ನಾಪೋಕ್ಲು ವೀರಾಜಪೇಟೆ ಮುಖ್ಯ ರಸ್ತೆ ತಡೆದು ಪ್ರತಿಭಟಿಸಿದ ಗ್ರಾಮಸ್ಥರು
ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಭೇಟಿ
ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ .
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿರಾಜಪೇಟೆ ತಾಲೂಕು ಅರಣ್ಯಾಧಿಕಾರಿ ಡಿ ಎಫ್ ಒ ಶರಣ್ಣ ಬಸಪ್ಪ
ಪ್ರತಿಭಟನಾ ಸ್ಥಳಕ್ಕೆ ಮಡಿಕೇರಿ ವಲಯ ಅರಣ್ಯಾಧಿಕಾರಿ ಡಿ ಎಫ್ ಒ ಪೂವಯ್ಯ ಭೇಟಿ
ಅರಣ್ಯಾಧಿಕಾರಿಗಳು ಸ್ವಂದಿಸದಿದ್ದರೆ ಆಗಸ್ಟ್ 15 ರಂದು ಮತ್ತೊಮ್ಮೆ ರಸ್ತೆ ತಡೆ ನಡೆಸುವ ಎಚ್ಚರಿಕೆ
ಚೆಯ್ಯಂಡಾಣೆ, ಜು 10: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ, ಕೋಕೇರಿ, ಚೇಲಾವರ, ಕರಡ, ಅರಪಟ್ಟು, ಪೊದವಾಡ, ಮರಂದೋಡ, ಗ್ರಾಮಸ್ಥರು ಚೆಯ್ಯ0ಡಾಣೆ ಪಟ್ಟಣದಲ್ಲಿ ನಾಪೋಕ್ಲು ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ತಡೆದು ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ತೋಟಗಳಿಗೆ ಲಗ್ಗೆ ಇಟ್ಟು ಪಸಲು ಬರಿತಾ ಕಾಫಿ, ಬಾಳೆ, ಅಡಿಕೆ, ಒಳ್ಳೆಮೆಣಸು, ತೆಂಗು ಮತ್ತಿತ್ತರ ಗಿಡಗಳನ್ನು ತುಳಿದು ಸರ್ವನಾಶ ಪಡಿಸಿದೆ. ತೋಟಗಳನ್ನು ಗದ್ದೆ ರೀತಿಯಲ್ಲಿ ಪರಿವರ್ತನೆ ಮಾಡಿದೆ. ಮನೆಯ ಅಂಗಳಕ್ಕೆ ಕೂಡ ಕಾಡಾನೆಗಳು ಆಗಮಿಸುತ್ತಿದ್ದು ಚೇಲಾವರದಲ್ಲಿ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿ ಅದೃಷ್ಟ ವಶಾತ್ ಪ್ರಾಣಾ ಪಾಯದಿಂದ ಅವರು ಪಾರಾಗಿದ್ದಾರೆ.
ಮರಂದೋಡದಲ್ಲಿ ಮನೆಯಲ್ಲಿದ ವಿದ್ಯಾರ್ಥಿಯ ಸಮವಸ್ತ್ರವನ್ನು ಹೊರಗೆಳೆದು ತುಳಿದಿದೆ, ಮನೆಯಲಿದ್ದ ದೊಡ್ಡ ಗಾತ್ರದ ಹಂಡೆಯನ್ನು ತುಳಿದು ನಾಶ ಪಡಿಸಿದೆ. ಹಲವಾರು ಮನೆ ಹಾಗೂ ತೋಟಕ್ಕೆ ತೆರಳುವ ಗೇಟ್ ಗಳನ್ನು ಹಾನಿಪಡಿಸಿದೆ ಸರಿ ಸುಮಾರು 25 ಕ್ಕೂ ಹೆಚ್ಚು ಕಾಡಾನೆಗಳು ಈ ವ್ಯಾಪ್ತಿಯಲ್ಲಿ ನಿರಂತರ ದಾಳಿ ನಡೆಸುತ್ತಿದೆ. ಆದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ರಸ್ತೆಗೆ ಇಳಿದು ರಸ್ತೆ ತಡೆ ನಡೆಸಿ ಉಗ್ರಪ್ರತಿಭಟನೆ ನಡೆಸಿದ್ದಾರೆ.
