Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಡಿಕೇರಿಯಲ್ಲಿ ನಡೆದ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿಯಿಂದ ಲೇಖನ ಕೌಶಲ್ಯ ಕಮ್ಮಟ


ಸಮಾಜದಲ್ಲಿ ಭಾಷೆಯು ಸಾಹಿತ್ಯದ ಮೌಲ್ಯವನ್ನು ಹೆಚ್ಚಿಸುವ ಮಾಧ್ಯಮವಾಗಿದ್ದು, ಉದ್ಯೋಗದ ದೃಷ್ಟಿಕೋನದಿಂದಲೂ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕಾಗಿದೆ ಎಂದು ಹೆಸರಾಂತ ಸಾಹಿತಿ ವಸುಧೇಂದ್ರ ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಬರವಣಿಗೆ ಮಾಹಿತಿಯ ಲೇಖನ ಕೌಶಲ್ಯ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

ಭಾಷೆ ಎಂಬುದು ಅಮೃತ ಸಮಾನವಾಗಿದೆ. ವಿದೇಶಗಳಲ್ಲಿ ಶಿಕ್ಷಣದಲ್ಲಿಯೇ ಸಾಹಿತ್ಯ ತಿಳುವಳಿಕೆಗಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹೀಗಾಗಿ ಅಲ್ಲಿನ ಮಕ್ಕಳಿಗೆ ಭಾಷೆ ಸಾಹಿತ್ಯದ ಮಹತ್ವದ ಅರಿವು ಚೆನ್ನಾಗಿದೆ. ಆದರೆ ಭಾರತದಲ್ಲಿ ಶಿಕ್ಷಣದಲ್ಲಿ ಸಾಹಿತ್ಯಿಕ ಶಿಕ್ಷಣ ಪ್ರಾಮುಖ್ಯತೆ ಪಡೆಯದೇ ಇರುವುದರಿಂದಾಗಿ ಸಾಹಿತ್ಯಕ್ಕಿರುವ ಮೌಲ್ಯ ದಿನೇ ದಿನೇ ಕಡಮೆಯಾಗುತ್ತಿದೆ. ಹಿಂದಿನ ತಲೆಮಾರು ಭಾಷೆಗೆ ಪ್ರಾಮುಖ್ಯತೆ ನೀಡಿತ್ತು. ಈಗ ಉದ್ಯೋಗ ಮತ್ತು ಸಂಪಾದನೆಯೇ ಶ್ರೇಷ್ಠ ಎಂಬ ಮನೋಭಾವನೆ ಹೆಚ್ಚುತ್ತಿರುವುದರಿಂದಾಗಿ ಭಾಷೆ ಸಾಹಿತ್ಯ ಹಿಂದಕ್ಕೆ ಸರಿಯುತ್ತಿದೆ ಎಂದು ವಿಷಾಧಿಸಿದರು.

ಸಾಹಿತ್ಯ ಸೇರಿದಂತೆ ಕಲಾಪ್ರಕಾರಗಳು ಮನಸ್ಸಿನ ಸಂತೋಷ, ನೆಮ್ಮದಿಗೆ ಕಾರಣವಾಗುತ್ತಾ ಹೊಸ ಹುಮ್ಮಸು ಮೂಡಿಸುವ ಮಾಧ್ಯಮವಾಗಿದೆ ಎಂದು ಹೇಳಿದ ವಸುಧೇಂದ್ರ ಅವರು ಯಶಸ್ಸಿನ ಹಾದಿ ಸುಲಭ ಸಾಧ್ಯವಲ್ಲ, ಅದಕ್ಕಾಗಿ ಸಾಕಷ್ಟು ಶ್ರಮ ಪಡಲೇಬೇಕಾದ ಅನಿವಾರ್ಯತೆಯಿದೆ. ಲೇಖನ ಬರೆಯುವ ಕಾರ್ಯಾಗಾರಗಳು ಪ್ರತಿಯೋರ್ವ ಲೇಖಕನಲ್ಲಿಯೂ ಸಾಹಿತ್ಯದ ಕಿಡಿ ಹೊತ್ತಿಸಬೇಕು ಎಂದು ಹೇಳಿದರು.

