Header Ads Widget

ಸರ್ಚ್ ಕೂರ್ಗ್ ಮೀಡಿಯ

ರೋಟರಿ ವುಡ್ಸ್ ಸಂಸ್ಥೆಯಿಂದ ಆಯೋಜಿತವಾಗಿದ್ದ ಟ್ರಾಫಿಕ್ ಜಾಗೃತಿ ಕಾಯ೯ಕ್ರಮ

ರೋಟರಿ ವುಡ್ಸ್ ಸಂಸ್ಥೆಯಿಂದ ಆಯೋಜಿತವಾಗಿದ್ದ ಟ್ರಾಫಿಕ್ ಜಾಗೃತಿ ಕಾಯ೯ಕ್ರಮ

ಪರಸ್ಪರ ಸಹಕಾರ ಮನೋಭಾವದಿಂದ ವಾಹನ ದಟ್ಟಣೆ ಸಮಸ್ಯೆ ನಿವಾರಿಸಲು ಸಾಧ್ಯವಿದೆ; ನಗರ ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಇನ್ಸ್ ಪೆಕ್ಟರ್  ಐಮುಡಿಯಂಡ  ನಂದ ಅಭಿಪ್ರಾಯ

ಮಡಿಕೇರಿ: ಮಡಿಕೇರಿಯಲ್ಲಿ ಕಂಡುಬಂದಿರುವ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ನಾಗರಿಕರಲ್ಲಿಯೇ ಇದ್ದು, ಪರಸ್ಪರ ಸಹಕಾರ ಮನೋಭಾವದಿಂದ ವಾಹನ ದಟ್ಟಣೆ ಸಮಸ್ಯೆ ನಿವಾರಿಸಲು ಸಾಧ್ಯವಿದೆ ಎಂದು ನಗರ ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಇನ್ಸ್ ಪೆಕ್ಟರ್  ಐಮುಡಿಯಂಡ  ನಂದ ಅಭಿಪ್ರಾಯಪಟ್ಟಿದ್ದಾರೆ.

ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ಸಂಸ್ಥೆಯಿಂದ ಆಯೋಜಿತವಾಗಿದ್ದ ಟ್ರಾಫಿಕ್ ಜಾಗೃತಿ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಡಿಕೇರಿಗೆ ಇತ್ತೀಚಿನ  ವಷ೯ಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗರ ವಾಹನ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಿರಿದಾದ ರಸ್ತೆಗಳಲ್ಲಿ ವಾಹನ ಸಂಚಾರ ಸಮಸ್ಯೆ ಸಾಮಾನ್ಯವಾಗುತ್ತಿದೆ. ಪರಸ್ಪರ ಸಹಕಾರದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಂತೆಯೇ ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಸ್ಥಳೀಯರು ತಮ್ಮ ವಾಹನಗಳಲ್ಲಿ ಹತ್ತಿರದ ಸ್ಥಳಗಳಿಗೆ ತೆರಳುವುದನ್ನು ಕಡಮೆ ಮಾಡಿದರೆ ಸ್ಥಳೀಯರ ವಾಹನ ಸಂಚಾರ  ಪ್ರಮಾಣ  ಇಳಿಮುಖವಾಗಿ ಸಂಚಾರ ದಟ್ಟಣೆ ಕಡಮೆಯಾಗಲಿದೆ ಎಂದು ಸಲಹೆ ನೀಡಿದರು.

ಜಗತ್ತಿನಲ್ಲಿಯೇ ಭಾರತ ದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವಾಹನ ದುರಂತಗಳು ಸಂಭವಿಸುತ್ತಿದೆ.  ಪ್ರತೀ ಗಂಟೆಗೆ ದೇಶದಲ್ಲಿ 16 ಮಂದಿ ವಾಹನ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರತೀ ನಿತ್ಯ 360 ಮಂದಿ ಸಾವಿಗೀಡಾಗುತ್ತಿದ್ದಾರೆ. ವಷ೯ಕ್ಕೆ 1.50  ಲಕ್ಷ ಮಂದಿ ವಾಹನ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದು ಈ ಪ್ರಮಾಣ ಪ್ರತೀ ವಷ೯ ಶೇ.8 ರಷ್ಟು ಹೆಚ್ಚುತ್ತಲೇ ಇದೆ ಎಂದು ನಂದ ಮಾಹಿತಿ ನೀಡಿದರು.

