Header Ads Widget

ಸರ್ಚ್ ಕೂರ್ಗ್ ಮೀಡಿಯ

ಮೂರ್ನಾಡು ಜ್ಞಾನ ಜ್ಯೋತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ


ಮೂರ್ನಾಡು ಜ್ಞಾನ ಜ್ಯೋತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ

ಮೂರ್ನಾಡು: ಪೋಷಕರು ತಮ್ಮ ಮಕ್ಕಳನ್ನು ವಿಪರೀತ ಒತ್ತಡಕ್ಕೆ ಸಿಲುಕಿಸಿಬಾರದು ಎಂದು ಮಡಿಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್. ಹೆಚ್. ಟಿ. ಹೇಳಿದರು.


ಮೂರ್ನಾಡು ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜ್ಞಾನ ಜ್ಯೋತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪೋಷಕರು ಮಕ್ಕಳನ್ನು ಹೆಚ್ಚು ಅಂಕ ಪಡೆಯಲೇಬೇಕೆಂದು ಒತ್ತಡ ಹೇರಬಾರದು. ಇತ್ತೀಚಿನ ದಿನಗಳಲ್ಲಿ ಸಣ್ಣ ತರಗತಿಯ ಮಕ್ಕಳು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ. ತಾವು ಏನು ಸಾಧನೆ ಮಾಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ತಮ್ಮ ಮಕ್ಕಳನ್ನು ನೀನು ಇಂತಹ ಕ್ಷೇತ್ರದಲ್ಲಿಯೆ ಮುಂದುವರೆಯಬೇಕು ಎಂದು ತಾಕೀತು ಮಾಡುವುದು ತಪ್ಪು. ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೊ ಅಲ್ಲಿ ಅವರನ್ನು ಪ್ರೋತ್ಸಾಹಿಸುವ ಕಾರ್ಯ ಪೋಷಕರಿಂದ ಆಗಬೇಕು. ಆಗ ಮಾತ್ರ ಇಂದಿನ ವಿದ್ಯಾರ್ಥಿಗಳು ಮುಂದೆ ಏನಾದರೂ ಸಾಧಿಸಲು ಸಾಧ್ಯ ಎಂದ ಅವರು ವಿದ್ಯಾರ್ಥಿಗಳಿಗೆ ಕಲಿಯುವ ಆಸಕ್ತಿ, ಕಲಿಕೆಯ ಮೇಲಿನ ನಂಬಿಕೆ ಬೆಳೆಸಿಕೊಳ್ಳುವುದರೊಂದಿಗೆ ಗುರುಗಳ ಬಗ್ಗೆ ಅಪಾರ ಭಕ್ತಿ ಇರಬೇಕು ಎಂದು ತಿಳಿಸಿದರು.


ಸಮಾರಂಭಕ್ಕೆ ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಡಿಡಿಪಿಐ ಮಚ್ಚಾಡೊ ಅವರು ಮಾತನಾಡಿ ಹಳೆಯ ವಿದ್ಯಾರ್ಥಿಗಳ ಸಾಧನೆ ಈಗಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮತ್ತು ಮಾದರಿಯಾಗಬೇಕು. ಪೋಷಕರು ಮತ್ತು ಶಿಕ್ಷಕರು ಮಕ್ಕಳ ಕೈಯನ್ನು ನಯವಾಗಿ ಹಿಡಿದುಕೊಳ್ಳಬೇಕು ಹಾಗೆಯೆ ಆ ಹಿಡಿತ ದೃಢವಾಗಿರಬೇಕು. ಶಾಲೆಯಲ್ಲಿ ಪ್ರತಿಯೊಬ್ಬ ಶಿಕ್ಷಕರು ತಾಯಿಯಾಗಿರಬೇಕು. ತಾಯಿಯ ವಾತ್ಸಲ್ಯ ತೋರಿದಾಗ ಮಕ್ಕಳಲ್ಲಿ ಉತ್ತಮ ಅಭ್ಯುದಯ ಕಾಣಬಹುದು. ಶಿಕ್ಷಕರು ಮತ್ತು ಪೋಷಕರ ಹೊಂದಾಣಿಕೆಯಿಂದ ಮಕ್ಕಳ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದು ಹೇಳಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟೀರ ರವಿ ಚೀಯಣ್ಣ ವಹಿಸಿ ಮಾತನಾಡಿದ ಅವರು ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಹೇಳಿಕೊಡುವುದಲ್ಲದೆ, ಮನೆಯವರೊಂದಿಗಿನ ಒಡನಾಟ ಹೆಚ್ಚಾಗಬೇಕು. ಮೊಬೈಲ್ ಬಳಕೆ ಕಡಿಮೆ ಆಗಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಡುವಂಡ ಬೆಲ್ಲು ಚಿಣ್ಣಪ್ಪ, ಕಾರ್ಯದರ್ಶಿ ಬಡುವಂಡ ಬೋಪಣ್ಣ, ಖಜಾಂಚಿ ಎನ್.ಒ. ಮ್ಯಾಥ್ಯು, ನಿರ್ದೇಶಕರಾದ ಮಾಳೇಟಿರ ನವೀನ್ ಕಾರ್ಯಪ್ಪ, ಡಾ. ಜೆ.ಎ. ಕುಂಞ ಅಬ್ದುಲ್ಲಾ, ಬಡುವಂಡ ವಿಜಯ, ಅವರೆಮಾದಂಡ ಸುಗುಣ ಸುಬ್ಬಯ್ಯ ಮತ್ತು ಶಾಲಾ ಮುಖ್ಯ ಶಿಕ್ಷಕಿ ಶೀಲಾ ಅಬ್ದುಲ್ಲಾ ಉಪಸ್ಥಿತರಿದ್ದರು. 


ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ವತಿಯಿಂದ ಮೂರ್ನಾಡು ಆರೋಗ್ಯ ಕ್ಲಿನಿಕ್‌ನ ವೈದ್ಯರು ಮತ್ತು ವಿದ್ಯಾಸಂಸ್ಥೆಯ ನಿರ್ದೇಶಕರಾಗಿರುವ ಡಾ. ಜೆ.ಎ. ಕುಂಞ ಅಬ್ದುಲ್ಲಾ ಅವರ ಅವಿರತ ಸೇವೆಯನ್ನು ಸ್ಮರಿಸಿ ಅವರಿಗೆ ಶಾಲು ಹೊದಿಸಿ, ಫಲ-ತಾಂಬೂಲ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. 



ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ ಮತ್ತು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಬಹುಮಾನಗಳನ್ನು ಅತಿಥಿಗಳು ವಿತರಿಸಿದರು. ವಿದ್ಯಾರ್ಥಿನಿ ಪಿ.ವಿ. ಜೀವಿತ ಸ್ವಾಗತಿಸಿ, ಟಿ.ಎಸ್. ರೋಹಿತ್ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಶಿಕ್ಷಕಿ ಶೀಲಾ ಅಬ್ದುಲ್ಲಾ ಶಾಲಾ ವರದಿ ವಾಚಿಸಿ, ಎ.ಜೆ. ಸಾನ್ವಿ ವಂದಿಸಿದರು. ಸಮಾರಂಭದ ನಂತರ ಜರುಗಿದ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷವಾಗಿತ್ತು.

ಚಿತ್ರ-ವರದಿ : ಟಿ. ಸಿ. ನಾಗರಾಜ್, 

ಮೂರ್ನಾಡು