ಮಡಿಕೇರಿ: ಇಂದು ತೀರ್ಥೋದ್ಭವವಾಗಿದ್ದು, ಇಂದು7 ಗಂಟೆ ನಾಲ್ಕು ನಿಮಿಷಕ್ಕೆ ತಲಾವೇರಿಯಲ್ಲಿ ಕಾವೇರಿ ಮಾತೆ ದರ್ಶನ ನೀಡಿದ್ದಾಳೆ. ಕನ್ಯಾ ಲಗ್ನದಲ್ಲಿ ತೀರ್ಥ ಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ ನೀಡಿದ್ದಾಳೆ. ಕೊರೋನಾ ಹಿನ್ನೆಲೆ ಈ ಬಾರಿ ಹೆಚ್ಚು ಜನ ಸೇರದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಬ್ರಹ್ಮಕುಂಡಿಕೆಯಲ್ಲಿ ಸ್ನಾನಕ್ಕೆ ಅವಕಾಶ ಇಲ್ಲ. ಇನ್ನು ತೀರ್ಥೋದ್ಭವದ ವೇಳೆ ಸೀಮಿತ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, 35 ಸ್ವಯಂ ಸೇವಕರು, ದೇಗುಲ ಸಮಿತಿ ಸದಸ್ಯರು, ಆಯ್ದ ಜನಪ್ರತಿನಿಧಿಗಳು ಮಾತ್ರ ಇದ್ದರು.
ಕುಂಡಿಕೆಯ ಸುತ್ತ ನೆರೆದಿದ್ದ ಭಕ್ತಾದಿಗಳ ಜೈಜೈಮಾತಾ, ಕಾವೇರಿ ಮಾತಾ, ಕಾವೇರಮ್ಮನ ಪಾದಾರವಿಂದಕ್ಕೆ ಗೋವಿಂದ, ಗೋವಿಂದಾ, ಕಾವೇರಮ್ಮನಿಗೆ ಜೈ, ಉಕ್ಕಿ ಬಾ ಕಾವೇರಮ್ಮ ಮುಂತಾದ ಘೋಷಣೆಗಳು ಮುಗಿಲು ಮುಟ್ಟಿತ್ತು. ತೀರ್ಥೋದ್ಭವದಲ್ಲಿ ಭಾಗಿಯಾಗುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ಅರ್ಚಕ ಗೋಪಾಲ ಆಚಾರ್ ಅವರ ನೇತೃತ್ವದಲ್ಲಿ ಎಲ್ಲಾ ಪೂಜಾ ವಿಧಿವಿಧಾನ ನಡೆದಿದೆ. ತೀರ್ಥ ಪ್ರೋಕ್ಷಣೆಗೆ ಕೂಡ ಈ ಬಾರಿ ಅವಕಾಶ ಇಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈಗಾಗಲೇ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಸ್ವಯಂ ಸೇವಕರಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಭಕ್ತರಿಗೂ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ.
ಈ ಬಾರಿ ಮುಂಜಾನೆ 7.03 ಗಂಟೆ ವೇಳೆಗೆ ತೀರ್ಥೋದ್ಭವವಾಗಲಿರುವುದಾಗಿ ಆಗಮ ಪಂಡಿತರು ಭವಿಷ್ಯ ನುಡಿದಿದ್ದರಾದರೂ, ಅವಧಿಗೆ ಒಂದು ನಿಮಿಷ ತಡವಾಗಿ ಮಾತೆ ಕಾವೇರಿಯು ಬ್ರಹ್ಮಕುಂಡಿಕೆಯಲ್ಲಿ ಆವಿರ್ಭವಿಸುವ ಮೂಲಕ ನೆರೆದಿದ್ದ ಭಕ್ತ ಸಮೂಹವನ್ನು ಪುಳಕಿತರನ್ನಾಗಿಸಿದಳು.
ತೀರ್ಥೋದ್ಭವ ಘಟಿಸುತ್ತಿದ್ದಂತೆ ಬ್ರಹ್ಮ ಕುಂಡಿಕೆಯಿಂದ ಅರ್ಚಕರು ತೀರ್ಥವನ್ನು ನೆರೆದಿದ್ದ ಭಕ್ತರ ಮೇಲೆ ಪ್ರೋಕ್ಷಿಸಲಾರಂಭಿಸಿದರು. ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡ ನೆರೆದಿದ್ದ ಭಕ್ತಸ್ತೋಮದಲ್ಲಿ ಧನ್ಯತೆಯ ಭಾವ ಗೋಚರಿಸಿತು. ಆದರೆ ಈ ಬಾರಿ ಕೊರೋನಾದಿಂದಾಗಿ ಕೊಳದಲ್ಲಿ ಸ್ನಾನ ಮಾಡಲು ಅವಕಾಶವಿಲ್ಲದ ಕಾರಣ ಯಾವುದೇ ನೂಕುನುಗ್ಗಲು ಕಂಡು ಬರಲಿಲ್ಲ. ತೀರ್ಥ ಪ್ರೋಕ್ಷಣೆಗೆ ಹಾಗೂ ತೀರ್ಥ ನೀಡಲು ಹೊರಭಾಗದಲ್ಲಿ ವ್ಯವಸ್ಥೆ ಮಾಡಲಾಗಿದ್ದರಿಂದ ಸ್ವಯಂಸೇವಕರು ತೀರ್ಥವನ್ನು ತಂದು ಸುರಿಯುತ್ತಿದ್ದ ದೃಶ್ಯ ಕಂಡುಬಂದಿತು.
ತೀರ್ಥಕುಂಡಿಕೆಯ ಬಳಿ ಅರ್ಚಕ ಸಮೂಹದ ವೇದಘೋಷ, ಮಂತ್ರಪಠಣ ಅನುರಣಿಸುತ್ತಿತ್ತು. ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ಕುಂಕುಮಾರ್ಚನೆ ಸೇರಿದಂತೆ ಪೂಜಾ ಕಾರ್ಯಗಳು ನಡೆದವು. ಮಹಾ ಆರತಿ ಜರುಗುತ್ತಿದ್ದಂತೆಯೇ ಪವಿತ್ರ ಕುಂಡಿಕೆಯಲ್ಲಿ ತೀರ್ಥೋದ್ಭವವಾಯಿತು. ಇತ್ತ ಭಾಗಮಂಡಲ ದೇವಾಲಯದ ತಕ್ಕಮುಖ್ಯಸ್ಥರು ಕಾವೇರಿ ತೀರ್ಥವನ್ನು ಸ್ವೀಕರಿಸಿ ಸಂಪ್ರದಾಯದಂತೆ ಭಾಗಮಂಡಲದ ಭಗಂಡೇಶ್ವರನಿಗೆ ಅಭಿಷೇಕ ಮಾಡಿಸಿದರು.