ಮೇಕೇರಿರ ಡಿ. ಅರುಣ್ ಕುಮಾರ್, ಅಧ್ಯಕ್ಷರು: ಗ್ರಾ.ಪಂ. ಚೆನ್ನಯ್ಯನ ಕೋಟೆ
ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮೇಕೇರಿರ ಡಿ. ಅರುಣ್ ಕುಮಾರ್ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು.
“ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಮೇಕೇರಿರ ಡಿ. ಅರುಣ್ ಕುಮಾರ್ “ನನ್ನ ವಿದ್ಯಾಭ್ಯಾಸದ ನಂತರ ನಾನು ಉದ್ಯೋಗ ನಿಮಿತ್ತ ಬೆಂಗಳೂರಿನ ಮಧರ್ ಡೈರಿನಲ್ಲಿ 20 ವರ್ಷಗಳ ಕಾಲ ಬೂತ್ ಇನ್‌ಚಾರ್ಜ್ ಆಗಿ ಕೆಲಸ ನಿರ್ವಹಿಸಿದ್ದೆ. ನಂತರ ಹುಟ್ಟೂರಿಗೆ ಮರಳಿ ತಂದೆಯೊಂದಿಗೆ ಕೃಷಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡೆ. ಆದರೊಂದಿಗೆ ರಾಜಕೀಯ ಕ್ಷೇತ್ರದಲ್ಲಿ ಕೂಡಾ ಸಕ್ರಿಯಗೊಂಡು ನಾನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾದೆ. ಈ ಸಂದರ್ಭ ನಮ್ಮ ಚೆನ್ನಯ್ಯನಕೋಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಪಕ್ಷದ ಪ್ರಾಬಲ್ಯ ಹೆಚ್ಚಾಗಿತ್ತು. ಹಾಗಾಗಿ ಪಕ್ಷ ಸಂಘಟನೆಗಾಗಿ ನನ್ನ ತಂದೆಯವರಾದ ಎಂ.ಎಂ. ದೇವಯ್ಯ ಹಾಗೂ ನನ್ನ ಮಿತ್ರರಾದ ಪುತ್ರ ಪೂಣಚ್ಚರೊಂದಿಗೆ ಶ್ರಮಿಸಿದ್ದೇನೆ. ಜೊತೆಗೆ ಬಿ.ಜೆ.ಪಿ ಪಕ್ಷದ ಸ್ಥಾನೀಯ ಸಮಿತಿ ಅಧ್ಯಕ್ಷನಾಗಿ 11 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದೇನೆ. ನಮ್ಮ ಅವಧಿಯಲ್ಲಿ ಮೊದಲ ಬಾರಿಗೆ ಚೆನ್ನಯ್ಯನಕೋಟೆ ಗ್ರಾ.ಪಂ ಯಲ್ಲಿ ಬಿ.ಜೆ.ಪಿ ಪಕ್ಷ ಬೆಂಬಲಿತ ಸದಸ್ಯರಾಗಿ ಪುತ್ರ ಪೂಣಚ್ಚ ನಂತರ 2010 ರಲ್ಲಿ ಉಪಾಧ್ಯಕ್ಷರಾಗಿ, 2012 ರಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅದೇ ಸಂದರ್ಭ ನಾನು ಕೂಡಾ ಚುನಾವಣೆಯಲ್ಲಿ ಸ್ಪರ್ದಿಸಿದ್ದು, 7 ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದೆ. ನಂತರ 2 ನೇ ಬಾರಿಗೂ ಸೋಲನ್ನು ಅನುಭವಿಸಿದೆ. 2015 ರ ಚುನಾವಣೆಯಲ್ಲಿ ನಾನು ಗೆದ್ದು ಸದಸ್ಯನಾದೆ. ಪ್ರಸ್ತುತ 2020ರ ಚುನಾವಣೆಯಲ್ಲಿ ಚೆನ್ನಂಗಿ ವಾರ್ಡ್‌ನಿಂದ ಸ್ಪರ್ಧಿಸಿ ಅತ್ಯಧಿಕ ಮತಗಳಿಂದ ಗೆದ್ದು 2 ನೇ ಅವಧಿಗೆ ಅಧ್ಯಕ್ಷನಾಗಿ ಆಯ್ಕೆಯಾದೆ. ಅಲ್ಲದೆ ಈಗ ನಮ್ಮ ಚೆನ್ನಯ್ಯನ ಕೋಟೆ ಗ್ರಾ.ಪಂಯಲ್ಲಿನ 17 ಸದಸ್ಯರಲ್ಲಿ 16 ಸದಸ್ಯರು ಬಿ.ಜೆ.ಪಿ. ಪಕ್ಷದ ಬೆಂಬಲಿತ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಪಕ್ಷದ ಭದ್ರಕೋಟೆಯಾಗಿದ್ದ ಪಂಚಾಯತಿಯನ್ನು ಬಿ.ಜೆ.ಪಿ. ಯ ಭದ್ರಕೋಟೆಯಾಗಿ ಪರಿವರ್ತನೆ ಮಾಡುವಲ್ಲಿ ಪುತ್ರ ಪೂಣಚ್ಚ ಹಾಗೂ ನಾನು ತುಂಬಾ ಶ್ರಮಿಸಿದ್ದೇವೆ. ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕೂಡ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸ ನಮಗೆ ಇದೆ.