ಭಾಷೆ ಗೊತ್ತಾಗದ ಸ್ಥಳಕ್ಕೆ ತೆರಳಿದಾಗ ಮಾತ್ರ ನಮ್ಮ ಭಾಷೆಯ ಮಹತ್ವ ಅರಿವಾಗುತ್ತದೆ ಎಂದು
ಉದಾಹರಣೆಯೊಂದಿಗೆ ಹೇಳಿದ ವಸುಧೇಂದ್ರ ಅವರು ಸುಲಭವಾಗಿ ಅರ್ಥವಾಗುವ ಭಾಷೆಯಿಂದಾಗಿ ಜೀವನ ಸಹನೀಯವಾಗುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯ ಚಾರಣ ಶಿಖರಗಳೊಂದಿಗೆ ತನ್ನ ಒಡನಾಟ ಸ್ಮರಿಸಿಕೊಂಡ ವಸುಧೇಂದ್ರ ಅವರು ಕೊಡಗಿನಲ್ಲಿ ಏರ್ ಕೂಲಿಂಗ್ ಬೇಡವೇಬೇಡ. ಇಲ್ಲಿನ ಪರಿಸರವೇ ತಂಪಿನ ವಾತಾವರಣವನ್ನು ಕಲ್ಪಿಸಿದೆ. ಇಂಥ ತಾಣಗಳು ಅಪರೂಪ ಎಂದು ಶ್ಲಾಘಿಸಿದರು.

ಅರೆಭಾಷೆ ಸಂಸ್ಕøತಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಕಜೆಗದ್ದೆ ಅವರು ಮಾತನಾಡಿ ಯುವ ಲೇಖಕ, ಲೇಖಕಿಯರ ಮೂಲಕ ಹೊಸತಲೆಮಾರಿನ ತಲ್ಲಣಗಳು, ಜ್ವಲಂತ ಸಮಸ್ಯೆಗಳು ಬರಹ ರೂಪದಲ್ಲಿ ಸಮಾಜಕ್ಕೆ ತಿಳಿಯಬೇಕಾದ ದಿನಗಳಲ್ಲಿ ನಾವಿದ್ದೇವೆ. ಈ ನಿಟ್ಟಿನಲ್ಲಿಯೇ ಅಕಾಡೆಮಿಯು ಲೇಖನ, ಕಥೆ ರಚನೆಯ ಕಮ್ಮಟವನ್ನು ಆಯೋಜಿಸಿದೆ ಎಂದರಲ್ಲದೇ, ಕೊಡಗಿನ ಪ್ರಸ್ತುತ ದಿನಗಳ ಸಂಕಷ್ಟಗಳು ಹೊರಜಗತ್ತಿಗೆ ಬರಹಗಳ ಮೂಲಕ ತಿಳಿಯಬೇಕಾದ ಅನಿವಾರ್ಯತೆಯೂ ಇದೆ ಎಂದರು. ಅರೆಭಾಷೆ ಸಂಸ್ಕøತಿ, ಸಾಹಿತ್ಯ ಅಕಾಡೆಮಿಯು ಭಾಷೆ ಸಂಸ್ಕøತಿಗೆ ಆದ್ಯತೆ ನೀಡಿದೆ ಎಂದು ಅವರು ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಜಗತ್ ತಿಮ್ಮಯ್ಯ ಮಾತನಾಡಿ, ಬರವಣಿಗೆಯಲ್ಲಿ ಬರಹಗಾರನ ವ್ಯಕ್ತಿತ್ವ ಅಡಗಿರುವುದರಿಂದಾಗಿ ಕೆಟ್ಟದ್ದನ್ನು ಬರೆದು ಸಮಾಜಕ್ಕೆ ಕೆಟ್ಟ ಸಂದೇಶ ನೀಡದಿರುವುದೇ ಸೂಕ್ತ ಎಂದು ಕರೆ ನೀಡಿದರು.

ಲೇಖನ ಕೌಶಲ್ಯ ಬರವಣಿಗೆ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಾಗಾರದ ಸಂಯೋಜಕ ಅಕಾಡೆಮಿ ಸದಸ್ಯ ಧನಂಜಯ ಅಗೋಳಿಕಜೆ, ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಡಾ.ಕೆ.ಸಿ.ದಯಾನಂದ, ಸೇರಿದಂತೆ ಇತರ ಸದಸ್ಯರಿದ್ದರು. ಜಿಲ್ಲೆಯ ಹಲವೆಡೆಗಳಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಮ್ಮಟದಲ್ಲಿ ಪಾಲ್ಗೊಂಡಿದ್ದರು.

Search Coorg Media

Coorg's Largest Online Media Network