Header Ads Widget

Responsive Advertisement

ಓ ನನ್ನ ಚೇತನ, ಆಗು ನೀ ಅನಿಕೇತನ!

 {ಇಂದು ಡಿಸೆಂಬರ್ 29. ಕುವೆಂಪು ಜನ್ಮದಿನ. ಆ ವಿಶ್ವ ಮಾನವ ನೆನಪಿನಲ್ಲಿ ಈ ವಿಶೇಷ ಲೇಖನ}


ಮಾನವ ಕುಲಕ್ಕೆ ಮಾರ್ಗದರ್ಶನ ನೀಡಿದ ಮಹಾಕವಿ ರಾಷ್ಟ್ರಕವಿ ಕುವೆಂಪು. ಅವರ ಆದರ್ಶಗಳು ಸಾರ್ವಕಾಲಿಕ. ಕುವೆಂಪು ಅವರ ಪುಣ್ಯಭೂಮಿ ಕವಿಶೈಲ ನಿಜಕ್ಕೂ ಒಂದು ಸ್ಫೂರ್ತಿಧಾಮವಾಗಿದೆ. ಸಾಮಾಜಿಕತೆಯೊಂದಿಗೆ ಆಧ್ಯಾತ್ಮಿಕತೆಯನ್ನು ಸಮ್ಮಿಳಿತಗೊಳಿಸಿದ ಸಾರ್ವಕಾಲಿಕ ಅಗ್ರಗಣ್ಯರು ಕುವೆಂಪು ಅವರು, ಅವರ ಆದರ್ಶಗಳು ಪ್ರತಿಯೊಬ್ಬರ ಬದುಕಿಗೆ ಮಾರ್ಗದರ್ಶನವಾಗಿದೆ.

ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ 29, 1904 - ನವೆಂಬರ್ 11, 1994), ಅವರು ಕನ್ನಡದ ಅಗ್ರಮಾನ್ಯ ಕವಿ. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪ ಕುಲಪತಿಯಾಗಿ ನಿವೃತ್ತರಾದರು.

ಕುವೆಂಪು ಅವರಲ್ಲಿ ಪ್ರಕಟವಾಗುವ ಅದಮ್ಯವಾದ ನಿಸರ್ಗ ಪ್ರೀತಿ ಮೂಲತಃ ಜೀವನ‌ ಪ್ರೀತಿಯ ವಿಸ್ತರಣೆ. ಈ ನಿಸರ್ಗದ ಕುರಿತ ಉತ್ಕಟವಾದ ಹಂಬಲ ಕೇವಲ ಸೌಂದರ್ಯನಿಷ್ಠವಾದುದು ಮಾತ್ರವಲ್ಲ, ಅದನ್ನು ಮೀರಿದ ಆಧ್ಯಾತ್ಮಿಕ ಅನ್ವೇಷಣೆಯ ಪರಿಣಾಮ ಕೂಡ ಆಗಿದೆ. ಮಲೆನಾಡಿನ ನಿಸರ್ಗದ ಚೆಲುವಿನ ಜೊತೆಗೆ ಅದರ ಒಡಲಿನ ಸಾಮಾಜಿಕ ಬದುಕನ್ನು, ಅದರ ಸಾಮಾಜಿಕ ಸ್ಥಿತ್ಯಂತರಗಳನ್ನು ದಾಖಲಿಸುತ್ತ ಬಂದಿದ್ದಾರೆ ಕುವೆಂಪುರವರು.