2016-2017 ರಲ್ಲಿ ಜಿಲ್ಲಾಧಿಕಾರಿಯಿಂದ ಕಸವಿಲೇವಾರಿ ಘಟಕಕ್ಕೆ 50 ಸೆಂಟ್ ಜಾಗ ಮಂಜೂರಾಗಿದ್ದು, ಅನುಮೋದನೆಗೊಂಡಲ್ಲಿ ಶೀಘ್ರದಲ್ಲೇ ಸುಸಜ್ಜಿತ ಘಟಕ ನಿರ್ಮಾಣವಾಗಲಿದೆ. 6 ತಿಂಗಳ ಹಿಂದೆ ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡಲು ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಂಗಡಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಉತ್ತಮ ಸ್ಪಂದನೆ ದೊರೆಯುತ್ತಿದೆ. ಅಲ್ಲದೆ ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡಲು ಪಂಚಾಯಿತಿಯ ಜನರ ಸಹಕಾರ ಮುಖ್ಯವಾಗಿ ಬೇಕಾಗಿದೆ. ಇದಲ್ಲದೆ ಸ್ಚಚ್ಚ ಗ್ರಾಮದ ಬಗ್ಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ, ಜಾಥಾಗಳನ್ನು ಕೂಡಾ ಮಾಡಲಾಗಿದೆ.
ದೊಡ್ಡ ಕೆರೆ, ಚೆನ್ನಯ್ಯನಕೋಟೆ ಕೆರೆ ದಡದಲ್ಲಿ ಕಸಗಳನ್ನು ಹಾಕಲಾಗುತ್ತಿದ್ದು, ಅದಕ್ಕಾಗಿ ಈಗ ಕೆರೆ ಬದಿಯಲ್ಲಿ ಲೈವ್ ಸಿ.ಸಿ. ಕ್ಯಾಮೆರಾವನ್ನು ಅಳವಡಿಸಲಾಗಿದ್ದು. ಅಲ್ಲದೆ ಕೆರೆಯನ್ನು ಅಮೃತ ಸರೋವರ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.
ಅಲ್ಲದೆ ಶುದ್ಧ ಕುಡಿಯುವ ನೀರಿನ ಘಟಕ, 9 ಸೋಲಾರ್ ಬೀದಿ ದೀಪ, ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಸಿ.ಸಿ. ಕ್ಯಾಮೆರಾ, ಹಾಡಿಗಳಿಗೆ ಸೋಲಾರ್ ದೀಪವನ್ನು ಪೂರ್ಣವಾಗಿ ಅಳವಡಿಸಲಾಗಿದೆ. ಸ್ವಚ್ಚ ಭಾರತ ಯೋಜನೆ ಅಡಿಯಲ್ಲಿ 100% ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೂ ಕೆಲವರು ಕಸವನ್ನು ರಸ್ತೆಬದಿಯಲ್ಲಿ ಹಾಕುತ್ತಿರುವುದು ಬೇಸರ ತಂದಿದೆ. ಕೋಟೆ ಪೈಸಾರಿ ಹಾಗೂ ಹೊಳಮಾಳ ಗ್ರಾಮದಲ್ಲಿ ಕಸ ಸಮಸ್ಯೆ ಹೆಚ್ಚಿದೆ. ಪಂಚಾಯಿತಿ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಶಸ್ತಿ ದೊರೆತಿದ್ದು, 2023 ರಲ್ಲಿ ಸ್ವಚ್ಚ ಸರ್ವೇಕ್ಷಣಾ ಗ್ರಾಮೀಣ ಪ್ರಶಸ್ತಿ ದೊರೆತಿದೆ.
