Header Ads Widget

Responsive Advertisement

ಸೂರ್ಯನ ಜನ್ಮದಿನ "ರಥಸಪ್ತಮಿ"

19 ಫೆಬ್ರವರಿ 2021 ಇಂದು ರಥಸಪ್ತಮಿ ವೀಶೆಷ ಲೇಖನ:


ಸೂರ್ಯನಿಲ್ಲದೆ ನಮ್ಮ ಬದುಕಿಲ್ಲ. ಸೃಷ್ಟಿಯಲ್ಲಿರುವ ಎಲ್ಲ ಜೀವಿಗಳ ಅಳಿವು–ಉಳಿವು ಸೂರ್ಯನನ್ನೇ ಆಶ್ರಯಿಸಿದೆ ಎಂದರೆ ಅದೇನೂ ತಪ್ಪಾಗದು. ಹೀಗಾಗಿ ಅವನು ನಮ್ಮ ಪಾಲಿಗೆ ದೇವರೇ ಆಗಿದ್ದಾನೆ. ಇದು ಭೌತಿಕ ಸೂರ್ಯನ ವಿಷಯವಾಯಿತು. ಸೂರ್ಯಾರಾಧನೆಗೆ ಇನ್ನೊಂದು ಆಯಾಮವೂ ಉಂಟು. ಜಗತ್ತಿನ ಮುಂದುವರಿಕೆಗೆ ಚಾಲಕನಾದ ಶ್ರೀ ಸೂರ್ಯ ಭಗವಾನನು ಸಿಂಹ ರಾಶಿಯಿಂದ ಮಕರ ರಾಶಿಗೆ ತನ್ನ ರಥವನ್ನೇರಿ ಹೋಗುತ್ತಾನೆ. ಅಂದರೆ ಇಂದಿಗೆ ಚಳಿಗಾಲವು ಮುಗಿದು ಬೇಸಿಗೆಯ ಕಾಲವು ಪ್ರಾರಂಭವಾಗುವುದು. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು. ಅವನ ರಥದ ಸಾರಥಿ ಅರುಣ. 

ಒಂದೊಂದು ಹಬ್ಬಕ್ಕೂ ಒಂದೊಂದು ಮಹತ್ವ. ಅಂತೆಯೇ ರಥಸಪ್ತಮಿಗೂ ಒಂದು ವಿಶೇಷ ಮಹಿಮೆ ಇದೆ. 'ರಥಸಪ್ತಮಿ' ಎಂದರೆ ಸೂರ್ಯ ದೇವನು ಚಾಂದ್ರಮಾನ ಸಂವತ್ಸರದ ಹನ್ನೊಂದನೇ ಮಾಸದ ಅಂದರೆ ಮಾಘ ಶುಕ್ಲ ಪಕ್ಷದ ಸಪ್ತಮಿ ತಿಥಿ ದಿವಸ ಸಪ್ತಾಶ್ವಗಳಿಂದ ಕೂಡಿದ ರಥವನ್ನೇರುವ ದಿವಸ. ಅಂದಿನಿಂದ ಅಶ್ವಾರೂಢನಾಗಿ ಪ್ರಖರವಾಗಲು ಆರಂಭಿಸುವ ದಿನ. ಇದಕ್ಕೆ 'ಮಾಘ ಸಪ್ತಮಿ' ಎಂತಲೂ ಕರೆಯುತ್ತಾರೆ. ಮಕರ ರಾಶಿ ಪ್ರವೇಶಿಸಿದ ಸೂರ್ಯನು, ಅಂದು ಸಪ್ತಾಶ್ವರಥಾರೋಹಣ ಮಾಡಿದ ಸಂಕೇತವಾಗಿ 'ರಥಸಪ್ತಮಿ ವ್ರತಾಚರಣೆ' ಸಂಪ್ರದಾಯ ಬೆಳೆದು ಬಂದಿದೆ. ಅಂದಿನಿಂದ ಸೂರ್ಯನ ಪ್ರಖರವಾದ ಕಿರಣಗಳು ಇಡೀ ಜಗತ್ತಿನಲ್ಲಿ ಪಸರಿಸಲು ಆರಂಭಿಸುತ್ತವೆ. 

