Header Ads Widget

Responsive Advertisement

ವರ್ತಮಾನದ ಮೋಹಜಾಲಕೆ ಸಿಲುಕಿ ಬರಲಿರುವ ನಾಳೆಯ ಮರೆಯದಿರೋಣ; ಬಾ ಮತ್ತೆ ದೀಪ ಹಚ್ಚೋಣ

{2020ರ ಡಿ. 25ರಂದು ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜಯಂತಿ ವಿಶೇಷ ಲೇಖನ} 


1996ರಲ್ಲಿ ಪ್ರಥಮ ಬಾರಿಗೆ ಪ್ರಧಾನಮಂತ್ರಿಯಾದ ಅಟಲ್ ಬಿಹಾರಿ ವಾಜಪೇಯಿಯವರು. ಆದರೆ ಬಹುಮತದ ಕೊರತೆಯಿಂದ ಕೇವಲ 13 ದಿನಗಳಲ್ಲಿ ಅಧಿಕಾರ ಕಳೆದುಕೊಂಡರು. 1998ರಲ್ಲಿ ಎರಡನೇ ಬಾರಿ ಪ್ರಧಾನಿ ಪಟ್ಟ ಅಲಂಕರಿಸಿದರು. ಎ.ಐ.ಎ.ಡಿ.ಎಂ.ಕೆ ಪರಮೋಚ್ಚ ನಾಯಕ ಜೆ.ಜಯಲಲಿತಾ ಬೆಂಬಲ ವಾಪಸ್ ಪಡೆದ ಕಾರಣ 13 ತಿಂಗಳುಗಳಿಗೆ ಅಧಿಕಾರ ಕಳೆದು ಕೊಳ್ಳಬೇಕಾಯಿತು. 1999ರಲ್ಲಿ ಪ್ರಧಾನಿಯಾಗಿ ಮರು ಆಯ್ಕೆಯಾಗಿ ಪೂರ್ತಿ ಐದು ವರ್ಷಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದು ಎನ್.ಡಿ.ಎ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅವರ ಅಧಿಕಾರಾವಧಿಯಲ್ಲಿ ಅನೇಕ ಮಹತ್ವದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಅನುಷ್ಠಾನಗೊಂಡವು. ಭಾರತವು 1998ರಲ್ಲಿ ರಾಜಸ್ತಾನದ ಪೋಖ್ರಾನ್‌ನಲ್ಲಿ ಸರಣಿ ಪರಮಾಣು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತು.


ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಪ್ರಧಾನಿಯಾಗಿ ಐದು ವರ್ಷ ಪೂರೈಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ವಾಜಪೇಯಿ. 1998 ರಿಂದ 2004 ರವರೆಗೆ ಭಾರತದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವಾಜಪೇಯಿ ಅವರು ಹಲವು ಮೊದಲುಗಳಿಗೆ ನಾಂದಿ ಹಾಡಿದವರು.‌

ಅಟಲ್ ಬಿಹಾರಿ ವಾಜಪೇಯಿಯವರು ಭಾರತದ ಮಾಜಿ ಪ್ರಧಾನಮಂತ್ರಿ, ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ ಹಾಗೂ ಜನನಾಯಕ. ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಇದಕ್ಕೂ ಮುಂಚೆ ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟದ ಅಧ್ಯಕ್ಷರಾಗಿದ್ದರು.

ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಸಮಾನತೆಯ ಹರಿಕಾರರಾದ ವಾಜಪೇಯಿ ಅವರು ದೂರದೃಷ್ಟಿಯು ಭಾರತವನ್ನು ಪ್ರಗತಿ ಪಥದತ್ತ ಕೊಂಡ್ಯೊಯುವ ಗುರಿಯನ್ನು ಹೊಂದಿದ್ದರು. ಭಾರತವನ್ನು ವಿಶ್ವದ ಅತ್ಯಂತ ಬಲಿಷ್ಠ ಮತ್ತು ಸಮೃದ್ಧಿ ದೇಶವನ್ನಾಗಿಸಲು ಕಂಕಣಬದ್ಧರಾಗಿದ್ದರು.

