ಚೇರಂಬಾಣೆ ಸಮೀಪ ಕೊಟ್ಟೂರ್ ಗ್ರಾಮದ ಭೈಮನ ಕುಟುಂಬಸ್ಥರು ವರ್ಷ ಪ್ರತಿ ನಡೆಸುವ ಎತ್ತು ಪೊರಾಟ್ ಹಬ್ಬ ,ಈ ವರ್ಷವೂ ನೂರಾರು ಕುಟುಂಬಸ್ಥರ ಮತ್ತು ನೆಂಟರಿಷ್ಟರ ಸಮ್ಮುಖದಲ್ಲಿ ಭೈಮನ ಕುಟುಂಬಸ್ಥರ ಕೊಟ್ಟೂರಿನ ನಾಲಕ್ಕು ಕಟ್ಟು ಮನೆಯಲ್ಲಿ ನಡೆಯಿತು.
ಅಲ್ಲಿನ ಹಿರಿಯರು ಮತ್ತು ಕುಟುಂಬದ ಪೂಜಾರಿಯಾದ ಭೈಮನ ತಿಮ್ಮಯ್ಯನವರು ಹೇಳುವಂತೆ
ಮುನ್ನೂರೈವತ್ತು ವರ್ಷಗಳ ಹಿಂದೆ ಕೇರಳದ ಕಣ್ಣೂರಿನ ಹಲವು ಭಾಗಗಳಲ್ಲಿ ಬರಗಾಲ ಬಂದು ಜನರು ತತ್ತರಿಸುತ್ತಿದ್ದ ಕಾಲದಲ್ಲಿ , ಅಲ್ಲಿನ ಬೈತೂರಿನ ಕೋರತಜ್ಜ ಬಂದು ಕೊಡಗಿನ ಲಿಂಗರಾಜನಲ್ಲಿ ಕೇರಳದ ದೇವಾಲಯಕ್ಕೆ ಅಂದರೆ ಇಂದಿನ ಪಯ್ಯೂರಿನ ಈಶ್ವರ ಬೈತುರಪ್ಪ ದೇವಸ್ಥಾನಕ್ಕೆ ಒಂದು ವರ್ಷಕ್ಕೆ ಬೇಕಾಗುವಷ್ಟು ದವಸ ದಾನ್ಯಗಳನ್ನು ನೈವೇದ್ಯಕ್ಕೆ ಬೇಡುತ್ತಾರೆ .ಅದಕ್ಕೆ ಲಿಂಗರಾಜನು ನೀನು ನನ್ನ ಹತ್ತಿರ ಕೇಳಿ ಏನು ಪ್ರಯೋಜನವಿಲ್ಲ ,ತಲಕಾವೇರಿ ಭಾಗಕ್ಕೆ ಹೋಗಿ ಅಲ್ಲಿ ನೆಲೆಸಿರುವ ಕಾವೇರಿಮಾತೆಯನ್ನು ಕೇಳು ಎಂದು ಕಳುಹಿಸಿಬಿಡುತ್ತಾನೆ . ಹಾಗೆ ಕೋರತಜ್ಜನು ತಲಕಾವೇರಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ,ಚೇರಂಬಾಣೆಸಮಿಪ ಭೈಮನ ಮನೆಯ ಹೆಂಗಸೊಬ್ಬಳು ಎದುರಾಗುತ್ತಾಳೆ . ಆ ಮಹಿಳೆ ಕೋರತಜ್ಜನಿಗೆ ಭಕ್ತಿಯಿಂದ ನಮಸ್ಕರಿಸಿ , ಬಂದ ಕಾರಣವನ್ನು ವಿಚಾರಿಸಿದಾಗ ಕೋರತಜ್ಜನು ಬಂದ ವಿಷಯವನ್ನು ವಿವಾರಿಸುತ್ತಾರೆ . ಆಗ ಆ ಹೆಂಗಸು