Header Ads Widget

Responsive Advertisement

ಪರಸ್ಪರ ಕೆಸರು ಎರಚಾಟದೊಂದಿಗೆ ಸಂಭ್ರಮಿಸಿದ ಹಳ್ಳಿಗಟ್ಟು ಬೋಡ್ ನಮ್ಮೆ

ಕೆಸರಿನ ಓಕುಳಿಯ ಹಬ್ಬವೆಂದು ಹೆಸರಾದ ಹಾಗೂ ಕಲ್ಲಿನ ಆನೆ ದೇವಸ್ಥಾನಕ್ಕೆ ಮುಖಮಾಡಿ ನಿಂತಿರುವ ರಾಜ್ಯದ ಏಕೈಕ ದೇವಸ್ಥಾನವೆಂದು ಖ್ಯಾತಿ ಪಡೆದಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್ ನಮ್ಮೆ ಮೇ-18 ಶನಿವಾರ ಹಾಗೂ ಮೇ-19 ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಎರಡು ದಿನಗಳ ಬೋಡ್ ನಮ್ಮೆಗೆ  ಶನಿವಾರ ಚಮ್ಮಟೀರ ಬಲ್ಯಮನೆಯಿಂದ ಪೊಲವಂದೆರೆ ಹೊರಡುವ ಮೂಲಕ ಚಾಲನೆ ದೊರೆತು, ಸಂಜೆ ಗುಂಡಿಯತ್ ಅಯ್ಯಪ್ಪ ದೇವರಿಗೆ ವಿಶೇಷ ಅವುಲ್ ಹಾಕಿ, ರಾತ್ರಿ ಚಮ್ಮಟೀರ ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯಮನೆಗಳಿಗೆ ಮನೆಕಳಿ ಹೊರಡುವ ಮೂಲಕ ಹಬ್ಬವನ್ನು ಆಚರಿಸಲಾಯಿತು. ಭಾನುವಾರ ಕುದುರೆ, ಮೊಗ ಹಾಗೂ ಕೆಸರು ಎರಚಾಟದ ಹಬ್ಬವೆಂದೇ ಹೆಸರಾಗಿರುವ ಎರಡನೇ ದಿನದ ಹಬ್ಬ ಭಾನುವಾರ ಅಪರಾಹ್ನ ಚಮ್ಮಟೀರ ಬಲ್ಯ ಮನೆಯಿಂದ ಮೊದಲು ಕುದುರೆ ಹಾಗೂ ಮೊಗ ಹೊರಟು, ನಂತರ ಮೂಕಳೇರ ಬಲ್ಯಮನೆಯಿಂದ ಕುದುರೆ ಹಾಗೂ ಮೊಗ  ಹೊರಡುತ್ತದೆ ಈ ಎರಡೆರಡು ಕುದುರೆ ಹಾಗೂ ಮೊಗಗಳು ಹಾಗೂ ವಿವಿಧ ವೇಷಧಾರಿಗಳು ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದ ಸಮೀಪದ ಕೆರೆಯ ಮೇಲ್ಬಾಗದ ಅಂಬಲದಲ್ಲಿ ಸೇರಿ ಪರಸ್ಪರ ಆಲಂಗಿಸಿಕೊಳ್ಳುತ್ತಾರೆ. ನಂತರ ಊರಿನ ಮಂದಿ ಹತ್ತಿರದ ಕೆರೆಯಲ್ಲಿ ಕೆಸರನ್ನು ತಂದು ಪರಸ್ಪರ ಕೆಸರು ಎರಚಾಡಿಕೊಂಡು ಹಬ್ಬವನ್ನು ಸಂಭ್ರಮಿಸಿದರು.

ಇಲ್ಲಿ ಬೇರೆ ಊರು, ನೆಂಟರು ಹಾಗೂ ಹೆಂಗಸರಿಗೆ ಕೆಸರು ಎರಚುವ  ಸಂಪ್ರದಾಯವಿಲ್ಲ   ಆದರೆ ಎಲ್ಲರು ಮುಕ್ತವಾಗಿ ಸಂಭ್ರಮಿಸಿದರು. ಒಂದೊಂದು ಬೆತ್ತವನ್ನು ನೆಂಟರಿಗೆ ಹೊರಗಿನವರಿಗೆ ನೀಡಿ, ಈ ಬೆತ್ತ ಹಿಡಿದವರಿಗೆ ಯಾರು ಕೆಸರು ಎರಚಲಿಲ್ಲ. ಅಂಬಲದಲ್ಲಿ ಪರಸ್ಪರ ಕೆಸರು ಎರಚಾಟ ಹಾಗೂ ಕುದುರೆ ಮೊಗಗಳು ಹಾಗೂ ವಿವಿಧ ವೇಷಧಾರಿಗಳ ಸಂಭ್ರಮದ ಬಳಿಕ ಭದ್ರಕಾಳಿ  ದೇವಸ್ಥಾನಕ್ಕೆ ತೆರಳಿ ವಿವಿಧ ಆಚರಣೆಯೊಂದಿಗೆ ಮಹಾಪೂಜೆ ಸಲ್ಲಿಸಿ ಕಾಣಿಕೆ ಅರ್ಪಿಸಿಲಾಯಿತು. ಇಲ್ಲಿನ ಪೊಲವಪ್ಪ ಹಾಗೂ ಗುಂಡಿಯತ್ ಅಯ್ಯಪ್ಪ ದೇವಸ್ಥಾನಗಳಿಗೆ ಕೊಡವ ಜನಾಂಗದವರೇ ಪೂಜಾರಿಗಳಾಗಿದ್ದು, ಚಮ್ಮಟೀರ ಹಾಗೂ ಮೂಕಳೇರ ಕುಟುಂಬದ ಪೂಜಾರಿಗಳು ವಿವಿಧ ಕಟ್ಟುಪಾಡುಗಳೊಂದಿಗೆ ಪೂಜಾರಿಗಳಾಗುತ್ತಾರೆ. ಇಲ್ಲಿನ ಭದ್ರಕಾಳಿ ದೇವಸ್ಥಾನದಲ್ಲಿ ಮಾತ್ರ ಅರ್ಚಕರು ಪೂಜೆ ಸಲ್ಲಿಸುತ್ತಾರೆ.