Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗಿನ ಹರಿಹರ ಗ್ರಾಮದ ಶ್ರೀ ಬೆಟ್ಟಚಿಕ್ಕಮ್ಮ ದೇವಾಲಯದ ಜೀರ್ಣೋದ್ದಾರ ಕಾರ್ಯ; ಭಕ್ತರಿಂದ ಧನ ಸಹಾಯಕ್ಕೆ ಮನವಿ


ಕೊಡಗಿನ ಹರಿಹರ ಗ್ರಾಮದ ಶ್ರೀ ಬೆಟ್ಟಚಿಕ್ಕಮ್ಮ ದೇವಾಲಯದ ಜೀರ್ಣೋದ್ದಾರ ಕಾರ್ಯ; ಭಕ್ತರಿಂದ ಧನ ಸಹಾಯಕ್ಕೆ ಮನವಿ

ಕೊಡಗಿನ  ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿರುವ ಶ್ರೀ ಬೆಟ್ಟಚಿಕ್ಕಮ್ಮ ದೇವಾಲಯದ ಜೀರ್ಣೋದ್ದಾರ ಕಾರ್ಯವು ಬರದಿಂದ ಸಾಗುತ್ತಿದ್ದು, ಶ್ರೀ ಬೆಟ್ಟಚಿಕ್ಕಮ್ಮ ದೇವಾಲಯ ಜೀರ್ಣೋದ್ದಾರ ಸಮಿತಿ(ರಿ) ಯು ಭಕ್ತರಿಂದ ಧನ ಸಹಾಯಕ್ಕೆ ಮನವಿ ಮಾಡುತ್ತಿದೆ.

ಸಪ್ತಮಾತ್ರಿಕಿಯರಲ್ಲಿ ಒಬ್ಬಳಾದ ಆದಿಶಕ್ತಿ ಸ್ವರೂಪಿಣಿ ಶ್ರೀ ಚಿಕ್ಕದೇವಮ್ಮ ಚಿಕ್ಕಮ್ಮ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿಯ ತಂಗಿಯ ಮೂಲಸ್ಥಾನ ಎಚ್.ಡಿ.ಕೋಟೆಯ ಸರಗೂರು ಬಳಿಯ ಚಿಕ್ಕದೇವಿ ಬೆಟ್ಟ.

ಬೆಟ್ಟದ ತಪ್ಪಲಿನಲ್ಲಿ ಶಾಂತವಾಗಿ ಹರಿಯುವ ಕಪಿಲಾ ನದಿ ಕಬಿನಿ ಜಲಾಶಯದ ಎಚ್.ಡಿ.ಕೋಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ರಮಣೀಯ ಪರಿಸರ ಬೆಟ್ಟದ ಮೇಲಿನ ವಿಹಂಗಮ ನೋಟಕ್ಕೆ ಕಣ್ಮನ ಸೆಳೆಯುವ ಆಕರ್ಷಣೀಯ ತಾಣ.

ಅಕ್ಕ ಚಾಮುಂಡಿ ದೇವಿಯಂತೆ ರಾಕ್ಷಸ ಸಂಹಾರಕ್ಕಾಗಿ ಅವಿರ್ಭವಿಸಿದ ಚಿಕ್ಕಮ್ಮ ದೇವಿಯು ಮೈಸೂರು ಮಹಾರಾಜರ ಆರಾಧ್ಯ ದೈವ.


ಸುಮಾರು 300 ರಿಂದ 400 ವರ್ಷಗಳ ಹಿಂದೆ ಹೆಚ್.ಡಿ. ಕೋಟೆಯ ಚಿಕ್ಕದೇವಮ್ಮ ದೇವಿಯನ್ನು ಆರಾಧಿಸುತ್ತಿದ್ದ ಕುಟುಂಬದವರು ಅಲ್ಲಿನ ಬರಗಾಲವನ್ನು ಸಹಿಸಲಾರದೆ ಕೊಡಗಿನೆಡೆಗೆ ವಲಸೆ ಬರುತ್ತಾರೆ ಹಾಗೆ ಬರುವಾಗ ದೇವಿಯ ತಾಳಿಯನ್ನು ತೆಗೆದುಕೊಂಡು ಬಂದು ಕೊಡಗಿನ ವಿರಾಜಪೇಟೆ (ಈಗಿನ ಪೊನ್ನಂಪೇಟೆ) ತಾಲೂಕಿನ ಶ್ರೀಮಂಗಲ ಹೋಬಳಿಯ ಹರಿಹರ ಗ್ರಾಮದಲ್ಲಿ ನೆಲೆ ನಿಂತು ದೇವಿಯನ್ನು ಆರಾಧಿಸಲು ಆರಂಭಿಸುತ್ತಾರೆ. ಆದ್ದರಿಂದಲೇ ಈ ಚಿಕ್ಕಮ್ಮ ದೇವಿಯನ್ನು ಕೊಡಗಿನಾದ್ಯಾಂತ ದೇವಿಯು ಬೆಟ್ಟದ ಚಿಕ್ಕಮ್ಮ, ಬೆಟ್ಟಚಿಕ್ಕಮ್ಮ ಬೆಟ್ಟಚಿಕ್ಕಿ ಎಂದೇ ಜನಜನಿತವಾಗಿದೆ.

