ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿದ್ದು, ‘ಗ್ರಾಹಕರೇ ದೊರೆಗಳು’ ಎಂಬುದನ್ನು ಯಾರೂ ಸಹ ಮರೆಯಬಾರದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಗೌರಮ್ಮಣ್ಣಿ ಅವರು ಪ್ರತಿಪಾದಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಕುಶಾಲನಗರ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಆನ್‍ಲೈನ್ ಮೂಲಕ ವಸ್ತು/ಪದಾರ್ಥಗಳನ್ನು ಕೊಳ್ಳುವುದು ಹೆಚ್ಚಾಗಿದೆ. ಗ್ರಾಹಕರಿಗೆ ಮೋಸ, ವಂಚನೆ ಉಂಟಾದಲ್ಲಿ ಗ್ರಾಹಕರ ಹಕ್ಕುಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಬೇಕು ಎಂದು ಅವರು ತಿಳಿಸಿದರು.
‘ಜಾಹೀರಾತು ನೋಡಿ ಪದಾರ್ಥ/ವಸ್ತುಗಳನ್ನು ಖರೀದಿ ಮಾಡಬಾರದು. ಅದರ ಗುಣಮಟ್ಟ ಪರಿಶೀಲಿಸಿ ಕೊಳ್ಳುವಂತಾಗಬೇಕು. ಜಾಹೀರಾತುಗೆ ಯಾರೂ ಸಹ ಮರಳು ಆಗಬಾರದು ಎಂದು ಅವರು ಹೇಳಿದರು.’
‘ಯಾವ ಸ್ಥಳದಲ್ಲಿಯೇ ಪದಾರ್ಥ/ವಸ್ತುಗಳನ್ನು ಕೊಂಡಿದ್ದರೂ ಸಹ, ತಾವು ವಾಸಿಸುವ ಸ್ಥಳದಲ್ಲಿಯೇ ದೂರುಗಳನ್ನು ಸಲ್ಲಿಸಿ ಪರಿಹಾರ ಪಡೆಯಬಹುದು. ಗ್ರಾಹಕರು ಎಷ್ಟೇ ಜಾಗೃತರಾಗಿದ್ದರೂ ಸಹ ಮೈಮರೆಯುತ್ತಾರೆ. ಆದ್ದರಿಂದ ವಸ್ತುಗಳ ಬೆಲೆ ನಿಖರವಾಗಿ ನಮೂದು ಆಗಿರುವ ಬಗ್ಗೆ ಗಮನಿಸಬೇಕು. ಜೊತೆಗೆ ಬಳಕೆ ಅವಧಿ ಪರಿಶೀಲಿಸಬೇಕು. ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಬಗ್ಗೆ ಕನಿಷ್ಠ ಜ್ಞಾನ ಹೊಂದಿರಬೇಕು ಎಂದು ಗೌರಮ್ಮಣ್ಣಿ ಅವರು ಸಲಹೆ ಮಾಡಿದರು.’
‘ಕೊಡಗು ಜಿಲ್ಲೆಯ ಗ್ರಾಹಕರ ವೇದಿಕೆಗೆ ಇದುವರೆಗೆ 4,164 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 64 ಪ್ರಕರಣಗಳು ಮಾತ್ರ ಇತ್ಯರ್ಥಕ್ಕೆ ಬಾಕಿ ಇದೆ ಎಂದು ಅವರು ತಿಳಿಸಿದರು.’
ಗ್ರಾಹಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಗ್ರಾಹಕರ ವೇದಿಕೆ ಕಾರ್ಯ ನಿರ್ವಹಿಸುತ್ತಿದೆ. ಗ್ರಾಹಕರಿಗೆ ಯಾವುದೇ ರೀತಿ ಅನ್ಯಾಯವಾಗದಂತೆ ಪರಿಹಾರ ಪಡೆಯಬಹುದಾಗಿದೆ. ಗ್ರಾಹಕರ ದೂರುಗಳಿಗೆ ಸಂಬಂಧಿಸಿದಂತೆ 5 ಲಕ್ಷ ರೂ. ವರೆಗೆ ಯಾವುದೇ ಶುಲ್ಕ ಭರಿಸುವ ಅಗತ್ಯವಿಲ್ಲ ಎಂದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ರೇಣುಕಾಂಭ ಅವರು ಮಾತನಾಡಿ ವೈದ್ಯ ವೃತ್ತಿಯನ್ನು ಹಣ, ಅಂತಸ್ತಿನಿಂದ ಅಳೆಯುವಂತದ್ದಲ್ಲ, ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ನೋವು ಬಂದಾಗ ವೈದ್ಯರ ಬಳಿ ಹೋಗುತ್ತೇವೆ. ಪ್ರತಿಯೊಬ್ಬರೂ ಗ್ರಾಹಕರಾಗಿರುತ್ತಾರೆ. ಆದ್ದರಿಂದ ಸಮಾಜಕ್ಕೆ ಪ್ರತಿಯೊಬ್ಬರೂ ಒಳಿತು ಮಾಡಬೇಕು ಎಂದರು.
