Ad Code

Responsive Advertisement

ಪ್ರಜಾಪ್ರಭುತ್ವದಲ್ಲಿ ಮತದಾರರೇ ಶ್ರೇಷ್ಠ. ಮತಗಳನ್ನು ಮಾರಿಕೊಳ್ಳಬೇಡಿ


ಗ್ರಾಮದೊಳಗಿನ ಒಗ್ಗಟ್ಟು ಮುಂದುವರಿಯಬೇಕಾದರೆ ರಾಜಕೀಯ ರಹಿತ ಸ್ವತಂತ್ರ ಅಭ್ಯರ್ಥಿಗಳು ಜಯಗಳಿಸಿ ಗ್ರಾಮ ರಾಜ್ಯವನ್ನು ರಾಮ ರಾಜ್ಯನ್ನಾಗಿ ಪರಿವರ್ತಿಸಲು ಈ ಗ್ರಾಮ ಪಂಚಾಯಿತಿ ಚುನಾವಣೆಗೆ ಜನರ ಸಹಕಾರ ಬೇಕಾಗಿದೆ. ಗ್ರಾಮ ಮಟ್ಟದ ಬಹು ದೊಡ್ಡ ಪ್ರಜಾಪ್ರಭುತ್ವದ ಹಬ್ಬವನ್ನು ನಾವು ವಿಜೃಂಭಣೆಯಿಂದ ಆಚರಿಸಬೇಕಾಗಿದೆ. 

    ಗ್ರಾಮಗಳು ಭಾರತೀಯ ಸಮಾಜದ ಬೆನ್ನೆಲುಬು. ಗ್ರಾಮದ ಉದಯ ಸಾಮಾಜಿಕ ವಿಕಾಸದ ಒಂದು ಮಹತ್ತ್ವದ ಹಂತ. ಅನಾಗರಿಕ ಮಾನವರು ನಾಗರಿಕತೆಯೆಡೆಗೆ ಮುನ್ನೆಡೆದ ಹೆಜ್ಜೆಯನ್ನದು ಗುರುತಿಸುತ್ತದೆ. ಸಂಸ್ಕೃತಿಯ ವೃದ್ಧಿಯೂ ಪೋಷಣೆಯೂ ಗ್ರಾಮವ್ಯವಸ್ಥೆಯಿಂದ ಸಾಧ್ಯವಾಯಿತೆನ್ನಬಹುದು. ಗ್ರಾಮಗಳು ಪ್ರಾಚೀನ ಭಾರತದಲ್ಲಿ ಸಮಾಜದ ಮೂಲಘಟಕವಾಗಿತ್ತು. ಇಂದಿಗೂ ಪ್ರಪಂಚದ ಮುಕ್ಕಾಲುಪಾಲು ಜನರನ್ನು ಗ್ರಾಮಗಳು ಪೋಷಿಸುತ್ತಿವೆ. ಅಲ್ಲದೆ, ಉಳಿದ ಮತ್ತೊಂದು ಪಾಲಿನವರಿಗೆ ಆಹಾರವನ್ನೂ ಕಚ್ಚಾ ಸಾಮಗ್ರಿಯನ್ನೂ ಒದಗಿಸುತ್ತವೆ. 