ಕೊಡಗಿನ ಜನತೆಯ ಕಷ್ಟ ಕಾರ್ಪಣ್ಯಗಳನ್ನು ನೀಗಿಸಿ ಅವರ ಇಷ್ಟಾರ್ಥವನ್ನು ಪೂರೈಸುವುದಕ್ಕಾಗಿ ಇಲ್ಲಿನ ಅಧಿದೇವತೆ ಶ್ರೀ ಕಾವೇರಿ ಮಾತೆಯ ಅಣತಿಯಂತೆ ನೆಲೆ ನಿಂತ ಕಾರಣದಿಂದ ಶ್ರೀ ಬೆಟ್ಟಚಿಕ್ಕಮ್ಮ ದೇವರ ಉತ್ಸವವನ್ನು ಪ್ರತಿ ವರ್ಷವೂ ತುಲಾ ಸಂಕ್ರಮಣದಲ್ಲಿ ದೇವರ ಕುಟುಂಬದವರು ಮತ್ತು ಊರಿನವರು ಕಟ್ಟುನಿಂತು, ನಂತರದ 15 ದಿನಗಳಲ್ಲಿ ಅಂದರೆ ನವೆಂಬರ್ ತಿಂಗಳ ಮೊದಲ ಮಂಗಳವಾರದಂದು ಸಂಜೆ ದೇವರ ಅವಭ್ರತ ಸ್ನಾನ ಹಾಗೂ ಅನ್ನಸಂತರ್ಪಣೆಯೊಂದಿಗೆ ಜಾತ್ರೆಯು ವಿಜೃಂಭಣೆಯಿಂದ ಜರುಗುತ್ತದೆ. ಮರುದಿನ ಬುಧವಾರ ಬೆಳಿಗ್ಗೆ ಪೂಜಾ ಕೈಂಕರ್ಯಗಳು ನಡೆಯುತ್ತದೆ. ಮುಂದಿನ ಮಂಗಳವಾರ ಬಲಿ ಪೂಜೆ ನಡೆಯುತ್ತದೆ. 


ಶ್ರೀ ಲಕ್ಷ್ಮಿ ದೇವಿ, ಶ್ರೀ ಕನ್ನಂಬಾಡಮ್ಮ ಹಾಗೂ ಶ್ರೀ ಭೈರವೇಶ್ವರ ಇಲ್ಲಿನ ಪರಿವಾರ ದೇವತೆಗಳಾಗಿವೆ. ಶ್ರೀ ಬೆಟ್ಟಚಿಕ್ಕಮ್ಮ ಕೊಡಗಿನ ಭಾಗದ ಭಕ್ತರಿಗೆ ಬೇಡಿದ ವರ ನೀಡುವ ಅದಮ್ಯ ಶಕ್ತಿ ದೇವತೆ, ಮುತ್ತೈದೆ ಭಾಗ್ಯ ಸಂತಾನ ಭಾಗ್ಯ ಕರುಣಿಸುವಂತೆ ಭಕ್ತರು ದೇವಿಯನ್ನು ಪ್ರಾರ್ಥಿಸುತ್ತಾರೆ. ದೇವರಿಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ ಪೂಜೆ ನಡೆಯುತ್ತದೆ. ಹೂವು ಹಣ್ಣು ಕಾಯಿ ಪಂಚಾಮೃತ ದೇವಿಗೆ ತುಂಬಾ ಪ್ರಿಯವಾದ ವಿಶೇಷ ಅಪರೂಪದ ಪೂಜೆಯಾಗಿದೆ. ಯುಗಾದಿ ಸಂಕ್ರಾಂತಿ ಹಾಗೂ ಹುತ್ತರಿ ಹಬ್ಬಗಳಂದು ದೇವಿಗೆ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ.