ಕುವೆಂಪು ಬರಿ ಕವಿಯಲ್ಲ, ಅವರೊಬ್ಬ ರಸಋಷಿ. ಅವರ 'ಶ್ರೀ ರಾಮಾಯಣ ದರ್ಶನಂ' ಒಂದು ಮಹಾಕಾವ್ಯ. ಅಲ್ಲದೆ ಕುವೆಂಪು ಅವರ 'ಕಾನೂರು ಹೆಗ್ಗಡತಿ' ಹಾಗೂ 'ಮಲೆಗಳಲ್ಲಿ ಮದುಮಗಳು' ಜಗತ್ತಿನ ಮಹಾನ್ ಕಾದಂಬರಿಗಳ ಜೊತೆ ಕನ್ನಡದ ಕಾದಂಬರಿಗಳು ಸಹ ತಲೆಎತ್ತಿ ನಿಲ್ಲುವಂತೆ ಮಾಡಿದೆ. 1947 ರಲ್ಲಿ ಮೂಡಿಬಂದ 'ಬೆರಳ್ ಗೆ ಕೊರಳ್' ಎಂಬ ನಾಟಕ ಒಂದು ಅತ್ಯದ್ಭುತ ನಾಟಕವಾಗಿದೆ. 

ಕುವೆಂಪು ಅವರನ್ನು ಬರೀ ಗದ್ಯ, ಸಾಹಿತ್ಯಕ್ಕಷ್ಟೇ ಲೇಖಕರೆಂದು ಅವರನ್ನು ಗುರುತಿಸಲು ಸಾಧ್ಯವಿಲ್ಲ. ಏಕೆಂದರೆ, ಇವರು ಈ ನಾಡು, ಮತ್ತು ಶ್ರೇಷ್ಠ ಸಮಾಜವನ್ನು ಕಟ್ಟಲು ಶ್ರಮಿಸಿದ ಶ್ರೇಷ್ಠ ಸಾಂಸ್ಕೃತಿಕ ನಾಯಕರು. ಕುವೆಂಪು ಅವರು ಬರೀ ಪದ್ಯ, ಗದ್ಯ, ಸಾಹಿತ್ಯವನ್ನು ಬರೆದುಕೊಂಡು ನೆಮ್ಮದಿಯಿಂದ ಇರಬಹುದಿತ್ತು. ಶ್ರೇಷ್ಠ ನಾಡು ಯಾವ ರೀತಿ ಇರಬೇಕು ಎನ್ನುದನ್ನು ತಮ್ಮ ಸಾಹಿತ್ಯದಲ್ಲಿಯೂ ಬಿಂಬಿಸಿದರು. ಸ್ವಾತಂತ್ರ್ಯಾ ನಂತರದ ಗಣರಾಜ್ಯದಲ್ಲಿ ಭಾರತೀಯರು, ಕನ್ನಡಿಗರು ಹೇಗೆ ಇರಬೇಕು ಎಂದು ಬರವಣಿಗೆ ಮೂಲಕ ಸಜ್ಜುಗೊಳಿಸಲು ಮುಂದಾಗಿದ್ದು ವಿಶೇಷ. 

