Header Ads Widget

ಸರ್ಚ್ ಕೂರ್ಗ್ ಮೀಡಿಯ

ಡಿ.10 ಮತ್ತು 11 ರಂದು ರಾಜಸೀಟಿನಲ್ಲಿ ‘ಕೊಡಗು ಕಾಫಿ ಮೇಳ’


ಡಿ.10 ಮತ್ತು 11 ರಂದು ರಾಜಸೀಟಿನಲ್ಲಿ ‘ಕೊಡಗು ಕಾಫಿ ಮೇಳ’

ಇದೇ ಡಿಸೆಂಬರ್, 10 ಮತ್ತು 11 ರಂದು ಕೊಡಗು ಕಾಫಿ ಮೇಳವು ನಗರದ ರಾಜಾಸೀಟಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. 

ನಗರದ ದಾಸವಾಳ ರಸ್ತೆಯಲ್ಲಿರುವ ಕಾಫಿ ಮಂಡಳಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ಇದೇ ಎರಡನೇ ಶನಿವಾರ ಮತ್ತು ಭಾನುವಾರ ಗ್ರೇಟರ್ ರಾಜಸೀಟಿನಲ್ಲಿ ಕೊಡಗು ಕಾಫಿ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.  

ವಾರಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ರಾಜಸೀಟಿಗೆ ಭೇಟಿ ನೀಡುತ್ತಾರೆ. ಕಾಫಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸುವುದು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೊಡಗು ಕಾಫಿ ಮೇಳ ಆಯೋಜಿಸಲಾಗಿದೆ ಎಂದರು. 

ಕೊಡಗು ಜಿಲ್ಲೆಯಲ್ಲಿ ಉತ್ಕøಷ್ಟ ಕಾಫಿ ಬೆಳೆ ಬೆಳೆಯುತ್ತಿದ್ದು, ಈ ಕಾಫಿ ಬೆಳೆಯಿಂದ ಕಾಫಿ ಉತ್ಪಾದನೆ ಮತ್ತು ಮಾರಾಟ, ಕಾಫಿ ಬೀಜದಿಂದ ಚಿಕೋರಿ ಬಳಸಿ ಕಾಫಿ ಪುಡಿ ಮಾಡುವುದು ಹೀಗೆ ಪ್ರತಿ ಹಂತದಲ್ಲಿ ವಿವರಿಸಲಾಗುತ್ತದೆ. ಕೊಡಗಿನ ಕಾಫಿಯನ್ನು ಎಲ್ಲೆಡೆ ಪರಿಚಯಿಸುವುದು ಮೇಳದ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಕೊಡಗು ಜಿಲ್ಲೆಯಿಂದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕಾಫಿ ಬೆಳೆ ಆಯ್ಕೆಯಾಗಿದ್ದು, ಕಾಫಿ ಬೆಳೆಗೆ ಮತ್ತಷ್ಟು ಮಾರುಕಟ್ಟೆ ಒದಗಿಸಬೇಕಿದೆ ಎಂದರು.  

ಕಾಫಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಇದುವರೆಗೆ 12 ಕೋಟಿ ರೂ ಪರಿಹಾರ ಪಾವತಿಸಲಾಗಿದೆ. 479 ರೈತರಿಗೆ ಕಾಫಿ ಬೆಳೆ ಪರಿಹಾರ ವಿತರಿಸಲಾಗಿದೆ ಎಂದರು. 

ರಾಜಾಸೀಟು ಬಳಿ ಇರುವ ಕೂರ್ಗ್ ವಿಲೇಜ್ಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಕ್ಕಳ ಕ್ರೀಯಾಶೀಲ ಚಟುವಟಿಕೆಗೆ ಒತ್ತು ನೀಡಲಾಗುವುದು. ನೆಹರು ಮಂಟದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ರಾಜಸೀಟಿನಿಂದ ನೆಹರು ಮಂಟಪವರೆಗೆ ಕೇಬಲ್ ರೋಪ್ ಅಳವಡಿಸುವ ಚಿಂತನೆ ಇದೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಮುಂದಿನ ದಿನಗಳಲ್ಲಿ ಈ ಕಾರ್ಯ ಆಗಬಹುದು ಎಂದರು.

ರಾಜರ ಗದ್ದುಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು. 

ಕಾಫಿ ಮಂಡಳಿ ಉಪ ನಿರ್ದೇಶಕರಾದ ಚಂದ್ರಶೇಖರ್ ಅವರು ಕೊಡಗು ಕಾಫಿ ಮೇಳವು ಇದೇ ಮೊದಲ ಬಾರಿಗೆ ರಾಜಸೀಟಿನಲ್ಲಿ ನಡೆಯುತ್ತಿದೆ ಎಂದರು.  

ಕೊಡಗು ಕಾಫಿ ಮೇಳದಲ್ಲಿ ಸ್ಟಾಲ್ ನಿರ್ಮಾಣಕ್ಕೆ ಕನಿಷ್ಠ 5 ರಿಂದ 15 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್ (9483110621) ಹಾಗೆಯೇ ಕಾಫಿ ಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿ ಅಜಿತ್ ಕುಮಾರ್ ರಾವುತ್ (7008859204) ನ್ನು ಸಂಪರ್ಕಿಸಬಹುದು ಎಂದರು.