Header Ads Widget

Responsive Advertisement

ಏರುತ್ತಿರುವ ತಾಪಮಾನ; ಬತ್ತುತ್ತಿರುವ ಜಲತಾಣ; ಸಕಾಲದಿ ಬಾರದ ಮಳೆ; ತಂಪಿನ ನಿರಿಕ್ಷೇಯಲ್ಲಿ ಇಳೆ

ಏರುತ್ತಿರುವ ತಾಪಮಾನ; ಬತ್ತುತ್ತಿರುವ ಜಲತಾಣ; ಸಕಾಲದಿ ಬಾರದ ಮಳೆ; ತಂಪಿನ ನಿರಿಕ್ಷೇಯಲ್ಲಿ ಇಳೆ

"ನೀರು ಅಥವಾ ಜಲ" ಇದು ಪ್ರತಿಯೊಂದು ಜೀವಿಯ ಜೀವನಕ್ಕೆ ಪ್ರಮುಖವಾಗಿದೆ. ಇದು ಜೀವಿತಾವಧಿಯ ಒಂದು ಪ್ರಮುಖ ಭಾಗವೆಂದರೂ ತಪ್ಪಗಲಾರದು. ಮನುಷ್ಯನು ಊಟ ತಿಂಡಿ ಹಾಗೂ ನಿದ್ರೆಯಿಲ್ಲದೇ ಜೀವಿಸಬಲ್ಲ. ಆದರೆ ಬದುಕಿನ ಅವಿಭಾಜ್ಯ ಅಂಗವಾದ ಗಾಳಿ ಮತ್ತು ನೀರಿಲ್ಲದೇ ಬದುಕುವುದು ಕಷ್ಟಸಾಧ್ಯ. 

ಸಕಲ ಜೀವಿಗಳಿಗೂ ನೀರೆಂದರೆ ಕೇವಲ ಜಲವಲ್ಲ ಅದು ಪಾವನ ತೀರ್ಥ. ಜೀವ ಸಂಕುಲದ ಅಳಿವು-ಉಳಿವಿನ ಪ್ರಶ್ನೆ ಬಂದಾಗ ನೀರಿನ ಪಾತ್ರ ಮಹತ್ತರವಾಗಿ ಗೋಚರಿಸುತ್ತದೆ. ಜೀವಜಲದ ಸಂರಕ್ಷಣೆಗೆ ವಿಶ್ವದಾದ್ಯಂತ ಮಳೆಕೊಯ್ಲು, ನೀರಿನ ಮೂಲಗಳ ಸಂರಕ್ಷಣೆ, ಜಲಾನಯನ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಆದರೂ ಇತ್ತೀಚಿನ ದಿನಮಾನಗಳಲ್ಲಿ ಏರುತ್ತಿರುವ ತಾಪಮಾನದಿಂದ ಜಲಮೂಲಗಳು ಬತ್ತುತ್ತಿವೆ. ಸಕಾಲದಿ ಬಾರದ ಮಳೆಯಿಂದ ಜನತೆ ಹಾಗೂ ಜೀವರಾಶಿಗಳಿಗೆ ಆತಂಕ ಮೂಡತೊಡಗಿದೆ.

ನೀರನ್ನು ಸೇವಿಸುವುದರಿಂದ ಅಥವಾ ಬಳಸುವುದರಿಂದ ತತ್‌ಕ್ಷಣದಲ್ಲಾಗಲೀ ಅಥವಾ ಕೆಲವು ದಿನಗಳ ನಂತರವಾಗಲೀ ಅಡ್ಡ ಪರಿಣಾಮ ಬೀರದಂಥ ಉತ್ಕೃಷ್ಟ ಗುಣ ಮಟ್ಟದ ನೀರೇ ಕುಡಿಯುವ ನೀರು. ಇಂಥ ನೀರನ್ನು ಕುಡಿಯಲು ಯೋಗ್ಯವಾದ ನೀರು ಎನ್ನಲಾಗಿದೆ. 

