ವಿಶ್ವ ಭೂಮಿ ದಿನ ( World Earth Day : 2021)
( ಏಪ್ರಿಲ್ 22 ನೇ 2021)
ಇರುವುದೊಂದೇ ಭೂಮಿ; ಇದನ್ನು ಸಂರಕ್ಷಿಸೋಣ ಬನ್ನಿ
ಭೂಮಿಯ ದಿನ !
ವೈಜ್ಞಾನಿಕ ಲೇಖನ :
ಪ್ರತಿ ವರ್ಷ ವಿಶ್ವದ ಎಲ್ಲಾ ದೇಶಗಳಲ್ಲಿ ಏಪ್ರಿಲ್ 22 ರಂದು "ವಿಶ್ವ ಭೂ ದಿನ" (ಅರ್ಥ್-ಡೇ) ವನ್ನು ಆಚರಿಸಲಾಗುತ್ತಿದೆ. ಅರ್ಥ್-ಡೇ ಅಂದರೆ ಭೂಮಿಯ ಬರ್ಥ್- ಡೇ ! ಅಂದರೆ ಭೂಮಿಯ ಹುಟ್ಟುಹಬ್ಬ. ಅಂದರೆ ವಸುಂಧರೆಯ ಹುಟ್ಟುಹಬ್ಬದ ದಿನ. ಈ ದಿನವನ್ನು ನಾವು ಅರ್ಥಗರ್ಭೀತವಾಗಿ ಆಚರಿಸಬೇಕಿದೆ. ಇರುವುದೊಂದೇ ಭೂಮಿ; ಇದನ್ನು ಸಂರಕ್ಷಿಸಿ,ಸಂಪೋಷಿಸಿ ಮುಂದಿನ ಪೀಳಿಗೆಗೆ ಕೋಡಬೇಕಾದುದ್ದು ನಮ್ಮ ಆದ್ಯ ಕರ್ತವ್ಯ. ವಿಶ್ವದಲ್ಲಿ 1970 ರಲ್ಲಿ ಮೊದಲಿಗೆ ಭೂಮಿ ದಿನವನ್ನು ಆಚರಿಸಲಾಯಿತು.
ನಾವೀಗ ಬಾಹ್ಯಾಕಾಶ ಯುಗದಲ್ಲಿದ್ದೇವೆ. ಹಾಗೆಂದು ಭೂಮಿಯ ಯುಗವನ್ನು ಮರೆತುಬಿಟ್ಟರೆ ಹೇಗೆ ? ಮನುಕುಲ ಸೇರಿದಂತೆ ಸಕಲ ಜೀವಿಗಳ ಸಂರಕ್ಷಣೆಗೆ ಭೂಮಿಯ ಸಂರಕ್ಷಣೆ ಕೂಡ ಅಗತ್ಯವಲ್ಲವೇ ? ಆದ್ದರಿಂದ, ನಾವು ಈ ಭೂ ದಿನದ ಸಂದರ್ಭ ಭೂಮಿಯ ಸಂರಕ್ಷಣೆ ಮತ್ತು ಭೂ ಮಂಡಲದ ಎಲ್ಲಾ ಜೀವಿಗಳ ಸಂರಕ್ಷಣೆ, ನೀರು ಮತ್ತು ವಾಯುಮಂಡಲದ ರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ಭೂ ಸಂರಕ್ಷಣೆಗಾಗಿ ಈ ದಿನವನ್ನು ಆಚರಿಸಲೇಬೇಕಾಗಿದೆ. ವಿಶ್ವ ಭೂದಿನದ ಅಭಿಯಾನವು ಮಾನವಕುಲಕ್ಕೆ ಒಂದು ಪಾಠವಾಗಬೇಕಿದೆ.
