Header Ads Widget

ಸರ್ಚ್ ಕೂರ್ಗ್ ಮೀಡಿಯ

ಔಷಧಿ ಸಸ್ಯಗಳ ಕುರಿತು ಅರಣ್ಯಾಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂದಿಯ ಸಾಮರ್ಥ್ಯ ವರ್ಧನೆ ಮತ್ತು ಸಮನ್ವಯ ಕಾರ್ಯಾಗಾರ

ಔಷಧಿ ಸಸ್ಯಗಳ ಕುರಿತು ಅರಣ್ಯಾಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂದಿಯ ಸಾಮರ್ಥ್ಯ ವರ್ಧನೆ ಮತ್ತು ಸಮನ್ವಯ ಕಾರ್ಯಾಗಾರ

ಗಿಡಮೂಲಿಕೆಗಳ ಬಳಕೆ ಬಗ್ಗೆ ಅರಿವು ಮೂಡಿಸಬೇಕು: ನಾಪಂಡ ರವಿಕಾಳಪ್ಪ

‘ನಾಟಿ ವೈದ್ಯ ಪದ್ಧತಿಯನ್ನು ಇತರರಿಗೆ ತಿಳಿಸಿಕೊಡಬಾರದೆಂಬ ತಪ್ಪು ನಂಬಿಕೆ ಹಲವರಲ್ಲಿದೆ. ಈ ಮನಸ್ಥಿತಿ ದೂರಾಗಬೇಕು. ಮುಂದಿನ ದಿನದಲ್ಲಿ ಜೀವ ವೈವಿಧ್ಯ ಮಂಡಳಿ ವತಿಯಿಂದ ನಾಟಿ ವೈದ್ಯರ ರಾಜ್ಯ ಮಟ್ಟದ ಸಮಾವೇಶ ನಡೆಸಲಾಗುವುದು.’ ನಾಪಂಡ ರವಿ ಕಾಳಪ್ಪ, ಅಧ್ಯಕ್ಷರು, ಕರ್ನಾಟಕ ಜೀವ ವೈವಿಧ್ಯ ಮಂಡಳಿ.

ಮಡಿಕೇರಿ ನ.29: ಸುತ್ತಮುತ್ತಲ ಪರಿಸರದಲ್ಲಿ ಹಲವು ಬಗೆಯ ಗಿಡಮೂಲಿಕೆಗಳಿದ್ದು, ಅವುಗಳ ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಹೇಳಿದರು.

ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ಜೀವ ವೈವಿಧ್ಯ ಮಂಡಳಿ ವತಿಯಿಂದ ಕೊಡಗು ಅರಣ್ಯ ವೃತ್ತದ ಸಹಕಾರದಲ್ಲಿ ಕುಶಾಲನಗರ ಅರಣ್ಯ ತರಬೇತಿ ಕೇಂದ್ರದಲ್ಲಿ ಮಂಗಳವಾರ ನಡೆದ ‘ಔಷಧಿ ಸಸ್ಯಗಳ ಕುರಿತು ಅರಣ್ಯಾಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂದಿಯ ಸಾಮಥ್ರ್ಯ ವರ್ಧನೆ ಮತ್ತು ಸಮನ್ವಯ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ವನ್ಯ ಸಂಪತ್ತು ಇದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಹಲವು ಬಗೆಯ ಗಿಡಮೂಲಿಕೆಗಳು ಇವೆ. ಅವುಗಳ ಬಳಕೆ ಬಗ್ಗೆ ಜನರಿಗೆ ಅರಿವಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಿ, ಅವುಗಳ ಬಳಕೆ ಬಗ್ಗೆ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು. 

