Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗು ಡಿಸಿಸಿ ಬ್ಯಾಂಕ್‍ನಲ್ಲಿ ಡಿಜಿಟಲ್ ಮಾಹಿತಿ ಫಲಕ ಅನಾವರಣ

ಕೊಡಗು ಡಿಸಿಸಿ ಬ್ಯಾಂಕ್‍ನಲ್ಲಿ ಡಿಜಿಟಲ್ ಮಾಹಿತಿ ಫಲಕ ಅನಾವರಣ

ಜಿಲ್ಲೆಯಾದ್ಯಂತ 21 ಶಾಖೆಗಳಲ್ಲಿಯೂ ಬ್ಯಾಂಕ್‍ನಲ್ಲಿ ದೊರಕುವ ಸೌಲಭ್ಯಗಳ ಮಾಹಿತಿ

ಮಡಿಕೇರಿ ಜ.30: ನಗರದಲ್ಲಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಲ್ಲಿ ಬ್ಯಾಂಕ್ ನ ಸಮಗ್ರ ಸೌಲಭ್ಯಗಳ ಮಾಹಿತಿ ಒಳಗೊಂಡ ‘ಡಿಜಿಟಲ್ ಮಾಹಿತಿ ಪ್ರಚಾರ’ ಫಲಕಕ್ಕೆ ಚಾಲನೆ ನೀಡಲಾಯಿತು.

ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ ಡಿಜಿಟಲ್ ಪ್ರಚಾರ ಫಲಕವನ್ನು ಉದ್ಘಾಟಿಸಿ ಮಾತನಾಡಿ, ಮಡಿಕೇರಿಯಲ್ಲಿರುವ ಕೇಂದ್ರ ಬ್ಯಾಂಕ್ ನಲ್ಲಿ ಕೇಂದ್ರೀಕೃತಗೊಂಡಿರುವ ಡಿಜಿಟಲ್ ವ್ಯವಸ್ಥೆಯ ಮಾಹಿತಿಯು ಜಿಲ್ಲೆಯಾದ್ಯಂತ ಡಿಸಿಸಿ ಬ್ಯಾಂಕ್‍ಗಳ 22 ಶಾಖೆಗಳಲ್ಲಿಯೂ ಟಿವಿ ಪರದೆಯ ಮೂಲಕ ಕಾಣಲಿದೆ. ಈ ಮೂಲಕ ಬ್ಯಾಂಕ್ ಗ್ರಾಹಕರಿಗೆ ಸುಲಭವಾಗಿ ಬ್ಯಾಂಕ್‍ನಿಂದ ದೊರಕುವ ಸಾಲ ಸೌಲಭ್ಯಗಳು, ಠೇವಣಿ ಬಡ್ಡಿದರಗಳು, ವಿವಿಧ ರೀತಿಯ ಸೌಲಭ್ಯಗಳ ಸಮಗ್ರ ಮಾಹಿತಿ ದೊರಕುವುದು ಸುಲಭ ಸಾಧ್ಯವಾಗಲಿದೆ ಎಂದರು. 

19 ಲಕ್ಷ ರೂ. ವೆಚ್ಚದಲ್ಲಿ  ಡಿಜಿಟಲ್ ತಂತ್ರಜ್ಞಾನದ ಮಾಹಿತಿ ಫಲಕ  ಅಳವಡಿಸಿದ್ದೇವೆ, ಅಂತೆಯೇ ರಾತ್ರಿ,ಯಲ್ಲಿಯೂ ಜನರ ಗಮನ ಸೆಳೆಯುವ ಡಿಜಿಟಲ್ ಫಲಕವನ್ನೂ 1.60 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗಿದೆ ಎಂದು ಬಾಂಡ್ ಗಣಪತಿ ಅವರು ಹೇಳಿದರು.  

ಕೊಡಗು ಜಿಲ್ಲೆಯಲ್ಲಿರುವ 23 ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‍ಗಳ  174 ಶಾಖೆಗಳ ಪೈಕಿ ಕೆಡಿಸಿಸಿ ಬ್ಯಾಂಕ್ ತನ್ನ ಗ್ರಾಹಕ ಸ್ನೇಹಿ ಯೋಜನೆಗಳು. ನಿರಖು ಠೇವಣಿ ಮತ್ತು ಸಾಲ ವಿತರಣೆಯಲ್ಲಿ ಪ್ರಥಮ ಸ್ಥಾನದಲ್ಲಿರುವುದು ಹೆಗ್ಗಳಿಕೆಯಾಗಿದೆ ಎಂದು ಕೊಡಂದೇರ ಗಣಪತಿ ಅವರು ತಿಳಿಸಿದರು. 