ಕಳೆದ ವರ್ಷ ವಿಶ್ವದಾದ್ಯಂತ ವ್ಯಾಪಿಸಿದ ಕೋರೋನಾ ವೈರಸ್ ಸೋಂಕು ಮನುಕುಲಕ್ಕೆ ತಂದೊಡ್ಡಿರುವ ಆತಂಕದಿAದ ವಿಶ್ವದ ಚಟುವಟಿಕೆಗಳೇ ಸ್ತಬ್ಧವಾದಂತಿದೆ. ಈ ಅಪಾಯದಿಂದ ಪಾರಾಗಬೇಕಾದರೆ, ನಾವು ಪ್ರಕೃತಿ ನಿಯಮಗಳನ್ನು ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
ನಾವು ಕೋವಿಡ್ -19 ರ ಸಂಕಷ್ಟದ ನಡುವೆ ಈ ಭೂಮಿ ದಿನವನ್ನು ಸರಳವಾಗಿ ಆಚರಿಸಿದ್ದೇವೆ. ಈಗ ಮತ್ತೆ ಒಂದು ವರ್ಷದ ನಂತರ ನಾವು ಕೋವಿಡ್ -19 ರ ಎರಡನೇ ಅಲೆಯ ಸಂಕಷ್ಟದ ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆಸಿದ್ದೇವೆ.
ಬೇಸಿಗೆಯ ವಸಂತ ಕಾಲದಲ್ಲಿ ಗಿಡಮರಗಳು ಹಸಿರೆಲೆ ಚಿಗುರಿಸಿ, ಹೂ ಅರಳಿಸಿ ನಿಂತಿವೆ. ಈಗ ಸ್ವಲ್ಪ ಪ್ರಮಾಣದ ಮಳೆಯ ಸಿಂಚನವಾಗಿದೆ. ನಾನಾ ಬಣ್ಣಗಳ ಕಪ್ಪೆ-ಕೀಟ-ಪ್ರಾಣಿ-ಪಕ್ಷಿಗಳು ತಮ್ಮ ಮರಿಗಳೊಂದಿಗೆ ಸಂಗೀತ ಹಾಡಲು ತೊಡಗಿವೆ. ಜೀವಲೋಕದ ಎಲ್ಲಡೆ ನಲಿವು, ಸಂತಸ ಹೊಮ್ಮುತ್ತಿದೆ. ಈ ಸುಂದರ ಪೃಥ್ವಿಯ ಹುಟ್ಟುಹಬ್ಬ (ಭೂಮಿಯ ದಿನ) ವನ್ನು ಆಚರಿಸುವ ಸಮಯ ಬಂದಿದೆ.
ಪರಿಸರ - ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ನಮ್ಮ ದೈನಿಕ ಬದುಕನ್ನು ನಿಯಂತ್ರಿಸುವ ಪರಿಸರವನ್ನು ನಾಳಿನ ಜನಾಂಗಕ್ಕೆ ಉಳಿಸುವ ದಿಸೆಯಲ್ಲಿ ಪರಿಸರವನ್ನು ನಾವು ಕಾಪಾಡಿ ಸಂರಕ್ಷಿಸಬೇಕಿದೆ. ಭವಿಷ್ಯತ್ತಿಗಾಗಿ ನಾವು ನೆಲ -ಜಲ, ಅರಣ್ಯ, ವನ್ಯಜೀವಿಗಳು ಹಾಗೂ ಜೀವಿ ವೈವಿಧ್ಯ ಸಂರಕ್ಷಿಸುವ ಮೂಲಕ ಪರಿಸರ ಸಂರಕ್ಷಿಸಬೇಕಿದೆ. ಪರಿಸರದ ಬಗ್ಗೆ ನಿರ್ಲ ಕ್ಷ್ಯ ವಹಿಸಿದಲ್ಲಿ ಭವಿಷ್ಯತ್ತಿನಲ್ಲಿ ತೀವ್ರ ಗಂಡಾಂತರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬುದನ್ನು ನಾವು ಮನಗಂಡಿದ್ದೇವೆ.
ನದಿ, ಕೆರೆ ಹಾಗೂ ಜಲಮೂಲಗಳು ಸೇರಿದಂತೆ ಅಂತರ್ಜಲ ಸಂರಕ್ಷಣೆಗೆ ನಾವು ಹೆಚ್ಚಿನ ಜಾಗೃತಿ ವಹಿಸಬೇಕಿದೆ. ಪ್ರಕೃತಿಯಲ್ಲಿ ಈಗಾಗಲೇ ನೂರಾರು ಸಸ್ತನಿಗಳು ಹಾಗೂ ಪಕ್ಷಿ ಪ್ರಬೇಧಗಳು ಶಾಶ್ವತವಾಗಿ ನಾಶಗೊಂಡಿವೆ. ಅಪರೂಪದ ಸಸ್ಯ ಮತ್ತು ಜೀವಿಗಳನ್ನೊಳಗೊಂಡ ಅರಣ್ಯ ಹಾಗೂ ಜೀವಿ ವೈವಿಧ್ಯ ಸಂಪತ್ತನ್ನು ಹೊಂದಿರುವ ಪಶ್ಚಿಮ ಘಟ್ಟ ಸಂರಕ್ಷಣೆಗೆ ನಾವು ಹೆಚ್ಚಿನ ಕಾಳಜಿ ವಹಿಸದಿದ್ದಲ್ಲಿ ಇಡೀ ಜೀವ ಸಂಕುಲವೇ ನಾಶವಾಗುವ ಅಪಾಯವಿದೆ.
