Header Ads Widget

Responsive Advertisement

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೆಚ್ಚಿನ ಅಧಿಕಾರ: ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅಭಿಮತ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೆಚ್ಚಿನ ಅಧಿಕಾರ: ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅಭಿಮತ 

ಪೊನ್ನಂಪೇಟೆ, ಜನವರಿ 25: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ವ್ಯವಹಾರ ಕ್ಷೇತ್ರ ವಿಸ್ತರಿಸಿಕೊಳ್ಳಲು ಅನುಕೂಲವಾಗುವಂತೆ ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದರಿಂದ ಪೆಟ್ರೋಲಿಯಂ ಉತ್ಪನ್ನ ಮಾರಾಟ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅನುಕೂಲವಾಗಲಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಇನ್ನೂ ಹೆಚ್ಚಿನ ಅಧಿಕಾರ ನೀಡಿ ಅವುಗಳನ್ನು ಆರ್ಥಿಕವಾಗಿ ಶಕ್ತಿಯುತವಾಗಿ ಮಾಡುವುದು ಮತ್ತು ಸಂಘದ ಮುಖಾಂತರ ಗ್ರಾಮೀಣ ಜನತೆಯ ಸಮಸ್ಯೆ ಬಗೆಹರಿಸುವ ಆಶಯವನ್ನು ಕೇಂದ್ರ ಸಹಕಾರ ಸಚಿವರಾದ ಅಮಿತ್ ಶಾ ಅವರು ಹೊಂದಿದ್ದಾರೆ ಎಂದು ಹೇಳಿದರು.

ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕರೂಪದ ತಂತ್ರಾಂಶ ಅಳವಡಿಸಲಾಗುತ್ತಿದೆ. ಇದರಿಂದ ಸಾಲ ವಿತರಣೆ ಬಗ್ಗೆ ನಿಗಾ ವಹಿಸಲು ಅನುಕೂಲವಾಗಲಿದೆ. 25 ಲಕ್ಷ ಹಾಲು ಒಕ್ಕೂಟಗಳಿದ್ದು, ಪ್ರತಿ ಗ್ರಾಮಕ್ಕೊಂದು ಹಾಲು ಒಕ್ಕೂಟ ಸ್ಥಾಪನೆ ಮಾಡಬೇಂಬ ಉದ್ದೇಶವನ್ನು ಅಮಿತ್ ಶಾ ಅವರು ಹೊಂದಿದ್ದಾರೆ. ದೇಶದ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕಮಾದರಿ ಬೈಲಾ ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಕೇಂದ್ರ ಸರ್ಕಾರದಿಂದ ಪ್ರತಿ ಬಂದಿದ್ದು ಅಧಿಕಾರಿಗಳು ಅದರ ಅಧ್ಯಯನದಲ್ಲಿ ತೊಡಗಿದ್ದಾರೆ. ಅತಿ ಶೀಘ್ರದಲ್ಲಿ ಅದನ್ನು ಸಹಕಾರ ಸಂಘಗಳಿಗೆ ಕಳುಹಿಸಿ ಕೊಡಲಾಗುವುದು ಎಂದರು.

ಯಶಸ್ವಿನಿ ಯೋಜನೆಯನ್ನು ಮರುಜಾರಿ ಮಾಡಲಾಗಿದ್ದು 33 ಲಕ್ಷ ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ದರ ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದ್ದು, 1 ಸಾವಿರ ಆಸ್ಪತ್ರೆಗಳೊಂದಿಗೆ ಒಪ್ಪಂದ ಆಗಿದೆ. ಇದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ.

ಸ್ವಸಹಾಯ ಗುಂಪುಗಳು ನೂರಕ್ಕೆ ನೂರರಷ್ಟು ಸಾಲ ಮರುಪಾವತಿ ಮಾಡುತ್ತಿವೆ. ಕೊಡಗಿನಲ್ಲಿರುವ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಬಹಳ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.

33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ವಿತರಣೆ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಇದುವರೆಗೂ 16 ಸಾವಿರ ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ ಎಂದು ಹೇಳಿದರು.