ರಸ್ತೆಗಳ ಅಭಿವೃದ್ದಿಗೆ ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ಅವರು 3 ಕೋಟಿಯಷ್ಟು ಮೌಲ್ಯದ ಅನುದಾನವನ್ನು ನೀಡಿದ್ದಾರೆ. ಬಾಕಿ ರಸ್ತೆಗಳಿಗೆ ಅನುದಾನದ ಕೊರತೆ ಇದೆ. ಉದ್ಯೋಗ ಖಾತ್ರಿಯಲ್ಲಿ ಚರಂಡಿ ಕೆಲಸ ಆಗಿದೆ. ಜಲಜೀವನ್ ಮಿಷನ್ ನಲ್ಲಿ ಬೊಟ್ಟಪಾರೆ ಗ್ರಾಮದಲ್ಲಿ 24*7 ನೀರಿನ ವ್ಯವಸ್ಥೆ ಆಗಿದೆ.
ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 7 ಹಾಡಿಗಳಿದೆ. ಬೊಟ್ಟಪಾರೆ, ತಟ್ಟಳ್ಳಿ, ದಿಡ್ಡಳ್ಳಿ, ಬಸವನಹಳ್ಳಿ, ಕೋಟೆಮಂಚಿ, ದೇಯದೊಡ್ಲು, ಕೆಸುವಿನ ಕೆರೆ, ಚಿಕ್ಕರೇಷ್ಮೆ ನಮ್ಮ ಪಂಚಾಯಿತಿಗೆ ಆದಾಯ ಮೂಲ ಕಡಿಮೆ ಇದೆ. ಹಾಡಿಯಲ್ಲಿ ITDP ಅಭಿವೃಧ್ಧಿಯಾಗಿದೆ. 40 ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸರ್ಕಾರದಿಂದ ಎಲ್ಲರಿಗೂ ಹಕ್ಕುಪತ್ರ ವಿತರಿಸಲಾಗಿದೆ.
ವನ್ಯ ಪ್ರಾಣಿ ಉಪಟಳ ಹೆಚ್ಚಿದೆ. ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ ತರಲಾಗುತ್ತಿದೆ. ರೈಲ್ವೇ ಕಂಬಿ ಬೇಲಿಯನ್ನು ಅಳವಡಿಸಲಾಗುತ್ತಿದೆ.
ಸರಿಯಾದ ಸಮಯಕ್ಕೆ ಮನೆ ಮನೆಗೆ ತೆರಳಿ ಕರ ವಸೂಲಿ ಮಾಡಲಾಗುತ್ತಿದೆ. ಉತ್ತಮ ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಅವ್ಯವಸ್ಥೆಯಲ್ಲಿದ್ದ ಅಡಳಿತ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಶ್ರಮಿಸುತ್ತಿದ್ದೇನೆ, ಪಂಚಾಯತಿ ವ್ಯಾಪ್ತಿಯಲ್ಲಿ 6 ವಾರ್ಡ್ ಗಳಿದ್ದು, ಪ್ರತೀ ವಾರ್ಡ್‌ಗೆ ಒಂದೊಂದು ಫೈಲ್ ಮಾಡಿ, ಅದರಲ್ಲಿ ಆಯಾ ವಾರ್ಡ್‌ಗೆ ಸಂಭಂಧಿಸಿದ ಸಮಸ್ಯೆಗಳ ಬಗ್ಗೆ ದಾಖಲೆ ಮಾಡಿ, ಆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕ್ರಮ ಕೈಗೊಳ್ಳಲು ಸುಲಭವಾಗುತ್ತಿದೆ.
