ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಸಂವಾದ: ಮಣ್ಣಿನ ಆರೋಗ್ಯ ಸಂರಕ್ಷಣೆಯ ಜವಾಬ್ದಾರಿ ಎಲ್ಲರ ಮೇಲಿದೆ ಕೆ.ಚಂದ್ರಪ್ಪ ಅಭಿಪ್ರಾಯ
ಮಡಿಕೇರಿ : ಕೊಡಗಿನ ಮಣ್ಣು ಪೋಷಕಾಂಶಗಳಿಂದ ಕೂಡಿದ ‘ಚಿನ್ನ’ವೇ ಆಗಿದ್ದು, ಈ ಮಣ್ಣಿನ ಆರೋಗ್ಯ ಸಂರಕ್ಷಣೆಯ ಮೂಲಕ ಜಿಲ್ಲೆಯ ಬೆಳೆಗಾರರು ಉತ್ತಮ ಕೃಷಿ ನಡೆಸಲು ಸಾಧ್ಯವಿದೆ ಎಂದು ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದ ಉಪ ನಿರ್ದೇಶಕ ಕೆ.ಚಂದ್ರಪ್ಪ ಅಭಿಪ್ರಾಯಪಟ್ಟರು.
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದ ಪ್ರಮುಖರೊಂದಿಗಿನ ‘ಸಂವಾದ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಜಿಲ್ಲೆಯ ಮಣ್ಣು ಉತ್ತಮವಾಗಿದ್ದರು, ನಿರಂತರವಾದ ಮಳೆ ಮೊದಲಾದ ಕಾರಣಗಳಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಅಸಮತೋಲಿತವಾಗಿರುತ್ತದೆ. ಈ ಹಿನ್ನೆಲೆ ಬೆಳೆಗಾರರು ತಮ್ಮ ತೋಟದ ಮಣ್ಣಿನ ಪರೀಕ್ಷೆಯ ಮೂಲಕ, ಕೇಂದ್ರ ನೀಡುವ ಸಲಹೆ ಸೂಚನೆಗಳನ್ನು ಆಧರಿಸಿ ಅಗತ್ಯ ಪೋಷಕಾಂಶಗಳನ್ನು ಮಣ್ಣಿಗೆ ಒದಗಿಸುವುದು ಅತ್ಯವಶ್ಯವಾಗಿದೆ ಎಂದರು.
ಯಾವುದೇ ಪರೀಕ್ಷೆಗಳಿಲ್ಲದೆ ಅನಗತ್ಯವಾಗಿ ಮಣ್ಣಿಗೆ ಹೆಚ್ಚಿನ ರಸಗೊಬ್ಬರಗಳನ್ನು ನೀಡುವ ಮೂಲಕ ಮಣ್ಣು ಸತ್ತ್ವವನ್ನು ಕಳೆದುಕೊಳ್ಳದಂತೆ ಎಚ್ಚರ ವಹಿಸಬೇಕೆಂದು ಸಲಹೆ ನೀಡಿದರು.
ಬೆಳೆಗಾರರು ತಮ್ಮ ತೋಟದ ಮಣ್ಣನ್ನು ಕನಿಷ್ಟ 3 ವರ್ಷಗಳಿಗೊಮ್ಮೆ ಪರೀಕ್ಷಿಸಿಕೊಂಡು, ಮಣ್ಣಿನ ಆಮ್ಲೀಯತೆಯ ಮಟ್ಟವನ್ನು ಸರಿಪಡಿಸಿಕೊಳ್ಳುವುದರೊಂದಿಗೆ, ಪೋಷಕಾಂಶಗಳ ಕೊರತೆಗೆ ತಕ್ಕಂತೆ ಅವುಗಳನ್ನು ಮಣ್ಣಿಗೆ ಒದಗಿಸಲು ಕ್ರಮ ಕೈಗೊಳ್ಳುವುದು ಅವಶ್ಯ. ಕಾಫಿ ತೋಟಗಳಲ್ಲಿ ಮಣ್ಣಿನ ಆಮ್ಲೀಯತೆಯ ಮಟ್ಟ 6 ರಿಂದ 6.5 ರ ಒಳಗೆ ಇರುವುದು ಉತ್ತಮ. ಆಮ್ಲೀಯತೆಯ ಮಟ್ಟವನ್ನು ನಿಯಂತ್ರಿಸಲು ತೋಟಗಳಿಗೆ ಸುಣ್ಣ ಹಾಕುವುದು ಅತ್ಯವಶ್ಯವೆಂದು ತಿಳಿಸಿದರು.