ಸೂರ್ಯನ ಆರಾಧನೆಗೆ ಸಪ್ತಮಿ ತಿಥಿ ಮತ್ತು ಆದಿತ್ಯವಾರ ಶ್ರೇಷ್ಠ. 'ಸಪ್ತ ಜನ್ಮನಿ ಕೃತೇ ಪಾಪಂ ಮುಕ್ತಿರ್ಭವತಿ ತತ್‌ ಕ್ಷಣಾತ್‌' ಎಂಬಂತೆ ಗಂಗಾನದಿಯಲ್ಲಿ ಸ್ನಾನ ಮಾಡಿ ಶುದ್ಧವಾದಂತೆ ಸಪ್ತಮಿ ತಿಥಿಯಂದು ಸೂರ್ಯನನ್ನು ಪೂಜಿಸಿದರೆ ಏಳು ಜನ್ಮದಲ್ಲಿ ಮಾಡಿದ ಪಾಪಗಳು ಕ್ಷಯವಾಗಿ ಆಯುಷ್ಯ, ಆರೋಗ್ಯ, ಸಂಪತ್ತು ಲಭಿಸುತ್ತದೆ ಎಂದು ಪೌರಾಣಿಕದ ಒಂದು ಕಥೆ ತಿಳಿಸುತ್ತದೆ. ಸೂರ್ಯನ ರಥಕ್ಕೆ ಏಳು ಕುದುರೆಗಳು. ಅವುಗಳ ಹೆಸರುಗಳು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ.

ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯನೇ ಆಗಿರುವುದರಿಂದ ಇದೇ 2021ರ ಫೆಬ್ರವರಿ 19ರ ಶುಕ್ರವಾರದಂದು ಸೂರ್ಯ ಆರಾಧನೆಯ ರಥ ಸಪ್ತಮಿ ದಿನವೆಂದು ಆಚರಿಸಲಾಗುತ್ತದೆ. ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆ ಈ ದಿನದಲ್ಲಿ ನಡೆಯುವ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗಿರುತ್ತವೆ.

ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಸರ್ವ ದೇವ-ದೇವತೆಯರಿಗೂ ಸಮಾನ ಪೂಜೆ ಪುನಸ್ಕಾರ ಮತ್ತು ಒಬ್ಬೊಬ್ಬ ದೇವರಿಗೆ ಒಂದೊಂದು ಮಹತ್ವವಿದೆ. ನಮ್ಮ ನಿತ್ಯ ಜೀವನದಲ್ಲಿ ಸಹ ಒಂದೊಂದು ಕಾರ್ಯಕ್ಕೆ ಒಬ್ಬ ಮುಖ್ಯಸ್ಥನಿರುವಂತೆ ದೇವತೆಗಳಲ್ಲಿ ಸಹ ಮುಖ್ಯಸ್ಥರಿದ್ದಾರೆ. ಉದಾಹರಣೆಗೆ: ವಿಘ್ನ ನಿವಾರಣೆಗೆ ಗಣೇಶ, ವಿದ್ಯಾರ್ಜನೆಗೆ ಸರಸ್ವತಿ, ಲಕ್ಷ್ಮೀ ಪ್ರಾಪ್ತಿಗಾಗಿ (ಧನ ಸಂಪಾದನೆಗೆ) ಮಹಾಲಕ್ಷ್ಮೀ, ಮಳೆ ಪಡೆಯಲು ವರುಣ ದೇವ ಇತ್ಯಾದಿ. ಅದರಂತೆ 'ಆರೋಗ್ಯ ಭಾಗ್ಯ'ಕ್ಕಾಗಿ ಮುಖ್ಯ ದೇವರೆಂದರೆ ಸೂರ್ಯ ಹಾಗಾಗಿ ಸೂರ್ಯನ ಜನ್ಮದಿನವನಾಗಿ "ರಥಸಪ್ತಮಿ" ಆಚರಣೆ.

ಸೂರ್ಯ ಆರೋಗ್ಯಕಾರಕ ಮತ್ತು ಜ್ಞಾನಕಾರಕ. ಹೀಗಾಗಿ ನಮ್ಮ ಆರೋಗ್ಯವೂ ಬುದ್ಧಿಯೂ ಜೀವನಕ್ಕೆ ಪೋಷಕವಾಗಲು ಸೂರ್ಯನ ಆರಾಧನೆ ಸಹಕಾರಿ ಎನ್ನುವುದು ನಮ್ಮ ಪರಂಪರೆಯಲ್ಲಿರುವ ನಂಬಿಕೆ. ನಮ್ಮ ದೇಹ–ಮನಸ್ಸುಗಳ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಾಧನೆ ಬೇಕು ಎನ್ನುವುದನ್ನು ರಥಸಪ್ತಮಿಯ ಆಚರಣೆ ಎತ್ತಿತೋರಿಸುತ್ತದೆ. 

