Header Ads Widget

Responsive Advertisement

ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ವಾರಾಂತ್ಯದಲ್ಲಿ ವಿವಿಧ ಕಾರ್ಯಕ್ರಮ: ಡಾ.ಬಿ.ಸಿ.ಸತೀಶ


ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ವಾರಾಂತ್ಯದಲ್ಲಿ ವಿವಿಧ ಕಾರ್ಯಕ್ರಮ: ಡಾ.ಬಿ.ಸಿ.ಸತೀಶ 

ಮಡಿಕೇರಿ ಏ.06: ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ವಾರಾಂತ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಎಸ್.ಆಕಾಶ್ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು.

 ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸ್ವೀಪ್ ಸಮಿತಿ ವತಿಯಿಂದ ಈಗಾಗಲೇ ಜಾಥ, ಫಲಪುಷ್ಪ ಪ್ರದರ್ಶನ ಸಂದರ್ಭದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಚುನಾವಣೆ ಘೋಷಣೆಯಾಗಿ ಮೇ, 10 ರಂದು ಮತದಾನ ನಡೆಯಲಿದ್ದು, ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಮತದಾನ ಹೆಚ್ಚಳಕ್ಕೆ ಯಾವ ಯಾವ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂಬ ಬಗ್ಗೆ ಸಲಹೆ ನೀಡುವಂತೆ ಕೋರಿದರು. 

ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶೇ.74 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.80 ಕ್ಕಿಂತ ಹೆಚ್ಚು ಮತದಾನ ಆಗಲು ಹೆಚ್ಚಿನ ಅರಿವು ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಮತದಾನದ ಬಗ್ಗೆ ಅಗತ್ಯ ಜಾಗೃತಿ ಮೂಡಿಸುವಲ್ಲಿ ಸ್ವೀಪ್ ಸಮಿತಿ ಜೊತೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಮನವಿ ಮಾಡಿದರು.

ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಅವರು ಮಾತನಾಡಿ ಮತದಾನ ಹೆಚ್ಚಳ ಸಂಬಂಧಿಸಿದಂತೆ ಜಾಗೃತಿ ಮೂಡಿಸುವಲ್ಲಿ ಸಂತೆ ನಡೆಯುವ ದಿನಗಳಂದು ‘ಕರಪತ್ರ’ ಹಂಚುವ ಮೂಲಕ ಹಾಗೂ ಪ್ರವಾಸಿ ಸ್ಥಳಗಳಲ್ಲಿಯೂ ಹೆಚ್ಚಿನ ಅರಿವು ಮೂಡಿಸಬಹುದು ಎಂದು ಸಲಹೆ ಮಾಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಬೈಕ್ ರ್ಯಾಲಿ, ಸೈಕಲ್ ಜಾಥ, ಚಿತ್ರಕಲಾ ಶಿಬಿರ, ಹೆಚ್ಚಿನ ಜನರು ಸೇರುವ ಸ್ಥಳಗಳಲ್ಲಿ ಸ್ಟ್ಯಾಂಡಿಸ್ ಅಳವಡಿಸುವುದು ಹಾಗೂ ಸಾಮಾಜಿಕ ಜಾಲತಾಣ ಮೂಲಕ ಹೆಚ್ಚಿನ ಪ್ರಚಾರ ಮಾಡಬಹುದು ಎಂದರು. 

ಸ್ಕೌಟ್ಸ್ ಮತ್ತು ಗೈಡ್ಸ್‍ನ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿಮ್ಯಾಥ್ಯೂ ಅವರು ಮಾತನಾಡಿ ಮತದಾನ ಕಡಿಮೆಯಾಗಿರುವ ಮತಗಟ್ಟೆಗಳಲ್ಲಿ ಕಿರುನಾಟಕ ಪ್ರದರ್ಶನ ಮೂಲಕ ಹೆಚ್ಚಿನ ಅರಿವು ಮೂಡಿಸಬಹುದಾಗಿದೆ ಎಂದರು.

ರೋಟರಿ ಸಂಸ್ಥೆಯ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷರಾದ ಅನಿಲ್ ಎಚ್.ಟಿ. ಅವರು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೊಬೈಲ್ ಟಾರ್ಚ್ ಮೂಲಕ ಜಾಗೃತಿ. ಹಾಗೆಯೇ ರಾಜಸೀಟಿನಲ್ಲಿ ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಬಹುದಾಗಿದೆ ಎಂದು ಸಲಹೆ ಮಾಡಿದರು.

