Header Ads Widget

Responsive Advertisement

ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಕ್ರೀಡಾಕೂಟಗಳು ಸಹಕಾರಿ; ನಾಪಂಡ ಮುತ್ತಪ್ಪ

ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಕ್ರೀಡಾಕೂಟಗಳು ಸಹಕಾರಿ; ನಾಪಂಡ ಮುತ್ತಪ್ಪ

ಮಡಿಕೇರಿ: ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.

ಪಂದ್ಯಾಟವನ್ನು ಸಮಾಜ ಸೇವಕ ನಾಪಂಡ ಮುತ್ತಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಮತ್ತು ದೈಹಿಕ ಆರೋಗ್ಯ ಕಾಪಾಡಲು ಕ್ರೀಡಾಕೂಟಗಳು ಸಹಕಾರಿಯಾಗಿದ್ದು, ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಷ್ಟೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕ್ರೀಡಾ ಕೂಟಗಳಿಂದ ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಸಾರ್ವಜನಿಕ ಕೆಲಸ ಮಾಡುವ ವಿವಿಧ ಇಲಾಖೆ ಸಿಬ್ಬಂದಿಯೊಂದಿಗೆ ಪತ್ರಕರ್ತರ ಭಾಂದವ್ಯ ಬೆಳೆಯಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದರು.

ಕೊಡಗು ಪತ್ರಕರ್ತರ ಸಂಘದ ಹಿರಿಯ ಸಲಹೆಗಾರ ಬಿ.ಜಿ ಅನಂತಶಯನ ಮಾತನಾಡಿ, ಕ್ರೀಡೆಯ ಮೂಲಕ ಎಲ್ಲರೂ ಒಗ್ಗಟ್ಟಾಗಿ ಸಮಾಜದ ವ್ಯವಸ್ಥೆ ಕಾಪಾಡಲು ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳು ಪತ್ರಕರ್ತರ ಸಂಘದಿಂದ ನಡೆಯಲು ಇದು ಬುನಾದಿಯಾಗಿದೆ ಎಂದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕ್ರೀಡಾ ಸಮಿತಿ ಸಂಚಾಲಕ ಸುರೇಶ್ ಬಿಳಿಗೇರಿ ಮಾತನಾಡಿದರು. ಪಂದ್ಯಾವಳಿಯಲ್ಲಿ ಕೊಡಗು ಪತ್ರಕರ್ತರ ಸಂಘ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಶಿಕ್ಷಕರ ತಂಡಗಳು ಪಾಲ್ಗೊಂಡಿದ್ದವು. ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿ ಸಂಘದ ಸದಸ್ಯ ರಂಜಿತ್ ಕವಲಪಾರ ನಿರೂಪಿಸಿ, ನಿರ್ದೇಶಕರಾದ ಎಸ್.ಜಿ. ಉಮೇಶ್ ವಂದಿಸಿದರು. ಸಂಘದ ವಿವಿಧ ತಾಲೂಕು ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.