಂಡ ಸುಗುಣ, ಅಪ್ಪುಮಣಿಯಂಡ ತುಳಸಿ ಕಾಳಪ್ಪ, ಸೇರಿದಂತೆ ದೇಶ ತಕ್ಕರ ಕುಟುಂಬದವರಾದ ಪರದಂಡ ಸುಬ್ರಮಣಿ, ಬೊಳ್ಳೇರ ಪಿ ಅಪ್ಪಯ್ಯ, ಪರುವಂಡ ಪೊನ್ನಪ್ಪ, ಪಾಂಡೀರ ಗಣಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಳವಂಡ ಪೂವಿ ಪ್ರಾರ್ಥಿಸಿದ್ದರು, ಉಪಾಧ್ಯಕ್ಷ ಅಜ್ಜಿಕುಟ್ಟೀರ ಮಾದಯ್ಯ ಸುಬ್ರಮಣಿ ಸ್ವಾಗತಿಸಿದ್ದರೆ, ಪ್ರಧಾನ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ ವಂದಿಸಿದರು. 49 ವರ್ಷದ ಸುಧೀರ್ಘ ಸೇವೆಗಾಗಿ ಮಹಾಸಭೆಯಲ್ಲಿ ಮಾತಂಡ ಮೊಣ್ಣಪ್ಪನವನ್ನು ಸನ್ಮಾನಿಸಲಾಯಿತು, ಈ ಸಂದರ್ಭ ಕಛೇರಿ ನಿರ್ವಾಹಕಿ ಮುಕ್ಕಾಟೀರ ರಶ್ಮಿ ವ್ಯಕ್ತಿ ಪರಿಚಯ ಮಾಡಿದ್ದರು.