ಇರುವುದೊಂದೇ ಭೂಮಿ : ಪ್ರಕೃತಿಯಲ್ಲಿ ಏಕಾಂಗಿ ಎಂಬುದೇ ಇಲ್ಲ. ಪ್ರತಿಯೊಂದು ಜೀವಿಗೂ ಜೀವಿಸುವ ಸಮಾನ ಹಕ್ಕಿದೆ. ಜೀವಿಗಳಿರುವ ಏಕೈಕ ಗ್ರಹವಾದ ಭೂಮಿಯೇ ನಮ್ಮ ಮನೆ, ಹಾಗಾಗಿ ಎಲ್ಲಾ ಜೀವಿಗಳು ಜೀವಿಸಲು ಇರುವುದೊಂದೇ ಭೂಮಿ. ನಾವು ಇದನ್ನು ಸಂರಕ್ಷಿಸಿ, ಸಂಪೋಷಿಸಿ ಮುಂದಿನ ಪೀಳಿಗೆಗೆ ಜೋಪಾನವಾಗಿ ಹಸ್ತಾಂತರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ನಾವೆಲ್ಲರೂ ಭೂಮಿಯಲ್ಲಿರುವ ಅಮೂಲ್ಯ ಸಂಪತ್ತನ್ನು ರಕ್ಷಿಸುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಭಾರತೀಯರಾದ ನಮಗೆ ಭೂಮಿಯ ಪಾವಿತ್ರö್ಯದ ಕಲ್ಪನೆ ಹೊಸದೇನಲ್ಲ. ಪುರಾತನ ಕಾಲದಿಂದಲೂ ಭೂಮಿಯನ್ನು ‘ಭೂಮಾತೆ ’ ಎಂದು ಕರೆದು ಗೌರವ,ಆದರ ನೀಡುತ್ತಾ ಬಂದವರು ನಾವು.
2002 ರಲ್ಲಿ ವಿವಿಧ ದೇಶಗಳ ಅಂದಾಜು ನೂರುಕೋಟಿ ಜನರು ಭೂ ದಿನಾಚರಣೆಗೆ ಮುಂದೆ ಬಂದು ಭೂ ದಿನವನ್ನು ಸಡಗರದಿಂದ ಹಬ್ಬವನ್ನಾಚರಿಸಿದರು. ಕ್ರಮೇಣ ಭೂಮಿಯ ತಾಪಮಾನ ಹೆಚ್ಚುತ್ತ ಹೋದರೆ ಶಾಂತ ಸಾಗರದ ನಡುವೆ ಇರುವ ‘ ಟುವಾಲು’ ಹೆಸರಿನ ಪುಟ್ಟ ದ್ವೀಪದೇಶ ಮುಳುಗಿಯೇ ಹೋದೀತೆಂದು ವಿಜ್ಞಾನಿಗಳು ಎಚ್ಚರಿಸಿದ್ದನ್ನು ಮನಗಂಡು ಅಲ್ಲಿನ ನಿವಾಸಿಗಳೂ ಭೂದಿನವನ್ನು ಆಚರಿಸಲೆಂದು ಮುಂದೆ ಬಂದರು. ಈಚಿನ ವರ್ಷಗಳಲ್ಲಿ ಭೂದಿನವನ್ನು ಎಲ್ಲಾ ದೇಶಗಳಲ್ಲಿ ಎಳೆಯರು, ಯುವಜನರು ಹಾಗೂ ಹಿರಿಯ ನಾಗರಿಕರು ತುಂಬಾ ಉತ್ಸಾಹದಿಂದ ಆಚರಿಸುತ್ತಾರೆ. ನಂತರ ವಿಶ್ವಸಂಸ್ಥೆಯೇ 2009 ರಲ್ಲಿ ಭೂ ದಿನದಲ್ಲಿ ಪಾಲ್ಗೊಂಡು ಏಪ್ರಿಲ್ 22 ನ್ನು ಅಂತರಾಷ್ಟ್ರೀಯ ‘ ಭೂ ದಿನ ’ ಎಂದು ಘೋಷಿಸಿತು.
