ಏಪ್ರಿಲ್-14ರಂದು ಹಳ್ಳಿಗಟ್ಟು ಭದ್ರಕಾಳಿ ದೇವಸ್ಥಾನದಲ್ಲಿ ಎಡಮ್ಯಾರ್ ಒಂದ್ "ಬಿಸು ಚಂಗ್ರಾಂದಿ" ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ
ಸುಮಾರು 980 ವರ್ಷಗಳಿಗೂ ಹಿಂದಿನ ಇತಿಹಾಸವಿರುವ ಹಾಗೂ ದೇವಸ್ಥಾನದ ಎದುರು ದೇವಸ್ಥಾನಕ್ಕೆ ಮುಖಮಾಡಿ ನಿಂತಿರುವ ಐರಾವತ (ಕಲ್ಲಿನ ಆನೆ) ಹೊಂದಿರುವ ಜಿಲ್ಲೆಯ ಏಕೈಕ ದೇವಸ್ಥಾನವೆಂಬ ಹೆಗ್ಗಳಿಕೆ ಹೊಂದಿರುವ ಪೊನ್ನಂಪೇಟೆ ತಾಲ್ಲೂಕಿನ ಹಳ್ಳಿಗಟ್ಟು ಗ್ರಾಮಕ್ಕೆ ಸೇರಿದ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಬಿಸು ಚಂಗ್ರಾಂದಿ ಹಾಗೂ ಎಡಮ್ಯಾರ್ ಒಂದ್ ನೂತನ ವರ್ಷಾಚರಣೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭದ್ರಕಾಳಿ, ಗುಂಡಿಯತ್ ಅಯ್ಯಪ್ಪ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಹಾಗೂ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.
ಈ ಕುರಿತು ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ತಕ್ಕಮುಖ್ಯಸ್ಥರಾದ ಚಮ್ಮಟೀರ ಸುಗುಣ ಮುತ್ತಣ್ಣ ಮಾಹಿತಿ ನೀಡಿ ಬಿಸು ಸಂಕ್ರಮಣದ ಎಡಮ್ಯಾರ್ ಒಂದ್ ಪ್ರಯುಕ್ತ ಇದೇ ಏಪ್ರಿಲ್ 14ನೇ ಶುಕ್ರವಾರ ಬೆಳಿಗ್ಗೆ 8.00 ಗಂಟೆಗೆ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದ ಆವರಣದಲ್ಲಿ ಗಣಪತಿ ಹೋಮವನ್ನು ಹಮ್ಮಿಕೊಳ್ಳಲಾಗಿದ್ದು, ಬಳಿಕ 11.00 ಗಂಟೆಗೆ ಶ್ರೀ ಭದ್ರಕಾಳಿ ದೇವಿಯ ವಿಗ್ರಹಕ್ಕೆ ದೇವಸ್ಥಾನದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಬೆಳ್ಳಿಯ ಕವಚ ಧಾರಣಾ ಪೂಜೆ ಸೇರಿದಂತೆ ದೇವಸ್ಥಾನ ಅವರಣದಲ್ಲಿ ನಿರ್ಮಿಸಲಾಗಿರುವ ವಿಶೇಷ ಭದ್ರತಾ ಕೊಠಡಿ ಹಾಗೂ ನವೀಕರಣಗೊಂಡಿರುವ ಅರ್ಚಕರ ಮನೆಯ ಗೃಹ ಪ್ರವೇಶ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಯುಕ್ತ ನೆರೆದ ಭಕ್ತಾದಿಗಳಿಗೆ ಮಧ್ಯಾಹ್ನದ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಳೆದ ಕೆಲದಿನಗಳ ಹಿಂದೆ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದ ದೇವಸ್ಥಾನಗಳಲ್ಲಿ ಘಂಟೆಗಳ ಸರಣಿ ಕಳವು ಪ್ರಕರಣ ನಡೆದು ಇಲಾಖೆಗೆ ತಲೆನೋವಾಗಿತ್ತು. ಕೊನೆಗೆ ಹಳ್ಳಿಗಟ್ಟು ಭದ್ರಕಾಳಿ ದೇವಸ್ಥಾನದಲ್ಲಿ ಘಂಟೆ ಕಳ್ಳತನ ಮಾಡಿದ ಕಳ್ಳರು ಸಾಕ್ಷಿ ಸಮೇತವಾಗಿ ಸಿಕ್ಕಿಹಾಕಿಕೊಂಡರು. ಇದಕ್ಕೆ ಒಂದು ತಿಂಗಳ ಹಿಂದೆ ಕೂಡ ಇದೇ ದೇವಸ್ಥಾನಕ್ಕೆ ನುಗ್ಗಿದ ಇಬ್ಬರು ಕಳ್ಳರು (ದಂಪತಿಗಳು) ಕಳ್ಳತನಕ್ಕೆ ಪ್ರಯತ್ನಿಸಿ ಕೊನೆಗೆ ಏನೂ ಸಿಗದೆ ವಾಪಾಸಾಗಿ, ರಾತ್ರಿಯಿಡೀ ಪೊನ್ನಂಪೇಟೆ ಹಳ್ಳಿಗಟ್ಟು ಎಂದು ಅಲೆದಾಡಿ ಕೊನೆಗೆ ಕಳ್ಳತನ ಮಾಡಲು ಪ್ರಯತ್ನಿಸಿದ ವ್ಯಕ್ತಿಯೇ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಸಿಕ್ಕಿಹಾಕಿಕೊಂಡ ಘಟನೆ ಕೂಡ ಇದೇ ದೇವಸ್ಥಾನದಲ್ಲಿ ನಡೆದಿದ್ದು, ಇದರ ವಾರ್ಷಿಕ ಬೋಡ್ ನಮ್ಮೆ ಅಥವಾ ಬೇಡು ಹಬ್ಬ ಇದೇ ಮೇ 20 ಹಾಗೂ 21ರಂದು ನಡೆಯಲಿದ್ದು, ವರ್ಷಂಪ್ರತಿ ಇಲ್ಲಿ ನವರಾತ್ರಿ ಉತ್ಸವ ಕೂಡ ವಿಜೃಂಭಣೆಯಿಂದ ನಡೆಯುತ್ತದೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network