Header Ads Widget

Responsive Advertisement

ಕೊಡಗಿನಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಅಪ್ಪಚ್ಚುರಂಜನ್

ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್‌ ಸಂಯುಕ್ತಾಶ್ರದಯಲ್ಲಿಆಯೋಜಿತ ‘ಸಂವಾದ’ ಕಾರ್ಯಕ್ರಮ

ಸರ್ಚ್‌ ಕೂರ್ಗ್‌ ಮೀಡಿಯಾ:

ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುವ ಮೂಲಭೂತ ಅಂಶವಾಗಿರುವ ಹಿನ್ನೆಲೆಯಲ್ಲಿ, ತನ್ನ ಅಧಿಕಾರದ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಥಮ ದರ್ಜೆ ಕಾಲೇಜುಗಳ ಆರಂಭ, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜು ಸೇರಿದಂತೆ ಚಿಕ್ಕಅಳುವಾರದಲ್ಲಿ ಕೊಡಗು ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ಪ್ರಾಮಾಣಿಕವಾಗಿ ಶ್ರಮಿಸಿರುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.

ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್‌ ಸಂಯುಕ್ತಾಶ್ರದಯಲ್ಲಿ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಬುಧವಾರ ಆಯೋಜಿತ ‘ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಹಿಂದೆ ಮಡಿಕೇರಿ, ಗೋಣಿಕೊಪ್ಪಲು ಮತ್ತು ಸೋಮವಾರಪೇಟೆಗಳಲ್ಲಿ ಮಾತ್ರ ಪದವಿ ಕಾಲೇಜುಗಳಿದ್ದವು. ಆದರೆ ತಾನು ಅಧಿಕಾರದಲ್ಲಿ ಇದ್ದ ಸಂದರ್ಭ, ಡಿ.ಹೆಚ್. ಶಂಕರಮೂರ್ತಿ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ 162 ಪ್ರಥಮ ದರ್ಜೆ ಕಾಲೇಜುಗಳನ್ನು ರಾಜ್ಯದ ವಿವಿಧೆಡೆ ಆರಂಭಿಸಲಾಯಿತು. ಅದರ ಫಲ ಸ್ವರೂಪವಾಗಿ ನಾಪೋಕ್ಲು, ವೀರಾಜಪೇಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಪ್ರಥಮ ದರ್ಜೆ ಕಾಲೇಜುಗಳು ಆರಂಭವಾಗಿ ಗಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ಸೈನಿಕ ಶಾಲೆ: ಭಾರತದ ಮೊದಲ ಮಹಾದಂಡನಾಯಕರಾದ ಫೀ.ಮಾ.ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ನಾಡಾದ ಕೊಡಗು ಯೋಧರ ನಾಡಾಗಿದೆ. ಇಂತಹ ಜಿಲ್ಲೆಯಲ್ಲಿ ‘ಸೈನಿಕ ಶಾಲೆ’ಯ ಆರಂಭವಾಗಬೇಕೆನ್ನುವ ಚಿಂತನೆಗಳಡಿ ತಾನು ನಡೆಸಿದ ಪ್ರಯತ್ನಗಳಿಂದ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರು ಜಿಲ್ಲೆಗೆ ಸೈನಿಕ ಶಾಲೆಯನ್ನು ಮಂಜೂರು ಮಾಡಿದರು. ಇದರ ನಿರ್ಮಾಣಕ್ಕೆ ಅಂದಿನ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರು 5 ಕೊಟಿ ರೂ.ಗಳನ್ನು ಒದಗಿಸಿದ್ದರು. ಬಳಿಕ 45 ಕೋಟಿ ರೂ. ವೆಚ್ಚದಲ್ಲಿ ಸೈನಿಕ ಶಾಲೆ ತಲೆ ಎತ್ತಿದ್ದಾಗಿ ಸ್ಮರಿಸಿದ ಅಪ್ಪಚ್ಚುರಂಜನ್, ಡಿ.ಹೆಚ್.ಶಂಕರಮೂರ್ತಿ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಅವರಿಗೆ ಮನವಿ ಮಾಡಿಕೊಂಡ ಮೇರೆ, ಕುಶಾಲನಗರದಲ್ಲಿ ಪಾಲಿಟೆಕ್ನಿಕ್ ಕಾಲೇಜನ್ನು ಉಳಿಸಿಕೊಂಡು, ನೂತನ ಇಂಜಿನಿಯರ್ ಕಾಲೇಜು ಆರಂಭಿಸಲು ಸಾಧ್ಯವಾಯಿತೆಂದು ಹೇಳಿದರು.

ವೈದ್ಯಕೀಯ ಕಾಲೇಜು: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಅವಧಿಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುಮತಿ ದೊರಕಿ, 234 ಕೋಟಿ ವೆಚ್ಚದಲ್ಲಿ ಕಾಲೇಜು ಅಸ್ತಿತ್ವಕ್ಕೆ ಬಂದಿತು. ಇತ್ತೀಚೆಗೆ ಚಿಕ್ಕಳುವಾರದಲ್ಲಿರುವ ಮಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರವನ್ನು ಕೊಡಗು ವಿಶ್ವ ವಿದ್ಯಾನಿಲಯವನ್ನಾಗಿ ಮಾಡಲಾಗಿದೆ. ಈ ಎಲ್ಲಾ ಶಿಕ್ಷಣಕ್ಕೆ ಪೂರಕವಾದ ಕಾರ್ಯಗಳಿಂದ ಜಿಲ್ಲೆಯ ಯುವ ಸಮೂಹ ಉನ್ನತ ಶಿಕ್ಷಣಕ್ಕಾಗಿ ಹೊರ ಜಿಲ್ಲೆಗಳ ಬದಲಾಗಿ, ಜಿಲ್ಲೆಯಲ್ಲೇ ಅದನ್ನು ಪಡೆಯಲು ಸಾಧ್ಯವಾಗಿದೆ ಮತ್ತು ಮಕ್ಕಳಲ್ಲಿ ಉನ್ನತ ಶಿಕ್ಷಣ ಪಡೆಯುವ ಹೊಸ ಬೆಳಕನ್ನು ಕಾಣುವಂತಾಗಿದೆಯೆಂದು ಹರ್ಷ ವ್ಯಕಪಡಿಸಿದರು.

5 ಮೊರಾರ್ಜಿ ಶಾಲೆಗಳು: ಇವುಗಳ ಜೊತೆಯಲ್ಲೆ ಜಿಲ್ಲೆಯಲ್ಲಿ 5 ಮೊರಾರ್ಜಿ ವಸತಿ ಶಾಲೆಗಳ ಆರಂಭಿಸಲಾಗಿದ್ದು, ಪ್ರತಿ ವಸತಿ ಶಾಲೆಯ ಆರಂಭಕ್ಕೆ 15 ರಿಂದ 25 ಕೊಟಿ ರೂ.ಗಳನ್ನು ವ್ಯಯಿಸಲಾಗಿದೆ. ತಮ್ಮ ಅಧಿಕಾರದ ಅವಧಿಯುದ್ದಕ್ಕೂ ಶಿಕ್ಷಣಕ್ಕೆ ಒತ್ತು ನೀಡುವ ಪ್ರ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಲೇ ಬಂದಿರುವುದಾಗಿ ಹೇಳಿದರು.

ವೇದಿಕೆಯಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್’ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಹಾಜರಿದ್ದರು.