ಭೂ ದಿನದ ಸಂದರ್ಭ ನಮಗೆ ಮತ್ತು ಭೂಮಿಗೆ ಇರುವ ಸಂಬAಧವನ್ನು ನೆನಪಿಸಿಕೊಳ್ಳುವ ದಿನ. ನಾವು ನಿಸರ್ಗದಿಂದ ಅದೆಷ್ಟೇ ದೂರ ಬಂದರೂ ನಮ್ಮ ಮತ್ತು ಭೂಮಿಯ ಸಂಬAಧ ಮಾತ್ರ ಸಡಿಲವಾಗುವುದಿಲ್ಲ. ನಮ್ಮ ಪ್ರತಿಯೊಂದು ಚಟುವಟಿಕೆಯೂ ಆ ಸಂಬಂಧವನ್ನು ಉತ್ತಮಗೊಳಿಸುತ್ತದೆ ಇಲ್ಲವೆ ಬಿಗಡಾಯಿಸುತ್ತದೆ. ಯಾವುದು ಉತ್ತಮಗೊಳಿಸುತ್ತದೆ ಎಂಬ ತಿಳುವಳಿಕೆ ನಮಗಿರಬೇಕು.
ನಾವು ಈ ‘ ಭೂ ದಿನ ’ವನ್ನು ಹಿಂದೆಂದಿಗಿಂತಲೂ ವ್ಯಾಪಕವಾಗಿ ಮತ್ತು ಶ್ರದ್ಧೆಯಿಂದ ಆಚರಿಸಬೇಕಾದ ದಿನಗಳು ಬಂದಿವೆ. ಏಕೆಂದರೆ ಭೂಮಿಯ ಒಟ್ಟಾರೆ ಸ್ಥಿತಿಗತಿ ನಿಜಕ್ಕೂ ದಿನದಿನಕ್ಕೆ ಆತಂಕಕಾರಿ ಆಗುತ್ತಿದೆ. ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ನೆಲ ಮಾಲಿನ್ಯ ಎಲ್ಲವೂ ಹೆಚ್ಚುತ್ತಿವೆ. ಭೂಮಿಯ ಧಾರಣ ಸಾಮರ್ಥ್ಯವನ್ನು ಕಡಿಮೆ ಮಾಡುತ್ತಿವೆ. ಸಹನಾ ಶಕ್ತಿಯನ್ನು ಒಡ್ಡುತ್ತಿವೆ. ದಿನೇ ದಿನೇ ಭೂಮಿ ಬಿಸಿಯಾಗುತ್ತಿದೆ. ಅದರಿಂದಾಗಿ ಹವಾಮಾನ ಸಮತೋಲ ಬಿಗಡಾಯಿಸುತ್ತಿದೆ. ಭೀಕರ ಮಳೆಗಾಲ, ಪ್ರಕೃತಿ ವಿಕೋಪ ಇಲ್ಲವೆ ಭೀಕರ ಬರಗಾಲಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ.
ಇಂದು ನಾವು ಗಾಳಿಶಕ್ತಿ, ಸೌರಶಕ್ತಿ, ಜೀವದ್ರವ್ಯಶಕ್ತಿ(ಜೈವಿಕ ಇಂಧನ), ಅಲೆಶಕ್ತಿಗಳೆಲ್ಲವನ್ನೂ ಮತ್ತೆ ಬಳಕೆಗೆ ಈಗೀಗ ತರುತ್ತಿದ್ದೇವಾದರೂ ಫಾಸಿಲ್ ಇಂಧನ(ಪೆಟ್ರೋಲಿಯಂ)ಗಳು ಇಲ್ಲದಿದ್ದರೆ ನಮ್ಮ ಒಂದು ದಿನವನ್ನೂ ಕಳೆಯುವುದು ನಮಗೆ ಕಷ್ಟವಾಗುತ್ತಿದೆ. ಈ ಬಗೆಯೆ ಪೆಟ್ರೋಲ್ ದಾಸ್ಯದಿಂದ ಹೊರಬಂದು ಪರ್ಯಾಯ ಇಂಧನ ಬಳಕೆಯ ಮಾರ್ಗಗಳನ್ನು ನಾವು ಆದಷ್ಟು ಶೀಘ್ರವಾಗಿ ಹುಡುಕಬೇಕಿದೆ.