ಪಾರದರ್ಶಕ ಆಡಳಿತ ನಿರ್ವಹಣೆ, ಅವ್ಯವಹಾರ ಹಾಗೂ ದುಂದು ವೆಚ್ಚದ ಕಾಮಕಾರಿಗಳು ನಡೆಯದ ಹಾಗೆ ಪಂಚಾಯಿತಿಯನ್ನು ಕೊಂಡೊಯ್ಯಲು ಶ್ರಮಿಸುತ್ತಿದ್ದೇನೆ. ಅಲ್ಲದೆ ನನ್ನ ಅಧಿಕಾರ ಅವಧಿಯಲ್ಲಿ ಪಂಚಾಯಿತಿಯಿಂದ ಪಂಚಾಯಿತಿ ಅಧ್ಯಕ್ಷರಿಗೆ ದೊರಕುವ ಯಾವುದೇ ಸೌಲಭ್ಯವನ್ನು ನಾನು ಬಳಸಿಕೊಳ್ಳುತ್ತಿಲ್ಲ. ಅಲ್ಲದೆ ಪಂಚಾಯಿತಿಯಲ್ಲಿ ನಡೆಯುವ ಎಲ್ಲಾ ಕಾಮಗಾರಿ ಹಾಗೂ ಅನುದಾನಗಳ ಪ್ರತ್ಯೇಕ ದಾಖಲಾತಿಗಳನ್ನು ಕಾಯ್ದಿರಿಸಲಾಗುತ್ತಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕಾಮಗಾರಿಯು ಉತ್ತಮ ಗುಣಮಟ್ಟದಲ್ಲಿ ನಡೆಯಲು ಕುದ್ದಾಗಿ ಪರಿಶೀಲಿಸಿದ ನಂತರವೇ ಅನುದಾನ ಬಿಡುಗಡೆಯನ್ನು ಮಾಡಲಾಗುತ್ತದೆ. ಅಲ್ಲದೆ ಪ್ರತೀ ಕಾಮಗಾರಿಗೂ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯಲೇಬೇಕು.
ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಡಿಜಿಟಲ್ ಗ್ರಂಥಾಲಯವನ್ನು ಮಾಡಲಾಗಿದೆ. ನಮ್ಮ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 9 ಅಂಗನವಾಡಿ 5 ಶಾಲೆಗಳಿವೆ ಗಿರಿಜನ ಆಶ್ರಮ ಶಾಲೆ ಒಂದು ಇದೆ. 130 ಮಕ್ಕಳಿದ್ದಾರೆ. ನಮ್ಮ ಈಗಿನ ಪಂಚಾಯಿತಿ ಕಟ್ಟಡದ ನಿರ್ಮಾಣ ಕಾರ್ಯ 2012ರಲ್ಲಿ ಅರ್ಧದಲ್ಲಿ ಸ್ಥಗಿತವಾಗಿತ್ತು. ಈಗ ಅದನ್ನು ಮುಂದುವರೆಸಲಾಗುತ್ತಿದೆ. ಸುಸಜ್ಜಿತ ಹಾಗೂ ಆಧುನಿಕ ರೀತಿಯಲ್ಲಿ ಗ್ರಾಮಸ್ಥರರಿಗೆ ಅನುಕೂಲವಾಗಲೆಂದು ಹೊಸ ಸಭಾಂಗಣ, ಕಛೇರಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಟೈಲ್ಸ್ ಕಾರ್ಯ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ. ಅಲ್ಲದೆ ಪಂಚಾಯಿತಿ ಕಚೇರಿ ಆವರದಲ್ಲಿ ಇಂಟರ್‌ಲಾಕ್ ಅನ್ನು ಹಾಕಲಾಗುವುದು. ವಿದ್ಯುತ್ ಸಮಸ್ಯೆಯಾಗಿ ವಿದ್ಯುತ್ ಇಲಾಖೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಈಗ ಪಂಚಾಯಿತಿಯ ಕೆಲಸಗಳಗೆ ಸೋಲಾರ್ ಅನ್ನು ಪೂರ್ಣವಾಗಿ ಬಳಸಲಾಗುತ್ತಿದೆ.