ಪ್ರಕೃತಿಯು ಕಾಲಕಾಲಕ್ಕೆ ತನ್ನನ್ನು ಪರಿವರ್ತಿಸಿಕೊಳ್ಳುತ್ತದೆ. ಅದಕ್ಕೆ ಅನುಗುಣವಾಗಿ ಭಾರತೀಯರು ಕಾಲವನ್ನು ಲೆಕ್ಕಾಚಾರವಾಗಿ ಪರಿಗಣಿಸಿದ್ದಾರೆ. ಗಿಡಮರಗಳು ಹಳೆಯ ಎಲೆಗಳನ್ನು ಕೊಡವಿ, ಹೊಸ ಚಿಗುರನ್ನು ಗರಿಗೆದರಿಸಿಕೊಂಡು ಹಚ್ಚಹಸಿರಿನಿಂದ ನಳನಳಿಸುತ್ತದೆ. ಇದನ್ನು ಕಂಡ ಭಾರತೀಯರು ಈ ಎರಡು ತಿಂಗಳಿನ ಕಾಲದ ಅವಧಿಯನ್ನು ಗುರುತಿಸಿ ವಸಂತ ಋುತು ಎಂಬುದಾಗಿ ಕರೆದರು. ಮತ್ತು ಈ ಋುತುವಿನ ಆರಂಭ ಕಾಲವನ್ನು ಯುಗಾದಿ ಎಂದು ಕರೆಯಲಾಯಿತು. ಯಾವಾಗ ಮರಗಿಡಗಳು ತನ್ನಲ್ಲಿರುವ ಹಳತನ್ನು ಕಳಚಿಕೊಳ್ಳಲು ಆರಂಭ ಮಾಡುವುದೋ ಆ ಕಾಲವನ್ನು ಶಿಶಿರ ಎಂಬುದಾಗಿ ಗುರುತಿಸಲಾಯಿತು. ನಿಸರ್ಗ ನಿಯಮವನ್ನು ಅನುಸರಿಸಿ ಕಾಲದಲ್ಲಿ ಪರಿವರ್ತನೆ ಉಂಟಾಗುವುದು. ಒಂದು ಘಟ್ಟದಿಂದ ಇನ್ನೊಂದು ಘಟ್ಟಕ್ಕೆ ಉಂಟಾಗುವ ಸಂಧಿಕಾಲವನ್ನು 'ಪರ್ವ' ಎಂದು ಕರೆದರು. ಒಂದು ವರ್ಷ, ಹನ್ನೆರಡು ತಿಂಗಳು, ಎರಡು ಅಯನಗಳು, ಪಕ್ಷಗಳು, ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇತ್ಯಾದಿಗಳು ಕಾಲವನ್ನು ಅಳೆಯಲು ಮಾನವಾಗಿವೆ. ಇವೆಲ್ಲವೂ ಪ್ರಕೃತಿಯಲ್ಲಿ ಉಂಟಾಗುವ ಪರಿವರ್ತನೆಯನ್ನು ಅವಲಂಬಿಸಿಯೇ ಬಂದದ್ದು.

ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಧರ್ಮರಾಜನಿಗೆ ರಥಸಪ್ತಮಿ ಬಗ್ಗೆ ಹೇಳಿದ ಕಥೆಯಿದೆ. ಯಶೋವರ್ಮನೆಂಬ ರಾಜನಿಗೆ ಹುಟ್ಟಿದ ಮಗನಿಗೆ ಹುಟ್ಟಿನಿಂದಲೇ ರೋಗಿಷ್ಠನಾಗಿದ್ದ. ಈ ಬಗ್ಗೆ ಜ್ಯೋತಿಷಿಗಳಿಂದ ಮಾಹಿತಿ ಪಡೆದು ಸಂಚಿತ ಕರ್ಮದಿಂದ ಬಂದಿರುವ ಕಾಯಿಲೆಗೆ ರಥಸಪ್ತಮಿ ವ್ರತ ಚರಿಸಲು ಹೇಳಿದ್ದರು. ಅದರಂತೆ ಅಂದು ಸೂರ್ಯಾರಾಧನೆ ಮಾಡಲಾಗಿ ರಾಜ ಪುತ್ರನು ಆರೋಗ್ಯವಂತನೂ, ಪ್ರಭಾವಶಾಲಿಯೂ ಆದನು. ಅಲ್ಲದೆ ಪಾಂಡವರು ವನವಾಸದ ಅವಧಿಯಲ್ಲಿ ಶ್ರೀಕೃಷ್ಣನ ಆದೇಶದಂತೆ ಸೂರ್ಯಾರಾಧನೆ ಮಾಡಿ ಆತನಿಂದ ಅಕ್ಷಯ ಪಾತ್ರೆ ಪಡೆದಿದ್ದರು.

