Header Ads Widget

ಸರ್ಚ್ ಕೂರ್ಗ್ ಮೀಡಿಯ

ನಾಪೋಕ್ಲುವಿನಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಅದ್ದೂರಿ ಸ್ವಾಗತ

ನಾಪೋಕ್ಲುವಿನಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಅದ್ದೂರಿ ಸ್ವಾಗತ

ನಾಪೋಕ್ಲು: ಸಂವಿಧಾನ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾಡಳಿತದ ವತಿಯಿಂದ ಸಂವಿಧಾನದ ಮಹತ್ವದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಸಂವಿಧಾನ ಜಾಗೃತಿ ಜಾಥಾ ರಥವನ್ನು ನಾಪೋಕ್ಲುವಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಾಪೋಕ್ಲು ಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ಪದಾಧಿಕಾರಿಗಳು,  ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಬಳಿಕ ನಾಪೋಕ್ಲು ಪಟ್ಟಣದ ಮುಖ್ಯಬೀದಿಗಳಲ್ಲಿ  ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ವಾದ್ಯಗೋಷ್ಠಿಗಳೊಂದಿಗೆ ನಾಪೋಕ್ಲು ಮಾರುಕಟ್ಟೆಯ ಬಳಿ ಇರುವ ಪೋಲಿಸ್ ಮೈದಾನದವರೆಗೆ ತೆರಳಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಪೊಲೀಸ್ ಮೈದಾನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕಿ ಕೆ.ಬಿ. ಉಷಾರಾಣಿ ಸಂವಿಧಾನ ರಚನೆ ಮತ್ತು ಅದರ ಆಶಯಗಳ ಕುರಿತು ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕರಾದ ಬಾಲಕೃಷ್ಣರೈ ಸಂವಿಧಾನ ಜಾಥಾ ಕಾರ್ಯಕ್ರಮದ ಕುರಿತು ವಿವರಿಸಿದರು.

ಬಳಿಕ ನಾಪೋಕ್ಲು ವಿಭಾಗದ  ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವದ ಕುರಿತು ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು  ಬಹುಮಾನ ವಿತರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಲ್ಲೇ ಟಿರ ಹೇಮಾವತಿ, ಸದಸ್ಯರಾದ ಮಾಚೆಟ್ಟಿರ ಕುಸು ಕುಶಾಲಪ್ಪ, ಟಿ.ಎ. ಮಹಮ್ಮದ್,ಕುಲ್ಲೇಟಿರ ಅರುಣ್ ಬೇಬ,ಲೀಲಾವತಿ, ಯಶೋಧ, ಗಂಗಮ್ಮ, ಕರ್ನಾಟಕ ಪಬ್ಲಿಕ್ ಶಾಲೆಯ  ಪ್ರಭಾರ ಉಪ ಪ್ರಾಂಶುಪಾಲರಾದ ಶಿವಣ್ಣ, ವಿವಿಧ ಶಾಲೆಯ ಶಿಕ್ಷಕ ವೃಂದ, ಅಂಗನವಾಡಿ,ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ವರದಿ: ಝಕರಿಯ ನಾಪೋಕ್ಲು