Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಡಿಕೇರಿಗೆ ಆರೋಗ್ಯ ಚಿಕಿತ್ಸೆ ಸಂಬಂಧಿತ ಅಗತ್ಯ ಸೌಲಭ್ಯ - ಸಿಎಂಗೆ ಮನವಿ



ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸೂಪರ್ ಸ್ಪೆಸಾಲಿಟಿ ಆಸ್ಪತ್ರೆ ಪ್ರಾರಂಭಿಸಬೇಕು. ಅಪಘಾತಕ್ಕೀಡಾದ ಗಾಯಾಳುಗಳಿಗೆ ತುರ್ತು ಚಿಕಿತ್ಸೆಗಾಗಿ ಅತ್ಯಾಧುನಿಕ ಸೌಲಭ್ಯದ ಚಿಕಿತ್ಸಾ ಘಟಕ ಆರಂಭಿಸಬೇಕೆಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಶಾಸಕ ಕೆ.ಜಿ.ಬೋಪಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಎಂ.ಎ.ನಿರಂಜನ್, ಡಾ. ಬಿ.ಸಿ.ನವೀನ್, ಡಾ.ಜಯಲಕ್ಷ್ಮಿ ಪಾಟ್ಕರ್ ಕೊಡಗಿಗೆ ಅಗತ್ಯವಾಗಿ ಬೇಕಾದ ವೈದ್ಯಕೀಯ ಸೌಲಭ್ಯಗಳ ಪಟ್ಟಿಯನ್ನು ನೀಡಿ ಬೇಡಿಕೆಗೆ ಸ್ಪಂದಿಸುವಂತೆ ಕೋರಿದರು.
ಸೂಪರ್ ಸ್ಪೆಸಾಲಿಟಿ ಆಸ್ಪತ್ರೆಯ ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಅಂತೆಯೇ ಕೊಡಗಿನಲ್ಲಿ ಅಪಘಾತಕ್ಕೀಡಾದ ಸಂದರ್ಭ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಸೂಕ್ತ ತುರ್ತು ಚಿಕಿತ್ಸಾ ಘಟಕದ ಅಗತ್ಯವಿದೆ. ಪ್ರವಾಸಿ ಜಿಲ್ಲೆಯಾದ್ಯರಿಂದ ಕೊಡಗಿನಲ್ಲಿ ಅಪಘಾತ ಪ್ರಮಾಣ ಹೆಚ್ಚಾಗಿದೆ. ತಿರುವುಗಳಿಂದ ಕೂಡಿರುವ ರಸ್ತೆಗಳಿಂದಾಗಿ ಅಪಘಾತದ ಸಂಖ್ಯೆಯೂ ಹೆಚ್ಚಾಗಿದೆ. ಅಗತ್ಯ ಚಿಕಿತ್ಸಾ ಕೇಂದ್ರ ಸ್ಥಾಪಿಸಿದರೆ ಅಪಘಾತದ ಸಂದರ್ಭ ಚಿಂತಾಜನಕ ಸ್ಥಿತಿಯಲ್ಲಿರುವ ಗಾಯಾಳುಗಳ ಜೀವ ರಕ್ಷಿಸಲು ಸಾಧ್ಯವಿದೆ.
ಹೃದ್ರೋಗಿಗಳು ಪ್ರಸ್ತುತ ಉನ್ನತ ಮಟ್ಟದ ಚಿಕಿತ್ಸೆಗಾಗಿ ಹೊರ ಜಿಲ್ಲೆಯ ಆಸ್ಪತ್ರೆಗಳನ್ನೇ ಅವಲಂಬಿಸುತ್ತಿದ್ದಾರೆ. ಬಡರೋಗಿಗಳೂ ಸೇರಿದಂತೆ ಹೃದಯ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೂಕ್ತ ಗುಣಮಟ್ಟದ ಚಿಕಿತ್ಸಾ ಕೇಂದ್ರ ಪ್ರಾರಂಭಿಸುವಂತೆಯೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕೊಡಗು ಮೆಡಿಕಲ್ ಕಾಲೇಜ್ ಮೂಲಕ ಅಗತ್ಯ ಸೌಲಭ್ಯ ಮಂಜೂರು ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

Search Coorg Media

Coorg's Largest Online Media Network