ಸೇವಿಸಲು ಮತ್ತು ಅಡಿಗೆ ಮಾಡಲು ವಾಸ್ತವವಾಗಿ ಕನಿಷ್ಠ ಪ್ರಮಾಣದ ನೀರು ಬಳಕೆಯಾಗುವುದಾದರೂ ಅಭಿವೃದ್ಧಿ ಹೊಂದಿದ ಬಹುಪಾಲು ದೇಶಗಳಲ್ಲಿ ಮನೆ ಬಳಕೆ, ವಾಣಿಜ್ಯ ಮತ್ತು ಕೈಗಾರಿಕೆಗಳಲ್ಲಿನ ಉಪಯೋಗಕ್ಕೂ ಕುಡಿಯುವ ನೀರಿನ ಗುಣ ಮಟ್ಟದ ನೀರನ್ನೇ ಪೂರೈಕೆ ಮಾಡಲಾಗುತ್ತದೆ. ಇಂತಹ ಅಮೃತ ಸಮಾನ ನೀರನ್ನು ಉಳಿಸಿ ಸಂರಕ್ಷಿಸುವುದು ನಮ್ಮ ಮೂಲಭೂತ ಅಗತ್ಯತೆಗಳಲ್ಲಿ ಒಂದಾಗಿದೆ.

ಇತ್ತೀಚಿನ ದಿನಮಾನಗಳಲ್ಲಿ ಶುದ್ಧ ನೀರಿನ ಮೂಲಗಳು ಕಣ್ಮರೆಯಾಗುತ್ತಿವೆ. ನೀರಿನ ಸಂರಕ್ಷಣೆ ಪ್ರತಿ ನಾಗರಿಕರ ಕರ್ತವ್ಯವಾಗಬೇಕಿದೆ. ಕೇವಲ ನೀರಿನ ಸಂಗ್ರಹವೊಂದರಿಂದಲೇ ಜಲ ಸಂರಕ್ಷಣೆ ಆಗುವುದಿಲ್ಲ. ನಮ್ಮ ಮನೆಗಳಲ್ಲಿ ಬಳಸುವ ನೀರಿನ ಮಿತವ್ಯಯದ ಬಗ್ಗೆಯೂ ಗಮನ ಕೊಡಬೇಕಾಗಿದೆ. ನಲ್ಲಿಗಳಿಂದ ವೃಥಾ ನೀರು ಸೋರುವಿಕೆಯನ್ನು ತಡೆಯಿರಿ. ವಾಹನ ಸ್ವಚ್ಛಗೊಳಿಸಲು ಪೈಪ್ ಬದಲು ಬಕೇಟ್ ಬಳಸಿ, ಗಿಡಗಳಿಗೆ ನೀರು ಹಾಕುವಾಗ ಮೇಲಿನಿಂದ ಸುರಿಯುವ ಬದಲು ಗಿಡದ ಬುಡಕ್ಕೆ ಹಾಕಿ. ಇದರಿಂದ ನೀರು ಪೋಲು ತಪ್ಪುತ್ತದೆ. ನೀರು ವ್ಯರ್ಥವಾಗದಂತೆ ನೋಡಿಕೊಳ್ಳಬೇಕಾಗಿದೆ.

ವಿಶ್ವದಲ್ಲಿ ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ ಹೀಗೆ ಮತ್ತಿತರ ಕಾರಣಗಳಿಂದ ಈಗಾಗಲೇ ನೀರಿನ ಅಭಾವ ಕಂಡುಬಂದಿದೆ. ಅರಣ್ಯ ನಾಶವೇ ನೀರಿನ ಅಭಾವಕ್ಕೆ ಪ್ರಮುಖ ಕಾರಣವಾಗಿದೆ. ಕಾಡುಗಳನ್ನು ಕಡಿಯುವುದರಿಂದ ಮಳೆ ಕಡಿಮೆಯಾಗುತ್ತಿದ್ದು, ಇದರಿಂದ ಭೂಮಿಯಲ್ಲಿ ನೀರಿನ ಅಂಶವೂ ಕಡಿಮೆಯಾಗುತ್ತದೆ. ಅರಣ್ಯ ನಾಶವಾಗಿ ಭೂಮಿ ಬಂಜರಾಗುತ್ತಾ, ಮೇಲ್ಮಣ್ಣು ಕೊಚ್ಚಿ ಹೋದಾಗ ನೀರು ಇಂಗುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಪಕ್ಕಪಕ್ಕದಲ್ಲೇ ಕೊಳವೆ ಬಾವಿ ಕೊರೆಯುವುದು ಕೂಡ ನೀರಿನ ಅಭಾವಕ್ಕೆ ಕಾರಣವಾಗಿದೆ. ಇದರಿಂದ ಮರಗಳನ್ನು ಬೆಳೆಸಿ ನೀರಿನ ಅಭಾವಕ್ಕೆ ಕೊನೆಗಾಣಿಸಬಹುದಾಗಿದೆ.

