ಮಡಿಕೇರಿ ಜು.05: ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಜಿಲ್ಲಾ ಪಂಚಾಯತ್ ಹಂತದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿ ಮತ್ತು ಆಡಳಿತದಲ್ಲಿ ಗ್ರಾ.ಪಂ.ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಪಾತ್ರ ಮಹತ್ವದ್ದಾಗಿದೆ. ಗ್ರಾಮ ಮಟ್ಟದಲ್ಲಿನ ಸಮಸ್ಯೆಗಳ ಬಗ್ಗೆ ನಿಖರ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಗ್ರಾಮಮಟ್ಟದ ವಾಸ್ತವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಮತ್ತು ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವ ಸಲುವಾಗಿ ಈ ಸಭೆ ಮಹತ್ವದ್ದಾಗಿದೆ ಎಂದು ಜಿ.ಪಂ.ಸಿಇಒ ಅಭಿಪ್ರಾಯಪಟ್ಟರು.
ಸಭೆಯಲ್ಲಿ ಭಾಗವಹಿಸಿದ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ವಿವಿಧ ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ವ್ಯಾಪ್ತಿಯ ಆಡಳಿತ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಮುಖ್ಯವಾಗಿ ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಜೊತೆಗೆ ಶೀಘ್ರ ಕಾಮಗಾರಿ ಮುಕ್ತಾಯಗೊಳಿಸುವಂತೆ ತಿಳಿಸಿದರು.
ಕೂಡುಮಂಗಳೂರು ಗ್ರಾ.ಪಂ. ಕಟ್ಟಡಕ್ಕೆ ನಿವೇಶನ, ಸ್ವಚ್ಛ ಭಾರತ್ ಮಿಷನ್ (ಗ್ರಾ.) ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೆಚ್ಚಿನ ಅನುದಾನ ನೀಡುವಂತೆ ನೆಲ್ಲಿಹುದಿಕೇರಿ ಗ್ರಾ.ಪಂ.ಅಧ್ಯಕ್ಷರು ಮನವಿ ಮಾಡಿದರು. ಗ್ರಾ.ಪಂ.ಗಳಲ್ಲಿ ಸಿಬ್ಬಂದಿ ಕೊರತೆ, ವಸತಿ ರಹಿತರು ಮತ್ತು ನಿವೇಶನ ರಹಿತರ ಸಮಸ್ಯೆಗಳು, ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಮಹಿಳಾ ಸ್ವ-ಸಹಾಯ ಸಂಘಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಎನ್‍ಆರ್‍ಎಲ್‍ಎಂ ಶೆಡ್ ನಿರ್ಮಾಣ, ಮನರೇಗಾ ಯೋಜನೆಯ ಸಾಮಾಗ್ರಿ ಬಿಲ್ಲುಗಳನ್ನು ಪ್ರತಿ ಒಂದು ತಿಂಗಳಿಗೊಮ್ಮೆ ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಯಿತು. ಇದರೊಂದಿಗೆ ಮನರೇಗಾ ಯೋಜನೆಯಡಿ ಪ್ರವಾಹ ನಿಯಂತ್ರಣ ಕಾಮಗಾರಿಗಳನ್ನು ಹೆಚ್ಚು ತೆಗೆದುಕೊಳ್ಳುವುದು, ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಸಲಹೆ ನೀಡಲಾಯಿತು.
‘ನಂಜರಾಯಪಟ್ಟಣ ಗ್ರಾ.ಪಂ.ಅಧ್ಯಕ್ಷರು ಮಾತನಾಡಿ ಜಿ.ಪಂ.ಸಿಇಒ ಅವರು ಖುದ್ದು ಅಧ್ಯಕ್ಷರು-ಉಪಾಧ್ಯಕ್ಷರಿಂದಲೇ ಅಭಿವೃದ್ಧಿ ಕುರಿತು ಸಭೆ ನಡೆಸಿರುವುದು ಇದೇ ಮೊದಲು. ಇಂತಹ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿಯೂ ತಾಲೂಕು ಮಟ್ಟದಲ್ಲಿ ಹೆಚ್ಚಿನ ಸಭೆಗಳು ನಡೆದಲ್ಲಿ ಗ್ರಾಮಗಳು ಮತ್ತಷ್ಟು ಪ್ರಗತಿ ಕಾಣಲಿದೆ ಎಂದು ಅಭಿಪ್ರಾಯಪಟ್ಟರು.’