ಸಮಾಜ ಮತ್ತು ದೇಶಕ್ಕಾಗಿ ಅರ್ಧ ಶತಮಾನಗಳಿಗೂ ಹೆಚ್ಚು ಕಾಲ ಇವರು ನೀಡಿದ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. 1994ರಲ್ಲಿ ಇವರನ್ನು ʼಅತ್ಯುತ್ತಮ ಸಂಸದೀಯ ಪಟು’ ಎಂದು ಗೌರವಿಸಲಾಯಿತು. ಅದರ ಪ್ರಮಾಣ ಪತ್ರದ ಒಕ್ಕಣೆ ಹೀಗಿದೆ: ಅವರ ಹೆಸರಿಗೆ ಅನುಗುಣವಾಗಿ ಅಟಲ್‌ಜೀ ಖ್ಯಾತ ರಾಷ್ಟ್ರೀಯ ನಾಯಕರು, ಓರ್ವ ಪ್ರೌಢ ರಾಜಕಾರಣಿ, ನಿಸ್ವಾರ್ಥ ಸಮಾಜ ಸೇವಕ, ವಾಗ್ಮಿ, ಕವಿ ಮತ್ತು ಸಾಹಿತಿ, ಪತ್ರಕರ್ತ ಹಾಗೂ ಬಹುಮುಖ ಪ್ರತಿಭೆಯ ವ್ಯಕ್ತಿತ್ವದ ನಾಯಕ. ಅಟಲ್‌ಜೀ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ. ಅವರ ಕಾರ್ಯಗಳು ರಾಷ್ಟ್ರೀಯತೆಗೆ ಬದ್ಧವಾಗಿ ಪ್ರತಿಧ್ವನಿಸುತ್ತವೆ.


ಮಾಜಿ ಪ್ರಧಾನಮಂತ್ರಿ ಮತ್ತು ಭಾರತೀಯ ಜನತಾಪಕ್ಷದ ಹಿರಿಯ ಧುರೀಣರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕೇಂದ್ರ ಸರ್ಕಾರ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಿದೆ. ಡಿಸೆಂಬರ್ 25ರಂದು ಈ ಮುತ್ಸದ್ಧಿಯ ಜನ್ಮದಿನ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಹುಟ್ಟುಹಬ್ಬದ ಸುಸಂದರ್ಭದಲ್ಲೇ ಮಹಾನಾಯಕನಿಗೆ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ಭಾರತದ ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಸುವರ್ಣ ಚತುಷ್ಫಥ ರಸ್ತೆ ನಿರ್ಮಾಣ ಯೋಜನೆ ಕೂಡ ವಾಜಪೇಯಿ ಅವರ ಪರಿಕಲ್ಪನೆ. ಪಾಕಿಸ್ಥಾನ ಜತೆಗಿನ ಸಂಬಂಧವನ್ನು ಸುಧಾರಿಸುವುದು ವಾಜಪೇಯಿ ಅವರ ವೈಯಕ್ತಿಕ ಉದ್ದೇಶವಾಗಿತ್ತು. 1970ರ ದಶಕದ ಕೊನೆಯಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾಗಿದ್ದರು. ಆಗಲೇ ಅವರು ಭಾರತ-ಪಾಕಿಸ್ತಾನ ನಡುವಣ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆಯಲು ವೇದಿಕೆ ಸಿದ್ದಗೊಳಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ನಿಷ್ಠೆ, ದಕ್ಷತೆ, ಪ್ರಾಮಾಣಿಕತೆ ಮತ್ತು ಕಾರ್ಯವೈಖರಿಯನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಅವಿವಾಹಿತರಾದ ವಾಜಪೇಯಿ ಅವರು ಉತ್ತಮ ಕವಿಯೂ ಆಗಿದ್ದರು.


