Header Ads Widget

ಸರ್ಚ್ ಕೂರ್ಗ್ ಮೀಡಿಯ

ಜನನಿ ಮಹಿಳಾ ಮಂಡಳಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜನ್ಮದಿನ ಆಚರಣೆ


ಜನನಿ ಮಹಿಳಾ ಮಂಡಳಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜನ್ಮದಿನ ಆಚರಣೆ

ಮಡಿಕೇರಿ: ಸ್ಥಳೀಯ ಜನನಿ ಮಹಿಳಾ ಮಂಡಳಿ(ರಿ) ಹಾಗೂ ಬಾಲಗೋಕುಲ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ನಗರದ ರಾಘವೇಂದ್ರ ದೇವಾಲಯದ‌ ಆಶಾ ಪ್ರಾವಿಷನ್‌ ಸ್ಟೋರ್‌ ಆವರಣದಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 161ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 

ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯರಾದ ಶ್ರೀ ಧನಂಜಯ ಅಗೋಳಿಕಜೆ ಅವರು ಮಾತನಾಡಿ 1893ರಲ್ಲಿ ಚಿಕಾಗೋದಲ್ಲಿ ನಡೆದ ವರ್ಲ್ಡ್ಸ್ ಪಾರ್ಲಿಮೆಂಟ್ ಆಫ್ ರಿಲಿಜನ್ಸ್‌ನಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ್ದ ಭಾಷಣ ಇಂದಿಗೂ ಪ್ರಸಿದ್ಧ. ವೇದಾಂತ ಮತ್ತು ಯೋಗದ ಭಾರತೀಯ ತತ್ತ್ವ ಚಿಂತನೆಗಳನ್ನು ವಿಶ್ವ ಭೂಪಟದಲ್ಲಿ ರಾರಾಜಿಸುವಂತೆ ಮಾಡಿದವರಲ್ಲಿ ಸ್ವಾಮಿ ವಿವೇಕಾನಂದರು ಕೂಡಾ ಪ್ರಮುಖರಲ್ಲಿ ಒಬ್ಬರು. ತಮ್ಮ ಪ್ರಖರ ಭಾಷಣಗಳು ಮತ್ತು ಉಪನ್ಯಾಸಗಳ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ವಿವೇಕಾನಂದರು ಪ್ರಯತ್ನಿಸಿದರು ಎಂದರು. ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದಿ ಮನನ ಮಾಡಿಕೊಂಡರೆ ಜೀವನದಲ್ಲಿ ಎಂತಹ ಕಷ್ಟಕಾರ್ಪಣ್ಯಗಳು ಬಂದರು ಎದೆಗುಂದದೆ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವು ನಮಗೆ ಬರುತ್ತದೆ ಹಾಗೆ ನಾವೆಲ್ಲರೂ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿ ಭವ್ಯ, ಸುಂದರ, ಸಧೃಡ ಭವ್ಯ ಭಾರತವನ್ನು ಕಟ್ಟಲು ಪಣತೊಡುವ ಸಂಕಲ್ಪವನ್ನು ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಸ್ವಾಮಿ ವಿವೇಕಾನಂದರ ಬಗ್ಗೆ ರಸಪ್ರಶ್ನೆ ಏರ್ಪಡಿಸಲಾಗಿತ್ತು. ಹಾಗೆ ನೆರದಿದ್ದವರಿಗೆ ಸ್ವಾಮಿ ವಿವೇಕಾನಂದರ ಸಾಹಿತ್ಯವನ್ನು ಹಂಚಲಾಯಿತು.

ಮುಖ್ಯ ಅಥಿತಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯರಾದ ಪಿ.ಎಂ.ರವಿ ಆಗಮಿಸಿದರು. ಕಾರ್ಯಕ್ರಮದಲ್ಲಿ ಜನನಿ ಮಹಿಳಾ ಮಂಡಳಿ(ರಿ) ಇದರ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ನಿರ್ದೇಶಕರುಗಳು, ಸದಸ್ಯರು, ಶ್ರಿ ರಕ್ಷಾ ಪ್ರಗತಿಬಂದು ಸದಸ್ಯರು, ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲು ಇಂಪನರವರಿಂದ ಪ್ರಾರ್ಥನೆ ನೆರವೇರಿದರೆ, ಗ್ರೀಷ್ಮ ಜ್ಯೋತಿ ನಿರೂಪಿಸಿ ವಂದಿಸಿದರು.