Header Ads Widget

Responsive Advertisement

ಕಾನ್ ಬೈಲ್ ಪ್ರೌಢಶಾಲೆಯಲ್ಲಿ ವಿಜ್ಞಾನ ದಿನಾಚರಣೆ : ಮೂಲ ವಿಜ್ಞಾನ ಕಲಿಕೆಯಲ್ಲಿ ತೊಡಗಲು ವಿದ್ಯಾರ್ಥಿಗಳಿಗೆ ಪ್ರೇಮಕುಮಾರ್ ಕರೆ

ಸುಂಟಿಕೊಪ್ಪ ಸಮೀಪದ ಕಾನ್ ಬೈಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕ ಎಂ.ವಿ.ಮಂಜೇಶ್, ಶಿಕ್ಷಕರು ಮತ್ತಿತರರು ಇದ್ದರು


ವಿದ್ಯಾರ್ಥಿಗಳು ದೇಶದ ವಿಜ್ಞಾನಿಗಳ ಸಂಶೋಧನೆ ಮತ್ತು ಅವರ ಸಾಧನೆಯ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳುವ ಮೂಲಕ ಮೂಲ ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು ಎಂದು ವಿಜ್ಞಾನ ಕಾರ್ಯಕ್ರಮಗಳ ಸಂವಹನ‌ಸಂಘಟಕರೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಹೇಳಿದರು.

 ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಸುಂಟಿಕೊಪ್ಪ ಸಮೀಪದ ಕಾನ್ ಬೈಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿಜ್ಞಾ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಕುತೂಹಲ ಬೆಳೆಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಹೊಂದಬೇಕು ಎಂದರು.

ವಿಜ್ಞಾನ ಮತ್ತು ನಮ್ಮ ಜೀವನದಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆಯ ಉದ್ದೇಶ.1928 ರ ಫೆಬ್ರವರಿ 28 ರಂದು ಭಾರತದ ವಿಜ್ಞಾನ ಕ್ಷೇತ್ರದಲ್ಲಿ ಸರ್ ಸಿ.ವಿ.ರಾಮನ್ 'ರಾಮನ್ ಎಫೆಕ್ಟ್ ' ಕುರಿತು ಮಾಡಿದ ಅದ್ಭುತ ಆವಿಷ್ಕಾರ ಹಾಗೂ  ಈ ಸಂಶೋಧನೆಗಾಗಿ ಅವರಿಗೆ 1930 ರಲ್ಲಿ ಭೌತಶಾಸ್ತ್ರ ದ ನೋಬಲ್ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ವಿಜ್ಞಾನ ದಿನಾಚರಣೆ ಮೂಲಕ ಭಾರತೀಯ ವಿಜ್ಞಾನ ಕ್ಷೇತ್ರದ ಸಾಧನೆಗೆ ಮಹತ್ತರ ಸ್ಥಾನ ಸಿಕ್ಕಿದೆ ಎಂದು ಪ್ರೇಮಕುಮಾರ್ ತಿಳಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವ ಮೂಲಕ ದೇಶದ ವೈಜ್ಞಾನಿಕ ಮನಸ್ಸಿನ ನಾಗರಿಕರಿಗೆ ಸೂಕ್ತ ಅವಕಾಶ ನೀಡುವುದು ವಿಜ್ಞಾನ ದಿನದ ವಿಶೇಷವಾಗಿದೆ ಎಂದರು.

   ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸ್ವತಃ ತಾವೇ ಉತ್ತಮವಾಗಿ ವಿಜ್ಞಾನ ಪ್ರಯೋಗಗಳನ್ನು ಪ್ರದರ್ಶಿದ್ದನ್ನು ಪ್ರೇಮಕುಮಾರ್ ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಎಂ.ವಿ.ಮಂಜೇಶ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ವೈಜ್ಞಾನಿಕ ಚಟುವಟಿಕೆಗಳ ಮೂಲಕ ಹೊಸ ಹೊಸ ಪ್ರಯೋಗಗಳನ್ನು ಮಾಡುವಂತೆ ಪ್ರೇರೇಪಿಸಲು ಇಂತಹ ವಿಜ್ಞಾನ ವಸ್ತು ಪ್ರದರ್ಶನಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮನ್ನು ಕ್ರಿಯಾಶೀಲ ಚಟುವಟಿಕೆಗಳು ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳುವುರೊಂದಿಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು

ಪ್ರಚಲಿತ ವೈಜ್ಞಾನಿಕ ಸಂಶೋಧನೆಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಅಧ್ಯಯನ ನಡೆಸುವ ಮೂಲಕ ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

  ವಿಜ್ಞಾನ ಶಿಕ್ಷಕಿ ಎನ್.ಕೆ.ಮಾಲಾದೇವಿ ಮಾತನಾಡಿ, ಶಾಲೆಯಲ್ಲಿ ವಿಜ್ಞಾನ ಸಂಘದ ಮೂಲಕ ವಿದ್ಯಾರ್ಥಿಗಳ

ಪ್ರತಿಭಾನ್ವೇಷಣೆಗೆ ವಿಶೇಷ ಒತ್ತು ನೀಡುವ ಉದ್ದೇಶದಿಂದ ವಿವಿಧ ವೈಜ್ಞಾನಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದರು.

ವಿದ್ಯಾರ್ಥಿನಿ ಪಿ.ಪಿ.ಶಂಶೀರಾ,  ವಿಜ್ಞಾನ ವಸ್ತು ಪ್ರದರ್ಶನದಿಂದ ತನ್ನ ಕಲಿಕೆಗೆ ದೊರೆತ ಲಾಭದ ಕುರಿತು ಅನಿಸಿಕೆ ವ್ಯಕ್ತಪಡಿಸಿದಳು.

 ಶಿಕ್ಷಕರಾದ ಕೆ.ಎನ್.ದಿನೇಶ್, ಪಿ.ನವೀನ್ ಕುಮಾರ್, ಎಂ.ವಿ.ದಿವ್ಯ, ಲತಾ ಪೈ, ಜಿ.ಕೆ.ಪಾರ್ವತಿ, ಎಚ್.ಎಲ್.ಸವಿತಾ ಇದ್ದರು.

ವಿಜ್ಞಾನದ ವಿವಿಧ ಸ್ಪರ್ಧೆಯಲ್ಲಿ ವಿಜೇತಗೊಂಡ ವಿದ್ಯಾರ್ಥಿಗಳಿಗೆ ವಿಜ್ಞಾನ ಪುಸ್ತಕವನ್ನು ಬಹುಮಾನ ರೂಪದಲ್ಲಿ ಶಿಕ್ಷಕರು ವಿತರಿಸಿದರು.

ವಿದ್ಯಾರ್ಥಿಗಳು ವಿಜ್ಞಾನ ಮತ್ತು ಪರಿಸರ ಗೀತೆ ಹಾಡಿದರು.

ಇದಕ್ಕೂ ಮೊದಲು ವಿದ್ಯಾರ್ಥಿಗಳು ತಾವು ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ಪ್ರಯೋಗಗಳ ಕುರಿತು ವಿವರಿಸಿದರು.


Search Coorg Media

Coorg's Largest Online Media Network