Header Ads Widget

ಸರ್ಚ್ ಕೂರ್ಗ್ ಮೀಡಿಯ

ತಲಕಾವೇರಿ ಗಜಗಿರಿಯಲ್ಲಿ ಭೂ ಕುಸಿತ; ಜಿಎಸ್‍ಐ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಭೆ


ಕಳೆದ ಆಗಸ್ಟ್ನಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಸಂಭವಿಸಿದ ಭೂಕುಸಿತ ಸಂಬಂಧ ಸ್ಥಳ ಅಧ್ಯಯನ ನಡೆಸಿದ್ದ ಜಿಎಸ್ಐ ವಿಜ್ಞಾನಿಗಳು ಹಾಗೂ ಅಧಿಕಾರಿಗಳ ಜೊತೆ ತಲಕಾವೇರಿಯ ಅರಣ್ಯ ಮಂದಿರದಲ್ಲಿ ಸೋಮವಾರ ಸಭೆ ನಡೆಯಿತು.
ಸಭೆಯಲ್ಲಿ ಆರಂಭದಲ್ಲಿ ಮಾತನಾಡಿದ ಜಿಐಎಸ್ ಪ್ರತಿನಿಧಿ ಅಯಿಜಾಜ್(ಜಮ್ಮು ಮತ್ತು ಕಾಶ್ಮಿರ), ಕಮಲ್ ಕುಮಾರ್(ಉತ್ತರ ಪ್ರದೇಶ) ಮತ್ತು ಸೆಂಥಿಲ್ ಕುಮಾರ್ (ತಮಿಳುನಾಡು) ಅವರು ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಇಂಗುಗುಂಡಿ ತೆಗೆಯಬಾರದು. ಮರಗಿಡಗಳನ್ನು ಹೆಚ್ಚು ಬೆಳೆಸಬೇಕು. ಬ್ರಹ್ಮಗಿರಿ ಬೆಟ್ಟದಲ್ಲಿ ನೀರು ಇಂಗದಂತೆ ತಡೆಯಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೊಡಗು ಜಿಲ್ಲೆಯಲ್ಲಿ 2007, 2018, 2019 ಮತ್ತು 2020 ರಲ್ಲಿ ಭೂ ಕುಸಿತ ಉಂಟಾಗಿ, ಸಾಕಷ್ಟು ನಷ್ಟ ಉಂಟಾಗಿದೆ. ಆದ್ದರಿಂದ ಭೂ ಕುಸಿತ ತಡೆಯುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಅವರು ಹೇಳಿದರು.
ಮಳೆಗಾಲದ ಅವಧಿಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವುದು. ಜೊತೆಗೆ ಶಾಶ್ವತವಾಗಿ ಪುನರ್ ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದು, ಭಾಗಮಂಡಲ ಗ್ರಾ.ಪಂ.ನಲ್ಲಿ ‘ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ’ ಇದ್ದು, ಈ ಸಮಿತಿ ಗಮನಕ್ಕೆ ತಂದು ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತಾಗಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ, ಅರಣ್ಯ, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ, ಭೂ ದಾಖಲೆಗಳ ಇಲಾಖೆಗಳು ಸಮಿತಿಯಲ್ಲಿ ಇದ್ದು, ಸಮಿತಿಯಲ್ಲಿ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಬೇಕು ಎಂಬ ಬಗ್ಗೆ ಸಭೆಯಲ್ಲಿ ಕೇಳಿ ಬಂದಿತು.
ಗ್ರಾ.ಪಂ.ನೂತನ ಆಡಳಿತ ಬಂದ ನಂತರ ಜನಪ್ರತಿನಿಧಿಗಳ ವಿಶ್ವಾಸ ಪಡೆದು ಈ ಭೂಕುಸಿತಕ್ಕೆ ಕಾರಣ ಬಗ್ಗೆ ಮನವರಿಕೆ ಮಾಡಿ, ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು.
ಜಿ.ಪಂ.ಭನ್ವರ್ ಸಿಂಗ್ ಮೀನಾ ಅವರು ಜಿಲ್ಲೆಯ ಪ್ರತಿ ಗ್ರಾ.ಪಂ.ಗಳಲ್ಲೂ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ ರಚಿಸಲಾಗಿದ್ದು, ಆ ಸಮಿತಿಯಲ್ಲಿ ಆಯಾಯ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಅವರು ಸಲಹೆ ಮಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಸಿಂಧೆ ಅವರು ಅರಣ್ಯ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಇಂಗುಗುಂಡಿ ತೆಗೆದಿರುವುದರಿಂದ ಭೂ ಕುಸಿತ ಉಂಟಾಯಿತು ಎಂಬುದು ಕೇಳಿ ಬರುತ್ತದೆ. ಆದ್ದರಿಂದ ಈ ಬಗ್ಗೆ ಮಾಹಿತಿ ಪಡೆದು ಮುಂದಿನ ಮಳೆಗಾಲದ ಒಳಗೆ ಇಂಗುಗುಂಡಿಗಳನ್ನು ಮುಚ್ಚುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯಿಂದ ಭೂ ಕುಸಿತ ಸಂಬಂಧಿಸಿದಂತೆ ಯಾವ ಯಾವ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮಸ್ಯೆ ಇದೆ. ಪಟ್ಟಿ ಮಾಡಿ ಅಂತಹ ಕಡೆಗಳಲ್ಲಿ ಯಾವುದೇ ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಧರಿಸಬೇಕು ಎಂದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಮದನ್ ಮೋಹನ್ ಅವರು ಗಜಗಿರಿಬೆಟ್ಟದ ತಲಕಾವೇರಿಗೆ ತೆರಳುವ ರಸ್ತೆ ಕೆಳಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 75 ಲಕ್ಷ ರೂ.ಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಟೆಂಡರ್ ಹಂತದಲ್ಲಿ ಇದೆ ಎಂದು ಅವರು ಮಾಹಿತಿ ನೀಡಿದರು.