ಯಾರೂ ಸಹ ವಂಚಿಸಬಾರದು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಮೋಸ ಹೋಗುವವರು ಇರುತ್ತಾರೆ. ಅದನ್ನು ತಪ್ಪಿಸಬೇಕು. ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಇರಬೇಕು. ಪದಾರ್ಥಗಳನ್ನು ಕೊಳ್ಳುವಾಗ ಎಚ್ಚರವಹಿಸಬೇಕು. ಅನ್ಯಾಯ ಸಹಿಸಿಕೊಳ್ಳಬಾರದು ಎಂದರು.
ವಕೀಲರಾದ ಎಂ.ಎ.ನಿರಂಜನ ಅವರು ಮಾತನಾಡಿ ಎಲ್ಲಾ ಹಂತದಲ್ಲಿಯೂ ಹಾಗೂ ಎಲ್ಲಾ ಕ್ಷೇತ್ರದಲ್ಲಿಯೂ ಗ್ರಾಹಕರ ಸ್ನೇಹಿಯಾಗಿರಬೇಕು. ನಮ್ಮ ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ ಮತ್ತೊಬ್ಬರ ಗ್ರಾಹಕ ಹಕ್ಕು ಸಂರಕ್ಷಣೆ ಮಾಡಬಹುದಾಗಿದೆ ಎಂದರು.
ಗ್ರಾಹಕರ ವೇದಿಕೆಯಲ್ಲಿ ಗ್ರಾಹಕರಿಗೆ ನ್ಯಾಯ ಒದಗಿಸಲಾಗುತ್ತದೆ. ಉಚಿತ ಸೇವೆ ಅಥವಾ ಪಡೆಯುವ ಪದಾರ್ಥಗಳಿಗೆ ಗ್ರಾಹಕರ ಹಕ್ಕು ಅನ್ವಯವಾಗುವುದಿಲ್ಲ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಜಾಗೃತಿಯಿಂದ ಕೆಲಸ ಮಾಡಿದರೆ ಗ್ರಾಹಕರಿಗೆ ಮೋಸ, ವಂಚನೆ ಕಡಿಮೆಯಾಗುತ್ತದೆ. ಯಾವುದೇ ಪದಾರ್ಥ/ ವಸ್ತು ಕೊಳ್ಳುವಾಗ ವಾರಂಟಿ ಮತ್ತು ಗ್ಯಾರಂಟಿಯನ್ನು ಗಮನಿಸಬೇಕು. ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಗೆ ಎರಡು ವರ್ಷದವರೆಗೆ ದೂರು ಸಲ್ಲಿಸಬಹುದಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ ತಿಳಿದು, ತಿಳಿಯದೆಯೋ ಮೋಸ ವಂಚನೆಗೆ ತುತ್ತಾಗುತ್ತೇವೆ. ಮೋಸ ವಂಚನೆಗೆ ತುತ್ತಾದಲ್ಲಿ, ಗ್ರಾಹಕರ ವೇದಿಕೆಗೆ ದೂರು ನೀಡಿ ಪರಿಹಾರ ಪಡೆಯುವಂತಾಗಬೇಕು ಎಂದರು.
ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷರಾದ ಎ.ಎ.ಚಂಗಪ್ಪ ಅವರು ಮಾತನಾಡಿ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರವು ಜಿಲ್ಲೆಯ 51 ಪ್ರೌಢಶಾಲೆಗಳಲ್ಲಿ ಗ್ರಾಹಕರ ಕ್ಲಬ್‍ಗಳನ್ನು ಆರಂಭಿಸಿ, ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೆಶಕರಾದ ಕುಮುದಾ ಶರತ್ ಅವರು ಮಾತನಾಡಿ ಇಲಾಖೆಯು ಆಹಾರ ಭದ್ರತೆ ಒದಗಿಸುವುದು ಅತೀ ಮುಖ್ಯವಾಗಿದೆ. ಜೊತೆಗೆ ಪೆಟ್ರೋಲಿಯಂ ಉತ್ಪನ್ನಗಳ ಬಗ್ಗೆ ಗಮನಿಸುವುದು. ಗ್ರಾಹಕರಿಗೆ ಮೋಸ ವಂಚನೆ ಉಂಟಾಗದಂತೆ ಜಾಗೃತಿ ಮೂಡಿಸುವುದು ಪ್ರಮುಖ ಕಾರ್ಯವಾಗಿದೆ ಎಂದು ಅವರು ಹೇಳಿದರು.
ಕೊಡಗು ವೈದೈಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕೆ.ಬಿ.ಕಾರ್ಯಪ್ಪ, ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ತೂಕ, ಅಳತೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಡಿ.ಆರ್.ಲಿಂಗರಾಜು ಇತರರು ಇದ್ದರು. ವೀಣಾ ಪ್ರಾರ್ಥಿಸಿದರು. ಬಿರೇಶ್ ನಿರೂಪಿಸಿ, ವಂದಿಸಿದರು.
*ಕೊಡಗಿನ ಸಮಗ್ರ ಸುದ್ದಿ ಮಾಹಿತಿಯನ್ನು ಪಡೆಯಲು ಈಗಲೇ JOIN ಆಗಿ ಸರ್ಚ್ ಕೂರ್ಗ್ ಮೀಡಿಯಾ ನ್ಯೂಸ್ ಅಪ್ಡೇಟ್ಸ್ ವಾಟ್ಸಾಪ್ ಕಮ್ಯೂನಿಟಿಗೆ*
https://chat.whatsapp.com/KwaaZ7ZCQ18FRRNqiqJHPG