ಅನಾದಿಕಾಲದಿಂದಲೂ ಪರಿವಾರ ಜನಾಂಗದ ಕುಟುಂಬದವರು ವಂಶಪಾರಂಪರ್ಯವಾಗಿ ದೇವಿಯ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಜಾತ್ರೆ ಹಾಗೂ ವಿಶೇಷ ದಿನಗಳಂದು ಗ್ರಾಮ ದೇವತೆ ಶ್ರೀ ಸುಬ್ರಹ್ಮಣ್ಯ ದೇವರ ಅರ್ಚಕರಿಂದ ದೇವಿಗೆ ಅಭಿಷೇಕ ನೆರವೇರುತ್ತದೆ. ಪ್ರಸ್ತುತ ಲೋಕೇಶ  ಅವರು ಅರ್ಚಕರಾಗಿದ್ದಾರೆ. ಅವರ ತಂದೆಯವರಾದ ಶ್ರೀ ವೆಂಕಟಪ್ಪ (ಪುಟ್ಟಪ್ಪ) ಅವರು ನಿರಂತರವಾಗಿ 50 ವರ್ಷಗಳ ಕಾಲ ದೇವಿಗೆ ಸೇವೆ ಸಲ್ಲಿಸಿ 2016ರಲ್ಲಿ ದೈವಾಧೀನರಾಗಿದ್ದಾರೆ.

ಚಿತ್ರದಲ್ಲಿರುವ ಹಂಚಿನ ದೇವಸ್ಥಾನವು ನೂರು ವರ್ಷಗಳಿಗೂ ಹಳೆಯದಾಗಿದ್ದರಿಂದ ದೇವರ ಕುಟುಂಬದವರು ಹಾಗೂ ಊರಿನವರು ಸೇರಿ ದೇವಸ್ಥಾನದ ಜೀರ್ಣೋದ್ವಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ನಿಮಿತ್ತ 2021 ರ ಅಕ್ಟೋಬರ್ ನಲ್ಲಿ ತಾಂಬೂಲ ಪ್ರಶ್ನೆ ಹಾಕಲಾಗಿ ದೇವಿಯು 300 ರಿಂದ 400 ವರ್ಷಗಳ ಹಿಂದೆ ಹುತ್ತದಿಂದ ಅವಿರ್ಭವಿಸಿದೆ ಹಾಗೂ ನಾಗ ಸ್ವರೂಪಣೆಯಾದ್ದರಿಂದ ದೇವರ ಸರ್ಪ ಇಲ್ಲಿ ಸುತ್ತಾಡುತ್ತಿದೆ ಎಂದು ತಿಳಿದುಬಂದಿದೆ. 

ಸುಮಾರು 17 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಾರ್ಕಳದ ದೇವಾಲಯ ಶಿಲ್ಪಿ ಕಾರ್ಕಳದ ವೇಲುಸ್ವಾಮಿಯವರಿಂದ ಕಲ್ಲಿನ ಕಟ್ಟಡದ ನೂತನ ಗುಡಿಯು ತಲೆಯೆತ್ತಿ ನಿಂತಿದೆ. ಪೌಲಿ ಇಂಟರ್ಲಾಕ್ ಹಾಗೂ ತಡೆಗೋಡೆಯ ನಿರ್ಮಾಣದ ಅಂದಾಜು ವೆಚ್ಚ 30 ಲಕ್ಷ ರೂಪಾಯಿಗಳಿಗೆ ಶ್ರೀ ಬೆಟ್ಟಚಿಕ್ಕಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ(ರಿ) ಯು ಭಕ್ತರಿಂದ ಧನ ಸಹಾಯ ನಿರೀಕ್ಷೆಯಲ್ಲಿದೆ.


ಸಹೃದಯಿ ದಾನಿಗಳು ಶ್ರೀ ಬೆಟ್ಟಚಿಕ್ಕಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ತಮ್ಮ ಕೈಲಾದ ಉದಾರ ಕೊಡುಗೆಯನ್ನು ಈ ಕೆಳಗೆ ನಮೂದಿಸಿದ ಬ್ಯಾಂಕ್‌ ಖಾತೆಗೆ ಪಾವತಿಸ ಬಹುದು.

ಸಮಿತಿಯ ಬ್ಯಾಂಕ್ ಖಾತೆ ವಿವರ: 

ಶ್ರೀ ಬೆಟ್ಟಚಿಕ್ಕಮ್ಮ ದೇವಾಲಯ ಜೀರ್ಣೋದ್ದಾರ ಸಮಿತಿ(ರಿ)

ಕೆನರಾ ಬ್ಯಾಂಕ್ ಗೋಣಿಕೊಪ್ಪಲು

ಅಕೌಂಟ್ ನಂಬರ್ 110080317327

IFSE CODE: CNRB0000686

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಲೋಕೇಶ್ ಪಿ.ವಿ.

ಅರ್ಚಕರು 

ಮೊ: 9480787874