ನರಿಯಂದಡ ಗ್ರಾಮಸ್ಥ ಪೋಕ್ಕುಳಂಡ್ರ ದನೋಜ್ ಮಾತನಾಡಿ ಹಲವಾರು ವರ್ಷಗಳಿಂದ ಕಾಡಾನೆ ಹಾವಳಿ ಮಿತಿಮೀರುತ್ತಿದೆ. ತೋಟಗಳ ಎಲ್ಲಾ ಫಸಲುಗಳನ್ನು ನಾಶಪಡಿಸಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಮರಂದೋಡ ಗ್ರಾಮಸ್ಥ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಮಾತನಾಡಿ ಜೀವ ಬಲಿ ಪಡೆಯುವ ಮುನ್ನ ಆನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಬೇಕು ಕೂಡಲೇ ಸ್ಥಳಕ್ಕೆ ಅರಣ್ಯಾಧಿಕಾರಿ ಬರಬೇಕೆಂದು ಆಗ್ರಹಿಸಿದರು.ಬರದಿದ್ದರೆ ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈಬಿಡುವುದಿಲ್ಲವೆಂದು ಎಚ್ಚರಿಸಿದರು.
ನರಿಯಂದಡ ಗ್ರಾಮಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಪ್ರತಿಭಟನಾ ನಿರತ ಗ್ರಾಮಸ್ಥರ ಪರವಾಗಿ ಮಾತನಾಡಿ ಅರಣ್ಯಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಬೇಕು ಪೊಳ್ಳು ಭರವಸೆಯಲ್ಲಿ ಅರಣ್ಯಾಧಿಕಾರಿಗಳು ಕಾಲ ಕಳೆಯುತ್ತಿದ್ದು ಕಾಡಾನೆ ಹಾವಳಿ ತಡೇಗೆ ಶಾಶ್ವತ ಪರಿಹಾರವಾಗಿ ಆನೆಯನ್ನು ಕೂಡಲೇ ಸೆರೆ ಹಿಡಿಯಬೇಕು, ಅರಣ್ಯಧಿಕಾರಿಗಳು ವನಮಹೋತ್ಸವವನ್ನು ಆಸ್ಪತ್ರೆ, ಪಂಚಾಯಿತಿ, ಶಾಲೆಗಳಲ್ಲಿ ಮಾಡದೇ ಬೆಟ್ಟದ ಅರಣ್ಯದಲ್ಲಿ ಬಾಳೆ, ಹಲಸು ಮರಗಳನ್ನು ನೆಟ್ಟು ಮಾಡಿ, ಆನೆಗಳಿಗೆ ಅರಣ್ಯದಲ್ಲಿ ಆಹಾರ ಇಲ್ಲದ ಕಾರಣ ತೋಟಕ್ಕೆ ಬರುತ್ತಿದೆ, ಅಲ್ಲೇ ಅದಕ್ಕೆ ಆಹಾರ ದೊರೆತರೆ ಖಂಡಿತ ತೋಟಕ್ಕೆ ಆನೆ ಬರುವುದಿಲ್ಲವೆಂದು ಆಕ್ರೋಶ ಭರಿತರಾಗಿ ನುಡಿಗಳನ್ನಾಡಿದರು
ಕೋಕೇರಿಯ ಗ್ರಾಮದ ಜಪ್ಪು ದೇವಯ್ಯ, ಸಂಪತ್, ರಂಜು ಚಂಗಪ್ಪ, ಅನ್ನಡಿಯಂಡ ಮುದ್ದಯ್ಯ ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ರಸ್ತೆ ತಡೆ ಮಾಡಬೇಡಿ ಎಂದು ಹಲವಾರು ಬಾರಿ ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಗ್ರಾಮಸ್ಥರು ಅವರ ಮನವಿ ತಿರಸ್ಕರಿಸಿದರು. ಅರಣ್ಯಾಧಿಕಾರಿ ಎ.ಸಿ.ಎಫ್.ಓ. ಸ್ಥಳಕ್ಕೆ ಆಗಮಿಸಿ ಪರಿಹಾರದ ಭರವಸೆ ನೀಡದ ಹೊರತು ರಸ್ತೆ ತಡೆ ಹಾಗೂ ಪ್ರತಿಭಟನೆಯನ್ನು ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದರು.