ವೈಯಕ್ತಿಕ ಮಟ್ಟದಲ್ಲಿ ನಮ್ಮ ನಡವಳಿಕೆಗಳು ಬದಲಾಗಬೇಕಿದೆ. ಪರಿಸರ ರಕ್ಷಣೆಯ ಕಾನೂನುಗಳಿಗೆ ನಾವೆಲ್ಲ ಬದ್ಧರಾಗಬೇಕಾಗಿದೆ. ಸಾಮೂಹಿಕ ಸ್ತರದಲ್ಲಿ ಇಡೀ ಸಮಾಜವೇ ಒಂದಾಗಿ ಭೂ ಸಂರಕ್ಷಣೆಯಲ್ಲಿ ತೊಡಗಬೇಕಾಗಿದೆ. ನಮ್ಮ ಅಜ್ಞಾನದಿಂದಾಗಿ ಅಥವಾ ನಿರ್ಲಕ್ಷö್ಯದಿಂದಾಗಿ ಭೂಮಿಗೆ ಮತ್ತು ಇತರ ಭೂವಾಸಿಗಳಿಗೆ ಏನೇನು ಅನ್ಯಾಯ, ಅಪಚಾರವಾಗುತ್ತಿದೆ ಎಂಬುದನ್ನು ನಾವು ಮನಗಾಣಬೇಕಿದೆ. ಆದ್ದರಿಂದ ನಿಜವಾದ ಭೂ ದಿನಾಚರಣೆ ಸಂದರ್ಭದಲ್ಲಿ ನಮ್ಮ ನಮ್ಮ ಮನೆಗಳಲ್ಲಿ, ನಸುಕಿನಲ್ಲಿ ಆರಂಭವಾಗಬೇಕು.
• ಕಸದ ತೊಟ್ಟಿಯಿಂದಲೇ ಆರಂಭವಾದರೆ ಉತ್ತಮ. ಇವೋತ್ತಿನಿಂದ ಕಸವನ್ನು ವಿಂಗಡಣೆ ಮಾಡಿ, ಜೈವಿಕ ಮತ್ತು ಅಜೈವಿಕ ತ್ಯಾಜ್ಯವನ್ನು ಬೇರ್ಪಡಿಸಿ ಸೂಕ್ತವಾಗಿ ವಿಲೇವಾರಿ ಮಾಡೋಣ.
• ಮನೆಯ ಪರಿಸರದ ಹಿತ್ತಿಲ್ಲಲ್ಲೇ ಜೈವಿಕ ಕಸವನ್ನು ಕೊಳೆಯಿಸಿ ಕಾಂಪೋಸ್ಟ್ ಮಾಡುವ ನಿರ್ಧಾರವನ್ನು ಕೈಗೊಳ್ಳಲು ಸೂಕ್ತ ದಿನ. ಹಸಿದ ಭೂಮಿಗೆ ಸತ್ವ ತುಂಬುವ ಮೊದಲ ಹೆಜ್ಜೆ ಇದು.
• ಮನೆಯಲ್ಲಿರುವ ಬುರುಡೆ ಬಲ್ಬ್ಗಳನ್ನೂ, ಟ್ಯೂಬ್‌ಲೈಟ್‌ಗಳನ್ನೂ ತೆಗೆದು ಹಾಕಿ ಸಿ.ಎಫ್.ಎಲ್., ಎಲ್.ಇ.ಡಿ. ಬಲ್ಬ್ಗಳನ್ನು ಅಲವಡಿಸುವ ದಿನ ಇದು.
• ನೀರು ಕಾಯಿಸಲು ವಿದ್ಯುತ್ ಗೀಸರ್ ಬಳಕೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ಕೈಗೊಂಡು, ಸೋಲಾರ್(ಸೌರಶಕ್ತಿ) ಶಾಖದಿಂದಲೇ ನೀರನ್ನು ಕಾಯಿಸುವ ಉಪಕರಣವನ್ನು ಹಾಕಿಸಿಕೊಳ್ಳಬೇಕಾದ ದಿನ ಇದು.
• ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆಯನ್ನು ಆದಷ್ಟು ತ್ಯಜಿಸಿ ಪರ್ಯಾಯವಾಗಿ ಬಟ್ಟೆ, ಸೆಣಬಿನ ಬ್ಯಾಗ್ ಬಳಕೆಗೆ ಒತ್ತು ಕೊಡುವ ದಿನ ಇದು.
• ಮಳೆನೀರನ್ನು ಸಂಗ್ರಹಿಸಿ ಬಳಸಲು ನಿರ್ಧರಿಸಿ ಕಾರ್ಯಪ್ರವೃತರಾಗುವ ದಿನ ಇದು.
• ಮನೆಯಿಂದ ಒಂದೆರಡರು ಕಿಲೋಮೀಟರ್ ದೂರದವರೆಗಿನ ಯಾವುದೇ ಪ್ರಯಾಣಕ್ಕೂ ವಾಹನದ ಬದಲಿಗೆ ಬೈಸಿಕಲ್‌ಅನ್ನು ಬಳಸುತ್ತೇನೆ ಎಂಬ ನಿರ್ಣಯ ಕೈಗೊಳ್ಳುವ ದಿನ ಇದು.
ಹೀಗೆ ಇನ್ನೂ ಹತ್ತು ಹಲವು ಪರಿಸರಪೂರಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ನಾವು ಭೂ ದಿನವನ್ನು ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರತಿಜ್ಞೆ ಕೈಗೊಳ್ಳೋಣ.
ಈ ದಿಸೆಯಲ್ಲಿ ನಾವು ಪರಿಸರಕ್ಕೆ ಯಾವುದೇ ಧಕ್ಕೆಯನ್ನುಂಟು ಮಾಡದೆ ಭೂಮಿಯನ್ನು ಸಂರಕ್ಷಿಸಬೇಕಿದೆ. ಭೂ ಮಾಲಿನ್ಯ ತಡೆಗಟ್ಟುವ ಮೂಲಕ ನೆಲ- ಜಲ, ಜೀವಿ ವೈವಿಧ್ಯ ಹಾಗೂ ಪರಿಸರ ಸಂರಕ್ಷಣೆಗೆ ದಿಟ್ಟ ಹೆಜ್ಜೆ ಇಡಬೇಕಿದೆ. ಈ ದಿಸೆಯಲ್ಲಿ ನಮ್ಮ ನಡಿಗೆ ಪರಿಸರದೆಡೆಗೆ ಆಗಬೇಕಿದೆ.
ನಾವು ನಮ್ಮ ಆಸ್ತಿ- ಪಾಸ್ತಿ, ವೈಯಕ್ತಿಕ ಸ್ವಚ್ಛತೆ ಮತ್ತು ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆ ಹಾಗೂ ನಮ್ಮ ಮನೆಯ ಬಗ್ಗೆ ಕಾಳಜಿ ವಹಿಸಿದಂತೆಯೇ ನಮ್ಮನ್ನು ರಕ್ಷಿಸುತ್ತಿರುವ ಭೂಮಿಯ ಸಂರಕ್ಷಣೆ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕಿದೆ.
ಹಾಗಾದರೆ , ಬನ್ನಿ ! ಇರುವುದೊಂದೇ ಭೂಮಿ ; ಇದನ್ನು ಸಂರಕ್ಷಿಸಿ, ಸಂಪೋಷಿಸಿ ಮುಂದಿನ ಪೀಳಿಗೆಗೆ ವಸುಂಧರೆಯನ್ನು ಪುನಃಶ್ಚೇತಗೊಳಿಸೋಣ.
ಲೇಖಕರು :
ಟಿ.ಜಿ.ಪ್ರೇಮಕುಮಾರ್,
ಮುಖ್ಯ ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ,
ಕೂಡುಮಂಗಳೂರು,
ಕೊಡಗು ಜಿಲ್ಲೆ.
ಜಿಲ್ಲಾ ಸಂಯೋಜಕರು,
ಪರಿಸರ ಜಾಗೃತಿ ಆಂದೋಲನ, ಕೊಡಗು ಜಿಲ್ಲೆ:
(ಮೊ: 94485 88352)