ಆಧ್ಯಾತ್ಮ, ವ್ಯೆಚಾರಿಕತೆ, ಗಾಢವಾದ ನಿಸರ್ಗ ಪ್ರೀತಿಗಳಲ್ಲಿ ಬೇರೂರಿರುವ ಅವರ ಸಾಹಿತ್ಯ ನಮ್ಮ ಪರಂಪರೆಯನ್ನು, ಸಾಮಾನ್ಯ ಜನರ ಬದುಕನ್ನು ನಿರ್ದೇಶಿಸಿದಂತೆಯೇ, ಶೋಷಣೆಗೂ ಒಳಗು ಮಾಡಿದ ಪರಂಪರೆಯನ್ನು ತೀಕ್ಷ್ಣ ಹಾಗು ಚಿಕಿತ್ಸಕ ದೃಷ್ಠಿಯಿಂದ ಕಂಡಿದೆ. ಅಲ್ಲದೆ, ಸರ್ವೋದಯ, ಸಮನ್ವಯ ಮತ್ತು ಪೂರ್ಣ ದೃಷ್ಟಿಯ ಬೆಳಕಿನಲ್ಲಿ ಮನುಷ್ಯನ ವ್ಯಕ್ತಿತ್ವದ ಮುಕ್ತ ಬೆಳವಣಿಗೆಯ ಕಾಳಜಿಯನ್ನೂ ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ಕುವೆಂಪು ಅವರ ಚಿಂತನೆ, ಅವರ ಕೊನೆಯ ವರ್ಷದಲ್ಲಿ, ದ್ವೇಷ, ಭಾಷೆ, ಜಾತಿ, ಮತ ಸಿದ್ಧಾಂತಗಳ ಹಾಗೂ ತಮಗೆ ಅತ್ಯಂತ ಪ್ರಿಯವಾದ ಸಾಹಿತ್ಯದ ಮೇರೆಯನ್ನು ದಾಟಿತ್ತು. ವಿಶ್ವದೃಷ್ಟಿಯನ್ನು ಹೊಂದಿತ್ತು. ಅದರ ಫಲವೇ ವಿಶ್ವಮಾನವ ಸಂದೇಶ, ಇದರ ಗೌರವಾರ್ಥವಾಗಿ ಕುವೆಂಪುರವರಿಗೆ ‘ವಿಶ್ವಮಾನವ’ ಎಂಬ ಬಿರುದು ಬಂದಿದ್ದು ಪ್ರಖರ ಬೆಳಕಿನಷ್ಟೇ ಸತ್ಯ.

'ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು' ಎಂದು ಹೇಳಿದ ರಾಷ್ಟ್ರಕವಿ ಹೆಸರನ್ನು ಕೇಳಿದರೆ ಪ್ರತಿ ಕನ್ನಡಿಗನ ಎದೆಯು ಹರುಷಗೊಳ್ಳುವುದು. ಏಕೆಂದರೆ ಕುವೆಂಪು ಎಂದರೆ ಕೇವಲ ಕನ್ನಡ ಸಾಹಿತ್ಯವಲ್ಲ, ಅವರು ಕನ್ನಡದ ಉಸಿರು.


ಲೇಖಕರು: ಅರುಣ್‌ ಕೂರ್ಗ್



ಕುವೆಂಪುರವರ ವಿಶ್ವಮಾನವ ಗೀತೆ:

ಓ ನನ್ನ ಚೇತನ,

ಆಗು ನೀ ಅನಿಕೇತನ!


ರೂಪರೂಪಗಳನು ದಾಟಿ,

ನಾಮಕೋಟಿಗಳನು ಮೀಟಿ,

ಎದೆಯ ಬಿರಿಯೆ ಭಾವದೀಟಿ,

ಓ ನನ್ನ ಚೇತನ,

ಆಗು ನೀ ಅನಿಕೇತನ!


ನೂರು ಮತದ ಹೊಟ್ಟ ತೂರಿ,

ಎಲ್ಲ ತತ್ತ್ವದೆಲ್ಲೆ ಮೀರಿ,

ನಿರ್ದಿಗಂತವಾಗಿ ಏರಿ,

ಓ ನನ್ನ ಚೇತನ,

ಆಗು ನೀ ಅನಿಕೇತನ!


ಎಲ್ಲಿಯೂ ನಿಲ್ಲದಿರು;

ಮನೆಯನೆಂದೂ ಕಟ್ಟದಿರು;

ಕೊನೆಯನೆಂದೂ ಮುಟ್ಟದಿರು;

ಓ ಅನಂತವಾಗಿರು!

ಓ ನನ್ನ ಚೇತನ,

ಆಗು ನೀ ಅನಿಕೇತನ!


ಅನಂತ ತಾನ್ ಅನಂತವಾಗಿ

ಆಗುತಿಹನೆ ನಿತ್ಯಯೋಗಿ;

ಅನಂತ ನೀ ಅನಂತವಾಗು;

ಆಗು, ಆಗು, ಆಗು, ಆಗು,

ಓ ನನ್ನ ಚೇತನ,

ಆಗು ನೀ ಅನಿಕೇತನ!