ಭೌಗೋಳಿಕವಾಗಿಯೂ ಸುಮಾರು 34 ದಿವಸಗಳ ಹಿಂದೆಯೇ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ 'ಮಕರ ಸಂಕ್ರಮಣ'ವೆಂದು ಕರೆದು, ಎಳ್ಳು-ಬೆಲ್ಲದೊಂದಿಗೆ ಹಬ್ಬ ಆಚರಿಸುತ್ತೇವೆ. ಅಂದರೆ, ಸೂರ್ಯನು ದಕ್ಷಿಣ ಧ್ರುವದ ಪ್ರವಾಸ ಮುಗಿಸಿ ಉತ್ತರ ಧ್ರುವದ ಕಡೆಗೆ ಕೆಳಗಿನಿಂದ ಮೇಲೇರುತ್ತಾನೆ. ಆದ್ದರಿಂದ ಬಿಸಿಲಿನ ಪ್ರಖರತೆ ಸಹ ಕ್ರಮೇಣ ವೃದ್ಧಿಸಿ, ಉತ್ತರಾಯಣ ಆರಂಭದ ಮುನ್ಸೂಚನೆ ಕೊಡುತ್ತಾನೆ. 'ಸೂರ್ಯ ಪ್ರತ್ಯಕ್ಷ ದೇವತಾ' ನಮ್ಮ ಕಣ್ಣಿಗೆ ಕಾಣಿಸುವ ದೇವರೆಂದರೆ ಸೂರ್ಯ ಚಂದ್ರರಿಬ್ಬರೇ. ಪ್ರತ್ಯಕ್ಷ ಕಾಣುವ ದೇವರನ್ನು ಪೂಜಿಸಬೇಕು. ಸೂರ್ಯೋಪಾಸನೆಯಿಂದಲೇ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳು ಶುಕ್ಲ ಯಜುರ್ವೇದವನ್ನು ಸಂಪಾದಿಸಿದರು. ನಿತ್ಯ ಸೂರ್ಯೋಪಾಸನೆ, ಸೂರ್ಯ ನಮಸ್ಕಾರದೊಂದಿಗೆ ಸೂರ್ಯನ ದ್ವಾದಶ ನಾಮಸ್ಮರಣ ಮಾಡಿದರೆ ಸರ್ವರೋಗ ಪರಿಹಾರವಾಗುವುವು.

ಇಡಿಯ ಸೃಷ್ಟಿಯೇ ಪರಮಾತ್ಮನ ಅಧೀನ. ಈ ಪರಮಾತ್ಮನು ಪರಂಜ್ಯೋತಿಯೂ ಹೌದು. ಅವನ ಪ್ರತೀಕವೇ ಸೂರ್ಯ. ಹೀಗಾಗಿ ಭಗವಂತನ ಆರಾಧನೆಯಲ್ಲಿ ನಮ್ಮ ಋಷಿಗಳು ಸೂರ್ಯೋಪಾಸನೆಗೆ ತುಂಬ ಮಹತ್ವವನ್ನು ಕೊಟ್ಟರು ಎನಿಸುತ್ತದೆ. ಸೂರ್ಯನಾರಾಯಣ – ಎಂದೇ ಅವನನ್ನು ಪೂಜಿಸಲಾಗುತ್ತದೆ.

ರಥ ಸಪ್ತಮಿ ದಿವಸ ರೋಗ ನಿವಾರಣೆಯನ್ನು, ದೇಹದಾರ್ಡ್ಯ ಹಾಗೂ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಹೊಂದುತ್ತಾರೆ. ಸೂರ್ಯ ನಮ್ಮ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು. ಸೂರ್ಯದೇವನನ್ನು ಆರಾಧಿಸುವ ಪ್ರಮುಖ ಪರ್ವ ದಿನವೇ ರಥಸಪ್ತಮಿ.


ಲೇಖಕರು: ಕಾನತ್ತಿಲ್‌ ರಾಣಿ ಅರುಣ್‌


Search Coorg Media: Coorg's Largest Online Media Network