ನಾನು ಪಂಚಾಯಿತಿಯ ಆಡಳಿತ ವ್ಯವಹಾರಗಳನ್ನು ಸಮಯಕ್ಕೆ ಸರಿಯಾಗಿ ನಡೆಯಬೇಕು ಹಾಗೂ ಸಾರ್ವಜನಿಕರು 2ನೇ ಬಾರಿಗೆ ಪಂಚಾಯಿತಿಗೆ ಬಂದು ಅವರಿಗೆ ತೊಂದರೆಯಾಗದ ಹಾಗೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅದಲ್ಲದೇ ಪ್ರತೀ ಶುಕ್ರವಾರ ಪೂರ್ಣದಿನ ಪಂಚಾಯಿತಿಯಲ್ಲೇ ಉಪಸ್ಥಿತಿ ಇದ್ದು ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಫಂದಿಸಲು ಸಮಯ ನೀಡುತ್ತಿದ್ದೇನೆ. ಕೆ.ಡಿ.ಪಿ. ಸಭೆಯನ್ನು ನಡೆಸಲಾಗಿದೆ. ಸಿಬ್ಬಂದಿಗಳ ಕುಂದುಕೊರತೆಗಳ ಬಗ್ಗೆ ಖಾಳಜಿ ಮಾಡಲಾಗಿದೆ. ಪಂಚಾಯಿತಿ ಸಿಬ್ಬಂದಿಗಳ ಶಿಸ್ತು ಬದ್ದ ವ್ಯವಸ್ಥೆಯಿದೆ. ಪಂಚಾಯಿತಿಯ ಬಗ್ಗೆ ಕೆಟ್ಟ ಅಭಿಪ್ರಾಯ ಬರಕೂಡದು ಎಂಬುವುದು ನನ್ನ ಅಭಿಮತವಾಗಿದೆ. ಚೆನ್ನಯ್ಯನಕೋಟೆ ಮಾದರಿ ಗ್ರಾಮ ಪಂಚಾಯಿತಿ ಆದರೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊರತೆಯಿದೆ. ಹಾಗೆ ನನ್ನ ಈ ಎಲ್ಲಾ ಕಾರ್ಯಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರವು ಉತ್ತಮವಾಗಿ ದೊರಕುತ್ತಿದೆ”
ಮೂಲತಃ ಕೃಷಿಕರಾಗಿರುವ ಮೇಕೇರಿರ ಡಿ. ಅರುಣ್ ಕುಮಾರ್ ಅವರು ರಾಜಕೀಯ ಕ್ಷೇತ್ರದಲ್ಲಿ ಬಿ.ಜೆ.ಪಿ.ಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಬಸವೇಶ್ವರ ಚೆನ್ನಂಗಿ ದೇವಾಲಯ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೇಕೇರಿರ ಡಿ. ಅರುಣ್ ಕುಮಾರ್‌ರವರ ಕುಟುಂಬ ಪರಿಚಯ:
ಮೇಕೇರಿರ ಡಿ. ಅರುಣ್ ಕುಮಾರ್‌ರವರ ತಂದೆ: ದಿ. ಎಂ.ಎಂ. ದೇವಯ್ಯ. ತಾಯಿ: ಎಂ.ಡಿ. ಬೇಬಿ (ತಾಮನೆ: ಕಾವಡಿಚಂಡ) ಪತ್ನಿ: ಎಂ. ಎ. ಲಲಿತ (ಗೃಹಿಣಿ) ಮಗ: ಎಂ.ಎ. ಚಂಗಪ್ಪ - ಬೆಂಗಳೂರಿನಲ್ಲಿ ಉದ್ಯೋಗಿ. ಸೊಸೆ: ಕಲ್ಪಿತ. ಒಬ್ಬ ಸಹೋದರ, ಒಬ್ಬ ಸಹೋದರಿ.
ಮೇಕೇರಿರ ಡಿ. ಅರುಣ್ ಕುಮಾರ್ ಅವರು ಪ್ರಸ್ತುತ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಚೆನ್ನಂಗಿ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ರಾಜಕೀಯ, ಸಹಕಾರ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನ ದಿನಾಂಕ: 01-04-2024
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network