ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತರಾತುರಿಯಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದರ ಹಿಂದೆ ಕೇಂದ್ರ ಹಾಗೂ ಬಿಜೆಪಿ ನಾಯಕರ ಒತ್ತಡವಿದೆ. ಅವರು ಕುಣಿಸಿದಂತೆ ರಾಜ್ಯಪಾಲರು ಕುಣಿಯುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ದುರುದ್ದೇಶಪೂರಿತವಾಗಿ ಅಸ್ಥಿರಗೊಳಿಸಲು ಬಿಜೆಪಿ ರಾಜ್ಯಪಾಲರನ್ನು ಬಳಸಿಕೊಳ್ಳುತಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ಎ. ಹಂಸ ಆರೋಪಿಸಿದ್ದಾರೆ.
ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನಾತ್ಮಕವಾದ ಹುದ್ದೆಯಲ್ಲಿರುವ ಕರ್ನಾಟಕ ರಾಜ್ಯಪಾಲರು ಪೂರ್ವಾಗ್ರಹ ಪೀಡಿತರಾಗಿದ್ದು, ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿಯವರ ಗಣಿ ಹಗರಣದ ವಿರುದ್ಧ ತನಿಖೆ ನಡೆಸಬೇಕೆಂದು ಲೋಕಾಯುಕ್ತ ಸಂಸ್ಥೆ ರಾಜ್ಯಪಾಲರಿಗೆ ಅನುಮತಿ ಕೇಳಿ 10 ತಿಂಗಳಾದರೂ ಮಾನ್ಯ ರಾಜ್ಯಪಾಲರು ಆ ಬಗ್ಗೆ ಸಂಪೂರ್ಣ ಮೌನ ವಹಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಚಿವೆ ಆಗಿದ್ದ ಶಶಿಕಲಾ ಜೊಲ್ಲೆಯವರ ವಿರುದ್ಧದ ತನಿಖೆಗೆ ಅನುಮತಿ ನೀಡಿ ಎಂದು ಕೋರಿದ್ದ ಕಡತವನ್ನೂ ರಾಜ್ಯಪಾಲರು ಮೂಲೆಗೆ ತಳ್ಳಿದ್ದಾರೆ. ಇದು ಸಾಲದು ಎಂಬಂತೆ ಬಿಜೆಪಿ ಮುಖಂಡ ಮುರುಗೇಶ್ ನಿರಾಣಿಯವರ ತನಿಖೆಗೆ ಸಂಬಂಧಿಸಿದ ಕಡತವೂ ರಾಜ್ಯಪಾಲರ ಕಚೇರಿಯಲ್ಲಿ ಧೂಳು ಹಿಡಿಯುತ್ತದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಮೂವರು ಖಾಸಗಿ ವ್ಯಕ್ತಿಗಳು ನೀಡಿರುವ ದೂರನ್ನು ಆಧರಿಸಿ ರಾತ್ರೋ ರಾತ್ರಿ ನೋಟಿಸ್ ಜಾರಿ ಮಾಡಿ ಈಗ ತನಿಖೆಗೆ ನೀಡಲು ಹೊರಟಿರುವ ರಾಜ್ಯಪಾಲರು, ತಾರತಮ್ಯದಿಂದ ಮತ್ತು ಪೂರ್ವಾಗ್ರಹ ಪೀಡಿತರಾಗಿ ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದ್ದು ಇವರಿಗೆ ಒಂದು ಕ್ಷಣವೂ ರಾಜ್ಯಪಾಲರಾಗಿ ಮುಂದುವರೆಯುವ ನೈತಿಕತೆ ಇಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಬಿಜೆಪಿ-ಜೆಡಿಎಸ್ ರಾಜಕೀಯ ಪಕ್ಷಗಳ ಹಿತಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಅವರನ್ನು ಮಾನ್ಯ ರಾಷ್ಟ್ರಪತಿಗಳು ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿರುವ ಹಂಸ, ಸಿ.ಎಂ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಮಂಜೂರಾತಿಯು ಮೋದಿ ಸರ್ಕಾರದಿಂದ ರಾಜಕೀಯ ಮತ್ತು ವೈಯಕ್ತಿಕ ಸೇಡು ತೀರಿಸಿಕೊಳ್ಳುವ ಷಡ್ಯಂತರವಾಗಿದೆ. ರಾಜ್ಯಪಾಲರು ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ. ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯನ್ನು ಸಹಿಸಲಾಗದೆ ಬಿಜೆಪಿಯವರು ಇಂತಹ ಷಡ್ಯಂತ್ರ ನಡೆಸಿದ್ದಾರೆ ಎಂದು ಅವರು ದೂರಿದರು.
135 ಸೀಟ್ ಗೆದ್ದು ಬಹುಮತದಿಂದ ಅಧಿಕಾರಕ್ಕೆ ಬಂದ ಚುನಾಯಿತ ಸರ್ಕಾರವನ್ನು ಉರುಳಿಸುವ ಬಿಜೆಪಿ ಹಾಗೂ ಜೆಡಿಎಸ್ ನಡೆಯನ್ನು ತೀವ್ರವಾಗಿ ಖಂಡಿಸಲಾಗುವುದು. ಇದು ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ನಾಶ ಮಾಡುವ ಪ್ರಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹೆಚ್. ಎ. ಹಂಸ, ಮುಡಾದಲ್ಲಿ ಯಾವುದೇ ಹಗರಣ ನಡೆದಿಲ್ಲ. ಸೈಟ್ ಹಂಚಿಕೆಯಾದಾಗ ಸಿದ್ದಾರಾಮಯ್ಯ ಅವರು ಅಧಿಕಾರದಲ್ಲಿ ಇರಲಿಲ್ಲ. ಆವಾಗ ಬಿಜೆಪಿ ಅಧಿಕಾರದಲ್ಲಿ ಇತ್ತು. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನು ಇಲ್ಲ ಎಂಬುದು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸ್ಪಷ್ಟವಾಗಿ ಗೊತ್ತಿದ್ದರೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಖ್ಯಮಂತ್ರಿಗಳ ಹೆಸರಿಗೆ ಕಳಂಕ ತರುವ ಕೆಲಸ ಕೇಂದ್ರ ಸರ್ಕಾರ ಹಾಗೂ ರಾಜ್ಯದ ವಿರೋಧ ಪಕ್ಷದವರು ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಹಿಂದುಳಿದ, ಶೋಷಿತ ವರ್ಗದವರು, ಬಡವರು, ನಿರ್ಗತಿಕರು ಹಾಗೂ ಸಾಮಾಜಿಕ ನ್ಯಾಯದ ತತ್ವ ಸಿದ್ಧಾಂತದ ಮೇಲೆ ರಾಜ್ಯದ ಎಲ್ಲ ಸಮುದಾಯಗಳ ಏಳಿಗೆಗಾಗಿ ಹಗಲಿರುಳು ಶ್ರಮ ವಹಿಸುತ್ತಿರುವ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹಣಿಯಲು ಆಗದೆ ಹೀಗೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಅವರ ವಿರುದ್ಧ ಮಾಡುತ್ತಿರುವ ಷಡ್ಯಂತ್ರವನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಮುಂದೆ ಜನರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹಂಸ ಅವರು ವಿಶ್ವಾಸ ವ್ಯಕ್ತಪಡಿಸಿದರು.