ಕವಿ-ಲೇಖಕ-ವಾಗ್ಮಿ:

ಶ್ರೀ ವಾಜಪೇಯಿ ಅವರು ಓರ್ವ ಪತ್ರಕರ್ತರಾಗಿ ವೃತ್ತಿಯನ್ನು ಆರಂಭಿಸಿದರು. 1951ರಲ್ಲಿ ಆ ವೃತ್ತಿಯನ್ನು ಬಿಟ್ಟು ಭಾರತೀಯ ಜನಸಂಘ ಸೇರಿದರು. ಇದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ(N..D.A) ಮುಖ್ಯ ಭಾಗವಾದ ಇಂದಿನ ಭಾರತೀಯ ಜನತಾ ಪಕ್ಷವಾಗಿದೆ. ಅವರೊಳಗೊಬ್ಬ ಕವಿ ಇದ್ದನು. ನಿರಂತರ ರಾಜಕೀಯ ಚಟುವಟಿಕೆಗಳ ನಡುವೆಯೂ ಅವರು ಸಂಗೀತ ಮತ್ತು ಅಡುಗೆ ಬಗ್ಗೆ ವಿಶೇಷ ಒಲವು ಹೊಂದಿದ್ದರು.

ವಾಜಪೇಯಿ ಒಬ್ಬ ವಿಚಾರವಂತ ಲೇಖಕ, ಸಂವೇದನಾಶೀಲ ಕವಿ ಮತ್ತು ಸೋಲರಿಯದ ವಾಗ್ಮಿ, ಇವೆಲ್ಲಕ್ಕಿಂತ ಹೆಚ್ಚಾಗಿ ಓರ್ವ ಉತ್ತಮ ಮನುಷ್ಯ. ಮನುಷ್ಯತ್ವದ ಥರ್ಮಾಮೀಟರ್‌ನಲ್ಲಿ ಅತ್ಯಂತ ವಿಸ್ತಾರದ ಡಿಗ್ರಿವರೆಗೆ ಅವರ ಹೃದಯದ ಮಟ್ಟ ತಲುಪುತ್ತದೆ. ಅವರು ಮೊದಲು ಕವಿ, ಆಮೇಲೆ ರಾಜಕಾರಣಿ. ಅವರ ಆಚಾರ ವಿಚಾರ, ಮಾತುಕತೆ ಇತರೆ ವ್ಯವಹಾರಗಳು ಎಲ್ಲವೂ ಒಬ್ಬ ಕವಿಯಂತಿದ್ದವು ರಾಜಕಾರಣಿಯಂತಿರಲಿಲ್ಲ.

ಸ್ವತಃ ಅಟಲ್ ಬಿಹಾರಿ ವಾಜಪೇಯಿಯವರೇ ಒಂದು ಸಂದರ್ಶನದಲ್ಲಿ ತಮ್ಮ ತಂದೆಯ ಬಗ್ಗೆ ಪ್ರಸ್ತಾಪಿಸುತ್ತ ಹೀಗೆ ಹೇಳಿದ್ದರು, ‘ಆಗೆಲ್ಲ ಕವಿ ಸಮ್ಮೇಳನಗಳ ಭರಾಟೆಯಿತ್ತು. ಆ ಸಮ್ಮೇಳನಗಳಲ್ಲಿ ಹಾಸ್ಯ–ವಿನೋದಗಳದೇ ಪ್ರಾಬಲ್ಯ. ಒಗಟು ಬಿಡಿಸುವವರಿಗೆ ಅಂತ್ಯದಲ್ಲಿ ಪುರಸ್ಕಾರವಿರುತ್ತಿತ್ತು. ಒಮ್ಮೆ ಕವಿಗಳಿಗೆ ತಿಹರೀ ಬೆಡಗು ಬಿಡಿಸುವ ಸವಾಲು ಎದುರಾಯಿತು. ಆಗ ನಮ್ಮ ತಂದೆ ಕೃಷ್ಣ ಬಿಹಾರಿಯವರು ಒಗಟಿನ ರೂಪದ ಕವಿತೆ ರಚಿಸಿ ಹಾಡಿದರು.