ಸ್ತ್ರೀಶಕ್ತಿ ಒಕ್ಕೂಟಗಳ ಅಧ್ಯಕ್ಷರಾದ ರೆಹನಾ ಸುಲ್ತಾನ್ ಅವರು ಮಾತನಾಡಿ ಮತದಾನದಂದು ಕೂಲಿ ಕಾರ್ಮಿಕರು ಮತ ಹಕ್ಕು ಚಲಾಯಿಸುವಂತಾಗಲು ಹೆಚ್ಚಿನ ಅರಿವು ಮೂಡಿಸಬೇಕು ಎಂದು ಕೋರಿದರು.  

ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಧನಂಜಯ ಅವರು ಬೈಕ್ ರ್ಯಾಲಿ ಏರ್ಪಡಿಸಲಾಗುವುದು ಎಂದರು. 18 ರಿಂದ 30 ವರ್ಷದವರೆಗಿನ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಪ್ರದೇಶಗಳಿದ್ದು, ಅವರನ್ನು ಆಹ್ವಾನಿಸಿ ಮತದಾನ ಹೆಚ್ಚಳಕ್ಕೆ ಕ್ರಮವಹಿಸಬೇಕು ಎಂದು ಅವರು ಸಲಹೆ ಮಾಡಿದರು.

‘ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ ಅಸೋಷಿಯೇಷನ್ ಅವರ ಜೊತೆ ಈಗಾಗಲೇ ಚರ್ಚಿಸಲಾಗಿದ್ದು, ಮತದಾನದಂದು ಕೊಠಡಿ ಕಾಯ್ದಿರಿಸುವ ರಾಜ್ಯದ ಪ್ರವಾಸಿಗರು ಮತದಾನ ಮಾಡಿ ಬಂದಲ್ಲಿ ಶೇ.10 ರಷ್ಟು ರಿಯಾಯಿತಿ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.’

ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್ ಅವರು ಮಾತನಾಡಿ ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಅಂಚೆ ಮತಪತ್ರ ಮೂಲಕ ಮತಚಲಾಯಿಸಲು ಅವಕಾಶ ಮಾಡಬೇಕು ಎಂದು ಅವರು ಕೋರಿದರು.

ಖಾಸಗಿ ಬಸ್‍ಗಳಲ್ಲಿ ಮತದಾರರ ಜಾಗೃತಿ ಸಂಬಂಧ ಹೊರತರುವ ಪೋಸ್ಟರ್‍ಗಳನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರೇವತಿ ರಮೇಶ್ ಅವರು ಮಾತನಾಡಿ ಮತದಾನ ಮಹತ್ವ ಕುರಿತು ಹೆಚ್ಚಿನ ಪ್ರಚಾರ ಮಾಡಬೇಕು ಎಂದು ತಿಳಿಸಿದರು.

ಜಿ.ಪಂ.ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಎಸ್.ಆಕಾಶ್ ಅವರು ಏಪ್ರಿಲ್, 15 ರಂದು ರಾಜಸೀಟಿನಲ್ಲಿ ಚಿತ್ರಕಲಾ ಶಿಬಿರ, ಏಪ್ರಿಲ್, 16 ರಂದು ಬೈಕ್ ರ್ಯಾಲಿ, ಏಪ್ರಿಲ್, ಏಪ್ರಿಲ್, 30 ರಂದು ಟಾರ್ಚ್ ಡೇ ಆಯೋಜಿಸುವ ಬಗ್ಗೆ ಸಂಬಂಧಪಟ್ಟವರು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಕೋರಿದರು. 

ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಅಂಬೆಕಲ್ ನವೀನ್, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷರಾದ ಎಂ.ಬಿ.ದೇವಯ್ಯ, ಕಾರ್ಯದರ್ಶಿ ಮೋಂತಿ ಗಣೇಶ್, ಜಿ.ಪಂ.ಮುಖ್ಯ ಯೋಜನಾಧಿಕಾರಿ ರಾಜ್‍ಗೋಪಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎನ್.ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಸ್ಮಯಿ, ವಿಕಲಚೇತನರ ಇಲಾಖೆ ಅಧಿಕಾರಿ ವಿಮಲ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಸೂರನ್ ನಾಣಯ್ಯ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಜಿಲ್ಲಾ ಸಂಯೋಜಕರಾದ ಅಂಕಚಾರಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ.ನವೀನ್ ಇತರರು ಇದ್ದರು.