Header Ads Widget

Responsive Advertisement

ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2023ರ ಅರ್ಜಿ ಆಹ್ವಾನ

ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2023ರ ಅರ್ಜಿ ಆಹ್ವಾನ

ಪೊನ್ನಂಪೇಟೆ: 2022-23ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿ ಇದೀಗ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ಕೆ.ಎಂ.ಎ. ಸದಸ್ಯರ ಮಕ್ಕಳಿಂದ 'ಕೆ. ಎಂ. ಎ. ಪ್ರತಿಭಾ ಪುರಸ್ಕಾರ-2023'ರ ಅರ್ಜಿ ಆಹ್ವಾನಿಸಲಾಗಿದೆ. ಎರಡೂ ವಿಭಾಗದಲ್ಲೂ ಶೇ.75%ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪೋಷಕರ ಪೈಕಿ ಒಬ್ಬರು (ತಂದೆ ಅಥವಾ ತಾಯಿ) ಕೆ.ಎಂ.ಎ. ಸದಸ್ಯತ್ವ ಪಡೆದು ಕನಿಷ್ಠ ಆರು ತಿಂಗಳು ಪೂರ್ಣಗೊಂಡಿರಬೇಕು ಎಂಬುದು  ಕಡ್ಡಾಯವಾಗಿರುತ್ತದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ. ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎರಡೂ ವಿಭಾಗಗಳಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಅತೀ ಹೆಚ್ಚು ಅಂಕ ಪಡೆಯುವ ತಲಾ13 ಅರ್ಜಿಗಳನ್ನು ಅಂತಿಮವಾಗಿ ಪರಿಗಣಿಸಲಾಗುವುದು. ಇದರಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ,  ಇನ್ನುಳಿದ 10 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು  ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಹೇಳಿದ್ದಾರೆ.

ಈಗಾಗಲೇ ಘೋಷಣೆಯಾಗಿರುವ 2022-23ನೇ ಸಾಲಿನ 5ನೇ, 7ನೇ ಮತ್ತು 10ನೇ ತರಗತಿಯ ಮದರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶದಲ್ಲಿ ಹೆಚ್ಚಿನ ಅಂಕಗಳಿಸುವ ಕೆ.ಎಂ.ಎ. ಸದಸ್ಯರ ಮಕ್ಕಳು ಮದರಸಾ ವಿಭಾಗದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.  ಈ ವಿಭಾಗದಲ್ಲೂ ಅರ್ಜಿ ಸಲ್ಲಿಸಲು ಕನಿಷ್ಟ ಶೇ.75% ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿರುವ ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ ಎಂದು ವಿವರಿಸಿದ್ದಾರೆ.

ಶಾಲಾ ಮುಖ್ಯೋಪಾಧ್ಯಾಯರಿಂದ /ಕಾಲೇಜಿನ ಪ್ರಾಂಶುಪಾಲರಿಂದ/ ಮದರಸಾ ಆಧ್ಯಾಪಕರಿಂದ 'ದೃಢೀಕೃತಗೊಂಡ ಅಂಕಪಟ್ಟಿ', ವಿದ್ಯಾಭ್ಯಾಸ ಮುಂದುವರಿಸುತ್ತಿರುವ ಬಗ್ಗೆ ಹಾಲಿ 'ವ್ಯಾಸಂಗ ದೃಢೀಕರಣ ಪತ್ರ' ಸೇರಿದಂತೆ ತಮ್ಮ ಮನೆತನದ ಮತ್ತು ಪೋಷಕರ ಪೂರ್ಣ ವಿವರ, ದೂರವಾಣಿ ಸಂಖ್ಯೆ ಹಾಗು ಇತ್ತೀಚಿನ 3 ಭಾವಚಿತ್ರದೊಂದಿಗೆ "ಅಧ್ಯಕ್ಷರು, ಕೊಡವ ಮುಸ್ಲಿಂ ಅಸೋಸಿಯೇಷನ್ (ರಿ.), ಪ್ರಧಾನ ಕಚೇರಿ, ಡಿ.ಎಚ್.ಎಸ್. ಕಟ್ಟಡ, ಮುಖ್ಯ ರಸ್ತೆ, ವಿರಾಜಪೇಟೆ, ಕೊಡಗು ಜಿಲ್ಲೆ,ಪಿನ್ ಕೋಡ್: 571218 ಇಲ್ಲಿಗೆ ದಿನಾಂಕ 31-07-2023ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಭಾವಚಿತ್ರ ಮತ್ತು ದೂರವಾಣಿ ಸಂಖ್ಯೆ ಇಲ್ಲದ ಅರ್ಜಿಗಳನ್ನು ಮೊದಲ ಹಂತದಲ್ಲೆ ತಿರಸ್ಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9886060342 (ಪ್ರಧಾನ ಕಾರ್ಯದರ್ಶಿ) ಅನ್ನು ಸಂಪರ್ಕಿಸಬಹುದಾಗಿದೆ ಇಂದು ಸೂಫಿ ಹಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.