Ad Code

Responsive Advertisement

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶತಮಾನೋತ್ಸವ: 7.50 ಕೋಟಿ ರೂ. ವೆಚ್ಚದ ಮೂರು ಅಂತಸ್ತಿನ ಕೇಂದ್ರ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ


ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೂರು ವಸಂತಗಳನ್ನು ಪೂರೈಸುತ್ತಿರುವ ಹಿನ್ನೆಲೆ ‘ಶತಮಾನೋತ್ಸವ’ ಸಮಾರಂಭ ಜೂ.4 ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನೋತ್ಸವ ಹಿನ್ನೆಲೆಯಲ್ಲಿ 7.50 ಕೋಟಿ ರೂ. ವೆಚ್ಚದ ಮೂರು ಅಂತಸ್ತಿನ ಕೇಂದ್ರ ಕಚೇರಿ ಕಟ್ಟಡಕ್ಕೆ ಅಂದು ಶಿಲಾನ್ಯಾಸ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು.

1921ರ ಜೂನ್ 28ರಂದು ಸ್ಥಾಪನೆಯಾದ ಈ ಬ್ಯಾಂಕ್ ನೂರಾರು ಸಹಕಾರಿ ಸಂಸ್ಥೆಗಳ ಏಳಿಗೆಗೆ ಕಾರಣವಾಗಿ ರಾಜ್ಯ ಹಾಗೂ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕಾಗಿ ಮುನ್ನಡೆಯುತ್ತಿದೆಯೆಂದು ಹೆಮ್ಮೆಯಿಂದ ನುಡಿದ ಅವರು, ಜೂ.4ರ ಶತಮಾನೋತ್ಸವ ಸಮಾರಂಭದಂದು ಬೆಳಗ್ಗೆ 10 ಗಂಟೆಗೆ ಬ್ಯಾಂಕ್ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, 11 ಗಂಟೆಗೆ ನಗರದ ಕಾವೇರಿ ಹಾಲ್‌ನಲ್ಲಿ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರಾಜ್ಯದ ಸಹಕಾರಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಶಾಸಕರು, ಸಂಸದರು ಹಾಗೂ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಮಾರಂಭದಲ್ಲಿ ಬ್ಯಾಂಕಿನಲ್ಲಿ ಇಲ್ಲಿಯವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಹಾಗೂ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳಿಗೆ ಶತಮಾನೋತ್ಸವದ ನೆನಪಿನ ಕಾಣಿಕೆ ನೀಡಲು ಉದ್ದೇಶಿಸಲಾಗಿದೆಯೆಂದರು.

ಮೊಬೈಲ್ ಬ್ಯಾಂಕಿಂಗ್‌ಗೆ ಚಾಲನೆ: ಶತಮಾನೋತ್ಸವ ಸಂದರ್ಭ ಬ್ಯಾಂಕ್‌ನಿಂದ ಮೊಬೈಲ್ ಬ್ಯಾಂಕಿಂಗ್’ಗೆ ಚಾಲನೆ ನೀಡಲಾಗುತ್ತದೆ. ಈ ನೂತನ ವ್ಯವಸ್ಥೆಯಡಿ ಜಿಲ್ಲೆಯ ಯಾವೆಲ್ಲ ಗ್ರಾಮೀಣ ಭಾಗಗಳಲ್ಲಿ ಬ್ಯಾಂಕ್ ಶಾಖೆಯ ಸೌಲಭ್ಯ ದೊರಕುವುದಿಲ್ಲವೋ ಅಂತಹ ಪ್ರದೇಶಗಳಿಗೆ ಎಟಿಎಂ ಒಳಗೊಂಡಂತೆ ಬ್ಯಾಂಕಿಂಗ್ ಸೇವೆಗಳನ್ನು ಅಡಕಗೊಳಿಸಲಾದ ವಾಹನವನ್ನು ಕಳುಹಿಸಲಾಗುತ್ತದೆ. ಈ ಮೊಬೈಲ್ ಬ್ಯಾಂಕಿಂಗ್ ಮೂಲಕ ಗ್ರಾಮೀಣ ಸದಸ್ಯರು ಬ್ಯಾಂಕಿನ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅವಕಾಶ ದೊರಕುತ್ತದೆಂದು ಮಾಹಿತಿಯಿತ್ತರು.

ಸಹಕಾರ ಸಂಘವು 288 ಸದಸ್ಯ ಸಹಕಾರ ಸಂಘಗಳ ಸದಸ್ಯತ್ವ ಹೊಂದಿದ್ದು, ಕೊಡಗಿನ ಜನತೆಯ ಬೇಡಿಕೆ ಮತ್ತು ಅಶೋತ್ತರಗಳನ್ನು ಸಫಲಗೊಳಿಸುತ್ತಾ ಜಿಲ್ಲೆಯ ಆರ್ಥಿಕ, ಸಾಮಾಜಿಕ ಬೆಳವಣಿಗೆ ಸಹರಿಸುತ್ತಿದೆ ಎಂದರು.

ಇತ್ತೀಚಿನ ಬ್ಯಾಂಕಿಂಗ್ ವಿದ್ಯಮಾನಗಳಾದ ಆರ್ಟಿಜಿಎಸ್, ನೆಫ್ಟ್, ಕೆಸಿಸಿ ರೂಪೇ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ವಿತರಣೆ, ಎಟಿಎಂಗಳ ಸ್ಥಾಪನೆ, ಮೊಬೈಲ್ ಬ್ಯಾಂಕಿಂಗ್, ಸಹಕಾರ ಸಂಘಗಳಲ್ಲಿ ಮೈಕ್ರೊ ಎಟಿಎಂ ಅಳವಡಿಕೆ, ಸಹಕಾರ ಸಂಘಗಳ ಗಣಕೀಕರಣದಿಂದ ತಾಂತ್ರಿಕವಾಗಿ ಬ್ಯಾಂಕ್ ಮುನ್ನಡೆ ಸಾಧಿಸುತ್ತಿದೆ. ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಈಗಾಗಲೇ ಮೈಕ್ರೊ ಎಟಿಎಂಗಳನ್ನು ವಿತರಿಸಲಾಗಿದೆ ಎಂದರು.

ಸಂಘದ ನಿರ್ದೇಶಕರು ಹಾಗೂ ಸ್ಮರಣ ಸಂಚಿಕೆ ಸಮಿತಿಯ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ಶತಮಾನೋತ್ಸವದ ಅಂಗವಾಗಿ 200 ಪುಟಗಳ ‘ಸ್ಮರಣ ಸಂಚಿಕೆ’ಯನ್ನು ಹೊರ ತರಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಮಾಜಿ ಅಧ್ಯಕ್ಷ ಬಿ.ಕೆ. ಚಿಣ್ಣಪ್ಪ ಹಾಗೂ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಬಾಲಶೇಖರ್ ಉಪಸ್ಥಿತರಿದ್ದರು.

Search Coorg Media

Coorg's Largest Online Media Network