ಮಡಿಕೇರಿ ತಾಲೂಕು ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಯಾವುದೇ ಕಾರಣಕ್ಕೂ ರಸ್ತೆ ತಡೆ ಮಾಡಬೇಡಿ ಎಂದು ಮನವಿ ಮಾಡಿದರು. ಅದಕ್ಕೂ ಬಗ್ಗದ ಗ್ರಾಮಸ್ಥರು ಪ್ರತಿಭಟನೆಯನ್ನು ಮುಂದುವರಿಸಿದರು.
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರಗೆ ರಸ್ತೆ ತಡೆಯಲ್ಲಿ ನಿರತರಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೇಗೆ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.12 ಗಂಟೆಯ ಬಳಿಕ ರಸ್ತೆ ತಡೆ ಕೈಬಿಟ್ಟರು. 2 ಗಂಟೆಗೂ ಅಧಿಕ ಸಮಯ ನೂರಕ್ಕೂ ಮಿಕ್ಕ ವಾಹನಗಳು ಮುಂದಕ್ಕೆ ಸಂಚರಿಸಲಾಗದೆ ಅತಂತ್ರರಾದರು. ರಸ್ತೆ ತಡೆ ಕೈ ಬಿಟ್ಟ ಬಳಿಕ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿರಾಜಪೇಟೆ ತಾಲೂಕು ಅರಣ್ಯಾಧಿಕಾರಿ ಡಿ.ಎಫ್.ಒ ಶರಣ್ಣ ಬಸಪ್ಪ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿ ತೋಟಗಳಲ್ಲಿ ಬೀಡು ಬಿಟ್ಟ ಕಾಡಾನೆಗಳನ್ನು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಓಡಿಸುವ ಪ್ರಯತ್ನ ಮಾಡುತ್ತಿದ್ದೇವೆ, ಕಾಡಾನೆ ಓಡಿಸುವಾಗ ತೋಟಗಳಿಗೆ ಅಪಾರ ಪ್ರಮಾಣದ ಹಾನಿಯಾಗುತ್ತಿದೆ, ಮಡಿಕೇರಿ ವಲಯದ ಸಿಬ್ಬಂದಿಗಳನ್ನು ಸೇರಿಸಿ ಜಂಟಿಯಾಗಿ ಕಾರ್ಯಾಚರಣೆ ಖಂಡಿತ ಯಶಸ್ವಿ ಗೊಳಿಸಲಾಗುವುದು, ಕಾಡಾನೆಗಳ ಹಿಂಡನ್ನು ಸೆರೆ ಹಿಡಿಯಲು ಅನುಮತಿಗೆ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದು ಅನುಮತಿ ದೊರೆತ ಕೂಡಲೇ ಈ ಭಾಗದಲ್ಲಿ ಬೀಡು ಬಿಟ್ಟು ತೊಂದರೆ ನೀಡುವ ಆನೆಗಳನ್ನು ಸೆರೆ ಹಿಡಿಯಲಾಗುವುದುದೆಂದರು. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮಡಿಕೇರಿ ವಲಯ ಅರಣ್ಯಧಿಕಾರಿ ಡಿ ಎಫ್ ಒ ಪೂವಯ್ಯ ಮಾತನಾಡಿ ನಾನು ಹಲವಾರು ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದ್ದೇನೆ ಕೊಡಗಿನ ಜನ ಮುಗ್ದರು.ನಾನು ಕೂಡ ಇಲ್ಲೇ ಹುಟ್ಟಿ ಬೆಳೆದವನು.