Header Ads Widget

Responsive Advertisement

ಆರ್ಥಿಕ ಸಾಕ್ಷರತಾ ಸಪ್ತಾಹ ದಿನ


ಭಾರತೀಯ ರಿಸರ್ವ್ ಬ್ಯಾಂಕ್ 2016 ರಿಂದ ಪ್ರತಿ ವರ್ಷ ಆರ್ಥಿಕ ಸಾಕ್ಷರತಾ ಸಪ್ತಾಹವನ್ನು ದೇಶಾದ್ಯಂತ ಆಚರಿಸಿಕೊಂಡು ಬರುತ್ತಿದೆ. ಈ ವರ್ಷ ಫೆ.8 ರಿಂದ 12 ರವರೆಗೆ ಆಚರಿಸಿದ್ದು, ಸರಿಯಾದ ಸಮಯಕ್ಕೆ ಮರುಪಾವತಿ ಮತ್ತು ಕ್ರೆಡಿಟ್ ಸ್ಕೋರ್, ಅಧಿಕೃತ ಸಂಸ್ಥೆಗಳಿಂದ ಸಾಲ ಪಡೆಯುವಿಕೆ ಹಾಗೂ ಜವಾಬ್ದಾರಿಯುತ ಸಾಲ ಪಡೆಯುವಿಕೆ ಆಗಿದ್ದು, ಇದರ ಅಂಗವಾಗಿ ಶುಕ್ರವಾರ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಆರ್ಥಿಕ ಸಾಕ್ಷರತಾ ಸಪ್ತಾಹದ ದಿನ ಆಚರಿಸಲಾಯಿತು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು ಕ್ಷೇತ್ರೀಯ ವಲಯದ ಮುಖ್ಯಸ್ಥರಾದ ಸಿ.ವಿ.ಮಂಜುನಾಥ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸರ್ಕಾರ ಸಾರ್ವಜನಿಕರಿಗೆ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ. ಅದರಲ್ಲಿ ಡಿಜಿಟಲ್ ತಂತ್ರಜ್ಞಾನದಲಿ ಬ್ಯಾಂಕ್ ಸೇವೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳು ಮಹತ್ವ ಪಡೆದಿದೆ. ಜನರು ಇವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಹಾಗೆಯೇ ಅನುತ್ಪಾದಕ ಸಾಲಗಳನ್ನು ಕಡಿಮೆ ಮಾಡಲು ತಿಳಿಸಿದರು.

ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಜೀವನ ಜ್ಯೋತಿ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಜಾರಿಯಲ್ಲಿದ್ದು, ಸಾರ್ವಜನಿಕರು ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯ ಲಾಭ ಪಡೆಯಲು ವಾರ್ಷಿಕವಾಗಿ ರೂ.12 ಕಟ್ಟಿದಲ್ಲಿ, ಅಪಘಾತದಲ್ಲಿ ಮರಣ ಹೊಂದಿದರೆ 2 ಲಕ್ಷ ಪರಿಹಾರ, ಅಪಘಾತದಲ್ಲಿ ಭಾಗಶಃ ಅಂಗವೈಕಲ್ಯ ಸಂಭವಿಸಿದರೆ 1 ಲಕ್ಷ ಪರಿಹಾರ ದೊರೆಯುತ್ತದೆ. ಪ್ರಧಾನಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆಗೆ ವಾರ್ಷಿಕವಾಗಿ ರೂ.330 ಕಟ್ಟಿದರೆ , 18 ರಿಂದ 55 ವಯಸ್ಸಿನವರು ಯಾವುದೇ ಕಾರಣದಿಂದ ಮರಣ ಸಂಭವಿಸಿದಲ್ಲಿ 2 ಲಕ್ಷ ರೂ. ಪರಿಹಾರ ದೊರೆಯುತ್ತದೆ. ಹಾಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಸಮಗ್ರ ಮಾಹಿತಿಯನ್ನು ಸಭೆಗೆ ತಿಳಿಸಿದರು.

ಆರ್ಥಿಕ ಸಾಕ್ಷರತಾ ಸಪ್ತಾಹದ ಅಂಗವಾಗಿ ಜಿಲ್ಲಾ ಅಗ್ರಣೀ ಬ್ಯಾಂಕಿನ ಮುಖ್ಯಸ್ಥರಾದ ಬಾಲಚಂದ್ರ ಅವರು ಮಾತನಾಡಿ ಬ್ಯಾಂಕ್ ಗ್ರಾಹಕರು ಜಾಣ್ಮೆಯಿಂದ ವ್ಯವಹರಿಸಬೇಕು. ಇಂದಿನ ದಿನಗಳಲ್ಲಿ ಬ್ಯಾಂಕುಗಳ ಸೇವೆ ಬಹಳ ಮಹತ್ವದ್ದು, ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ನಬಾರ್ಡ್ನ ಜಿಲ್ಲಾ ವ್ಯವಸ್ಥಾಪಕರಾದ ಶ್ರೀನಿವಾಸ್ ಹಾಗೂ ವೆಬಿನಾರ್ ಮುಖಾಂತರ ಆರ್.ಬಿ.ಐ.ನ ವೆಂಕಟೇಶ್ ಗೋಪಾಲ್ ಮತ್ತು ಗುರುರಾಜ್ ಆಚಾರ್ಯ ಅವರು ಮಾತನಾಡಿದರು. ಸಭೆಯಲ್ಲಿ ಎಫ್ಎಂಸಿ ಕಾಲೇಜಿನ ವಿದ್ಯಾರ್ಥಿಗಳು, ರೈತರು, ಸ್ವ-ಸಹಾಯ ಸಂಘದ ಸದಸ್ಯರು ಮತ್ತು ನವ್ಯೋದ್ಯಮದ ಆಸಕ್ತರು ಪಾಲ್ಗೊಂಡಿದ್ದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ ಅವರು ಸ್ವಾಗತಿಸಿ, ವಂದಿಸಿದರು.