ಅಂದಾಜೊಂದರ ಪ್ರಕಾರ ನೀರಿನ ಬಳಕೆಯ ಬಗ್ಗೆ ಒಂದು ಜಾಗತಿಕ ಅಂಕಿ ಅಂಶ ಈ ರೀತಿ ಇದೆ. ಪ್ರಪಂಚದಾದ್ಯಂತ ಮನೆಗೆಂದು ಬಳಸುವ ಒಟ್ಟು ನೀರಿನ ಪ್ರಮಾಣ 15%. ಕುಡಿಯಲು, ಸ್ನಾನ ಮಾಡಲು, ಅಡಿಗೆ ತಯಾರಿಸಲು, ನಿರ್ಮಲಿನೀಕರಣಕ್ಕಾಗಿ ಮತ್ತು ತೋಟಗಾರಿಕೆಗಾಗಿ ಬಳಸಲಾಗುವ ಒಟ್ಟು ನೀರು ಇದರಲ್ಲಿ ಸೇರಿದೆ. ತೋಟಗಾರಿಕೆಯನ್ನು ಹೊರತು ಪಡಿಸಿ ಮನೆ ಬಳಕೆಗಾಗಿ ಪ್ರತಿ ಮನುಷ್ಯನ ಪ್ರತಿ ದಿನದ ಮೂಲಭೂತ ನೀರಿನ ಅವಶ್ಯಕತೆ ಸರಿ ಸುಮಾರು 50 ಲೀಟರ್ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಮನೆ ಬಳಕೆಗಿಂತ ವ್ಯವಸಾಯ ಕ್ಷೇತ್ರದಲ್ಲಿ ಹೆಚ್ಚಿನ ನೀರಿನ ಬಳಕೆಯಾಗುತ್ತದೆ. ನೀರಾವರಿ ಚಟುವಟಿಕೆಗಾಗಿ ಜಗತ್ತಿನಾದ್ಯಂತ 69% ನೀರನ್ನು ಬಳಸಲಾಗುತ್ತದೆ ಎಂಬುದೊಂದು ಅಂದಾಜಿದೆ. ಜಗತ್ತಿನಾದ್ಯಂತ ಕೈಗಾರಿಕಾ ರಂಗಕ್ಕೆಂದು ಬಳಸಲಾಗುವ ನೀರಿನ ಪ್ರಮಾಣ 15% ಎಂಬುದೊಂದು ಅಂದಾಜು.

ಒಂದು ಅಸಮಾನ ಸಮಾಜದಲ್ಲಿ ಯಾವುದೇ ಪರಿಮಿತ ಸಂಪನ್ಮೂಲವನ್ನು ಬೆಲೆತೆತ್ತು ಪಡೆದುಕೊಳ್ಳುವವರಲ್ಲಿ ನಾವುಗಳು ಅನಗತ್ಯವಾಗಿ ಅಮೂಲ್ಯವಾದ ಸಂಪತ್ತನ್ನು ಪೋಲು ಮಾಡುತ್ತಿದ್ದೇವೆ. ಒಂದು ಪ್ರಮುಖ ಜೀವನಾವಶ್ಯಕ ಸಂಪನ್ಮೂಲವೇ ಬತ್ತಿಹೋಗುತ್ತಿದ್ದರೂ ತೋರುತ್ತಿರುವ ಆತ್ಮವಂಚಕ ಧೋರಣೆ ಕೊಣೆಗಾಣಲು, ನಮಗಾಗಿ ನಮ್ಮ ಮುಂದಿನ ಪೀಳಿಗೆಗಾಗಿ ಒಂದು ಧೃಡ ನಿರ್ಧಾರಕ್ಕೆ ಕಾಲ ಪಕ್ವವಾಗಿದೆೆ. ನೀರು ಇಲ್ಲದ ದಿನ (ಡೇ ಜೀರೋ-ಶೂನ್ಯ ದಿನ) ಸನ್ನಿಹಿತವಾಗುತ್ತಿದೆ. ಇದು ಭವಿಷ್ಯದಲ್ಲಿ ಯಾವಾಗಲೋ ಸಂಭವಿಸಬಹುದಾದ ವಿನಾಶಕಾರಿ ಆಪತ್ತಲ್ಲ. ಇದು ನಮ್ಮ ನಿರ್ಲ್ಯಕ್ಷದ ಸ್ವಯಂಕೃತ್ಯ ಅಪರಾದವಲ್ಲವೆ? ಸ್ವಲ್ಪ ಯೋಚಿಸಿ!!....

✍️.... ಅರುಣ್‌ ಕೂರ್ಗ್‌ 

            (ಪತ್ರಕರ್ತರು)