ಬೆಳೆಗಾರರಿಗೂ ಮುಕ್ತವಾಗಿದೆ:
ಚೆಟ್ಟಳ್ಳಿಯ ಸಂಶೋಧನಾ ಕೇಂದ್ರ ಜಿಲ್ಲೆಯ ಎಲ್ಲಾ ಸಣ್ಣ ಮತ್ತು ದೊಡ್ಡ ಬೆಳೆಗಾರಿಗೆ, ಅವರ ಕೃಷಿ ಸಮಸ್ಯೆಗಳನ್ನು ಆಲಿಸಲು ಯಾವತ್ತೂ ಮುಕ್ತವಾಗಿರುತ್ತದೆ. ಸಂಶೋಧನಾ ಕೇಂದ್ರದ ಸಂಶೋಧನೆಗಳ ಉಪಯೋಗವನ್ನು ಬೆಳೆಗಾರರು ಪಡೆದುಕೊಳ್ಳಲು ಮುಂದೆ ಬರುವಂತೆ ಅವರು ಮನವಿ ಮಾಡಿದರು.
ಕೀಟ ನಿಯಂತ್ರಣ :
ಕೇಂದ್ರ್ರದ ಕೀಟ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಮಂಜುನಾಥ್ ರೆಡ್ಡಿ ಮಾತನಾಡಿ, ಕಾಫಿ ತೋಟಗಳನ್ನು ನಿರಂತರವಾಗಿ ಬಾಧಿಸುವ ಸ್ಟೆಂ ಬೋರರ್ ಸೇರಿದಂತೆ ಇತರೆ ಯಾವುದೇ ಕೀಟ ಬಾಧೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದೇ ಹೊರತು, ಅದನ್ನು ಶಾಶ್ವತವಾಗಿ ಇಲ್ಲವಾಗಿಸುವುದು ಅಸಾಧ್ಯ. ಹತ್ತಿ ಕೃಷಿಯಲ್ಲಿ ಕಂಡು ಬಂದ ಕೀಟ ಬಾಧೆ ನಿಯಂತ್ರಣಕ್ಕೆ ಬಿಟಿ ಹತ್ತಿ ತಳಿ ಅಭಿವೃದ್ಧಿ ಪಡಿಸಲಾಯಿತು. ಆದರೆ, ರೂಪಾಂತರಿ ಕಿಟಗಳ ಬಾಧೆ ಇದರಲ್ಲೂ ಅತ್ಯಧಿಕವಾಗಿ ಕಂಡು ಬರುತ್ತಿರುವುದನ್ನು ಅವರು ಉದಾಹರಿಸಿದರು.
ಇತ್ತೀಚಿನ ದಿನಗಳಲ್ಲಿ ಕಾಫಿ ಗಿಡಗಳ ಎಳೆಯ ರೆಂಬೆಗಳಿಗೆ ತಗಲುವ ಕೀಟ ಬಾಧೆ ‘ಶಾರ್ಟ್ ಹೋಲ್ ಬೋರರ್’ ನಿಯಂತ್ರಣಕ್ಕೆ ಕೇಂದ್ರ ‘ಜೈಕೋಂ ಟ್ರಾಪ್’ ಎನ್ನುವ ಕೀಟಗಳನ್ನು ಹಿಡಿದು ಕೀಟ ಬಾಧೆಯನ್ನು ಹೋಗಲಾಡಿಸುವ ವಿಧಾನವನ್ನು ಆವಿಷ್ಕರಿಸಿದೆ. ಈ ಜೈಕೋಂ ಟ್ರಾಪ್‍ನ್ನು ಪ್ರತಿ ಏಕರೆ ಕಾಫಿ ತೋಟದಲ್ಲಿ 12 ಸಂಖ್ಯೆಯಲ್ಲಿ ಅಳವಡಿಸಿದಲ್ಲಿ ಕೀಟ ಬಾಧೆಯನ್ನು ನಿಯಂತ್ರಿಸಬಹುದಾಗಿದೆ. 25 ಜೈಕೋಂ ಟ್ರಾಪ್‍ಗಳನ್ನು ಬೆಳೆಗಾರಿಗೆ 750 ರೂ. ದರದಲ್ಲಿ ಒದಗಿಸಲಾಗುತ್ತಿದೆಯೆಂದು ಮಾಹಿತಿ ನೀಡಿದರು.