ವಾಜಪೇಯಿಯವರ ಕವಿತೆಗಳಲ್ಲಿ ಪರಿಪಕ್ವತೆ ಇತ್ತು. ಜನರ ಮನಸ್ಸನ್ನು ಸೆಳೆಯುತ್ತಿದ್ದವು. ಅವರ ಕವಿತೆಗಳಲ್ಲಿ ಕೇವಲ ರಸವಷ್ಟೇ ಇರಲಿಲ್ಲ. ಅವರ ಭಾಷಣಗಳೂ ಕೂಡ ಕವಿತೆಗಳಂತೆಯೇ ಇದ್ದವು. ಎಲ್ಲರೂ ಅವರ ಭಾಷಣ ಕೇಳಲು ಹೋಗುತ್ತಿದ್ದರು. ಎಂದು ಅಶೋಕ್‌ ಸೀಂಘಾಲರು ಹೇಳುತ್ತಿದ್ದರು.

ವಾಜಪೇಯಿ ಅವರಿಗೆ ತುಂಬಾ ಇಷ್ಟವಾದ ಕವಿತೆಯೆಂದರೆ...


ಸೋಲೊಪ್ಪಲಾರೆ

ಜಗಳ ಕಾಯಲಾರೆ

ಸಮಯದ ಹಣೆಯ ಮೇಲೆ

ಬರೆದು ಅಳಿಸುವೆನು


ಹೊಸ ಹಾಡು ಹಾಡುವೆನು

ಹೊಸ ಹಾಡು ಹಾಡುವೆನು


ಸೋಲಲ್ಲಾಗಲೀ

ಗೆಲುವಿನಲ್ಲಾಗಲೀ

ಕಿಂಚಿತ್ತೂ ಹೆದರೆನು ನಾನು


ಕರ್ತವ್ಯ ಪಥದಲ್ಲಿ ಏನೇ ಸಿಗಲಿ

ಇದೂ ಸರಿಯೇ

ಅದೂ ಸರಿಯೇ


ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಅಪರೂಪದ ಮಹಾ ರಾಜಕೀಯ ನಾಯಕರಲ್ಲಿ ಒಬ್ಬರು. ತಮ್ಮ ಅಸಾಮಾನ್ಯ ವಾಕ್ ಚಾತುರ್ಯ ಮತ್ತು ವಾಕ್‌ಪಟುತ್ವ, ಈ ಮುತ್ಸದ್ದಿ ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ವಾಜಪೇಯಿ, ಬಿಜೆಪಿಯ ಸೌಮ್ಯವಾದಿ ಧುರೀಣರೆಂದು ಗುರುತಿಸಿಕೊಂಡರು.


ವರ್ತಮಾನದ ಮೋಹಜಾಲಕೆ ಸಿಲುಕಿ

ಬರಲಿರುವ ನಾಳೆಯ ಮರೆಯದಿರೋಣ

ಬಾ ಮತ್ತೆ ದೀಪ ಹಚ್ಚೋಣ


ರಾಜಕಾರಣಿ ಹಾಗೂ ಕವಿ ಎರಡೂ ಆಗಿ ಸಾಧನೆ ಮಾಡಿ ಮರೆಯಾದ ಅಜರಾಮರರಾದ ವಾಜಪೇಯಿಯವರ ಈ ಸಾಲುಗಳು ಎಲ್ಲರನ್ನೂ ಯಾವಾಗಲೂ ಕಾಡುತ್ತಿರುತ್ತವೆ. ಭಾರತೀಯರ ಉದ್ದಾರಕ್ಕಾಗಿ ಜನ್ಮತಾಳಿ, ತನ್ನ ಇಡೀ ಜೀವನವನ್ನು ತಾಯಿ ಭಾರತ ಮಾತೆಗೆ ಮುಡುಪಾಗಿಟ್ಟ ಅಟಲ್ ಬಿಹಾರಿ ವಾಜಪೇಯಿಯವರ ಕಾರ್ಯವನ್ನು ಎಷ್ಟು ನೆನೆದರೂ ಸಾಲದು.


ಲೇಖಕರು: ಅರುಣ್‌ ಕೂರ್ಗ್


Search Coorg Media: Coorg's Largest Online Media Network