ಇಂಥ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದು, 14 ವಷ೯ದೊಳಗಿನ ಮಕ್ಕಳೂ ವಾಹನ ಅಪಘಾತದಲ್ಲಿ ಸಾವನ್ನಪ್ಪುತ್ತಿರುವ ಪ್ರಮಾಣ ಹೆಚ್ಚುತ್ತಲೇ ಇರುವುದು ವಿಷಾದನೀಯ ಎಂದರು.

ಸೀಟ್ ಬೆಲ್ಟ್ ಹಾಕದೇ ಇರುವುದು,  ವಾಹನ ಚಾಲನೆ ಸಂದಭ೯ ಮೊಬೈಲ್ ಬಳಕೆ, ತ್ರಿಬಲ್ ರೈಡಿಂಗ್, ಮದ್ಯಪಾನ ಮಾಡಿ ಚಾಲನೆ, ನಿಲ೯ಕ್ಷ್ಯದ ಚಾಲನೆ, ವೀಲಿಂಗ್, ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು ಕೂಡ ಅಪಘಾತಗಳು ನಿಯಂತ್ರಣಕ್ಕೆ ಬಾರದಿರಲು ಮುಖ್ಯ ಕಾರಣವಾಗಿದೆ ಎಂದು ನಂದ ವಿಶ್ಲೇಷಿಸಿದರು.

ಸಂಚಾರ ನಿಯಮಗಳ ಉಲ್ಲಂಘನೆಗೆ ಕಠಿಣ ಕ್ರಮಗಳು ಪೊಲೀಸ್ ಇಲಾಖೆಯಲ್ಲಿದ್ದು, ಆದರೆ ಇಂಥ ಪರಿಸ್ಥಿತಿಗೆ ಅವಕಾಶ ಮಾಡಿಕೊಡದೇ ನಾಗರಿಕ ಹೊಣೆಗಾರಿಕೆಯಿಂದ ಪ್ರತೀಯೋವ೯ರೂ ವಾಹನ ಚಾಲನೆ ಮತ್ತು ಸಂಚಾರಿ ನಿಯಮ ಪಾಲಿಸಿದ್ದಲ್ಲಿ ವಿದೇಶಗಳಂತೆ ಭಾರತ ಕೂಡ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ರೋಟರಿ ವಲಯ ಸಹಾಯಕ ಗವನ೯ರ್ ದೇವಣಿರ ತಿಲಕ್ ಮಾತನಾಡಿ,  ರಸ್ತೆಗಳು ಉತ್ತಮ ಸ್ಥಿತಿಯಲ್ಲಿದೆ ಎಂದ ಕೂಡಲೇ ಅದು ವೇಗದ ಚಾಲನೆಗೆ ನೀಡಿದ ಪರವಾನಗಿ ಅಲ್ಲ, ಉತ್ತಮ ರಸ್ತೆಗಳಲ್ಲಿ ನಿಯಮಬದ್ದ ಚಾಲನೆ ಮಾಡಿದರೆ ಎಲ್ಲರಿಗೂ ಉತ್ತಮ ಎಂದು ಹೇಳಿದರು.

ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್ ಮಾತನಾಡಿ, ಸಂಚಾರದ ಬಗ್ಗೆ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಹಲವಾರು ಕಾಯ೯ಕ್ರಮಗಳ ಮೂಲಕ ಕಾಯ೯ಪ್ರವೖತ್ತವಾಗಿದೆ. ಶಾಲಾ ಕಾಲೇಜುಗಳಲ್ಲಿಯೂ ಮುಂದಿನ ದಿನಗಳಲ್ಲಿ ಸಂಚಾರಕ್ಕೆ ಸಂಬಂಧಿಸಿದಂತೆ ಜಾಗ್ರತಿ ಕಾಯ೯ಕ್ರಮ ರೂಪಿಸಲಾಗುತ್ತದೆ ಎಂದು ನಂದ ತಿಳಿಸಿದರು.

ರೋಟರಿ ಸದಸ್ಯರು, ಮಡಿಕೇರಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾಯ೯ದಶಿ೯ ರತ್ನಾಕರ್ ರೈ, ನಿದೇ೯ಶಕರಾದ ಎ.ಕೆ.ವಿನೋದ್, ಅನಿಲ್ ಎಚ್.ಟಿ., ಮಡಿಕೇರಿ ರೋಟರಿ ಅಧ್ಯಕ್ಷೆ ಗೀತಾ ಗಿರೀಶ್ ಸೇರಿದಂತೆ ಹಲವಾರು ಮಂದಿ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು. ರೋಟರಿ ವುಡ್ಸ್ ಕಾಯ೯ದಶಿ೯ ಕಿಗ್ಗಾಲು ಹರೀಶ್ ವಂದಿಸಿದರು.