ಕಾಫಿ ಗಿಡಗಳಲ್ಲಿ ಹೆಚ್ಚಾಗಿ ಕಂಡು ಬರುವ ಸ್ಟೆಂ ಬೋರರ್ ನಿಯಂತ್ರಣಕ್ಕೆ ಹುಳಗಳನ್ನು ಹಿಡಿಯುವ ‘ಟ್ರಾಪ್’ಗಳನ್ನು, ಕಾಯಿ ಕೊರಕ ಕೀಟಗಳ ನಿಯಂತ್ರಣಕ್ಕೆ ‘ಬೋರಾ ಟ್ರಾಪ್’ನ್ನು ನೂತನವಾಗಿ ಕಂಡು ಹಿಡಿಯಲಾಗಿದೆ. ಇದನ್ನು ಪ್ರತಿ ಏಕರೆಗೆ 15 ರಂತೆ ಕಟ್ಟಬೇಕಾಗುತ್ತದೆ. ಈ ಬೋರಾ ಟ್ರಾಪ್ 25 ಕ್ಕೆ 600 ರೂ.ಗಳಂತೆ ಲಭ್ಯವಿದೆಯೆಂದು ಮಾಹಿತಿಯನ್ನಿತ್ತು, ಈ ಟ್ರಾಪ್‍ಗಳಲ್ಲಿ ಬಳಸುವ ರಾಸಾಯನಿಕ ಪ್ರತಿ ಲೀಟರ್‍ಗೆ 150 ರೂ.ಗಳಂತೆ ಒದಗಿಸಲಾಗುತ್ತಿದೆ. ಈ ಸೌಲಭ್ಯಗಳ ಮೂಲಕ ಕಾಫಿ ತೋಟಗಳ ಕೀಟಬಾಧೆ ನಿಯಂತ್ರಣಕ್ಕೆ ಬೆಳೆಗಾರರು ಮುಂದಾಗಬೇಕೆಂದು ತಿಳಿಸಿದರು.
ವಿಶೇಷ ಉಪಚಾರ:
ಯಾವುದೇ ತೋಟದಲ್ಲಿ ಕಂಡು ಬರುವ ಸ್ಟೆಂ ಬೋರರ್ ಪೀಡಿತ ಗಿಡಕ್ಕೆ ‘ಬಟ್ಟೆಯನ್ನು ಸುತ್ತಿ’ ಕೀಟ ನಾಶಕ ಸಿಂಪಡಿಸಿ, ಕೀಟ ಬಾಧೆಯಿಂದ ಅದನ್ನು ಮುಕ್ತ ಗೊಳಿಸುವ ವಿಧಾನವನ್ನು ಕಂಡು ಹಿಡಿಯಲಾಗಿದೆ. ಕೇಂದ್ರ ಈಗಾಗಲೆ ಕೆಲ ತೋಟಗಳಲ್ಲಿ ಈ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತಿರುವ ಮಾಹಿತಿಯನ್ನು ಅವರು ನೀಡಿದರು.
ರೋಗಬಾಧೆಗೆ ಮುಕ್ತಿ:
ಕೇಂದ್ರದ ಮಣ್ಣು ವಿಜ್ಞಾನಿ ರಾಜೀಬ್ ಪಾಟಿ ಮಾತನಾಡಿ, ಮಣ್ಣು ಪೋಷಕಾಂಶಗಳಿಂದ ಕೂಡಿ ಆರೋಗ್ಯಯುತವಾಗಿದ್ದಲ್ಲಿ, ಅಲ್ಲಿರುವ ಕೃಷಿ ರೋಗ ಬಾಧೆಯಿಂದ ಬಹುತೇಕ ಮುಕ್ತವಾಗಿರುತ್ತದೆ. ಕೊಡಗಿನಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲೂ ಮಳೆ ಇರುವುದರಿಂದ ಹೆಚ್ಚಾಗಿ ಮಣ್ಣಿನ ಆಮ್ಲೀಯತೆಯ ಮಟ್ಟ(ಪಿಹೆಚ್ ವ್ಯಾಲ್ಯು) ಹೆಚ್ಚಾಗಿರುತ್ತದೆ. ಈ ಹಿನ್ನೆಲೆ ಮಣ್ಣಿನ ಪರೀಕ್ಷೆಯ ಮೂಲಕ, ಒಂದು ತೋಟಕ್ಕೆ ಎಷ್ಟು ರಸ ಗೊಬ್ಬರವನ್ನು ಹಾಕಬೇಕೆನ್ನುವುದನ್ನು ಖಚಿತವಾಗಿ ನಿರ್ಧರಿಸಿ, ಕೇಂದ್ರ ನೀಡುವ ಸಲಹೆಯಂತೆ ರಸಗೊಬ್ಬರವನ್ನು ನೀಡುವುದು ಅವಶ್ಯವೆಂದು ಸ್ಪಷ್ಟಪಡಿಸಿದರು.