ವಾಣಿಜ್ಯ ಬ್ಯಾಂಕ್‍ಗಳಿಗೆ ಡಿಸಿಸಿ ಬ್ಯಾಂಕ್ ಪ್ರಬಲ ಸ್ಪರ್ಧೆ ನೀಡುತ್ತಿದ್ದು, ಸದಾ ಗ್ರಾಹಕರ ಒಳಿತನ್ನು ಕೆಡಿಸಿಸಿ ಬ್ಯಾಂಕ್ ಬಯಸುತ್ತಾ ಬಂದಿದೆ ಎಂದು ವಿವರಿಸಿದರು. 

ಕೊಡಗು ಡಿಸಿಸಿ ಬ್ಯಾಂಕ್ ರೈತರ ಹಿತ ಕಾಯುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ. ಆ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಕಲ್ಪಿಸುವುದು, ಸಾಲ ಮರುಪಾವತಿ ಸೇರಿದಂತೆ ಇಡೀ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿ ಕೊಡಗು ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. 

101 ವರ್ಷಗಳನ್ನು ಪೂರೈಸಿರುವ ಕೊಡಗು ಡಿಸಿಸಿ ಬ್ಯಾಂಕ್‍ನ ಶತಮಾನೋತ್ಸವ ಕಟ್ಟಡ ಕಾಮಗಾರಿಯು ಇದೇ ಡಿಸೆಂಬರ್ ಅಂತ್ಯದೊಳಗೆ ಮುಕ್ತಾಯಗೊಳ್ಳಲಿದ್ದು, ಬ್ಯಾಂಕ್‍ನ ಗ್ರಾಹಕರಿಗೆ ವಿಶಾಲವಾದ ಕಟ್ಟಡದಲ್ಲಿ ಮತ್ತಷ್ಟು ಸೌಲಭ್ಯಗಳು ಸುಲಭವಾಗಿ ದೊರಕಲಿದೆ ಎಂದು ಬಾಂಡ್ ಗಣಪತಿ ಅವರು ವಿವರಿಸಿದರು. 

ಕೆಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾದ ಬಿ.ಡಿ.ಮಂಜುನಾಥ್ ಮಾತನಾಡಿ, ಸಮಾಜದಲ್ಲಿ ಎಲ್ಲಾ ರಂಗಗಳು ನಾಗಾಲೋಟದಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುತ್ತಿರುವಾಗ ಕೆಡಿಸಿಸಿ ಬ್ಯಾಂಕ್ ಕೂಡ ಇದೀಗ ಗ್ರಾಹಕರಿಗೆ ಡಿಜಿಟಲ್ ಮಾಧ್ಯಮದ ಮೂಲಕ ಸಮಗ್ರ ಮಾಹಿತಿ ನೀಡಲು ಮುಂದಾಗಿದೆ. ಪ್ರತೀ ಬ್ಯಾಂಕ್‍ಗಳು ವಿವಿಧ ಮಾಧ್ಯಮಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಸಂದರ್ಭ ಕೆಡಿಸಿಸಿ ಬ್ಯಾಂಕ್ ಅತ್ಯಾಧುನಿಕವಾದ ಡಿಜಿಟಲ್ ಮಾಹಿತಿ ಫಲಕದೊಂದಿಗೆ ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಬ್ಯಾಂಕ್ ಉಪಾಧ್ಯಕ್ಷರಾದ ಕೇಟೋಳಿರ ಎಸ್.ಹರೀಶ್ ಪೂವಯ್ಯ, ನಿರ್ದೇಶಕರಾದ ಬಿ.ಕೆ.ಚಿಣ್ಣಪ್ಪ, ಎಸ್.ಬಿ.ಭರತ್‍ಕುಮಾರ್, ಹೊಟ್ಟೇಂಗಡ ಎಂ.ರಮೇಶ್, ಪಟ್ರಪಂಡ ಬಿ.ರಘುನಾಣಯ್ಯ, ಹೊಸೂರು ಜೆ.ಸತೀಶ್ ಕುಮಾರ್, ಕನ್ನಂಡ ಎ.ಸಂಪತ್, ಕೋಲತಂಡ ಎ.ಸುಬ್ರಮಣಿ, ಕಿಮ್ಮುಡೀರ ಎ.ಜಗದೀಶ್, ಕೆ.ಅರುಣ್ ಭೀಮಯ್ಯ, ಎ.ಗೋಪಾಲ ಕೃಷ್ಣ, ಕೇಕಡ ಎ.ದೇವಯ್ಯ, ಸಹಕಾರ ಸಂಘಗಳ ಉಪ ನಿಬಂಧಕರಾದ ಎಂ.ಎಸ್.ಕೃಷ್ಣಪ್ರಸಾದ್, ಪ್ರಧಾನ ವ್ಯವಸ್ಥಾಪಕರಾದ ಎ.ಎಸ್.ಪಾರ್ವತಿ, ಉಪ ಪ್ರಧಾನ ವ್ಯವಸ್ಥಾಪಕರಾದ ಕೆ.ಕೆ.ಗೋವಿಂದರಾಜು ಹಾಜರಿದ್ದರು.