ಇದೇ ಸಂದರ್ಭ ಭಾಗಮಂಡದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವ ಸಂಬಂಧ ಚರ್ಚೆ ನಡೆಯಿತು. ಈ ಬಗ್ಗೆ ಈಗಾಗಲೇ ದೇವಾಲಯ ವ್ಯವಸ್ಥಾಪನಾ ಸಮಿತಿ ಒಪ್ಪಿಗೆ ನೀಡಿದ ನಂತರವೇ ದೇವಾಲಯಕ್ಕೆ ಸೇರಿದ ಜಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಗ್ರಾ.ಪಂ.ಮಟ್ಟದಲ್ಲಿ ನಡಾವಳಿ ಮಾಡಲಾಗಿದೆ. ಆ ದಿಸೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಆಡಳಿತಾಧಿಕಾರಿಯಾದ ನಂತರ ಗ್ರಾ.ಪಂ.ನೂತನ ಪ್ರತಿನಿಧಿಗಳು ಮತ್ತು ದೇವಾಲಯ ಆಡಳಿತ ಮಂಡಳಿ ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ತಾ.ಪಂ.ಇಒ ಲಕ್ಷ್ಮಿ, ತಹಶೀಲ್ದಾರ್ ಮಹೇಶ್, ಲೋಕೋಪಯೋಗಿ ಇಲಾಖೆ ಎಇಇ ಶಿವರಾಮ್, ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಮರಿಸ್ವಾಮಿ, ಭಾಗಮಂಡಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅನಿತಾ ಅವರು ಹಲವು ಮಾಹಿತಿ ನೀಡಿದರು.
ಸಭೆಯ ಬಳಿಕ ಗಜಗಿರಿ ಬೆಟ್ಟ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. ತಡೆಗೋಡೆ ನಿರ್ಮಾಣ ಮತ್ತಿತರ ಬಗ್ಗೆ ಜಿಲ್ಲಾಧಿಕಾರಿ ಅವರು ಮಾಹಿತಿ ಪಡೆದರು.