    ಸಂವಿಧಾನದ 73 ನೇ ತಿದ್ದುಪಡಿಯಂತೆ ಕರ್ನಾಟಕ ಸರಕಾರವು ಕರ್ನಾಟಕ ಪಂಚಾಯತಿ ರಾಜ್ ಕಾಯಿದೆ 1993 ನ್ನು ಜಾರಿಗೆ ತಂದಿದ್ದು ತ್ರಿಸ್ತರದ ಪಂಚಾಯತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ತಳಮಟ್ಟದಲ್ಲಿ ಗ್ರಾಮ ಪಂಚಾಯತಿ, ಮಧ್ಯಮದಲ್ಲಿ ತಾಲೂಕು ಪಂಚಾಯತಿ ಮತ್ತು ಮೇಲ್ಮಟ್ಟದಲ್ಲಿ ಜಿಲ್ಲಾ ಪಂಚಾಯತಿಗಳ ರಚನೆಯಾಗಿದೆ. ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಿಗೆ ರಾಜಕೀಯ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸಲು ಅವಕಾಶ ನೀಡಲಾಗಿದ್ದರೆ, ಕಾಯಿದೆಯ ಪ್ರಕರಣ 7(2) ರಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳನ್ನು ಪಕ್ಷದ ಆಧಾರದ ಮೇಲಲ್ಲದೆ ಗೊತ್ತುಪಡಿಸಬಹುದಾದಂತಹ ನಿಯಮಗಳಿಗೆ ಅನುಸಾರವಾಗಿ ಮತದಾನ ನಡೆಸತಕ್ಕುದ್ದು ಎಂಬುದಾಗಿ ಉಲ್ಲೇಖಿಸಲಾಗಿದೆ. ಇಲ್ಲಿ ಯಾವುದೇ ರಾಷ್ಟ್ರೀಯ ಪಕ್ಷವಾಗಲಿ, ಪ್ರಾದೇಶಿಕ ಪಕ್ಷದ ಅಭ್ಯರ್ಥೀಗಳು ಚಿಹ್ನೆಯನ್ನು ಉಪಯೋಗಿಸಿಕೊಂಡು ಚುನಾವಣೆ ನಡೆಸಲು ಅವಕಾಶ ನೀಡಲಾಗಿರುವುದಿಲ್ಲ. ಇಲ್ಲಿ ಪಕ್ಷಗಳು ಅಥವಾ ಅದಕ್ಕೆ ಸಂಬಂದಿಸಿದ ನೇತಾರರು ತಮ್ಮ ಪಕ್ಷದ ಅಡಿಯಲ್ಲಿ ಅಭ್ಯರ್ಥಿ ಚುನಾವಣೆ ಎದುರಿಸಲು ಕಾನೂನು ಅವಕಾಶ ನೀಡಲಾಗಿರುವುದಿಲ್ಲ.

    ಭಾರತದ ಸಂವಿಧಾನವನ್ನು ರಚಿಸುವ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರ ತತ್ವಗಳಿಗೆ ಆಶಯ ನೀಡುವ ನಿಟ್ಟಿನಲ್ಲಿ ಕರಡು ಸಮಿತಿಯ ತೀರ್ಮಾನದಂತೆ ಸಂವಿಧಾನದ ಅಧ್ಯಾಯ 4 ರಲ್ಲಿ 15 ನಾಮನಿರ್ದೇಶಿತ ತತ್ವಗಳನ್ನು ಅಳವಡಿಸಲಾಗಿದೆ. ಬಹಳ ಮುಖ್ಯವಾಗಿ ಭಾರತದ ಹಳ್ಳಿಗಳನ್ನು ಗಮನದಲ್ಲಿರಿಸಿ ಸ್ವಚ್ಚತೆ, ಆರೋಗ್ಯ, ಸ್ವಾಸ್ಥ್ಯಸಮಾಜ ನಿರ್ಮಾಣ, ಗುಡಿಕೈಗಾರಿಕೆ, ಗ್ರಾಮೀಣ ಪ್ರದೇಶದ ಸ್ವಯಂ ಅಭಿವೃದ್ದಿಯ ಬಗ್ಗೆ ಪ್ರಸ್ತಾವನೆ ಮಾಡಲಾಗಿದೆ. ಇದೇ ತತ್ವದನ್ವಯ ಸಂವಿಧಾನದ 73 ನೇ ತಿದ್ದುಪಡಿ ಪರಿಚ್ಚೇದ 243 ರಿಂದ 243 (ಒ) ತನಕ ಗ್ರಾಮ ಪಂಚಾಯತಿ ಬಗ್ಗೆ ಪ್ರಸ್ತಾವಿಸಲಾಗಿದೆ. ಬಹಳ ಮುಖ್ಯವಾಗಿ ಪಂಚಾಯತಿಗಳ ಸುಗಮ ಮತ್ತು ಪಾರದರ್ಶಕ ಆಡಳಿತಕ್ಕಾಗಿ ಗ್ರಾಮ ಸಭೆಯಂತಹ ಪರಿಕಲ್ಪನೆಯನ್ನು ಮಂಡಿಸಲಾಗಿದೆ.