ಸಭೆ ಬಳಿಕ ಮಾತನಾಡಿದ ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಜುಲೈ ತಿಂಗಳ ಅಂತ್ಯಕ್ಕೆ ಈಗಿನ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರವಧಿ ಮುಕ್ತಾಯವಾಗಲಿದ್ದು, ನಿಸ್ವಾರ್ಥ ಮನೋಭಾವದಿಂದ ಜನಪರ ಕಾರ್ಯ ಕೈಗೊಂಡ ಸರ್ವರಿಗೂ ಶುಭಾಶಯಗಳನ್ನು ತಿಳಿಸಿದರು.
ಪಿಡಿಒಗಳಿಗೆ ಸೂಚನೆ: ಬಳಿಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನೆ ಸಭೆ ಜರುಗಿತು. ಸಭೆಯಲ್ಲಿ ಚರ್ಚಿಸಲಾದ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಮೂಲಭೂತ ಸೌಕರ್ಯಗಳ ಕುಂದುಕೊರತೆಗಳನ್ನು ನಿಗದಿತ ಕಾಲಮಿತಿಯೊಳಗೆ ಸರಿಪಡಿಸುವಂತೆ ಜಿ.ಪಂ.ಸಿಇಒ ಸೂಚಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತೆರಿಗೆ ವಸೂಲಾತಿ, 15 ನೇ ಹಣಕಾಸು ಯೋಜನೆ, ಮಹಾತ್ಮಗಾಂಧಿ ನರೇಗಾ, ವಸತಿ, ಜೆ.ಜೆ.ಎಂ, ಡಿಜಿಟಲ್ ಗ್ರಂಥಾಲಯ, ದೂರದೃಷ್ಟಿ ಯೋಜನೆ ಮತ್ತು ಅಮೃತ ಸರೋವರ ಕಾಮಗಾರಿಗಳನ್ನು ನಿಯಮಾನುಸಾರ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು. ಹೆಚ್ಚಿನ ಮುತುವರ್ಜಿ ವಹಿಸಿ ಗುರಿ ಸಾಧಿಸಲು ನಿರ್ದೇಶನ ನೀಡಿದರು.
ಪ್ರಶಸ್ತಿ ವಿತರಣೆ: ಇದೇ ವೇಳೆ 2021-22 ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪ್ರಶಸ್ತಿ ಪಡೆದಿರುವ ಕೂಡುಮಂಗಳೂರು ಮತ್ತು ದೊಡ್ಡಮಳ್ತೆ ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ಪತ್ರ ಮತ್ತು ಫಲಕ ನೀಡಿ ಡಾ.ಎಸ್.ಆಕಾಶ್ ಅವರು ಗೌರವಿಸಿದರು.
ಕೂಡುಮಂಗಳೂರು ಮತ್ತು ದೊಡ್ಡಮಳ್ತೆ ಗ್ರಾ.ಪಂ.ನ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರು ಪ್ರಶಸ್ತಿ ಸ್ವೀಕರಿಸಿದರು.
ಜಿ.ಪಂ.ಉಪ ಕಾರ್ಯದರ್ಶಿ ಜಿ.ಧನರಾಜು, ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಯೋಜನಾ ನಿರ್ದೇಶಕರಾದ ಜಗದೀಶ್, ತಾ.ಪಂ.ಇಒ ಜಯಣ್ಣ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ರಾಕೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇತರರು ಇದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network