ಬಿಳಿ ಕಾಂಡ ಕೊರಕ ರೋಗ ನಿರೋಧಕ ಗಿಡದ ಸಂಶೋಧನೆ- ಸಸ್ಯ ತಳಿ ಶಾಸ್ತ್ರದ ವಿಜ್ಞಾನಿ ಡಾ. ಮಂಜುನಾಥ್, ಕಾಫಿ ಗಿಡಗಳನ್ನು ಬಾಧಿಸುವ ಬಿಳಿಕಾಂಡ ಕೊರಕ ಕಿಟಗಳನ್ನು ನಿಯಂತ್ರಿಸುವ ಹೊಸ ಕಾಫಿ ತಳಿಯ ಸಂಶೋಧನೆಯನ್ನು ಕೇಂದ್ರ ನಡೆಸುತ್ತಿದೆಯಲ್ಲದೆ, ಜಿಲ್ಲೆಯ ವಿವಿಧ 30 ಕಾಫಿ ತೋಟಗಳಲ್ಲಿನ ಅಧಿಕ ಇಳುವರಿ ನೀಡುವ 205 ಗಿಡಗಳ ಪರಿಶೀಲನಾ ಕಾರ್ಯವನ್ನು ನಡೆಸುತ್ತಿರುವುದಾಗಿ ಮಾಹಿತಿಯನ್ನಿತ್ತರು.
ಕೇಂದ್ರದಿಂದ ಆಸಕ್ತ ಬೆಳೆಗಾರಿಗೆ ಪ್ರಸ್ತುತ ಅರೇಬಿಕಾ ಚಂದ್ರಗಿರಿ ತಳಿಯನ್ನು ಮತ್ತು ರೋಬಸ್ಟಾದಲ್ಲಿ ಕಾಂಜೆನ್ಸಿ ರೋಬಸ್ಟಾ ತಳಿಯ ಬೀಜಗಳನ್ನು ಪ್ರತಿ ಕೆ.ಜಿ.ಗೆ 400 ರೂ.ಗಳಂತೆ ಒದಗಿಸುತ್ತಿದೆಯೆಂದು ಹೇಳಿದರು.
ಕಂಬ ಚಿಗುರಿನಿಂದ ಗಿಡ:
ಕಾಫಿ ತೋಟಗಳಲ್ಲಿ ಅಧಿಕ ಫಸಲು ನೀಡುವ ಗಿಡಗಳ ಕಂಬ ಚಿಗುರುಗಳಿಂದ ಗಿಡಗಳನ್ನು ಉತ್ಪಾದಿಸಿ ಬೆಳೆಗಾರರಿಗೆ ಮೇ ಮತ್ತು ಜೂನ್ ತಿಂಗಳಿನಲ್ಲಿ ಬೇಡಿಕೆಗೆ ಅನುಗುಣವಾಗಿ ಒದಗಿಸುತ್ತಿದೆ. ಕಂಬ ಚಿಗುರಿನಿಂದ ಉತ್ಪಾದಿಸುವ ಗಿಡ, ಮೂಲ ಗಿಡದಂತೆಯೇ ಅಧಿಕ ಇಳುವರಿ ನೀಡುವ ಗಿಡವಾಗಿರುತ್ತದೆಂದು ಮಾಹಿತಿ ನೀಡಿ, ಕಂಬ ಚಿಗುರಿನಿಂದ ಗಿಡಗಳನ್ನು ಮಾಡುವ ವಿಧಾನವನ್ನು ಆಸಕ್ತ ಬೆಳೆಗಾರರಿಗೆ ತಿಳಿಸಿಕೊಡಲು ಕೇಂದ್ರ್ರ ಸದಾ ಸಿದ್ಧವಿದೆಯೆಂದು ಸಷ್ಟಪಡಿಸಿದರು.
