ಅಡಿಕೆ ಯಲ್ಲಿ ಹೂ ಗೊಂಚಲು ಒಣಗುವ ಮತ್ತು ಎಳೆಕಾಯಿ ಉದುರುವ ರೋಗದ ಲಕ್ಷಣಗಳು
1.ಕರ್ನಾಟಕದಲ್ಲಿ ಶೇಕಡ 60ಕ್ಕೂ ಹೆಚ್ಚು ಪ್ರದೇಶದಲ್ಲಿ ಈ ರೋಗವು ಕಂಡುಬರುತ್ತದೆ.
2. ಹೂಗೊಂಚಲು ಒಣಗುವ ರೋಗವು ಕೊಲ್ಲೆಟೋಟ್ರೈಕಂ ಗ್ಲಿಯೋಸ್ಪೊರಾಯಿಡ್ಸ್ ಎಂಬ ಶಿಲೀಂಧ್ರದಿಂದ ಬರುತ್ತದೆ.
3.ಇಡೀ ವರ್ಷ ಈ ರೋಗವು ಮರಗಳನ್ನು ಬಾಧಿಸಿದರೂ ಸಹ ರೋಗದ ತೀವ್ರತೆ ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚು.
4.ಮೊದಲಿಗೆ ಹೂ ಗೊಂಚಲುಗಳು ತುದಿಯಿಂದ ಪ್ರಾರಂಭಗೊಂಡು ಬುಡದ ಕಡೆಗೆ ಹಳದಿಯಾಗಿ ನಂತರ ಕಂದು ಬಣ್ಣಕ್ಕೆ ತಿರುಗಿ ಒಣಗುವುದು ಹಾಗೂ ಎಳೆಕಾಯಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದುರುವವು.
5.ಈ ರೋಗವು ಶಿಲೀಂದ್ರ ರೋಗಾಣುವಿನಿಂದಲ್ಲದೇ ಇತರೆ ಕಾರಣಗಳಿಂದಲೂ ಉಂಟಾಗಬಹುದು. ಅವುಗಳಲ್ಲಿ ಮುಖ್ಯವಾದುವುಗಳೆಂದರೆ ಹವಾಮಾನ ವೈಪರೀತ್ಯಗಳಿಂದ, ಕಾಲಕ್ಕೆ ಸರಿಯಾಗಿ ಪರಾಗ ಸ್ಪರ್ಶ ಆಗದೆ ಇರುವಿಕೆ, ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ, ನೀರಿನ ಕೊರತೆ, ಹೆಚ್ಚಿನ ಉಷ್ಣಾಂಶ ಮತ್ತು ಮರದ ಶಾರೀರಿಕ ಕಾರಣಗಳು ಇತ್ಯಾದಿ.
6.ರೋಗವನ್ನು ಬಸವನಹುಳು ಹಾಗೂ ಇರುವೆ / ಗೊದ್ದಗಳು ಒಂದು ಮರದಿಂದ ಇನ್ನೊಂದು ಮರಕ್ಕೆ ಹರಡುತ್ತವೆ.
ನಿರ್ವಹಣಾ ಕ್ರಮಗಳು:
1.ರೋಗಕ್ಕೆ ತುತ್ತಾಗಿ ಒಣಗಿದ ಹಾಗು ಬಲೆ ನೇಯ್ದಿರುವ ಹಿಂಗಾರುಗಳನ್ನು ತೆಗೆದು ನಾಶಪಡಿಸುವುದರಿಂದ ರೋಗ ಹರಡದಂತೆ ತಡೆಯಬಹುದು.
2.ಬಲಿತ ಹಿಂಗಾರವನ್ನು ಕೊಕ್ಕೆಯಿಂದ ಸೀಳಿ ಅರಳಿದ ನಂತರ ಎಲ್ಲಾ ಹೂಗೊಂಚಲು (ಹಿಂಗಾರ)ಗಳಿಗೂ ಸಿಂಪರಣೆ ಕೈಗೊಳ್ಳಬೇಕು.
3.ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ವ್ಯವಸ್ಥೆ ಕೈಗೊಳ್ಳಬೇಕು.
4.ಮಣ್ಣು ಪರೀಕ್ಷೆ ಆಧಾರದ ಮೇಲೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡಬೇಕು. ಅದರಲ್ಲೂ ಪೊಟ್ಯಾಷ್ ಸರಿಯಾದ ಪ್ರಮಾಣದಲ್ಲಿ ನೀಡಬೇಕು.
5.ಪ್ರತಿ ಲೀಟರ್ ನೀರಿಗೆ 2 ಗ್ರಾಂ ಕಾರ್ಬೈಂಡೈಜಿಂ + ಮ್ಯಾಂಕೋಜೆಬ್ ಹಾಗೂ 1 ಗ್ರಾಂ ಆಸಿಫೇಟ್ + ಇಮಿಡ ಕ್ಲೋಪ್ರಿಡ್ ಕೀಟನಾಶಕ ಬೆರಸಿದ ದ್ರಾವಣವನ್ನು ಹೂಗೊಂಚಲುಗಳು ಸಂಪೂರ್ಣವಾಗಿ ತೊಯ್ಯುವಂತೆ ಸಿಂಪಡಿಸಬೇಕು. ಪ್ರತಿ 200 ಲೀಟರ್ ಸಿಂಪರಣಾ ದ್ರಾವಣಕ್ಕೆ 100 ಮೀ ಲಿ ನಾನ್ ionic ಸಿಲಿಕಾ ಬೇಸ್ಡ್ ಅಂಟನ್ನು ಬೆರಸುವುದು ಸೂಕ್ತ.
6.ರೋಗದ ಬಾಧೆಯು ಹೆಚ್ಚಾಗಿದ್ದಲ್ಲಿ ಅಗತ್ಯತೆಗೆ ಅನುಗುಣವಾಗಿ 20-25 ದಿನಗಳ ನಂತರ ಮತ್ತೊಂದು ಸಿಂಪರಣೆ ಕೈಗೊಳ್ಳಬಹುದು.
7.ತೋಟಗಳಲ್ಲಿ ಬಸವನಹುಳ ಹಾಗೂ ಗೊದ್ದ/ಇರುವೆಗಳ ನಿಯಂತ್ರಣ ಮಾಡಬೇಕು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network