    ವಿಶ್ವದ 193 ರಾಷ್ಟ್ರಗಳಲ್ಲಿ ಅವರದೇ ಆದಂತಹ ಅರಸೊತ್ತಿಗೆ, ಕಮ್ಯುನಿಷ್ಟ್‌, ಮಿಲಿಟರಿ ಮುಂತಾದ ಆಡಳಿತ ವ್ಯವಸ್ಥೆಗಳನ್ನು ಹೊಂದಿದ್ದು, ನಮ್ಮ ದೇಶಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿಕಲ್ಪನೆಯ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಜಾತಿ-ಭೇಧ, ಬಡವ-ಶ್ರೀಮಂತ, ವಿದ್ಯಾವಂತ-ಅವಿದ್ಯಾವಂತ ಎನ್ನುವ ಭೇದಗಳಿಲ್ಲದೆ ಸರ್ವರಿಗೂ ತನ್ನ ಪ್ರತಿನಿಧಿಯನ್ನು ಚುನಾಯಿಸುವ ಹಕ್ಕನ್ನು ನೀಡುವ ಮೂಲಕ ನಮ್ಮ ಸಂವಿಧಾನ ವಿಶ್ವದಲ್ಲೇ ಸರ್ವಶ್ರೇಷ್ಠವಾದ ಸಂವಿಧಾನವಾಗಿದೆ.

    ಸಂವಿಧಾನಬದ್ಧವಾಗಿ ಬಂದಿರುವ ನಮ್ಮ ಮತದಾನದ ಹಕ್ಕನ್ನು ಪವಿತ್ರ ಕಾರ್ಯವೆಂದು ಪರಿಗಣಿಸಿ ಪ್ರತಿಯೊಬ್ಬರೂ ವಿವೇಚನೆಯಿಂದ ಯಾವುದೇ ಆಮಿಷಗಳಿಗೆ ಬಲಿಯಾಗದೆ ತಮ್ಮ ಮತಗಳನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಘನತೆ ಗೌರವಗಳನ್ನು ಹೆಚ್ಚಿಸಬೇಕಾಗಿದೆ.

    ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾರರ ಸಹಭಾಗಿತ್ವ ಅಗತ್ಯ. ಪ್ರತಿಯೊಬ್ಬರೂ ತಪ್ಪದೆ ಮತಹಾಕಬೇಕು. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಇದರಿಂದ ದೇಶ ಸದೃಢವಾಗಲಿದೆ. ಮತದಾನದ ದಿನ ರಜೆಯ ದಿನ ಅಲ್ಲ. ಸಂವಿಧಾನದತ್ತ ಹಕ್ಕು ಚಲಾಯಿಸುವ ಮತ್ತು ಕರ್ತವ್ಯ ನಿಭಾಯಿಸುವ ಮಹತ್ವದ ದಿನ. ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯುವ ಮಹತ್ವದ ಅವಕಾಶವನ್ನು ಯಾರೂ ಹಾಳು ಮಾಡಿಕೊಳ್ಳಬಾರದು. ತಪ್ಪದೇ  ಮತದಾನದಲ್ಲಿ ಭಾಗವಹಿಸಬೇಕು. ಪ್ರಜಾಪ್ರಭುತ್ವದಲ್ಲಿ ಮತದಾರರೇ ಶ್ರೇಷ್ಠ. ಮತದಾರರಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಮತಗಳನ್ನು ಮಾರಿಕೊಳ್ಳಬೇಡಿ. ತಪ್ಪದೇ  ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡಿ. 


ಲೇಖಕರು: ಆರುಣ್‌ ಕೂರ್ಗ್‌