ರಕ್ತದಾನ ಶ್ರೇಷ್ಠವಾದ ದಾನವಾಗಿದ್ದು, ರಕ್ತದಾನದ ಮೂಲಕ ಅಮೂಲ್ಯ ಜೀವ ರಕ್ಷಿಸಬಹುದಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಕ್ತನಿಧಿ ಕೇಂದ್ರ ಮಡಿಕೇರಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಬಾಲ ಭವನದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರೋಗ್ಯ ವೃದ್ಧಿಗೆ ರಕ್ತದಾನ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ವೈಯಕ್ತಿಕವಾಗಿ ನಾನು ಸಹ 18 ಬಾರಿ ರಕ್ತದಾನ ಮಾಡಿದ್ದೇನೆ ಎಂದು ಎಂ.ಪಿ ಅಪ್ಪಚ್ಚು ರಂಜನ್ ಅವರು ಸಂತಸ ವ್ಯಕ್ತಪಡಿಸಿದರು.
ಒಮ್ಮೆ ರಕ್ತದಾನ ಮಾಡಿದ ಬಳಿಕ ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ಅಪಘಾತವಾದ ಸಂದರ್ಭದಲ್ಲಿ, ಮತ್ತಿತರ ಗಂಭೀರ ಆರೋಗ್ಯ ಪರಿಸ್ಥಿತಿಯ ಸಂದರ್ಭದಲ್ಲಿ ರಕ್ತ ಅತೀ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ರಕ್ತದಾನದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ಶಾಸಕರು ಹೇಳಿದರು.
ನಮ್ಮಿಂದ ಪರರಿಗೆ ಹಣ ಇನ್ನಿತರ ಸಹಾಯ ಮಾಡಲು ಸಾಧ್ಯವಾಗಿಲ್ಲ ಎಂದ ಪರಿಸ್ಥಿತಿಯಲ್ಲಿ ನಾವು ರಕ್ತದಾನ ಮಾಡುವ ಮೂಲಕ ಅತ್ಯುತ್ತಮ ಕೊಡುಗೆ ನೀಡಬಹುದಾಗಿದೆ ಎಂದು ಅಪ್ಪಚ್ಚು ರಂಜನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬದುಕಿನಲ್ಲಿ ಸಂಪಾದನೆಯೇ ಮುಖ್ಯವಲ,್ಲ ದಾನ ಮಾಡುವುದು ಬಹು ಮುಖ್ಯವಾದುದು. ಈ ನಿಟ್ಟಿನಲ್ಲಿ ಬಹಳ ಶ್ರೇಷ್ಠವಾದದ್ದು. ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಪ್ರತಿ ದಿನ ನಿಯಮಿತ ವ್ಯಾಯಾಮ, ಪ್ರಾಣಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಪಂಚದಾದ್ಯಂತ ಕೋವಿಡ್-19 ಸೋಂಕು ಹರಡುತ್ತಿದೆ. ಈ ಸಂಬಂಧ ಸಾರ್ವಜನಿಕರು ಹೆಚ್ಚಿನ ಜಾಗೃತಿ ವಹಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಮತ್ತು ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸಬೇಕು, ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದು ಮತ್ತು ಆಗಾಗ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು ಎಂದು ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್ ಅವರು ಸಲಹೆ ನೀಡಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ದಾನ ಶ್ರೇಷ್ಠವಾದದ್ದು, ಆದರೆ ರಕ್ತದಾನ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠವಾದದ್ದು ಎಂದರು.
ಆರೋಗ್ಯ ಸಂಬಂಧ ಕಠಿಣ ಪರಿಸ್ಥಿತಿಗಳಲ್ಲಿ ರಕ್ತ ಅತ್ಯಂತ ಮುಖ್ಯವಾದುದಾಗಿದೆ. ರಕ್ತದಾನದ ಮೂಲಕ ಜೀವವನ್ನು ಉಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ ಎಂದು ಜಿ.ಪಂ ಅಧ್ಯಕ್ಷರು ನುಡಿದರು.
ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಮಾತನಾಡಿ, ರಕ್ತವನ್ನು ಸ್ವಯಂ ಪ್ರೇರಣೆಯಿಂದ ದಾನ ಮಾಡೋಣ ಮತ್ತು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೊಡುಗೆ ನೀಡೋಣ ಎಂಬ ಘೋಷ ವಾಕ್ಯವನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ. ರಕ್ತದಾನದ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಮುದಾಯ ಆರೋಗ್ಯ ಕಾರ್ಯಕ್ರಮಗಳ ಮುಖ್ಯಸ್ಥರಾದ ಡಾ.ಡೆನ್ನಿಸ್ ಚೌಹಾಣ್ ಅವರು ಕೋವಿಡ್-19 ಪರಿಸ್ಥಿತಿಯಲ್ಲಿ ಕೈಗಳನ್ನು ಪದೇ ಪದೇ ಸಾಬೂನಿನಿಂದ ಅಥವಾ ಸ್ಯಾನಿಟೈಸರ್ ಮುಖಾಂತರ ಸ್ವಚ್ಛಗೊಳಿಸಿಕೊಳ್ಳಬೇಕು. ಕನಿಷ್ಠ 36 ಸೆಕೆಂಡುಗಳ ಕಾಲ ಕೈಗಳನ್ನು ತೊಳೆಯಬೇಕು ಎಂದು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ರವೀಂದ್ರ ರೈ ಅವರು ಮಾತನಾಡಿ ರಕ್ತದಾನ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ರಕ್ತದಾನದ ಮಹತ್ವವನ್ನು ಜನರು ಅರಿತುಕೊಳ್ಳಬೇಕು ಎಂದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾದ ಪಿ.ಎಂ.ಸಂದೀಪ್ ಅವರು ಮಾತನಾಡಿ ರಕ್ತದಾನ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಸೇರಿದಂತೆ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಕಲೀಲ್, ಹುಸೇನ್ ಸಾಹೇಬ್, ಹ್ಯಾರಿಸ್ ಕೆ.ಎ, ದಿಲೀಪ್, ಜಗದೀಶ್ ಬಿ.ಕೆ, ಶಶಿಧರ್ ಎಂ.ಪಿ ಅವರನ್ನು ಸನ್ಮಾನಿಸಲಾಯಿತು.
ಜೊತೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 21 ನೇ ವಿಶ್ವ ದೃಷ್ಠಿ ದಿನದ ಘೋಷವಾಕ್ಯವಾದ ದೃಷ್ಠಿಯಲ್ಲಿ ಭರವಸೆ ಮತ್ತು ಪೋಸ್ಟರ್ನ್ನು ಬಿಡುಗಡೆ ಮಾಡಲಾಯಿತು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಇತರರು ಇದ್ದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆನಂದ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಲೀಲಾವತಿ ಅವರು ಪ್ರಾರ್ಥಿಸಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಮುರುಳೀಧರ್ ವಂದಿಸಿದರು.