ಕೊಡಗಿನಲ್ಲಿ ಆನೆ ಹಾವಳಿ ಬಹಳ ವರ್ಷಗಳಿಂದ ಇರುವಂತಹದ್ದು ಅದಕ್ಕೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸೋಲಾರ್ ಬೇಲಿ, ರೈಲ್ವೆ ಬ್ಯಾರಿಕೇಡ್ ಗಳನ್ನು ಆಳವಡಿಸಿದರೂ ಕೂಡ ಆನೆ ಹಾವಳಿ ನಿಲ್ಲುತಿಲ್ಲ,ನಾಗರ ಹೊಳೆ ರಕ್ಷಿತಾರಣ್ಯದ ರೂಪದಲ್ಲಿ ಸಮತಟ್ಟಾದ ಅರಣ್ಯ ನಮ್ಮ ಈ ಭಾಗದಲ್ಲಿ ಇಲ್ಲ ಅರಣ್ಯಗಳ ಬಳಿ ತೋಟಗಳು ಇರುವುದರಿಂದ ಕಾಡಾನೆಯನ್ನು ಓಡಿಸಲು ತ್ರಾಸದಾಯಕ ಎಂದರು ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದರು.
ಸ್ವಂದಿಸದಿದ್ದರೆ ಆಗಸ್ಟ್ 15 ರಂದು ಮತ್ತೊಮ್ಮೆ ರಸ್ತೆ ತಡೆ ಹಾಗೂ ಪ್ರತಿಭಟನೆ
ಗ್ರಾಮಸ್ಥರ ಎಲ್ಲಾ ಬೇಡಿಕೆಗಳನ್ನು ಅರಣ್ಯಾಧಿಕಾರಿಗಳು ಈಡೇರಿಸದಿದ್ದಲ್ಲಿ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಅಹೋ ರಾತ್ರಿಯವರೆಗೂ ಧರಣಿ ಹಾಗೂ ಉಗ್ರ ರಸ್ತೆ ತಡೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿ ಪ್ರತಿಭಟಣೆಯನ್ನು ಕೈಬಿಟ್ಟರು.
ಮನವಿ ಪತ್ರ ಸಲ್ಲಿಕೆ
ಇದೇ ಸಂದರ್ಭ ಮಡಿಕೇರಿ ವಲಯ ಅಧಿಕಾರಿ ಡಿ.ಎಫ್.ಓ ಪೂವಯ್ಯ ನವರಿಗೆ ಗ್ರಾಮಸ್ಥರು ಕಾಡಾನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳಲು ಕಾಡಾನೆಗಳನ್ನು ಸೆರೆ ಹಿಡಿಯಲು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ನರಿಯಂದಡ, ಕೋಕೇರಿ, ಚೇಲಾವರ, ಮರಂದೋಡ, ಕರಡ ಅರಪ್ಪಟ್ಟು, ಪೊದವಾಡ ಗ್ರಾಮಸ್ಥರು, 2 ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯರು, 7 ಗ್ರಾಮಕ್ಕೆ ಒಳಪಟ್ಟ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ವಿರಾಜಪೇಟೆ ಅರಣ್ಯ ವಲಯಧಿಕಾರಿ ಆರ್.ಎಫ್.ಓ ಕಳ್ಳಿರ ದೇವಯ್ಯ, ಡಿ.ಆರ್.ಎಫ್.ಓ, ಸಂಜಿತ್, ಅನಿಲ್ ಉಪಸ್ಥಿತರಿದ್ದರು.
ಮಡಿಕೇರಿ ವೃತ ನಿರೀಕ್ಷಕ ಅನೂಪ್ ಮಾದಪ್ಪ ನಿರ್ದೇಶನದಲ್ಲಿ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network