ಕೊಡಗಿನಲ್ಲಿ ನಾಟಿ ವೈದ್ಯರು ಮತ್ತು ಗಿರಿಜನರು ಗಿಡಮೂಲಿಕೆಗಳ್ನು ಸಂಗ್ರಹಿಸುತ್ತಾರೆ. ಆದರೆ ಅದರ ಮಹತ್ವದ ಬಗ್ಗೆ ಅವರಿಗೆ ತಿಳಿದಿಲ್ಲ. ಹೊರ ರಾಜ್ಯದವರು ಅದನ್ನು ಖರೀದಿಸುತ್ತಾರೆ. ಸ್ಥಳೀಯರಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಎಲ್ಲರು ಶ್ರಮಿಸಬೇಕಿದೆ ಎಂದು ಕರೆ ನೀಡಿದರು.

ಕೊಡಗು ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿ ಸಾಕಷ್ಟು ಜೀವ ವೈವಿಧ್ಯ ಇದೆ. ನದಿ ಸಂರಕ್ಷಣೆ ಮತ್ತು ಜೀವ ವೈವಿಧ್ಯ ಉಳಿವಿಗೆ ಮಂಡಳಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಸಂಘಸಂಸ್ಥೆ ಪ್ರಮುಖರು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಯೋಜನೆಗೆ ಅಂತಿಮ ರೂಪ ನೀಡಲಾಗುವುದು ಎಂದು ತಿಳಿಸಿದರು.


ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್.ಮೂರ್ತಿ ಮಾತನಾಡಿ, ಇಂದಿನ ದಿನದಲ್ಲಿ ಆಹಾರ ಪದ್ಧತಿಯಲ್ಲಿ ಬಹಳ ಬದಲಾವಣೆ ಆಗಿದೆ. ನಾವು ಸೇವಿಸುವ ಗಾಳಿ, ಆಹಾರ, ನೀರು ಯಾವುದೂ ಶುದ್ಧವಾಗಿಲ್ಲ. ಅವುಗಳು ಸುಧಾರಿಸಬೇಕಾದರೆ ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಅಪರೂಪದ ಜೀವ ವೈವಿಧ್ಯಗಳ ಸಂರಕ್ಷಣೆ ಆಗಬೇಕಿದೆ. ಕಾಡು ಪ್ರದೇಶ ಮಾತ್ರವಲ್ಲದೆ, ಜಮೀನಿನಲ್ಲಿ ಗಿಡಮೂಲಿಕೆಗಳನ್ನು ಬೆಳೆಯುವ ವಿಚಾರದಲ್ಲಿ ಉತ್ತೇಜನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕ ಮಾತನಾಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎ.ಸುದರ್ಶನ್ ಅವರು, ಹಳೆಯ ಆಯುರ್ವೇದ ಪದ್ಧತಿ ಇಂದು ಮುಂಚೂಣಿಗೆ ಬಂದಿದೆ. ಹೀಗಾಗಿ ಗಿಡಮೂಲಿಕೆಗಳ ಬೇಡಿಕೆ ಹೆಚ್ಚಾಗಿದೆ. ಔಷಧಿ ಗಿಡಗಳ ಬಗ್ಗೆ ಜನ ತಿಳಿದುಕೊಳ್ಳಬೇಕು. ಜೀವ ವೈವಿಧ್ಯ ಇಲ್ಲದಿದ್ದರೆ ಗಿಡಮೂಲಿಕೆಗಳ ಉತ್ಪಾದನೆ ಸಾಧ್ಯವಿಲ್ಲ. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಪಿ.ಚಂದ್ರಶೇಖರ್, ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಂ ಬಾಬು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷ ಕುಮಾರ್ ಚಿಕ್ಕ ನರಗುಂದ ವೇದಿಕೆಯಲ್ಲಿದ್ದರು.

ಪ್ರಸನ್ನ ಕುಮಾರ್ ಪ್ರಾರ್ಥಿಸಿದರು, ಕೂಡುಮಗಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು. ಅರುಣ್ ಕುಮಾರ್ ಸ್ವಾಗತಿಸಿದರು. ಪ್ರಭು ನಿರೂಪಿಸಿದರು. ಕೆ.ಆರ್. ಪ್ರಸನ್ನ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ವಿವಿಧ ವಿಚಾರಗಳ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರ ನಡೆಸಿಕೊಟ್ಟರು.