ಮಣ್ಣು ವಿಜ್ಞಾನಿ ಪ್ರಫುಲ್ಲ ಮಾತನಾಡಿ, ಕೇಂದ್ರವು ಬೆಳೆಗಾರರು ನೀಡುವ ಮಣ್ಣನ್ನು(ಸ್ಯಾಂಪಲ್)ನಿಗದಿತ ದರದೊಂದಿಗೆ ಪರಿಶೀಲಿಸಿ, ಆಯಾ ತೋಟಕ್ಕೆ ಒದಗಿಸಬೇಕಾದ ಪೋಷಕಾಂಶಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಒದಗಿಸುತ್ತಿದೆ. ಕಳೆದ ಸಾಲಿಲ್ಲಿ ಕೇಂದ್ರ್ರ 2100 ಮಣ್ಣು ಪರೀಕ್ಷೆಗಳನ್ನು ನಡೆಸಿದ್ದು, ಇದರ ಸದುಪಯೋಗವನ್ನು 800 ಬೆಳೆಗಾರರು ಪಡೆದುಕೊಂಡಿದ್ದಾರೆಂದು ಮಾಹಿತಿ ನೀಡಿದರು.
ವಿಜ್ಞಾನಿಗಳ ಕೊರತೆ:
ಕೇಂದ್ರದಲ್ಲಿ ಅಗ್ರಾನಮಿ, ಪೆಥಾಲಜಿ, ಫಿಸಿಯಾಲಜಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನಿಗಳ ಹುದ್ದೆಗಳು ಖಾಲಿ ಇರುವುದಾಗಿ ಕೇಂದ್ರ್ರದ ಉಪ ನಿರ್ದೇಶಕ ಚಂದ್ರಪ್ಪ ಅವರು ತಿಳಿಸಿ, ಪ್ರಸ್ತುತ ಕೇಂದ್ರ್ರದಲ್ಲಿ ಐವರು ವಿಜ್ಞಾನಿಗಳು ಸೇರಿದಂತೆ 20 ಮಂದಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ್ರ 120.86 ಹೆಕ್ಟೇರ್ ಜಾಗವನ್ನು ಹೊಂದಿದ್ದು, ಅದರಲ್ಲಿ 108.36 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗಿದೆ. ತೋಟದಲ್ಲಿ ಒಟ್ಟು 69 ಮಂದಿ ಕಾರ್ಯನಿರ್ವಹಿಸುತ್ತಿರುಗಾಗಿ ಮಾಹಿತಿಯನ್ನಿತ್ತರು.
ತಾಲ್ಲೂಕು ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತಲ್ಲಿ ಅತೀ ಹೆಚ್ಚು ಕಾಫಿ ಕೃಷಿ ನಡೆಸುವ ಕೊಡಗಿನಲ್ಲಿ, ಆಧುನೀಕತೆಯ ಜೊತೆಯಲ್ಲಿ ಬೆಳೆಗಾರರು ಕೃಷಿ ಕಾರ್ಯಗಳಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸಂವಾದ ಆಯೋಜಿಸಲಾಗಿದೆ ಎಂದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಪ್ರಾಕೃತಿಕ ವಿಕೋಪ. ಕೋವಿಡ್‍ನಿಂದ ಜಿಲ್ಲೆಯ ಬೆಳೆಗಾರ ಕಾಫಿ ತೋಟಗಳನ್ನು ನಿರ್ವಹಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಇದರೊಂದಿಗೆ ಬೆರ್ರಿ ಬೋರರ್‍ನಂತಹ ಕೀಟ ಬಾಧೆ ಕೃಷಿಗೆ ತೊಡಕನ್ನುಂಟುಮಾಡುತ್ತಿದೆ. ಈ ಹಿನ್ನೆಲೆ ಕಾಫಿ ಸಂಶೋಧನಾ ಉಪ ಕೇಂದ್ರ್ರ ಬೆಳೆಗಾರರಿಗೆ ಕೃಷಿಗೆ ಪೂರಕವಾದ ಮಾಹಿತಿಗಳನ್ನು, ಕೀಟಬಾಧೆಯಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಹೇಳಿದರು.
ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ.ವಿನ್ಸೆಂಟ್ ಸುಂಟಿಕೊಪ್ಪ ಸ್ವಾಗತಿಸಿ, ವಂದಿಸಿದರು. ಜಿಲ್ಲೆಯ ವಿವಿಧೆಡೆಗಳ ಪತ್ರಕರ್ತರು ಸಂವಾದದಲ್ಲಿ ಪಾಲ್ಗೊಂಡಿದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network