Header Ads Widget

Responsive Advertisement

ಮೇ 24 ರಿಂದ 26ರ ವರೆಗೆ ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಆವರಣದಲ್ಲಿ ‘ಮಾವು ಮತ್ತು ಹಲಸಿನ ಮೇಳ’

ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಮೇ 24 ರಿಂದ 26ರ ವರೆಗೆ ‘ಮಾವು ಮತ್ತು ಹಲಸಿನ ಮೇಳ’ ನಡೆಯಲಿದೆ ಎಂದು ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಚಂಗಪ್ಪರವರು, ನಗರದ ಕೊಡಗು ಜಿಲ್ಲಾ ಹಾಪ್ ಹಾಪ್‍ಕಾಮ್ಸ್ ನ ಮುಖ್ಯ ಕಚೇರಿಯ ಆವರಣದಲ್ಲಿ ಅತ್ಯಪರೂಪದ ವಿವಿಧ ಬಗೆಯ ಮಾವು ಮತ್ತು ಹಲಸಿನ ಹಣ್ಣಿನ ಮೇಳ ನಡೆಯಲಿದ್ದು, ಬೆಳೆಗಾರರಿಗೆ ತಾವು ಬೆಳೆದ ಹಣ್ಣುಗಳ ಮಾರಾಟಕ್ಕೆ ಅನುವು ಮಾಡಿಕೊಡುವ ಮತ್ತು ವಿವಿಧ ತಳಿಯ, ವಿಭಿನ್ನ ರುಚಿಯ ಮಾವು ಹಲಸನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮೇ 24 ರಂದು ಬೆಳಿಗ್ಗೆ 10.30 ಗಂಟೆಗೆ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ್ ಮೇಳವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೊಡಗು ಜಿ.ಪಂ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ತೋಟಗಾರಿಕೆ ಉಪನಿರ್ದೇಶಕ ಹೆಚ್.ಆರ್.ಯೋಗೇಶ್ ಪಾಲ್ಗೊಳ್ಳಲಿದ್ದು, ಸ್ಥಳೀಯ ಬೆಳೆಗಾರರು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ರಮೇಶ್ ಚಂಗಪ್ಪ ಮನವಿ ಮಾಡಿದರು.

ಕೊಡಗು ಜಿಲ್ಲಾ ಹಾಪ್ ಕಾಮ್ಸ್ ತೋಟಗಾರಿಕೆಯ ಇಲಾಖೆಯ ಅಂಗ ಸಂಸ್ಥೆಯಾಗಿದ್ದು, ಇದು ಸಹಕಾರ ಇಲಾಖೆ ಮತ್ತು. ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾಮಂಡಳಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಮಡಿಕೇರಿ ನಗರದ ಮುಖ್ಯರಸ್ತೆಯಲ್ಲಿರುವ ಅಂಚೆ ಕಚೇರಿಯ ಮುಂಭಾಗದಲ್ಲಿ ಹಾಪ್‍ಕಾಮ್ಸ್ ನ ಕೇಂದ್ರ ಕಚೇರಿ ಹಾಗೂ ಮಾರಾಟ ಮಳಿಗೆ ಇದ್ದು, ಈಗಾಗಲೇ ರೈತರಿಂದ ನಿಗದಿತ ದರದಲ್ಲಿ ಹಣ್ಣು, ತರಕಾರಿಯನ್ನು ಖರೀದಿಸಿ ಗ್ರಾಹಕರಿಗೆ ಅರ್ಹ ದರದಲ್ಲಿ ವಿತರಿಸಲಾಗುತ್ತಿದೆ. ಅಲ್ಲದೇ ಸಂಘದಲ್ಲಿ ಒಟ್ಟು 1333 ಸದಸ್ಯರಿದ್ದು, ಕಳೆದ ವರ್ಷಗಳಿಂದ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಉಪಾಧ್ಯಕ್ಷ ಮಲ್ಲಂಡ ಮಧುದೇವಯ್ಯ ಮಾತನಾಡಿ, ರಾಜ್ಯದಲ್ಲಿ ಮಾವು ಬೆಳೆಯುವವರ ಸಂಖ್ಯೆ ಶೇ.40 ಕಡಿಮೆಯಾಗಿದೆ. ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲೆಡೆ ಮಾವು ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ನಡೆಯುವ ಮಾವು ಮೇಳದಲ್ಲಿ 10-15 ತಳಿಗಳು ಇರಲಿದೆ. ಅಲ್ಲದೆ ಕಸಿಗಿಡಗಳ ಮಾರಾಟ, ವಿವಿಧ ಬಗೆಯ ಮಾವು ಮತ್ತು ಹಲಸು ಹಣ್ಣಿನ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಾಪ್‍ಕಾಮ್ಸ್ ನ ನಿರ್ದೇಶಕರಾದ ಎಸ್.ಪಿ.ಪೊನ್ನಪ್ಪ, ಕೆ.ಎಂ.ಮನೋಹರ್, ಹೆಚ್.ಎಂ.ಸುಧೀರ್, ಸಿಇಓ ರೇಷ್ಮ ಉಪಸ್ಥಿತರಿದ್ದರು.