ತಮ್ಮ ಕುಟುಂಬದಲ್ಲಿ ಎಲ್ಲ ಹೆಣ್ಣು ಮಕ್ಕಳೇ ಇರುವುದೆಂದು ,ಗಂಡು ದಿಕ್ಕು ಯಾರಿಲ್ಲವೆಂದು ತಮ್ಮ ಕಷ್ಟವನ್ನು ಹೇಳಿದಾಗ , ಕೋರತಜ್ಜನು ನಿಮ್ಮ ಕುಟುಂಬವು ಪ್ರತಿವರ್ಷ ಈಶ್ವರ ಬೈತುರಪ್ಪನಿಗೆ ದವಸಗಳನ್ನು ನೀಡಿದ್ದಲ್ಲಿ ನಿಮ್ಮ ಅಸೆ ಈಡೇರುವುದೆಂದು ಭರವಸೆ ಕೊಟ್ಟಿದ್ದರು . ಆಗ ಆ ಮಹಿಳೆಯು ಕೋರತಜ್ಜನನ್ನು ತಮ್ಮ ಮನೆಗೆ ಬರಮಾಡಿಕೊಂಡು ಹೋಗಿ ಉಪಚರಿಸಿ , ಅಲ್ಲಿನ ದೇವಸ್ಥಾನಕ್ಕೆ ಒಂದು ವರ್ಷಕ್ಕೆ ಬೇಕಾಗುವಷ್ಟು ಅಕ್ಕಿಯನ್ನು ತಲುಪಿಸುವುದಾಗಿ ಭರವಸೆ ಕೊಟ್ಟರು . ಅಂದಿಂದ ಅಲ್ಲಿನ ಹಿರಿಯರು ಹೇಳುವಂತೆ ಪ್ರತಿ ದಂಪತಿಗಳಿಗೆ ಹೆಚ್ಚಾಗಿ ಗಂಡುಮಕ್ಕಳೇ ಜನಿಸುತಿದ್ದರಂತೆ . ಅದು ಈಗಲೂ ನಡೆಯುತ್ತಿದೆ ಎಂದು ಹೇಳುತ್ತಾರೆ .
ಅದರ ನಡೆಯಂತೆ ಈಗಲೂ ವರ್ಷ ಪ್ರತಿ ಎಲ್ಲ ಕುಟುಂಬಸ್ಥರು ಸೇರಿ ಆರು ಎತ್ತುಗಳಲ್ಲಿ ತಮ್ಮ ಗದ್ದೆಯಲ್ಲಿ ಬೆಳೆದ ದವಸ ಧಾನ್ಯಗಳನ್ನು ಸಂಗ್ರಹಿಸಿ ಪ್ರತಿವರ್ಷ ಫೆಬ್ರವರಿ ಒಂದರಂದು ಭೈಮನ ಮನೆಗೆ ಕೇರಳದಿಂದ ಆಗಮಿಸುವ ಕೋರತಜ್ಜನ ಅಣತಿಯಂತೆ ,ಫೆಬ್ರವರಿ ಹದಿನೇಳನೇ ತಾರೀಕಿಗೆ ಭೈಮನ ಕುಟುಂಬಸ್ಥರೆಲ್ಲ ಸೇರಿ ತಮ್ಮ ಐನ್ ಮನೆಯಲ್ಲಿ ಸೇರಿ ಪೂಜೆ ಸಲ್ಲಿಸಿ ಕಾಲ್ನಡಿಗೆಯಲ್ಲಿ ನಾಪೋಕ್ಲು ಚೋಮಕುಂದ್ ಮಾರ್ಗವಾಗಿ ಪಯ್ಯುರಿಗೆ ಹೊರಡುತ್ತಾರೆ. ಅಲ್ಲಿನ ದೇವಸ್ಥಾನದಲ್ಲಿ ಭೈಮನ ಕುಟುಂಬದವರಿಗೆ ವಿಶೇಷ ಸ್ಥಾನಮಾನವಿದೆ .
ಸುದ್ದಿ-ಚಿತ್ರ: ಪುತ್ತರೀರ ಪಪ್ಪು ತಿಮ್ಮಯ್ಯ